Jaimini Bharata (Kannada) 1.5: ಐದನೆಯ ಸಂಧಿ
Jaimini Bhārata (Kannada) 1.5
- Language
- Kannada
ಐದನೆಯ ಸಂಧಿ
1.5.p1
ಐದನೆಯ ಸಂಧಿ
1.5.p2
ಪದ್ಯ - ಸೂಚನೆ
1.5.p3
ಧರ್ಮಜಂ ಯೌವನಾಶ್ವನಿದಿರ್ಗೊಂಡು ನೃಪ |
ಧರ್ಮದಿಂ ಕೃಷ್ಣನಂ ದ್ವಾರಕೆಗೆ ಕಳುಹಿ ವರ |
ಧರ್ಮಂಗಳಂ ಕೇಳ್ದನೊಲವಿಂದೆ ಸಲೆ ಬಾದರಾಯಣ ಮುನೀಶ್ವರನೊಳು ||
1.5.p4
ಧರ್ಮಜಂ= ಧರ್ಮಜನು, ಯೌವನಾಶ್ವನ ಇದಿರ್ಗೊಂಡು= ಬಂದ ಯೌವನಾಶ್ವನನ್ನು ಗೌರವದಿಂದ ಬರಮಾಡಿಕೊಂಡು, ನೃಪ ಧರ್ಮದಿಂ= ರಾಜ ಧರ್ಮದಂತೆ; ಕೃಷ್ಣನಂ ದ್ವಾರಕೆಗೆ ಕಳುಹಿ= ಕೃಷ್ಣನನ್ನು ದ್ವಾರಕೆಗೆ ಕಳುಹಿಸಿ, ಸಲೆ ಬಾದರಾಯಣ ಮುನೀಶ್ವರನೊಳು= ಬಾದರಾಯಣ ಮುನೀಶ್ವರನಿಂದ, ಒಲವಿಂದೆ= ಪ್ರೀತಿಯಿಂದ, ವರ ಧರ್ಮಂಗಳಂ ಕೇಳ್ದನು= ಉತ್ತಮ ಧರ್ಮನೀತಿಗಳನ್ನು ಕೇಳಿದನು.,
(ಪದ್ಯ - ಸೂಚನೆ)
1.5.p5
ಪದ್ಯ - ೧
1.5.1
ಸತ್ಸಂಗತಿಯನಾಲಿಸಿನ್ನೆಲೆ ಮಹೀಶ್ವರ ಮ |
ರುತ್ಸುತನ ಮನೆಗೆ ಬೀಳ್ಕೊಟ್ಟನೊಲವಿಂ ಭಕ್ತ |
ವತ್ಸಲಂ ಬಳಿಕಿತ್ತಲರಸಾಳ್ಗಳಾ ಯುಧಿಷ್ಠಿರಭೂಮಿಪತಿಗೆ ಬಂದು ||
ತ್ವತ್ಸಮೀಪದ ಸೇವೆಗೋಸುಗಂ ತನ್ನ ಸಂ |
ಪತ್ಸಹಿತಮಾ ಯೌವನಾಶ್ವ ಧರಣೀಂದ್ರನ |
ತ್ಯುತ್ಸವದೊಳೈತಂದನಿದೆ ನಿನ್ನ ಪಟ್ಟಣದ ಬಾಹ್ಯದೇಶದೊಳೆಂದರು ||1||
1.5.1_6
ಸತ್ಸಂಗತಿಯನು ಆಲಿಸು ಇನ್ನು ಎಲೆ ಮಹೀಶ್ವರ= ಎಲೆ ರಾಜ ಜನಮೇಜಯನೇ, ಇನ್ನು ಒಳ್ಳೆಯ ಸಂಗತಿಗಳನ್ನು ಆಲಿಸು; ಮರುತ್ಸುತನ ಮನೆಗೆ ಬೀಳ್ಕೊಟ್ಟನು ಒಲವಿಂ= ಭೀಮನನ್ನು ಅವನ ಮನೆಗೆ ಬೀಳ್ಕೊಟ್ಟನು ಭಕ್ತವತ್ಸಲಂ=ಕೃಷ್ಣನು. ಬಳಿಕ ಇತ್ತಲು ಅರಸಾಳ್ಗಳು= ರಾಜಭಟರು ಆ ಯುಧಿಷ್ಠಿರಭೂಮಿಪತಿಗೆ= ಧರ್ಮರಾಯನ ಮನೆಗೆ ಬಂದು, ತ್ವತ್= ನಿನ್ನ ಸಮೀಪದ= ಹತ್ತಿರ ಸೇವೆಗೋಸುಗಂ= ಸೇವಮಾಡಲು, ತನ್ನ ಸಂಪತ್ಸಹಿತಂ= ಸಂಪತ್ತಿನ ಸಹಿತ ಆ ಯೌವನಾಶ್ವ ಧರಣೀಂದ್ರನ=ರಾಜನು, ಅತ್ಯುತ್ಸವದೊಳ್ ಐತಂದನು= ಸಂತೋಷದಿಂದ ಬಂದಿದ್ದಾನೆ, ಇದೆ = ಈಗ ನಿನ್ನ ಪಟ್ಟಣದ ಬಾಹ್ಯದೇಶದೊಳು= ನಗರದ ಹೊರವಲಯದಲ್ಲಿ ಎಂದರು
(ಪದ್ಯ - ೧)
1.5.1_7
ಪದ್ಯ - ೨
1.5.2
ಪದ್ಯ - ೨[ಸಂಪಾದಿಸಿ]
ಉಚಿತಮಂ ತೆಗೆದವರ್ಗಿತ್ತು ಬಳಿಕನುಜ ಮಂ |
ತ್ರಿಚಮೂಪ ಸಾಮಂತ ಗುರು ಪುರೋಹಿತ ಸುಭಟ |
ನಿಚಯಮಂ ಕರೆಸಿಕೊಂಡಸುರಾರಿಸಹಿತಖಿಳ ಚತುರಂಗಸೈನ್ಯದೊಡನೆ ||
ಅಚಲನಿಭದಿಭದ ಮೇಲಡರಿ ಸಿಂಗರದ ಗುರು |
ಕುಚೆಯರರಸಿಯ ಕೂಡೆ ಬರಲಿ ಗುಡಿತೋರಣದ |
ರಚನೆ ಮೆರೆಯಲಿ ಪುರದೊಳೆನುತೆ ಪೊರೆಮಟ್ಟನವನಿಪನೊಸಗೆವರೆ ಮಸಗಲು ||2||
1.5.2_8
ಉಚಿತಮಂ= ಉಚಿತ ಕಾಣಿಕೆಯನ್ನು ದೂತರಿಗೆ, ತೆಗೆದವರ್ಗಿತ್ತು= ಕೊಟ್ಟು, ಬಳಿಕ ಅನುಜ=ತಮ್ಮಂದಿರು, ಮಂತ್ರಿ= ಮೋತ್ರಿಗಳು, ಚಮೂಪ= ಸೇನಾಧಿಪತಿಗಳು, ಸಾಮಂತ= ಸಾಮಂತರಾಜರು, ಗುರು ಪುರೋಹಿತ ಸುಭಟರ ನಿಚಯಮಂ= ಸಮೂಹವನ್ನು ಕರೆಸಿಕೊಂಡು ಅಸುರಾರಿ=ಕೃಷ್ಣನ ಸಹಿತ ಅಖಿಳ ಚತುರಂಗಸೈನ್ಯದೊಡನೆ ಅಚಲನಿಭದಿಭದ-:ಅಚಲ=ಬೆಟ್ಟದ ನಿಭದ=ಸಮದ ಇಭದ=ಆನೆಯ ಮೇಲೆ ಅಡರಿ= ಹತ್ತಿ ಸಿಂಗರದ=ಸಿಂಗರಿಸಿಕೊಂಡ, ಗುರುಕುಚೆಯ= ದೊಡ್ಡ ಸ್ತನವುಳ್ಳ ಅರರಸಿಯ= ಪತ್ನಿ ದ್ರೌಪದಿಯ ಕೂಡೆ ಬರಲಿ ಗುಡಿತೋರಣದ ರಚನೆ ಮೆರೆಯಲಿ=ಚಂದವಾಗಿ ಮಾಡಿರಿ ಪುರದೊಳು ಎನುತೆ= ಎಂದು ಹೇಳುತ್ತಾ, ಪೊರೆಮಟ್ಟನು=ಹೊರ ಹೊರಟನು ಅವನಿಪನು=ರಾಜನು ಒಸಗೆ= ಸುದ್ದಿಯು- ವರೆಮಸಗಲು=ಬಹಳ ವಿಜ್ರಂಭಿಸಲು.
(ಪದ್ಯ - ೨)
1.5.2_9
ಪದ್ಯ - ೩
1.5.3
ಸಿಂಗರಮೊಳಾ ಹಸ್ತಿನಾವತಿಯೊಳಿರ್ದ ಜನ |
ಜಂಗುಳಿ ಮಹೀಪಾಲನೊಡನೆ ಪೊರಮಟ್ಟ ಬಳಿ |
ಕಂಗನೆಯರಾ ದ್ರುಪದಸುತೆಯ ಪೊನ್ನಂದಳದ ಕೂಡೆ ಸಂದಣಿಸಿ ಬರಲು ||
ಮಂಗಳಧ್ವಾನದಿಂದುಲಿವ ಭೇರಿಗಳ ನಾ |
ದಂಗಳೈದಿದುವಷ್ಟದಿಕ್ಪಾಲಕರ ಪಟ್ಟ ||
ಣಂಗಳ್ಗೆ ಪಾಂಡವರ ಪುರದ ಸಂಭ್ರಮವನೆಚ್ಚರಿಸಿ ನಾಚಿಸುವಂತಿರೆ ||3||
1.5.3_10
ಸಿಂಗರಮೊಳು= ಅಲಂಕಾರಗೊಂಡ ಆ ಹಸ್ತಿನಾವತಿಯೊಳಿರ್ದ= ಹಸ್ತಿನಾವತಿಯಲ್ಲಿದ್ದ ಜನಜಂಗುಳಿ=ಜನಸಮೂಹ ಮಹೀಪಾಲನೊಡನೆ= ಧರ್ಮರಾಯನೊಡನೆ ಪೊರಮಟ್ಟ ಬಳಿಕ ಅಂಗನೆಯರು = ಹೆಂಗಸರು ದ್ರುಪದಸುತೆಯ= ದ್ರೌಪದಿಯ ಪೊನ್ನಂದಳದ= ಹೊನ್ನಿನಪಲ್ಲಕಿಯ ಕೂಡೆ ಸಂದಣಿಸಿ= ಗುಂಪಾಗಿ ಬರಲು
ಮಂಗಳಧ್ವಾನದಿಂದ=ಮಂಗಳವಾದ್ಯದ ಉಲಿವ= ನಡಿಸುವ, ಭೇರಿಗಳ ನಾದಂಗಳು, ಅಷ್ಟದಿಕ್ಪಾಲಕರ ಪಟ್ಟಣಂಗಳಿಗೆ ಪಾಂಡವರ ಪುರದ ಸಂಭ್ರಮವನು ಎಚ್ಚರಿಸಿ= ತೋರಿಸಿ, ನಾಚಿಸುವಂತಿರೆ ಐದಿದುವ= ಇದಿರುಗೊಳ್ಳಲು ಬಂದವು
(ಪದ್ಯ - ೩)
1.5.3_11
ಪದ್ಯ - ೪
1.5.4
ಭದ್ರಗಜಕಂಧರಧೊಳರಸನೆಸೆದಿರ್ದಂ |
ಸದ್ರತ್ನಭೂಷಣಂಗಳಕಾಂತಿಯಂ ಮೂಡ |
ಣದ್ರಿಯೊಳ್ ತೊಳಗುವೆಳನೇಸರೆನೆ ಬಳಿಕಿದಿರ್ಗೊಂಬ ಹರ್ಷವನೆ ಕಂಡು ||
ಭದ್ರಾವತೀಶ್ವರನೆನಿಪ ಯೌವನಾಶ್ವಂ ಜ |
ಗದ್ರಾಜನಾದ ಪಾಂಡವನೆಡೆಗೆ ಬಂದಂ ಸು |
ಹೃದ್ರಾಗದಿಂ ತನಗೆ ಭೀಮನಭಿಮುಖನಾಗಿ ಬರಲಾತನೊಡನೆ ನಗುತೆ||4||
1.5.4_12
ಭದ್ರಗಜಕಂಧರಧೊಳ್(ಕಂಧರ= ಕುತ್ತಿಗೆ) ಅರಸನೆ ಎಸೆದಿರ್ದಂ ಸದ್ರತ್ನಭೂಷಣಂಗಳ ಕಾಂತಿಯಂ ಮೂಡಣ (ಪೂರ್ವ) ಅದ್ರಿಯೊಳ್ ತೊಳಗುವ ಎಳನೇಸರು ಎನೆ= ದೊಡ್ಡ ಆನೆಯ ಮೇಲೆ ಅರಸ ಧರ್ಮಜನು ಒಳ್ಳೆಯ ರತ್ನಭೂಷಣಗಳನ್ನುಧರಿಸಿ ಎಸೆದಿರ್ದನು/ ಪ್ರಕಾಶಿಸುತ್ತಿದ್ದನು; ಹೇಗೆಂದರೆ, ಪೂರ್ವಬೆಟ್ಟದ ಮೇಲೆ ಹುಟ್ಟಿ ಪ್ರಕಾಶಿಸುವ ಎಳೆನೇಸರ ಸೂರ್ಯನೋ ಎನ್ನುವಂತೆ. ಬಳಿಕ ಇದಿರ್ಗೊಂಬ ಹರ್ಷವನೆ ಕಂಡು= ನಂತರ ತನ್ನನ್ನು ಎದಿರುಗಳ್ಳವ ಸಂಭ್ರಮದ ಹರ್ಷವನ್ನು ನೋಡಿ, ಭದ್ರಾವತೀಶ್ವರನು ಎನಿಪ ಯೌವನಾಶ್ವಂ= ಭದ್ರಾವತೀಶ್ವರನಾದ ಯೌವನಾಶ್ವನು, ಜಗದ್ರಾಜನಾದ= ಚಕ್ರವರ್ತಿಯಾದ ಪಾಂಡವನ ಎಡೆಗೆ= ಧರ್ಮರಾಯನ ಬಳಿಗೆ, ಬಂದಂ= ಬಂದನು; ಹೇಗೆಂದರೆ ಸುಹೃದ್ರಾಗದಿಂ= ಸಂತೋಷದಿಂದ ತನಗೆ ಭೀಮನು ಅಭಿಮುಖನಾಗಿ ಬರಲು ಆತನೊಡನೆ ನಗುತೆ =ನಗುತ್ತಾ ಧರ್ಮರಾಯನ ಬಳಿಗೆ ಬಂದನು.
(ಪದ್ಯ - ೪)
1.5.4_13
ಪದ್ಯ - ೪
1.5.5
ವಾಯುಸುತನೊಡನೆ ತಾನಿರ್ದ ಪೊರೆಗಾಗಿ ಬ |
ರ್ಪಾಯೌವನಾಶ್ವನಂ ಕಂಡಿಭವನಿಳಿದು ನಿಂ |
ದಾ ಯುಧಿಷ್ಠಿರನರೇಶ್ವರನಡಿಗೆ ಕಾಣಿಕೆಯನಿತ್ತೆರಗಿ ಕೈಮುಗಿಯಲು ||
ಪ್ರೀಯದಿಂದಾತನಂ ತೆಗೆದು ತಕ್ಕೈಸಿ ಮಾ |
ದ್ರೇಯ ಭೀಮಾರ್ಜುನರ ಸಮವೆನಗೆ ನೀನದರಿ |
ನೀ ಯಾದವೇಂದ್ರನಂ ಭಾವಿಸೆಂದರಸಂ ಮುಕುಂದನಂ ತೋರಿಸಿದನು ||5||
1.5.5_14
ವಾಯುಸುತನೊಡನೆ= ಭೀಮನೊಡನೆ, ತಾನಿರ್ದ ಪೊರೆಗಾಗಿ= ತಾನು ಇದ್ದ ಸಮೀಪ, ಬರ್ಪ ಆ ಯೌವನಾಶ್ವನಂ ಕಂಡು= ಬರುತ್ತಿರುವ ಆ ಯೌವನಾಶ್ವನನ್ನು ಕಂಡು, ಇಭವನು= ಆನೆಯನ್ನು ಇಳಿದು ನಿಂದ= ನಿಂತುಕೊಂಡ ಆ ಯುಧಿಷ್ಠಿರನರೇಶ್ವರನ ಅಡಿಗೆ ಕಾಣಿಕೆಯನು ಇತ್ತು ಎರಗಿ ಕೈಮುಗಿಯಲು= ಯುಧಿಷ್ಠಿರರಾಜನಿಗೆ ಕಾಣಿಕೆಯನ್ನು ಕೊಟ್ಟು ಪಾದಕ್ಕೆ ನಮಿಸಿ,ಕೈಮುಗಿಯಲು, ಪ್ರೀಯದಿಂದ ಆತನಂ ತೆಗೆದು ತಕ್ಕೈಸಿ= ಪ್ರೀತಿಯಿಂದ ಆದರಿಸಿ ಅಪ್ಪಿಕೊಂಡು, ಮಾದ್ರೇಯ ಭೀಮಾರ್ಜುನರ ಸಮವು ಎನಗೆ ನೀನು= ನೀನು ಎನಗೆ ಮಾದ್ರೇಯರಾದ ನಕುಲಸಹದೇವ ಭೀಮಾರ್ಜುನರ ಸಮಾನವು ನೀ, ಅದರಿಂ ನೀ ಈ ಯಾದವೇಂದ್ರನಂ ಭಾವಿಸೆಂದು ಅರಸಂ ಮುಕುಂದನಂ ತೋರಿಸಿದನು= ಅದರಿಂದ ನೀನು ಈ ಯಾದವೇಂದ್ರನನ್ನು ಧ್ಯಾನಿಸು/ಗೌರವಿಸೆಂದು ಅರಸನು ಕೃಷ್ಣನನ್ನು ತೋರಿಸಿದನು.
(ಪದ್ಯ - ೪)
1.5.5_15
ಪದ್ಯ - 6
1.5.6
ಬಳಿಕವಂ ಕಂಡನುತ್ಪಲದಳಶ್ಯಾಮ ಕೋ |
ಮಲತರಶರೀರನಂ ನವರತ್ನ ಮಕುಟ ಕುಂ |
ಡಲ ಕನಕ ಕೇಯೂರಹಾರನಂ ಪ್ರಕಟ ಕಟಿಸೂತ್ರ ಮಣಿಮಂಜೀರನಂ ||
ವಿಲಸಿತ ಶ್ರೀವತ್ಸ ಕೌಸ್ತುಭ ಶಭೋದರನಂ |
ಲಲಿತ ಪೀತಾಂಬರೋಜ್ಜ್ವಲದಲಂಕಾರನಂ |
ಜಲಜಸಮ ಚರಣಯುಗ ಮೋಹನಾಕಾರನಂ ಲಕ್ಷ್ಮೀಮನೋಹಾರನಂ ||6||
1.5.6_16
ಪದ್ಯ - ೭
1.5.7
ಅಚ್ಚ್ಯುತನ ಮಂಗಳ ಶ್ರೀಮೂರ್ತಿ ಕಣ್ಮನವ |
ನೊಚ್ಚತಂಗೊಳಲೇಳ್ವ ರೋಮಪುಳಕದೊಳೆ ಮೈ |
ವೆಚ್ಚಿದತಿಹರ್ಷದಿಂದಜ ಭವ ಸುರೇಂದ್ರ ಮುನಿಮುಖ್ಯರ್ಗೆ ಗೋಚರಿಸದ ||
ಸಚ್ಚಿದಾನಂದಮಯನಂ ಕಂಡುದಿದು ಜಗದೊ |
ಳಚ್ಚರಿಯಲಾ ನರರ್ಗೆ ನುತಾನೃಪಾಲಕಂ |
ಬೆಚ್ಚನಸುರಾಂತಕನ ಪದಕೆ ಪೊಸಮಿಸುನಿವೆಳಗೆಸೆವ ಮಕುಟದ ನೊಸಲನು ||7||
1.5.7_17
ಅಚ್ಚ್ಯುತನ ಮಂಗಳ ಶ್ರೀಮೂರ್ತಿ ಕಣ್ಮನವನು=ಕಣ್ಣು ಮತ್ತುಮನಸ್ಸನ್ನು ಒಚ್ಚತಂಗೊಳಲು=ಹಿತಗೊಳಿಸಲು ಏಳ್ವ=ಎದ್ದುನಿಂತ ರೋಮ ಪುಳಕದೊಳೆ= ರೋಮಾಂಚನದಲ್ಲಿ, ಮೈವೆಚ್ಚಿದ= ಮೈಮರೆತ, ಅತಿಹರ್ಷದಿಂದ ಅಜಭವ=ಬ್ರಹ್ಮನನ್ನು ಹೊಕ್ಕಳಲ್ಲಿ ಹಡೆದ, ಸುರೇಂದ್ರ ಮುನಿಮುಖ್ಯರ್ಗೆ= ಮುನಿಮುಖ್ಯರಿಗೆ ಗೋಚರಿಸದ, ಸಚ್ಚಿದಾನಂದಮಯನಂ= ಸಚ್ಚಿದಾನಂದಮಯನನ್ನು ಕಂಡುದು=ನೋಡಿದ್ದು ಇದು=ಇದೊಂದು, ಜಗದೊಳಚ್ಚರಿಯಲಾ=ಜಗದಲ್ಲಿ ಅಚ್ಚರಿಯೇ ಸೈ ನರರ್ಗೆ ಎನುತ= ಮನುಷ್ಯರಿಗ ಎನ್ನುತ್ತಾ, ಆನೃಪಾಲಕಂ= ಆ ರಾಜನು, ಬೆಚ್ಚಂ=ಇಟ್ಟನು ಅಸುರಾಂತಕನ ಪದಕೆ=ಕೃಷ್ಣನ ಪಾದಕ್ಕೆ, ತನ್ನ ಪೊಸಮಿಸುನಿವೆಳಗೆಸೆವ ಮಕುಟದ ನೊಸಲನು =ಮಿಂಚಿನಂತೆ ಹೊಳೆಯುತ್ತರುವ ಕಿರೀಟವಿದ್ದ ಹಣೆಯನ್ನು.
(ಪದ್ಯ - ೭)
1.5.7_18
ಪದ್ಯ - ೮
1.5.8
ಕಮಲದಳಯನ ಕಾಳಿಯಮಥನ ಕಿಸಲಯೋ |
ಪಮಚರಣಕೀಶಪತಿಸೇವ್ಯ ಕುಜಹರ ಕೂರ್ಮ |
ಸಮಸತ್ಕಪೋಲ ಕೇಯೂರಧರ ಕೈರವಶ್ಯಾಮ ಕೋಕನದ ಗೃಹೆಯ ||
ರಮಣ ಕೌಸ್ತುಭಶೋಭ ಕಂಬುಚಕ್ರಗದಾಬ್ಜ |
ವಿಮಲಕರ ಕಸ್ತೂರಿಕಾತಿಲಕ ಕಾವುದೆಂ |
ದಮಿತಪ್ರಭಾಮೂರ್ತಿಯಂ ನುತಿಸಲಾತನಂ ಹರಿ ನೆಗಪಿದಂ ಕೃಪೆಯೊಳು ||8|||
1.5.8_19
(ಪದ್ಯ - ೮)
1.5.8_20
ಪದ್ಯ - ೯
1.5.9
ಎದ್ದಾ ನೃಪಂ ಕೃತಾಂಜಲಿಪುಟಾವನತನಾ |
ಗಿದ್ದಾಗ ಭೀಮನಂ ನೋಡಿ ವಿಷಯಂಗಳಂ |
ಗೆದ್ದ ನಿರ್ಮಲತಪಸ್ವಿಗಳ ನಿಶ್ಚಲಹೃದಯಮಧ್ಯ ಪಂಕೇಜಾತದಾ ||
ಗದ್ದುಗೆಯೊಳೆಸೆವ ಚಿದ್ತೂಪನಂ ಜಗವರಿಯೆ |
ದೊದ್ದೆಯೊಳ್ ಕೂಡಿ ತೇರ್ಗುದುರೆಯಂ ಪೊಡೆವುದಂ |
ಪೊದ್ದಿಸಿದ ಪಾರ್ಥನಾರಿದರೊಳೆನಲರ್ಜುನಂ ಬಂದಾತನಂ ಕಂಡನು ||9||
1.5.9_21
ಎದ್ದು ಆ ನೃಪಂ =ಎದ್ದು ಆ ರಾಜನು, ಕೃತ ಅಂಜಲಿಪುಟ ಅವನತನು ಆಗಿದ್ದಾಗ= ಕೈಯನ್ನು ಅಂಜಲೀಬದ್ಧನಾಗಿ ಮಾಡಿಕೊಂಡು ವಿಧೇಯನಾಗಿ ನಿಂತಾಗ, ಭೀಮನ= ಭೀಮನನ್ನು ನೋಡಿ, ವಿಷಯಂಗಳಂ= ಪ್ರಾಪಂಚಿಕ ಆಸೆಗಳನ್ನು ಗೆದ್ದ ನಿರ್ಮಲ ತಪಸ್ವಿಗಳ ನಿಶ್ಚಲ ಹೃದಯ ಮಧ್ಯ ಪಂಕೇಜಾತದ=ಕಮಲದ ಆ ಗದ್ದುಗೆಯೊಳು=ಪೀಠದಲ್ಲಿ ಎಸೆವ= ಕಾಣುವ ಚಿದ್ತೂಪನಂ= ಜ್ಞಾನಸರೂಪನನ್ನು ಜಗವರಿಯೆ=ಎಲ್ಲರಿಗೂ ತಿಳಿಯುವಂತೆ
ದೊದ್ದೆಯೊಳ್= (ದೊಡ್ಡಿ)ಕೊಟ್ಟಿಗೆಯಲ್ಲಿ ಕೂಡಿ ಕುದುರೆ ಕಟ್ಟುವ ಕೆಲಸ ತೇರ್ ಕುದುರೆಯಂ ಪೊಡೆವುದಂ= ರಥದ ಕುದುರೆಯನ್ನು ಓಡಿಸುವ
ಪೊದ್ದಿಸಿದ= ಹೊಂದಿಸಿದ,ಕೆಲಸ ಮಾಡಿಸಿದ, ಪಾರ್ಥನು ಆರು ಇದರೊಳು ಎನಲು ಅರ್ಜುನಂ ಬಂದು ಆತನಂ ಕಂಡನು= ಪಾರ್ಥನು ಯಾರು ಇಲ್ಲಿರುವವರಲ್ಲಿ ಎನ್ನಲು, ಅರ್ಜುನನು ಬೋದು ಅವನನ್ನು ಕಂಡನು.
(ಪದ್ಯ - ೯)
1.5.9_22
ಪದ್ಯ - ೧೦
1.5.10
ಗುಣದೊಳಾ ಯೌವನಾಶ್ವಕ್ಷಿತಿಪನೆರಗಿ ಫಲು |
ಗುಣನ ಮೊಗಮಂ ನೋಡಿ ನೀನಲಾ ತಿಳಿಯಲ್ ತ್ರಿ |
ಗುಣದೊಳೊಂದದ ಘನಶ್ರುತಿಶಿರೋಮಣಿಯನಿಳೆಯರಿಯೆ ನಿಜಭಕ್ತಿಯೆಂಬ ||
ಗುಣದಿಂದೆ ಬಂದಿಸಿದ ಕೋವಿದನದೇಂ ಬಯಲ |
ಗುಣವಿರ್ದರಕಟ ಯೋಗಿಗಳೆಂದು ನರನ ಸ |
ದ್ಗುಣವನುರೆ ಕೊಂಡಾಡಿ ಬಳಿಕ ಸಹದೇವ ನಕುಲಾದ್ಯರಂ ಮನ್ವಿಸಿದನು ||10||
1.5.10_23
ಗುಣದೊಳ ಆ ಯೌವನಾಶ್ವಕ್ಷಿತಿಪನು ಎರಗಿ ಫಲುಗುಣನ ಮೊಗಮಂ ನೋಡಿ= ವಿನಯದಿಂದ ಆ ಯೌವನಾಶ್ವ ರಾಜನು ನಮಸ್ಕರಿಸಿ ಫಲ್ಗುಣನ ಮುಖವನ್ನು ನೋಡಿ, ನೀನಲಾ ತಿಳಿಯಲ್ ತ್ರಿಗುಣದೊಳು ಒಂದದ(ಸೇರದ) ಘನಶ್ರುತಿ ಶಿರೋಮಣಿಯನು ಇಳೆಯರಿಯೆ ನಿಜಭಕ್ತಿಯೆಂಬ ಗುಣದಿಂದೆ ಬಂದಿಸಿದ ಕೋವಿದನು= ನೀನೇನಯ್ಯಾ ಸ್ವತ್ವ ರಜ ತಮ ಗುಣಗಳಲ್ಲಿ ಸೇರದ ವೇದವೇದ್ಯನಾದ ಶ್ರೇಷ್ಠನನ್ನು ಜಗತ್ತೇ ಅರಿಯುವಂತೆ ಭಕ್ತಿಯಿಯಿಂದ ಸದ್ಗಣದಿಂದ ಕಟ್ಟಿ ಹಾಕಿದ ಜಾಣನು? ಅದು ಏಂ ಬಯಲ ಗುಣವಿರ್ದರು= ಅದು ಎಷ್ಟು ಶಮಾದಿಗುಣಗಳಿದ್ದವರು, ಅಕಟ ಯೋಗಿಗಳು ಎಂದು ಎಂದು ನರನ ಸದ್ಗುಣವನು ಉರೆ ಕೊಂಡಾಡಿ= ಯೋಗಿಗಳು ಅಕಟ ಎಂದು ಅರ್ಜುನನ ಸದ್ಗುಣವನ್ನು ಬಹಳ ಕೊಂಡಾಡಿ, ಬಳಿಕ ಸಹದೇವ ನಕುಲ ಆದ್ಯರಂ ಮನ್ವಿಸಿದನು= ಮೊದಲಾದವರನ್ನು ಗೌರವಿಸಿದನು.
(ಪದ್ಯ - ೧೦)
1.5.10_24
ಪದ್ಯ - ೧೧
1.5.11
ಬಳಿಕ ಹೊಳೆಹೊಳೆವ ಮಿಂಚಿನ ಗೊಂಚಲೆತ್ತಲುಂ |
ಬಳಸಿ ಕಂಗೊಳಿಸುತಿರಲಡಿಗಡಿಗೆ ಘುಡುಘುಡಿಸಿ |
ಮೊಳಗುವ ಸಿತಾಭ್ರಮಂ ಕುಲಗಿರಿತಟಪ್ರದೇಶಕೆ ಸಾರ್ಡುವನಿಲನಂತೆ ||
ಲಲಿತ ಕನಕಾಭರಣಗಳ ಕಾಂತಿಯಿಂ ಸುಗತಿ |
ಗುಲಿವ ಹೊಂಗೆಜ್ಜೆಗಳ ರಭಸದಿಂದೆಸೆವ ನಿ |
ರ್ಮಲ ವಾಜಿಯಂ ಸುವೇಗಂ ತಂದು ನಿಲಿಸಿದಂ ಧರ್ಮಜನ ಸಮ್ಮುಖದೊಳು ||11||
1.5.11_25
ಬಳಿಕ ಹೊಳೆಹೊಳೆವ ಮಿಂಚಿನ ಗೊಂಚಲೆತ್ತಲುಂ ಬಳಸಿ ಕಂಗೊಳಿಸುತಿರಲು= ನಂತರ ಹೊಳೆವ ಮಿಂಚಿನ ಗೊಂಚಲಿನಂತೆ, ಅಡಿಗಡಿಗೆ ಘುಡುಘುಡಿಸಿ ಮೊಳಗುವ ಸಿತಾಭ್ರಮಂ= ಪದೇಪದೇ ಶಬ್ದಮಾಡುವ ಬಿಳಿಮೋಡವನ್ನು, ಕುಲಗಿರಿತಟಪ್ರದೇಶಕೆ= ಬೆಟ್ಟದ ಬುಡಕ್ಕೆ ಸಾರ್ಚುವ ಅನಿಲನಂತೆ= ತಳ್ಳುವ ಗಾಳಿಯಂತೆ, ಲಲಿತ ಕನಕಾಭರಣಗಳ ಕಾಂತಿಯಿಂ ಸುಗತಿಗೆ ಉಲಿವ ಹೊಂಗೆಜ್ಜೆಗಳ ರಭಸದಿಂದೆ ಎಸೆವ= ಚಂದದ ಆಭರಣಗಳ ಪ್ರಕಾಶವನ್ನು ಬೀರುತ್ತಾ, ಹೊನ್ನಿನ ಗೆಜ್ಜೆಗಳನಡಿಗೆಯಿಂದ ಶೋಭಿಸುವ, ನಿರ್ಮಲ ವಾಜಿಯಂ= ಬಿಳಿಯ ಕುದುರೆಯನ್ನು, ಸುವೇಗಂ ತಂದು ನಿಲಿಸಿದಂ=ಸುವೇಗನು ತಂದು ನಿಲ್ಲಿದನು, ಧರ್ಮಜನ ಸಮ್ಮುಖದೊಳು= ಧರ್ಮಜನ ಎದುರಿನಲ್ಲಿ.
1.5.11_26
(ಪದ್ಯ - ೧೧)
1.5.11_27
ಪದ್ಯ - ೧೨
1.5.12
ತುರಗಮೇಧಂಗೆಯ್ಯದೊಂದಿನಿಸು ಕುಂದೆನ್ನ |
ಸಿರದ ಮೇಲಿದೆ ತಾನಿದಂ ತಾಳಲಾರೆ ನೀಂ |
ಪರಿಹರಿಪುದೆಂದು ನಿಜಕೀರ್ತಿ ಹಯರೂಪದಿಂ ಭೂಪನಂ ಬೇಡಿಕೊಳಲು ||
ಪೊರೆಗೆ ಬಂದವೊಲೇಕಕರ್ಣದಸಿತತ್ವದಿಂ |
ಪರಿಶೋಭಿಸುವ ಶುಭ್ರವಾಜಿಯಂ ಕಾಣುತ |
ಚ್ಚರಿವಟ್ಟು ಸಕಲಜನಮೈತಂದು ನೋಡುತಿರ್ದುದು ಬಳಸಿ ದೆಸೆದೆಸೆಯೊಳು ||12||
1.5.12_28
ತುರಗಮೇಧಂ=ಆಶ್ವಮೇಧ ಯಾಗವನ್ನು, ಗೆಯ್ಯದ= ಮಾಡದ, ಒಂದಿನಿಸು= ಒಂದುಸ್ವಲ್ಪ, ಕುಂದು ಎನ್ನಸಿರದ ಮೇಲಿದೆ= ನನ್ನ ಶಿರದಮೇಲೆ ಇದೆ. ತಾನಿದಂ ತಾಳಲಾರೆ= ತಾನು/ನಾನು ಇದನ್ನು ಸಹಿಸಲಾರೆನು. ನೀಂ ಪರಿಹರಿಪುದು= ನೀನು ಪರಿಹರಿಸಬೇಕು ಎಂದು ನಿಜಕೀರ್ತಿ ಹಯರೂಪದಿಂ= ತನ್ನ ಕೀರ್ತಿಯು ಅಶ್ವರೂಪದಲ್ಲಿ ಇದೆ, ಎಂದು ಯವೌನಾಶ್ವನನ್ನು ಭೂಪನಂ=ರಾಜನನ್ನು ಬೇಡಿಕೊಳಲು= ಕೇಳಿಕೊಳ್ಳಲು-ಅವನು ತಂದ ಕುದುರೆಯು ಪೊರೆಗೆ= ಅವನ ಬೇಡಿಕೆಯನ್ನು ಪೂರೈಸಿ ಧರ್ಮಜನನ್ನು ಕಾಪಾಡಲು ಬಂದವೊಲ್= ಬಂದಿತೋ ಎನ್ನುವಂತೆ ಏಕಕರ್ಣದ= ಒಂದೇ ಕಿವಿಯ, ಅಸಿತತ್ವದಿಂ= ಖಡ್ಗದತತ್ವದ/ ಶೌರ್ಯದ ತತ್ವದ ಪರಿಶೋಭಿಸುವ= ಶೋಭಾಯಮಾನವಾದ, ಶುಭ್ರವಾಜಿಯಂ= ಪರಿಶುದ್ಧ ಬಿಳಿಯ ಅಶ್ವವನ್ನು, ಕಾಣುತ ಅಚ್ಚರಿವಟ್ಟು= ಕಂಡು ಆಸ್ಚರ್ಯಚಕಿತನಾದನು, ಸಕಲಜನಂ ಐಮೈತಂದು= ಎಲ್ಲಾ ಜನರೂ ಬಂದು ನೋಡುತಿರ್ದುದು= ನೋಡಿತ್ತಿದ್ದರು, ಬಳಸಿ ದೆಸೆದೆಸೆಯೊಳು= ಎಲ್ಲಾದಿಕ್ಕಿನಿಂದಲೂ ಸುತ್ತವರಿದುನಿಂತು.
(ಪದ್ಯ - ೧೨)
1.5.12_29
ಪದ್ಯ - ೧೩
1.5.13
ಕೊಂಡುಬಂದಾ ಹಯವನೊಪ್ಪಿಸಿ ಯುಧಿಷ್ಠಿರನ |
ಕಂಡಂ ಸುವೇಗನತಿಭಕ್ತಿಯಿಂದೆರಗಿದಂ |
ಪುಂಡರೀಕಾಕ್ಷಂಗೆ ಬಳಿಕರ್ಜುನಾದಿಗಳ್ಗುಚಿತದಿಂ ವಂದಿಸಿದನು |
ಬಂಡಿಪೇರೆತ್ತೊಂಟೆಗಳ ಮೇಲೆ ತಂದಖಿಳ |
ಭಂಡಾರಮಂ ಕರಿರಥಾಶ್ವಮಂ ನಾರಿಯರ |
ತಂಡಮಂ ಗೋಮಹಿಷ ಮೊದಲಾದ ವಸ್ತುಗಳನಾ ಕ್ಷಣದೊಳೊಪ್ಪಿಸಿದನು ||13||
1.5.13_30
ಪದ್ಯ - ೧೪
1.5.14
ಮೇಲೆ ಪರಿತೋಷದಿಂದಾ ಯೌವನಾಶ್ವಭೂ |
ಪಾಲಕಂ ತನ್ನ ಸರ್ವಸ್ವಮಂ ತಂದು ಲ |
ಕ್ಷ್ಮೀಲೋಲನಂಘ್ರಿಗೊಪ್ಪಿಸಿದ ಬಳಿಕವನೊಡನೆ ಬಂದಿಹ ಸಮಸ್ತಜನರು |
ನೀಲಮೇಘಶ್ಯಾಮಲನ ಕೋಮಲಾಂಗದ ವಿ |
ಶಾಲತರ ಲಾವಣ್ಯಲಹರಿಯ ಸುಧಾಂಬುದಿಯೊ |
ಳೋಲಾಡುತಿರ್ದರಡಿಗಡಿಗೆ ವಂದಿಸಿ ನುತಿಸಿ ಜಯಜಯನಿನಾದದಿಂದೆ ||14||
1.5.14_31
ಮೇಲೆ ಪರಿತೋಷದಿಂದಾ= ನಂತರ, ಯೌವನಾಶ್ವಭೂಪಾಲಕಂ ತನ್ನ ಸರ್ವಸ್ವಮಂ= ಯೌವನಾಶ್ವ ಭೂಪಾಲನು ತನ್ನ ಸರ್ವಸ್ವವನ್ನೂ ತಂದು, ಲಕ್ಷ್ಮೀಲೋಲನಂಘ್ರಿಗೆ= ಕೃಷ್ಣನಿಗೆ ಒಪ್ಪಿಸಿದ ಬಳಿಕ ಅವನೊಡನೆ ಬಂದಿಹ= ಬಂದಿರುವ ಸಮಸ್ತಜನರು ನೀಲಮೇಘಶ್ಯಾಮಲನ= ಮೇಘದ ಕಪ್ಪುಮೈಬಣ್ಣದ ಕೃಷ್ಣನ, ಕೋಮಲಾಂಗದ= ಕೋಮಲ ದೇಹದ, ವಿಶಾಲತರ ಲಾವಣ್ಯಲಹರಿಯ= ಬಹಳ ಲಾವಣ್ಯ ಲಕ್ಷಣದ, ಸುಧಾಂಬುದಿಯೊಳು= ಕ್ಷೀರಸಮುದ್ರದಲ್ಲಿ ಓಲಾಡುತಿರ್ದರುಸಮತೋಷದಲ್ಲಿ ಮುಳುಗಿದ್ದರು. ಅಡಿಗಡಿಗೆ ವಂದಿಸಿ ನುತಿಸಿ= ಅವನಿಗೆ ಪದೇಪದೇ ನಮಸ್ಕರಿಸುತ್ತಾ , ಜಯಜಯನಿನಾದದಿಂದೆ = ಜಯಜಯ ಕೃಷ್ಣ ಎನ್ನುತ್ತಿದ್ದರು.
(ಪದ್ಯ - ೧೪)
1.5.14_32
ಪದ್ಯ - ೧೫
1.5.15
ಇತ್ತಲಾ ಯೌವನಾಶ್ವವ ರಾಣಿ ಕಾಣಿಕೆಯ |
ನಿತ್ತು ಕುಂತಿಗೆ ನಮಿಸಿ, ಬಳಿಕ ಪಾಂಚಾಲಭೂ |
ಭೃತ್ತನೂಜೆಯ ಚರಣ ಸೀಮೆಗಾನತೆಯಾಗಲವಳ ಕಚಭರಮೆಸೆದುದು ||
ಒತ್ತಿಡಿದ ಸಂಜೆಗೆಂಪಿನ ಮೇಲೆ ಕವಿದ ಬ |
ಲ್ಗತ್ತಲೆಯೊ ಶೋಣಗಿರಿತಟಕಿಳಿವ ಕಾರ್ಮುಗಿಲ |
ಮೊತ್ತಮೊ ಕಮಲಕೆರಗುವಳಿಕುಲಮೊ ತಳಿರ್ಗೊಂಬಡರ್ದ ಬರ್ಹಿಯೊ ಪೇಳೆನೆ ||15|||
1.5.15_33
ಇತ್ತಲಾ= ಇತ್ತಲಾಗಿ ರಾಣೀವಾಸದಲ್ಲಿ, ಯೌವನಾಶ್ವವ ರಾಣಿ ಕಾಣಿಕೆಯನಿತ್ತು= ಕಾಣಿಕೆಯನ್ನು ಕೊಟ್ಟು ಕುಂತಿಗೆ ನಮಿಸಿ=ನಮಸ್ಕರಿಸಿದಳು, ಬಳಿಕ ಪಾಂಚಾಲಭೂಭೃತ್ತನೂಜೆಯ= ಪಾಂಚಾಲ ರಾಜನ ಮಗಳು ದ್ರೌಪದಿಯ, ಚರಣ ಸೀಮೆಗೆ ನತೆಯಾಗಲು ಅವಳ ಕಚಭರಂ ಎಸೆದುದು= (ಕಚ= ತಲೆಕೂದಲು) ಪಾದಗಳಿಗೆ ಬಗ್ಗಿ ನಮಸ್ಕರಿಸಲು ಅವಳ ದಟ್ಟ ಕಪ್ಪಕೂದಲು ಅದ್ಭುತವಾಗಿ ತೋರಿತು; ಅದು - ಒತ್ತಿಡಿದ ಸಂಜೆಗೆಂಪಿನ ಮೇಲೆ ಕವಿದ ಬಲ್ಗತ್ತಲೆಯೊ= ಒಟ್ಟಿಗೆ ಒತ್ತಿಟ್ಟಿಇರುವ ಕೆಂಪುಬಣ್ಣದ ಸಂಜೆಯ ಮೇಲೆ ಕವಿದ ಕತ್ತಲೆಯೋ ಎಂಬಂತೆ ಅವಳ ತಲೆಯ ಉದ್ದ ಕಪ್ಪು ಕೂದಲರಾಶಿ ದ್ರೌಪದಿಯ ಕಾಲುಗಳನ್ನು ಮುಚ್ಚಿತು; ಶೋಣಗಿರಿತಟಕಿಳಿವ= ಕೆಂಪು ಬೆಟ್ಟದ ತಲಕ್ಕೆ ಇಳಿದು ಬಂದ, ಕಾರ್ಮುಗಿಲ ಮೊತ್ತಮೊ= ಕಪ್ಪಮುಗಿಲ ರಾಶಿಯೋ ಎಂಬಂತಿತ್ತು, ಕಮಲಕೆ ಎರಗುವ ಅಳಿಕುಲಮೊ= ಕಮಲದ ಹೂವಿಗೆ ಬಂದು ಮತ್ತಿದ ಜೇನುಹುಳುಗಳೋ ಎಂಬತೆ ಕಾಣುತ್ತಿತ್ತು. ತಳಿರ್ಗೊಂಬಡರ್ದ-:ತಳಿರ್ ಕೊಂಬ ಅಡರ್ದ ಬರ್ಹಿಯೊ= ಕೆಂಪುಎಲೆಯ ಚಿಗುರಿನ ರೆಂಬೆಯನ್ನು ಹತ್ತಿದ ಸೋಗೆಬಾಲದ ನವಿಲೋ ಪೇಳೆನೆ- ಪೇಳು ಎನೆ= ಹೇಳು ಎನ್ನುವಂತಿತ್ತು,
(ಪದ್ಯ - ೧೫)IIIXX
1.5.15_34
ಪದ್ಯ - ೧೬
1.5.16
ದ್ವೇಷಮಂ ಬಿಟ್ಟು ಕೆಂದಾವರೆಯ ಚೆಲ್ವಿನ ವಿ |
ಶೇಷಮಂ ನೋಡಲ್ ಸಮೀಪಮಂ ಸಾರ್ದ ಪೀ |
ಯೂಷಕರಬಿಂಬಮೆನಲಾ ಪ್ರಭಾವತಿಯ ಮೊಗವಂಘ್ರಿದೇಶದೊಳೊಪ್ಪಿರೆ ||
ಭೂಷಣಂ ಚಲಿಸೆ ಮಣಿದೆತ್ತಿ ಬಿಗಿಯಪ್ಪಿ ಸಂ |
ತೋಷದಿಂದವಳನುಪಚರಿಸಿ ತಿರುಗಿದಳಖೀಳ |
ಯೋಷಿಜ್ಜನದೊಳತಿವಿಲಾಸದಿಂ ದ್ರೌಪದಿ ಸುಭದ್ರಾದಿ ಸತಿಯರೊಡನೆ ||16||
1.5.16_35
ದ್ವೇಷಮಂ ಬಿಟ್ಟು= ದ್ವೇಷವನ್ನು ಬಿಟ್ಟು, ಕೆಂದಾವರೆಯ ಚೆಲ್ವಿನ ವಿಶೇಷಮಂ ನೋಡಲ್ ಸಮೀಪಮಂ ಸಾರ್ದ= ಕೆಂಪು ತಾವರೆಯ ವಿಶೇಷ ಸೊಬಗನ್ನು ನೋಡಲು ಸಮೀಪಕ್ಕೆ ಹೋದ, ಪೀಯೂಷಕರಬಿಂಬಂ(ಚಂದ್ರನ ಅಮೃತಕಿರಣ) ಎನಲು ಆ ಪ್ರಭಾವತಿಯ ಮೊಗಂ ಅಂಘ್ರಿದೇಶದೊಳ್ ಒಪ್ಪಿರೆ= ನಮಸ್ಕರಿಸಿದ ಆ ಪ್ರಭಾವತಿಯ ಚಂದ್ರನ ಅಮೃತಕಿರಣದಂತಿರುವ ಮಖವು ದ್ರೌಪದಿಯ ಪಾದಗಳಲ್ಲಿ ಇರಲು, ಭೂಷಣಂ ಚಲಿಸೆ ಮಣಿದು ಎತ್ತಿ ಬಿಗಿಯಪ್ಪಿ= ದ್ರೌಪದಿಯ ಆಭರಣಗಳು ಅಲುಗುತ್ತಿರಲು ಪ್ರಭಾವತಿಯನ್ನು ಬಗ್ಗಿ ಎತ್ತಿ ಬಿಗಿಯಾಗಿ ಪ್ರೀತಿಯಿಂದ ಅಪ್ಪಿಕೊಂಡು, ಸಂತೋಷದಿಂದ ಅವಳನು=ಅವಳನ್ನು ಉಪಚರಿಸಿ, ತಿರುಗಿದಳು ಅಖಿಳ ಯೋಷಿಜ್ಜನದೊಳು(ಹೆಂಗಸರ ಸಮೂಹದಲ್ಲಿ) ಅತಿವಿಲಾಸದಿಂ ದ್ರೌಪದಿ ಸುಭದ್ರೆ ಆದಿ ಸತಿಯರೊಡನೆ= ದ್ರೌಪದಿ ಸುಭದ್ರೆ ಮೊದಲಾದ ಸತಿಯರ ಜೊತೆಗೂಡಿಕೊಂಡು ಸೊಬಗಿನಿಂದ ಹೆಂಗಸರ ಸಭೆಯಲ್ಲಿ/ಸಭೆಯಕಡೆ ಹೋದಳು.
(ಪದ್ಯ - ೧೬)
1.5.16_36
ಪದ್ಯ - ೧೭
1.5.17
ಶೌರಿಸಹಿತರಸಂ ಬಳಿಕ ರಜತಗಿರಿಯಂತೆ |
ಗೌರಾಂಗದಿಂದೆ ಕಣ್ಗೊಳಿಸುವ ತುರಂಗಮದ |
ಸೌರಂಭಮಂ ನೋಡಿ ಬಿಗಿಯಪ್ಪಿ ಮುಂಡಾಡಿ ಹೈಡಿಂಬಿ ಕರ್ಣಜರನು |
ಗೌರವಂ ಮಿಗೆ ಯೌವನಾಶ್ವಭೂಪಾಲನಂ |
ಪೌರುಷದೊಳುಪಚರಿಸಿ ತಂದನಿಭಪುರಿಗಖಿಳ |
ಪೌರಜನ ಪರಿಜನದ ರಥನಾಗವಾಜಿಗಳ ಸಂದಣಿಯ ಸಂಭ್ರಮದೊಳು ||17||
1.5.17_37
ಪದ್ಯ - ೧೮
1.5.18
ಭೂವಲ್ಲಭಂ ಮುದದೊಳಾ ಯೌವನಾಶ್ವನಂ |
ಭಾವಿಸಿದ ಬಳಿಕ ಪಕ್ಷದ್ವಯಂ ಹರಿ ಹಸ್ತಿ |
ನಾವತಿಯೊಳಿರ್ದು ನೃಪವರನೊಳಿಂತೆಂದನೀ ಚೈತ್ರಮಾಸಂ ಪೋದುದು ||
ಈ ವೇಳೆಗಧ್ವರದ ಸಮಯವನುಪಕ್ರಮಿಸ |
ಲಾವಿರಲ್ ಪನ್ನೊಂದು ತಿಂಗಳಿರ್ಪುದು ಮುಂದೆ |
ನೀವು ಕರೆಸಿದೊಡೆ ಬಂದಪೆವಂದಿಗೊದವಿದ ಸಮಸ್ತ ವಸ್ತುಗಳ ಕೊಂಡು ||18||
1.5.18_38
ಭೂವಲ್ಲಭಂ= ಧರ್ಮರಾಜನು ಮುದದೊಳು ಆ ಯೌವನಾಶ್ವನಂ ಭಾವಿಸಿದ ಬಳಿಕ= ಸಂತೋಷದಿಂದ ಆ ಯೌವನಾಶ್ವನನ್ನು ಉಪಚರಿಸಿದ ಬಳಿಕ, ಪಕ್ಷದ್ವಯಂ ಹರಿ ಹಸ್ತಿನಾವತಿಯೊಳ್ ಇರ್ದು= ಕೃಷ್ಣನು ಒಂದು ತಿಂಗಳು ಹಸ್ತಿನಾವತಿಯಲ್ಲಿ ಇದ್ದು, ನೃಪವರನೊಳು ಇಂತೆಂದನು= ಆರಾಜನನ್ನು ಕುರಿತು ಹೀಗೆ ಹೇಳಿದನು, 'ಈ ಚೈತ್ರಮಾಸಂ ಪೋದುದು ಈ ವೇಳೆಗೆ ಅಧ್ವರದ ಸಮಯವನು ಉಪಕ್ರಮಿಸಲು ಆವು ಇರಲ್ ಪನ್ನೊಂದು ತಿಂಗಳಿರ್ಪುದು= ಈ ಸಮಯಕ್ಕೆ ಯಜ್ಞದ ಕೆಲಸ ಆರಂಭಿಸಲು ಚೈತ್ರಮಾಸವು ಕಳೆಯಿತು, ನಾವು ಇರೋಣವೆಂದರೆ ಇನ್ನೂ ಹನ್ನೊಂದು ತಿಂಗಳು ಇರುವುದು, ಮುಂದೆ ನೀವು ಕರೆಸಿದೊಡೆ ಬಂದಪೆವು ಅಂದಿಗೆ ಒದವಿದ ಸಮಸ್ತ ವಸ್ತುಗಳ ಕೊಂಡು= ಯಜ್ಞ ಆರಂಬವಾಗುವಾಗ ನೀವು ನಮ್ಮನ್ನು ಕರೆಸಿದರೆ ಆ ಕಾರ್ಯಕ್ಕೆ ಬೇಕಾದ ಎಲ್ಲಾ ವಸ್ತುಗಳನ್ನೂ ತೆಗೆದುಕೊಂಡು ಬರುತ್ತೇವೆ.'
(ಪದ್ಯ - ೧೮)
1.5.18_39
ಪದ್ಯ - ೧೯
1.5.19
ರಾಯ ನೀಂ ಕರೆಸಿದೊಡೆ ನಿನ್ನಯ ಮಹಾಧ್ವರ ಸ |
ಹಾಯಕೆ ಸಮಸ್ತವಸ್ತುವನಖಿಳ ಯಾದವ ನಿ |
ಕಾಯಮಂ ಕೂಡಿಕೊಂಡೈತಪ್ಪೆವನ್ನೆಗಂ ಸುಯ್ದಾನದಿಂ ಹಯವನು ||
ಈ ಯೌವನಾಶ್ವಭೂಪತಿಸಹಿತ ಕಾವುದೆಂ |
ದಾ ಯಮಸುತಾದಿಗಳನಂದು ಬೀಳ್ಕೊಂಡು ಕಮ ||
ಲಾಯತಾಕ್ಷಂ ಬಂಧುಕೃತ್ಯದಿಂ ದ್ವಾರಕಾಪುರಕೆ ಬಿಜಯಂಗೈದನು ||19||
1.5.19_40
ರಾಯ ನೀಂ ಕರೆಸಿದೊಡೆ ನಿನ್ನಯ ಮಹಾಧ್ವರ ಸಹಾಯಕೆ= ರಾಜನೇ ನೀನು ಕರೆಸಿದರೆ ನಿನ್ನ ಮಹಾಯಜ್ಞದ ಸಹಾಯಕ್ಕೆ,
ಸಮಸ್ತವಸ್ತುವನು ಅಖಿಳ ಯಾದವ ನಿಕಾಯಮಂ ಕೂಡಿಕೊಂಡು ಐತಪ್ಪೆವು= ಸಮಸ್ತವಸ್ತುಗಳನ್ನೂ ಎಲ್ಲಾ ಯಾದವ ಸಮೂಹವನ್ನೂ ಕೂಡಿಕೊಂಡು ಬರುವೆವು,
ಅನ್ನೆಗಂ ಸುಯ್ದಾನದಿಂ= ಅಲ್ಲಿಯವರೆಗೆ ಎಚ್ಚಿಕೆಯಿಂದ,
ಹಯವನು ಈ ಯೌವನಾಶ್ವಭೂಪತಿ ಸಹಿತ ಕಾವುದು ಎಂದು ಆ ಯಮಸುತ ಆದಿಗಳನು ಅಂದು ಬೀಳ್ಕೊಂಡು= ಅಶ್ವವನ್ನೂ ಈ ಯೌವನಾಶ್ವಭೂಪತಿಯ ಸಹಿತ ರಕ್ಷಿಸಬೇಕು,
ಎಂದು ಆ ಯಮಸುತ ಆದಿಗಳನು ಅಂದು ಬೀಳ್ಕೊಂಡು ಕಮಲಾಯತಾಕ್ಷಂ ಬಂಧುಕೃತ್ಯದಿಂ ದ್ವಾರಕಾಪುರಕೆ ಬಿಜಯಂಗೈದನು= ಎಂದು ಆ ಧರ್ಮಜ ಮೊದಲಾದವರನ್ನು ಅಂದು ಬೀಳ್ಕೊಂಡು ಕೃಷ್ಣನು ಬಂಧುವಾಗಿ ತನ್ನ ಕರ್ತವ್ಯ ಮಾಡಿ ದ್ವಾರಕಾಪುರಕ್ಕೆ ಹೋದನು.
(ಪದ್ಯ - ೧೯)
1.5.19_41
ಪದ್ಯ - ೨೦
1.5.20
ಇತ್ತಲವನಿಪನಸುರಹರನ ಕಳುಹಿದ ಚಿಂತೆ |
ಗಿತ್ತು ನಿಜಬುದ್ದಿಯೆಂ ಮುಂದರಿಯದಿರೆ ಬಂದು |
ಮತ್ತೆ ವೇದವ್ಯಾಸಮುನಿ ತಿಳುಹಲಮಲಮಂಟಪವನೋಜೆಯೊಳು ರಚಿಸಿ ||
ತತ್ತುರಗಮಂ ನಿಲಿಸಿ ಬಳಿಕ ಕಾವಲ್ಗೆ ರಥ |
ಮತ್ತಗಜ ಹಯ ಪದಾತಿಗಳ ಸಂದೋಹಮಂ |
ಸುತ್ತಲುಂಪರುಠವಿಸಿ ಕೇಳ್ದನಾ ಋಷಿಯೊಳ್ ಮರುತ್ತನೃಪತಿಯ ಕಥೆಯನು ||20||
1.5.20_42
ಪದ್ಯ - ೨೧
1.5.21
ವಿಧುಕುಲಲಲಾಮ ಕೇಳ್ ಧರ್ಮಸುತನಾ ತಪೋ |
ನಿಧಿಗೆ ಕೈಮುಗಿದು ಬೆಸಗೊಂಡಂ ಮರುತ್ತನೃಪ |
ನಧಿಕತರ ಯಾಗಮನದಾವ ಋಷಿಮುಖದಿಂದಮಂದು ವಿರಚಿಸಿದನದರ ||
ವಿಧಿಯಂ ತನಗೆ ಪೇಳ್ವುದೆನೆ ಬಾದರಾಯಣಂ |
ಮಧುರೋಕ್ತಿಯಿಂದವನಿಪತಿಗೆ ವಿಸ್ತರಿಸಿದಂ |
ಬುಧಜನಪ್ರೀತಿಕರಮಾಗಲಾ ರಾಯನ ಮಹಾಕ್ರತುವನೀ ಕ್ರಮದೊಳು ||21||
1.5.21_43
ವಿಧುಕುಲಲಲಾಮ ಕೇಳ್= ಚಂದ್ರಕುಲ ಶ್ರೇಷ್ಠನಾದ ಜನಮೇಜಯನೇ ಕೇಳು, ಧರ್ಮಸುತನು ಆ ತಪೋನಿಧಿಗೆ ಕೈಮುಗಿದು ಬೇಸಗೊಂಡಂ= [ಧರ್ಮಜನು ಆ ತಪೋನಿಧಿಗೆ ಕೈಮುಗಿದು ಕೇಳಿಕೊಂಡನು], ಮರುತ್ತನೃಪನು ಅಧಿಕತರ ಯಾಗಮನು ಅದಾವ ಋಷಿಮುಖದಿಂದಂ ಅಂದು ವಿರಚಿಸಿದನು ಅದರ ವಿಧಿಯಂ ತನಗೆ ಪೇಳ್ವುದು ಎನೆ= [ಮರುತ್ತರಾಜನು ಅಧಿಕತರ ಯಾಗವನ್ನು ಯಾವ ಋಷಿಮುಖದಿಂದ ಅಂದು ಮಾಡಿದನು ಅದರ ಕ್ರಮವನ್ನು ತನಗೆ ಹೇಳಬೇಕು ಎನ್ನಲು], ಬಾದರಾಯಣಂ ಮಧುರೋಕ್ತಿಯಿಂದ ಅವನಿಪತಿಗೆ ವಿಸ್ತರಿಸಿದಂ ಬುಧಜನ(ಪಂಡಿತರು) ಪ್ರೀತಿಕರಂ ಆಗಲು ಆ ರಾಯನ ಮಹಾಕ್ರತುವನು ಈ ಕ್ರಮದೊಳು= [ಪಂಡಿತರಿಗೆ ಇಷ್ಟವಾಗುವಂತೆ ಆ ರಾಜನ ಮಹಾಯಜ್ಞವನ್ನು ಈ ಕ್ರಮದಲ್ಲಿ ಬಾದರಾಯಣನು ಮಧುರವಾದ ಮಾತುಗಳಿಂದ ಧರ್ಮಜನಿಗೆ ವಿವರಿಸಿದನು].
(ಪದ್ಯ - ೨೧)
1.5.21_44
ಪದ್ಯ - ೨೨
1.5.22
ಆದೊಡೆ ನರೇಂದ್ರ ಕೇಳಾದಿಯುಗದಲ್ಲಿ ವಿಮ |
ಲಾದಿತ್ಯವಂಶದೊಳ್ ಮೆರೆದರಿಕ್ಷ್ವಾಕು ಮೊದ |
ಲಾದವರ್ ಧರ್ಮ ಕೀರ್ತಿ ಪ್ರತಾಪಂಗಳಿಂದವರ ಪಾರಂಪರೆಯೊಳು ||
ಮೇದಿನೀಪತಿ ಕರಂಧಮನೆಂಬವಂ ಸಕಲ |
ಭೂದೇವಕುಲದೊಳುದ್ದಾಮನೆನಿಪಂಗಿರನ |
ನಾದರಿಸಿ ವರಿಸಿ ಹಯಮೇಧಶತಮಂ ಮಾಡಿ ಸುರಪದವಿಯಂ ಪಡೆದನು ||22||
1.5.22_45
ಆದೊಡೆ ನರೇಂದ್ರ ಕೇಳು ಆದಿಯುಗದಲ್ಲಿ= [ಹಾಗಿದ್ದರೆ ಕೇಳು ಕೃತಯುಗದಲ್ಲಿ], ವಿಮಲಾದಿತ್ಯವಂಶದೊಳ್ ಮೆರೆದರು ಇಕ್ಷ್ವಾಕು ಮೊದಲಾದವರ್ ಧರ್ಮ ಕೀರ್ತಿ ಪ್ರತಾಪಂಗಳಿಂದ= [ಸೂರ್ಯ ವಂಶದಲ್ಲಿ ಇಕ್ಷ್ವಾಕು ಮೊದಲಾದವರು ಧರ್ಮ ಕೀರ್ತಿ ಪ್ರತಾಪಂಗಳಿಂದ ಪ್ರಸಿದ್ಧರಾದರು], ಅವರ ಪಾರಂಪರೆಯೊಳು ಮೇದಿನೀಪತಿ ಕರಂಧಮನೆಂಬವಂ= [ಅವರ ಪರಂಪರೆಯಲ್ಲಿ ಚಕ್ರವರ್ತಿ ಕರಂಧಮನೆಂಬವನು], ಸಕಲ ಭೂದೇವಕುಲದೊಳು ಉದ್ದಾಮನು ಎನಿಪ ಅಂಗಿರನನು ಆದರಿಸಿ ವರಿಸಿ= [ಸಕಲ ಭೂಮಿ ದೇವತೆಗಳ ಕುಲದಲ್ಲಿ ಶ್ರೇಷ್ಠನು ಎಂಬ ಹೆಸರುಳ್ಳ ಅಂಗಿರನನು/ ಆಂಗೀರಸನು ಆದರದಿಂದ ಬಯಸಿ/ ಇಷ್ಟಪಟ್ಟು], ಹಯಮೇಧಶತಮಂ ಮಾಡಿ ಸುರಪದವಿಯಂ ಪಡೆದನು= ನೂರು ಅಶ್ವಮೇಧ ಯಾಗ ಮಾಡಿ ಇಂದ್ರತ್ವವನ್ನು ಪಡೆದನು.
(ಪದ್ಯ - ೨೨)
1.5.22_46
ಪದ್ಯ - ೨೩
1.5.23
ಆ ಕರಂಧಮನ ಸುತನಾವಿಕ್ಷಿಯೆಂಬ ವಸು |
ಧಾಕಾಂತನಾತನಿಂದುದಯಿಸಿ ಮರುತ್ತಂ ತ್ರಿ |
ಲೋಕವಿಖ್ಯಾತನಾದಂ ಪಗೆಗಳಂ ಗೆಲ್ವೆಡೆಯೊಳುಸುರ್ವಿಡುತಿರಲ್ಕೆ ||
ವ್ಯಾಕೀರ್ಣ ಚಾತುರ್ಬಲಂ ಪುಟ್ಟುತಿಹುದವಂ |
ಬೇಕೆಂದಕಡೆ ಸಾಧ್ಯಮಾಗಿ ಬಹುದೀಧರೆಯ |
ನೇಕಾಧೀಪತ್ಯದಿಂದಾಳ್ದನಂದಮಲಧರ್ಮದ ಮೇರೆ ತಪ್ಪದಂತೆ ||23||
1.5.23_47
ಆ ಕರಂಧಮನ ಸುತನು ಅವಿಕ್ಷಿಯೆಂಬ ವಸುಧಾಕಾಂತನು= [ಆ ಕರಂಧಮನ ಮಗನು ಅವಿಕ್ಷಿಯೆಂಬ ರಾಜನು], ಆತನಿಂದುದಯಿಸಿ ಮರುತ್ತಂ ತ್ರಿಲೋಕವಿಖ್ಯಾತನಾದಂ= [ಆತನಿಂದ ಹುಟ್ಟಿದ ಮರುತ್ತನು ತ್ರಿಲೋಕವಿಖ್ಯಾತನಾದನು].ಪಗೆಗಳಂ ಗೆಲ್ವೆಡೆಯೊಳು ಅಸುರ್ವಿಡುತಿರಲ್ಕೆ(ಉಸಿರುಬಿಡುವಾಗ) ವ್ಯಾಕೀರ್ಣ ಚಾತುರ್ಬಲಂ ಪುಟ್ಟುತಿಹುದು ಅವಂ ಬೇಕೆಂದಕಡೆ ಸಾಧ್ಯಮಾಗಿ ಬಹುದು= [ಅವನು ಶತ್ರುಗಳನ್ನು ಗೆಲ್ಲುವಾಗ ಬಯಸಿದ ಸ್ಥಳದಲ್ಲಿ (ಕ್ಷಣಮಾತ್ರದಲ್ಲಿ ಎಂದು ಭಾವ)ವಿಶಾಲ ಚತುರಂಗ ಸೈನ್ಯವೇ ಉಸಿರುಬಿಡುವಷ್ಟರಲ್ಲಿ ಹುಟ್ಟಿ ಬರುತ್ತಿತ್ತು], ಈ ಧರೆಯನು ಏಕಾಧೀಪತ್ಯದಿಂದ ಆಳ್ದನು ಅಂದು ಅಮಲಧರ್ಮದ ಮೇರೆ ತಪ್ಪದಂತೆ= [ಈ ಭೂಮಿಯನ್ನು ಏಕಾಧೀಪತ್ಯದಿಂದ ಅವನು ಆಕಾಲದಲ್ಲಿ ಪರಿಶುದ್ಧ ಧರ್ಮದಲ್ಲಿ ಮಿತಿ ತಪ್ಪದಂತೆ ಆಳಿದನು.]
(ಪದ್ಯ - ೨೩)
1.5.23_48
ಪದ್ಯ - ೨೪
1.5.24
ಪ್ರಾಜ್ಯವೈಭವದಿಂದೆ ರಂಜಿಸುವ ಧರೆಯ ಸಾ |
ಮ್ರಾಜ್ಯಧಿಪತ್ಯದ ಮಹಾಧನಂ ಸುರವಿಪ್ರ |
ಭೋಜ್ಯಮಪ್ಪವೊಲಾ ನೃಪಾಲಕಂ ತುರುಗಮೇಧಾಧ್ವರದ ಮಾಳ್ಕೆಗೆಳಸಿ ||
ಯಾಜ್ಯಯಾಜನಕೆ ವರಿಸುಪೊಡಂಗಿರನ ಸುತಂ |
ಪೂಜ್ಯನೆಮ್ಮೀಕುಲದವರ್ಗೆಂಬ ನಿಶ್ಚಯದೊ |
ಳಾಜ್ಯಪರ್ಗಾಚಾರ್ಯನಾಗಿಹ ಬೃಹಸ್ಪತಿಯ ಪೊರೆಗೆ ಬಂದಿತೆಂದನು ||24||
1.5.24_49
(ಪದ್ಯ - ೨೪)
1.5.24_50
ಪದ್ಯ - ೨೫
1.5.25
ಎಲೆ ಬೃಹಸ್ಪತಿ ಮತ್ಪಿತಾಮಹಂ ಕ್ರತುಗಳ್ಗೆ |
ಸಲೆ ನಿನ್ನ ತಾತನಂ ವರಿಸಿರ್ವನದರಿಂದೆ |
ಕುಲಧರ್ಮಮಂ ಬಿಡದೆ ನೀನೆನಗೆ ಯಜ್ಞಮಂ ಮಾಡಿಸೆನಲವನೊಪ್ಪಲು ||
ಬಲರಿಪು ಕನಲ್ದು ಮಾನವರ ಮಖಯಾಜನಂ |
ಪೊಲೆ ಸುರರ್ಗುಚಿತಮಲ್ಲೆಂದು ಗುರುವಂ ತಡೆದು |
ನಿಲಿಸಲಾ ನೃಪತಿ ಭಂಗಿತನಾಗಿ ಬರುತೆ ನಾರದಮುನಿಪನಂ ಕಂಡನು ||25||
1.5.25_51
ಪದ್ಯ - ೨೬
1.5.26
ದುಗುಡದಿಂದಾನೃಪಂ ನಾರದಂಗೆರಗೆ ನಸು |
ನುಗುತಿದೇನೆಲೆ ರಾಯ ನಿನಗೆ ದುಮ್ಮಾನಮೆನೆ |
ಮಿಗೆ ಬೃಹಸ್ಪತಿ ತನಗೆ ಮಾಡಿದವಮಾನಮಂ ಪೇಳ್ದತಿವಿರಕ್ತಿಯಿಂದೆ ||
ನಗರಮಂ ಪುಗದರಣ್ಯದೊಳುಗ್ರತಪದಿಂದೆ |
ಜಗದೊಳುತ್ಕೃಷ್ಟಪದಮಂ ಪಡೆವೆನೆನೆ ಕೇಳ್ದು |
ವಿಗಡಮುನಿವರನಾಗಳಾ ಮಹೀಪಾಲನಂ ಸಂತೈಸುತಿಂತೆಂದನು ||26||
1.5.26_52
ಪದ್ಯ - ೨೭
1.5.27
ಜನಪ ನಿನಗೆಚ್ಚರಿಪೆನಾದಿಯೊಳ್ ಪಂಕಜಾ |
ಸನನ ಮಾನಸಪುತ್ರನಾದನಂಗಿರನವನ |
ತನುಜರ್ ಬೃಹಸ್ಪತಿಯುಮಿನ್ನೊರ್ವ ಸಂವರ್ತನೆಂಬವಂ ಬಳಿಕವರ್ಗೆ ||
ದಿನದಿನಕೆ ದಾಯಾದಮತ್ಸರಂ ಪೆರ್ಚುತಿರೆ |
ಮನೆವಾಳ್ತೆಯೊಳ್ ಪಸುಗೆಯಂ ಕುಡದೆ ಗುರು ತಗು |
ಳ್ದನುಜನಂ ಪೊರಮಡಿಸೆ ಕಾಶೀಯೊಳ್ ಪೋಗಿರ್ಪನಾತನವಧೂತನಾಗಿ ||27||
1.5.27_53
ಜನಪ ನಿನಗೆ ಎಚ್ಚರಿಪೆನು= [ರಾಜನೇ ನಿನಗೆ ಎಚ್ಚರಿಕೆಯಿಂದ ಗಮನಿಸಬೇಕಾದ ಹೊಸ ವಿಷಯವನದ್ನು ಹೇಳುವೆನು], ಆದಿಯೊಳ್ ಪಂಕಜಾಸನನ ಮಾನಸಪುತ್ರನಾದ ಅನಂಗಿರನು ಅವನ ತನುಜರ್ ಬೃಹಸ್ಪತಿಯುಂ ಇನ್ನೊರ್ವ ಸಂವರ್ತನೆಂಬವಂ= [ಹಿಂದೆ ಕೃತಯುಗದಲ್ಲಿ ಬ್ರಹ್ಮನ ಮಾನಸಪುತ್ರನಾದ ಅನಂಗಿರನು ಜನಿಸಿದನು., ಅವನ ಮಕ್ಕಳು ಬೃಹಸ್ಪತಿಯು ಮತ್ತೊಬ್ಬ ಸಂವರ್ತನೆಂಬುವವನು] ಬಳಿಕವರ್ಗೆ ದಿನದಿನಕೆ ದಾಯಾದಮತ್ಸರಂ ಪೆರ್ಚುತಿರೆ= [ಬಳಿಕ ದಿನಗಳದಂತೆ ಅವರಲ್ಲಿ ದಿನದಿನಕ್ಕೂ ದಾಯಾದಮತ್ಸರವು ಹೆಚ್ಚಾಗಲು] ಮನೆವಾಳ್ತೆಯೊಳ್ ಪಸುಗೆಯಂ ಕುಡದೆ ಗುರು ತಗುಳ್ದು(ಜಗಳವಾಗಿ-ಹೊರತಳ್ಳಿ) ಅನುಜನಂ ಪೊರಮಡಿಸೆ= [ಮನೆಯ ಆಸ್ತಿಯಲ್ಲಿ ಹಿಸೆಯನ್ನು ಕೊಡದೆ ಗುರು ಬೃಹಸ್ಪತಿಯು ಮನೆಯಿಂದ ತಮ್ಮನನ್ನು ಹೊರತಳ್ಳಲು], ಕಾಶೀಯೊಳ್ ಪೋಗಿ ಇರ್ಪನು ಅತನು ಅವಧೂತನಾಗಿ= ಅವನು ಹೋಗಿ ಕಾಶೀಯಲ್ಲಿ ಅವಧೂತನಾಗಿದ್ದಾನೆ.
(ಪದ್ಯ - ೨೭)
1.5.27_54
ಪದ್ಯ - ೨೮
1.5.28
ಆತನಂ ವರಿಸಿದೊಡೆ ಯಜ್ಞ ಮಾದಪುದು ನಿನ |
ಗೇತಕಿನ್ನೆಣಿಕೆ ನಡೆ ಕಾಶಿಕಾ ಪಟ್ಟಣದೊ |
ಳಾ ತಪೋನಿಧಿ ನಿನ್ನ ಕಣ್ಗೆ ಗೋಚರಿಸದಿರೆ ಪೊಳಲ ಪೆರ್ಬಾಗಿಲೊಳಗೆ ||
ಘಾತಿಯಾಗಿರ್ದ ಪೆಣನಂ ಬಿಸುಡಿಸದನಖಿಳ |
ಜಾತಿಗಳ್ ತುಳಿದು ಕೊಂಡೆಡೆಯಾಡುತಿರ್ಪುವವ |
ಧೂತನಾಗಿರ್ದವಂ ಕಂಡು ತೊಲಗಿದೊಡರಿದು ಬೆಂಬಿಡದೆ ಪೋಗೆಂದನು ||28||
1.5.28_55
ಪದ್ಯ - ೨೯
1.5.29
ಪೊಕ್ಕಲ್ಲಿ ಪೊಕ್ಕು ಬೆಂಬಿಡದೆ ನೀಂ ಬರೆ ಕಂಡು |
ಸಿಕ್ಕಿದೆತ್ತಣದೆಂದು ಬಯ್ದಪಂ ಪೊಯ್ದಪಂ |
ಮುಕ್ಕಳಿಸಿ ಮೇಲುಗುಳ್ದಪನೇನನಾದೊಡಂ ಮಾಡುವಂ ನೀನದಕ್ಕೆ ||
ಹೆಕ್ಕಳಿಸಿ ಹಿಮ್ಮೆಟ್ಟದಿರ್ದೊಡಾರೊರೆದರೆ |
ನ್ನಿಕ್ಕೆಯಂ ಪೇಳೆಂದವಂ ಕೇಳ್ದೊಡೆನ್ನನಿದಿ |
ರಿಕ್ಕಿ ನಾರದನರುಪಿ ತಾಂ ಕಿಚ್ಚಿನೊಳ್ ಬಿದ್ದಬೆಂದುಸಿರ್ ಪೋಗೆಂದನು ||29||
1.5.29_56
ಪದ್ಯ - ೩೦
1.5.30
ನಾರದನ ಬುದ್ಧಿಯಂ ಕೇಳ್ದು ಸಂತೋಷದಿಂ |
ಭೂರಮಣನಲ್ಲಿಂದೆ ಬೀಳ್ಕೊಂಡು ಶಶೀಮೌಳಿ |
ತಾರಕಬ್ರಹ್ಮೋಪದೇಶದಿಂದೆ ಪ್ರಾಣಿಗಳ್ಗಾತ್ಮಸಾಯುಜ್ಯಮೀವ ||
ಭೂರಿದುರಿತಂಗಳಂ ಕಂಡಮಾತ್ರದೊಳೆ ಸಂ |
ಹಾರಮಂ ಮಾಳ್ಪ ನಿಖಿಳಪ್ರಳಯಬಾಧೆಗಳ್ |
ದೂರಮೆನಿಪವಿಮುಕ್ತ ಕಾಶಿಗೈತಂದು ವಿಶ್ವೇಶಂಗೆ ಪೊಡಮಟ್ಟನು ||30||
1.5.30_57
ಪದ್ಯ - ೩೧
1.5.31
ಬಳಿಕಲ್ಲಿ ನಾರದಂ ಪೇಳ್ದಂತೆ ಭೂವರಂ |
ಪೊಳಲ ಪೆರ್ಬಾಗಿಲ್ಗೆ ಕುಣಪಮಂ ತಂದಿರಿಸ |
ಲುಳಿಯದೆಡೆಯಾಡುತಿರ್ದುದು ಜನಂ ಕಂಡು ಸಂವರ್ತನತ್ತಲೆ ತೊಲಗಲು ||
ಬಳಿವಿಡಿದು ಪೋದೊಡವನೀಶನಂ ಬೈದು ಪೊ |
ಯ್ದಳಲಿಸಿ ಕನಲ್ದುಗುಳ್ದೋಕರಿಸಿ ನೂಕಲದ |
ಕಳುಕದಿರ್ದೊಡೆ ತಾನದಾರೆಂದು ಬಂದೆ ನೀನೆಂದುನೃಪನಂ ಕೇಳ್ದನು||31||
1.5.31_58
ಪದ್ಯ - ೩೨
1.5.32
ಸುರಪುರೋಹಿತನನುಜನಂಗಿರನ ಸೂನು ಮುನಿ |
ವರಮೌಳಿ ಸಂವರ್ತನೆಂದರಿದು ಬಂದು ನಿ |
ನ್ನಿರವಂ ಪರೀಕ್ಷಿಸಿದೆನೆಂದು ನೃಪನುಸಿರಲವರಾರ್ ನಿನಗೆ ಪೇಳ್ದರೆನಲು ||
ಪರಮರ್ಷಿನಾರದಂ ತನಗೊರೆದು ಕೂಡೆ ತಾ |
ನುರೀಯೊಳ್ ಪ್ರವೇಶಿಸಿದನೆನೆ ತಾಪಸಂ ತಿಳಿದು |
ಕರುಣದಿಂದೇತಕ್ಕೆತಂದೆ ನೀನಾರೆನ್ನೊಳಹ ಕಜ್ಜಮೇನೆಂದನು||32||
1.5.32_59
ಪದ್ಯ - ೩೩
1.5.33
ಆದೊಡೆ ಮರುತನಾ ನಾನಾವಿಕ್ಷಿನೃಪಸುತಂ |
ಮೇದಿನಿಯೊಳೆನಗೆ ಹಯಮೇಧಮಂ ಮಾಡಿಸೆಂ |
ದಾದರಿಸಿ ನಿಮ್ಮಣ್ಣನಂ ಕೇಳ್ದೊಡಾತಂ ತಿರಸ್ಕರಿಸಿದೊಡೆ ನಿನ್ನನು ||
ಆ ದೇವಮುನಿ ಪೇಳ್ದೊಡೈತಂದೆನೆನ್ನಧ್ವ |
ರೋದಯಕೆ ನೀನಲ್ಲದನ್ಯರಂ ಕಾಣೆನೆಂ |
ದಾ ದಿನಪಕುಲದರಸನಂದು ಸಂವರ್ತನಂ ಬೇಡಿಕೊಳಲಿಂತೆಂದನು ||33||
1.5.33_60
ಪದ್ಯ - ೩೩
1.5.34
ಲೇಸಾದುದೆಲೆ ರಾಯ ನಿನ್ನ ಯಜ್ಞಕ್ಕೆ ತಾ |
ನೊಸರಿಸುವವನಲ್ಲ ಪುರುಡಿಂ ಮಮಾಗ್ರಜಂ |
ವಾಸವನ ಮುಖದಿಂದೊಡಂಬಡಿಸಿ ಮಖಕೆ ತಾನಧ್ಯಕ್ಷನಪ್ಪೆನೆಂದು ||
ಆಶೆಯಿಂ ಕೇಳ್ದೊಡೇಗೈವೆ ನೀಂ ಪೇಳೆನಲ್ |
ಭೂಸುರನ ಕೊಂದಗತಿ ತನಗಹುದು ನಿಮ್ಮಂ ಪ್ರ |
ಯಾಸದಿಂ ಬಿಟ್ಟೊಡೆಂದರಸಂ ಪ್ರತಿಜ್ಞೆಯಂ ಮಾಡಲವನಿಂತೆಂದನು ||34||
1.5.34_61
ಲೇಸಾದುದು ಎಲೆ ರಾಯ ನಿನ್ನ ಯಜ್ಞಕ್ಕೆ ತಾನು ಓಸರಿಸುವವನಲ್ಲ= [ರಾಜನೇ ಒಳ್ಳಯದು ನಿನ್ನ ಯಜ್ಞಕ್ಕೆ ತಾನು ನಿರಾಕರಿಸುವವನಲ್ಲ,] ಪುರುಡಿಂ(ಪೈಪೋಟಿ, ಹೊಟ್ಟೆಕಿಚ್ಚು) ಮಮಾಗ್ರಜಂ ವಾಸವನ(ಇಂದ್ರ) ಮುಖದಿಂದೊಡಂಬಡಿಸಿ ಮಖಕೆ ತಾನಧ್ಯಕ್ಷನಪ್ಪೆನೆಂದು ಆಶೆಯಿಂ ಕೇಳ್ದೊಡೆ ಏಗೈವೆ ನೀಂ ಪೇಳೆನಲ್ = [ಪೈಪೋಟಿ ಮತ್ತು ಹೊಟ್ಟೆಕಿಚ್ಚಿನಿಂದ ನನ್ನ ಅಣ್ಣನು ಇಂದ್ರನ ಮೂಲಕ ಒಪ್ಪಿಗೆಪಡೆದು ಯಜ್ಞಕ್ಕೆ ತಾನು ಅಧ್ಯಕ್ಷನು ಆಗುವೆನೆಂದು ಆಸೆಪಟ್ಟು ಕೇಳಿದರೆ ಏನು ಮಾಡಡುವೆ? ನೀನು ಹೇಳು ಎನಲು,] ಭೂಸುರನ ಕೊಂದಗತಿ ತನಗಹುದು ನಿಮ್ಮಂ ಪ್ರ ಯಾಸದಿಂ ಬಿಟ್ಟೊಡೆಂದರಸಂ ಪ್ರತಿಜ್ಞೆಯಂ ಮಾಡಲವನಿಂತೆಂದನು= ತಾನು ಅದಕ್ಕೆ ಒಪ್ಪಿ ನಿಮ್ಮನ್ನು ಒತ್ತಾಯಕ್ಕೆ ಮಣಿದು ಆ ಕಷ್ಟದಿಂದ ಬಿಟ್ಟರೆ, ಬ್ರಾಹ್ಮಣನನ್ನು ಕೊಂದಗತಿ ತನಗೆ ಬರಲಿ, ಎಂದು ಪ್ರತಿಜ್ಞೆಯನ್ನು ಮಾಡಲು ಅವನು ಹೀಗೆ ಹೇಳಿದನು.
(ಪದ್ಯ - ೩೩)
1.5.34_62
ಪದ್ಯ - ೩೫
1.5.35
ಯಾಜಕಂ ತಾನಪ್ಪೆನಧ್ವರಕೆ ನೀನಿನ್ನು |
ರಾಜಿಪ ಹಿಮಾಲಯದೊಳೆಸೆವ ರಜಾತಾದ್ರಿಯೊಳ್ |
ತೇಜೋಮಯಂ ಸದಾಶಿವನಿರ್ಪನಾತನ ಪದಾಬ್ಜಮಂ ಪೋಗಿ ಕಂಡು ||
ಪೂಜೆಗೈದೊಡೆ ಕನಕರಾಶಿಗಳನಿತ್ತಪಂ |
ಮೂಜಗಂ ತಣಿವಂತೆ ವರಮಖಂ ನಡೆವುದೆನ |
ಲಾ ಜನಪನಲ್ಲಿಗೈತಂದು ಗಿರಿಜೇಶನಂ ಪ್ರಾರ್ಥಿಸಿದನರ್ತಿಯಿಂದೆ ||35||
1.5.35_63
ಪದ್ಯ - ೩೬
1.5.36
ತರುಣೇಂದುಮೌಳಿಯಂ ಪ್ರಾರ್ಥಿಸಿದೊಡಿತ್ತನತಿ |
ಕರುಣದಿಂದಪರಿಮಿತವಸ್ತುವಂ ಬಳಿಕ ಹಿಮ |
ಗಿರಿತಟದೊಳಾ ನೃಪಂ ಕಟ್ಟಿಸಿದನಧ್ವರದ ಶಾಲೆಯಂ ಕನಕದಿಂದೆ ||
ವರವೈದಿಕ ಪ್ರಮಾಣದೊಳಂದು ವಿಪ್ರರಂ |
ಕರೆಸಿ ಸಂವರ್ತನಂ ಕೂಡಿಕೊಂಡು ತ್ಸವದೊ |
ಳರಸಂ ಮಹಾಕ್ರತು ಪ್ರಾರಂಭದೊಳ್ ಮೆರೆದನೈಶ್ವರ್ಯವಿಭವದಿಂದೆ ||36||
1.5.36_64
ತರುಣೇಂದುಮೌಳಿಯಂ(ಬಾಲಚಂದ್ರನನ್ನು ಶಿರದಲ್ಲಿಧರಿಸಿದವ- ಶಿವ) ಪ್ರಾರ್ಥಿಸಿದೊಡೆ ಇತ್ತನು ಅತಿ ಕರುಣದಿಂದ ಅಪರಿಮಿತ ವಸ್ತುವಂ ಬಳಿಕ ಹಿಮಗಿರಿತಟದೊಳ ಆ ನೃಪಂ ಕಟ್ಟಿಸಿದನು ಅಧ್ವರದ ಶಾಲೆಯಂ ಕನಕದಿಂದೆ ವರವೈದಿಕ ಪ್ರಮಾಣದೊಳಂದು= [ರಾಜನು ಶಿವನನ್ನು ಪ್ರಾರ್ಥಿಸಿದಾಗ ಅವನು ಅತಿ ಕರುಣದಿಂದ ಅಪರಿಮಿತ ವಸ್ತುಗಳನ್ನು ಕೊಟ್ಟನು. ಬಳಿಕ ಹಿಮಗಿರಿಯ ತಟದಲ್ಲಿ ಆ ರಾಜನು ವೈದಿಕ ಪ್ರಮಾಣದಲ್ಲಿ ಕನಕದಿಂದ ಯಜ್ಞಶಾಲೆಯನ್ನು ಕಟ್ಟಿಸಿದನು,] ವಿಪ್ರರಂ ಕರೆಸಿ ಸಂವರ್ತನಂ ಕೂಡಿಕೊಂಡು ತ್ಸವದೊಳರಸಂ ಮಹಾಕ್ರತು ಪ್ರಾರಂಭದೊಳ್ ಮೆರೆದನೈಶ್ವರ್ಯವಿಭವದಿಂದೆ= [ಬ್ರಾಹ್ಮಣರನ್ನು ಕರೆಸಿ ಸಂವರ್ತನನ್ನು ಕೂಡಿಕೊಂಡು ವಿಜ್ರಂಭಣೆಯಿಂದ ಅರಸನು ಮಹಾಯಜ್ಞ ಪ್ರಾರಂಭೋತ್ಸವದಲ್ಲಿ ಐಶ್ವರ್ಯರಾಶಿಯನ್ನು ಹೊಂದಿ ಮೆರೆದನು.]
(ಪದ್ಯ - ೩೬)
1.5.36_65
ಪದ್ಯ - ೩೭
1.5.37
ಕೇಳ್ದಂ ಬೃಹಸ್ಪತಿ ಮರುತ್ತನ ಮಖೋದಯವ |
ನಾರ್ಳದನತಿಚಿಂತೆಯೊಳ್ ಮುಂದೆ ಧನಯುತನಾಗಿ |
ಬಾಳ್ದಪಂ ಸಂವರ್ತನೆಂಬ ಪುರುಡಿಂದುಬ್ಬೆಗಂಬಟ್ಟು ದಿವಿಜಪತಿಗೆ ||
ಪೇಳ್ದೊಡವನಗ್ನಿಯಂ ಕಳಿಪಿದೊಡೆ ದೀಕ್ಷೆಯಂ |
ತಾಳ್ದೆಸೆವ ಭೂಪನೆಡೆಗೈತಂದು ವೃತ್ರನಂ |
ಸೀಳ್ದವಂ ತನ್ನೊಳಾಡಿದಮಾತನಿಂತೆಂದು ವಿವರಿಸಿದನಾ ಕೃಶಾನು ||37||
1.5.37_66
(ಪದ್ಯ - ೩೭)
1.5.37_67
ಪದ್ಯ - ೩೮
1.5.38
ರಾಯ ಕೇಳಿಂದ್ರನಾಡಿದಮಾತನೊರೆವೆನಾ |
ನೀ ಯಜ್ಞಮಂ ಬೃಹಸ್ಪತಿಯ ಕೈಯಿಂ ತೊಡಗಿ |
ಸಾಯಸಂಬಟ್ಟು ಸಂವರ್ತನಂ ವರಿಸಬೇಡೆನ್ನಾಜ್ಞೆಯಂ ಮೀರ್ದೊಡೆ ||
ವಾಯದಿಂದಧ್ವರಂ ಕೆಡುವಂತೆ ಮಾಡುವೆನ |
ಪಾಯಮಂ ನಿನಗೆಂದು ಪೇಳ್ದಂ ಸುರಪನೆಂಬ |
ವಾಯುಸಖನಂ ನೋಡಿ ನಸುನಗುತೆ ವಿನಯದಿಂ ಭೂಪಾಲನಿಂತೆಂದನು ||38||
1.5.38_68
ಪದ್ಯ - ೩೯
1.5.39
ಗುರುವೆ ಕುಲಗುರುವೆಂದು ಮೊದಲೆ ನಾಂ ಪೋಗಿ ವಿ |
ಸ್ತರದಿಂದೆ ಮಾಡಿಸಧ್ವರವನೆಂದಾಡಿದೊಡೆ |
ನರಯಾಜನಕ್ಕೊಲ್ಲೆನೆಂದ ಬಳಿಕೈಸಲೇ ಸಂವರ್ತನಂ ಮಖಕ್ಕೆ ||
ವರಿಸಿದೆನಸತ್ಯಮಂ ನುಡಿಯಲಂಜುವೆನಿನ್ನು |
ತುರಗಮೇಧಂ ನಡೆಯದೊಡೆ ಮಾಣಲೆಂದು ಭೂ |
ವರನಗ್ನಿಯಂ ಬೇಡಿಕೊಳುತಿರಲ್ಕಂಡು ಮುಳಿದಾ ಮುನಿಪನಿಂತೆಂದನು ||39||
1.5.39_69
ಪದ್ಯ ೪೦
1.5.40
ಭೂಕಾಂತ ನಿನಗಿವನೊಳುಪಚಾರಮೇಕಿನ್ನು |
ಸಾಕೀತನಂ ಕಳುಹು ಯಜ್ಞಮಂ ಕಿಡಿಸಿದೊಡೆ |
ನಾಕಮಂ ಕೆಡಿಸುವೆಂ ಸಕಲಮಂ ಸುಡುವನಿಲನಂ ಸುಡುವೆನೀಕ್ಷಣದೊಳು ||
ಪಾಕಶಾಸನವನೊಡಗೊಂಡು ಬರಲಗ್ನಿಯಂ |
ನೂಕೆಂದು ಸಂವರ್ತನಾಡಲ್ ಬೆದರ್ದು ಸುರ |
ಲೋಕಕ್ಕೆ ಪೋಗಿ ವೈಶ್ವಾನರಂ ವಜ್ರಿಗರುಹಿದೊಡಾತನಿಂತೆಂದನು ||40||
1.5.40_70
ಪದ್ಯ ೪೧
1.5.41
ಇನ್ನೊಂದುಬಾರಿ ನೀಂ ಪೋಗಿ ವೇಳಾ ನೃಪತಿ |
ಗೆನ್ನ ವಜ್ರಕ್ಕೆ ಗುರಿಯಾಗಬೇಡೆಂದೆನಲ್ |
ತನ್ನ ಕಯ್ಯೊಳ್ ಸಾಗದಂಜುವೆಂ ಸಂವರ್ತನತಿತಪೋಬಲನಿಳೆಯೊಳು ||
ಮುನ್ನ ಭೂಸುರಶಾಪದಿಂದೆ ಪಲರಳಿದುಳಿದು |
ಬನ್ನ ಬಟ್ಟವರುಂಟು ಸಾಕೆಂದು ಶಿಖಿ ತೊಲಗೆ |
ಮನ್ನಿಸಿ ಪುರಂದರಂ ಧೃತರಾಷ್ಟ್ರನೆಂಬ ಗಂಧರ್ವಂಗೆ ನೇಮಿಸಿದನು ||41||
1.5.41_71
(ಪದ್ಯ -೪೧)
1.5.41_72
ಪದ್ಯ ೪೨
1.5.42
ಧೃತರಾಷ್ಟನೆಂಬ ಗಂಧರ್ವರಾಜಂ ಬಂದು |
ಶತಮಖಂ ಸಂವರ್ತನಂ ಬಿಟ್ಟು ವರಬೃಹ |
ಸ್ಪತಿಯನಧ್ವರಕೆ ವರಿಸದೊಡೀಗ ವಜ್ರದಿಂದರಿದಪಂ ನಿನ್ನನೆಂದು ||
ಕ್ಷಿತಿಪಂಗೆ ಪೇಳ್ದೊಡದ ಕೇಳ್ದಾ ಮುನೀಶ್ವರಂ |
ಖತಿಗೊಂಡೊಡಾತಂ ಮರಳ್ದು ಶಕ್ರಂಗರುಹ |
ಲತುಳಸನ್ನಾಹದಿಂ ಪೊರಮಟ್ಟನಮರೇಂದ್ರನನಿಮಿಷರ ಗಡಣದಿಂದೆ ||42||
1.5.42_73
ಪದ್ಯ ೪೩
1.5.43
ಕೋಪದಿಂದಾಗಳೆತ್ತಿದ ವಜ್ರಹಸ್ತದಿಂ |
ದಾಪುರಂದರನೈದೆ ಕಂಡು ನಡುನಡುಗುತಿಹ |
ಭೂಪನಂ ಸಂತೈಸಿ ಸಂವರ್ತನಿಂದ್ರಾಗ್ನಿ ಮೊದಲಾದಮರಗಣವನು ||
ರೂಪಿಸಿದ ಚಿತ್ರಪಟದಂತಾಗ ನಿಲಿಸಲ್ ಪ್ರ |
ತಾಪಂಗಳುಡುಗಿ ನಿರ್ಜರ ನಿಕರಮಳವಳಿಯ |
ಲಾ ಪರಮಧಾರ್ಮಿಕ ಮರುತ್ತಂ ತಪಸ್ವಿಯಂ ಬೇಡಿಕೊಂಡಂ ನಯದೊಳು ||43||
1.5.43_74
ಪದ್ಯ ೪೪
1.5.44
ಎಲೆ ಮುನ್ವೀಶರ ಹವಿರ್ಭಾಗಮಂ ಕೊಂಬಮರ |
ಕುಲಮಿಂತಿರಲ್ ಬಹುದೆ ಪ್ರತ್ಯಕ್ಷಮಾಗಿ ಬಂ |
ದೊಲಿದೆನ್ನಯಾಗದೊಳ್ ವಿನಯದಿಂದೀಸಿಕೊಳಲಾಹುತಿಯ ಪಸುಗೆಗಳನು||
ಸಲಿಸಬೇಕೆನ್ನ ಭಿನ್ನಪವನೀ ಸುರಪನೊಳ್ |
ಕಲಹಮಂ ಬಿಡಿಸೆಂದು ಭೂವಲ್ಲಭಂ ಕೃತಾಂ |
ಜಲಿಯಿಂದೆ ಸಂವರ್ತನಂ ಪ್ರಾರ್ಥಿಸಿದೊಡಿತ್ತನಾ ನೃಪನ ವಾಂಛಿತವನು ||44||
1.5.44_75
ಪದ್ಯ ೪೫
1.5.45
ಭೂಮೀಶ ಕೇಳ್ ಬಳಿಕ ಸಂವರ್ತಮುನಿವರನ |
ಸಾಮರ್ಥ್ಯಮಂ ನೋಡಿ ವೈರಮಂ ಬಿಟ್ಟು ಸು |
ತ್ರಾಮಂ ಸಕಲದಿವಿಜರೊಡಗೂಡಿ ಯಜ್ಞದ ಹವಿರ್ಬಾಗಮಂ ಕೊಳಲ್ಕೆ ||
ಪ್ರೇಮದಿಂ ಪ್ರತ್ಯಕ್ಷಮಾಗಿ ಬಂದಿರುತಿರ್ದ |
ನಾ ಮರುತ್ತಂಗೆ ಸಂತೋಷಂನೆಗಳ್ದುದು ಮ |
ಹಾಮಖಂ ನೆರೆದುದು ಸಮಸ್ತ ವೈಭವದ ವಿಸ್ತಾರದಿಂ ಖ್ಯಾತಮಾಗಿ ||45||
1.5.45_76
ಪದ್ಯ ೪೬
1.5.46
ವರ್ತಿಸಿತು ವೈದಿಕವಿಥಾನದಿಂದೆಸೆವ ಸಂ |
ವರ್ತಮುನಿ ಮಾಡಿಸೆ ಮಹಾಧ್ವರಂ ಸಕಲದಿವಿ |
ಜರ್ತಮ್ಮ ತಮ್ಮ ಭಾಗಂಗಳಂ ಪ್ರತ್ಯಕ್ಷಮಾಗಿ ಕೈಕೊಂಡರಿರ್ದು ||
ಮರ್ತ್ಯ ಲೋಕಂ ಕನಕಮಯಮಾಗೆ ಭೂಮಿಯಮ |
ರರ್ತೆಗೆದು ಹೊತ್ತದಕ್ಷಿಣೆಗಳಿಂ ದಣಿದು ಬಿಸು |
ಟರ್ತುಹಿನಗಿರಿಯೊಳಗಣಿತಹೇಮರಾಶಿಗಳನೇನೆಂಬೆನಚ್ಚರಿಯನು ||46||
1.5.46_77
(ಪದ್ಯ -೪೬)
1.5.46_78
ಪದ್ಯ ೪೭
1.5.47
ಪಾರ್ಥಿವಾಗ್ರಣಿ ಮರುತ್ತಂ ಬಳಿಕ ವಿನಯದಿಂ |
ಪ್ರಾರ್ಥಿಸಿದನಿಂದ್ರಾದಿಗಳನವರ್ ಮುದದೊಳಿ |
ಷ್ವಾರ್ಥಮಂ ಸಲಿಸಿದರ್ ತಣಿದಲಸಿದರ್ ದ್ವಿಜರ್ ಭೂರಿದಕ್ಷಿಣೆಗಳಿಂದೆ ||
ಸ್ವಾರ್ಥಮೆಲ್ಲಮನಿತ್ತು ಸಂವರ್ತಮುನಿಗೆ ಮಖ |
ತೀರ್ಥದೊಳ್ ಮಿಂದು ಶುಚಿಯಾಗಿ ದೇವರ್ಕಳಿದು |
ಸಾರ್ಥಮೆನೆ ಚಿರಕಾಲಮವನಿಯೊಳವಂ ಬಾಳ್ದು ಪಡೆದನುತ್ತಮಗತಿಯನು ||47||
1.5.47_79
(ಪದ್ಯ -೪೭)
1.5.47_80
ಪದ್ಯ ೪೮
1.5.48
ರಾಯ ಕೇಳಾ ಯಜ್ಞ ಸಂಗತಿಯನಾ ಬಾದ |
ರಾಯಣಂ ಪೇಳೆ ಬಳಿಕವನಿಪಂ ಧರ್ಮಸಾ |
ರಾಯಮಂ ಕೇಳ್ದನಾ ಮುನಿವರನೊಳವಾ ನರನಾವ ಕೃತ್ಯಂಗೆಯ್ಯಲು ||
ಬೀಯದ ಜಸಂ ಬಳೆವುದಿಲ್ಲಿ ನಾರಕದ ಬಿರು |
ಬೀಯದ ಸುಖಂ ಪರದೊಳೆಂತು ದೊರಕೊಂಬುದೆಂ |
ಬೀಯವಸ್ಥೆಯನೆನಗೆ ವಿಸ್ತರಿಸಿ ಪೇಳ್ಪುದೆನೆ ಶುಕತಾತನಿಂತೆಂದನು ||48||
1.5.48_81
ಪದ್ಯ ೪೯
1.5.48_82
ಪದ್ಯ ೪೯
1.5.49
ಸಾರ್ವನಿಗಮಾರ್ಥಮಂ ತಿಳಿದು ಸತ್ಕರ್ಮಮಂ |
ಸಾರ್ವಕಾಲಂಗೆಯ್ದು ಪರವಧೂವಿಷಯಮಂ |
ಸಾರ್ವ ಚಿಂತೆಯನುಳಿದು ಲೋಕಾಪವಾದಮಂ ಪರಿಹರಿಸಿ ಪರರೊಡವೆಗೆ ||
ಪಾರ್ವನಲ್ಲದೆ ಸದಾಚಾರದಿಂ ನಡೆದೊಡಾ |
ಪಾರ್ವನಿಹದೊಳ್ ಕೀರ್ತಿಪರನಾಗಿ ಬಳಿಕವಂ |
ಪಾರ್ವನುತ್ತಮಗತಿಗೆ ದೇಹಾವಸಾನದೊಳ್ ಭೂಪಾಲ ಕೇಳೆಂದನು ||49|||
1.5.49_83
ಸಾರ್ವ= ಸರ್ವ, ನಿಗಮದ ಅರ್ಥಮಂ= ವೇದಗಳ ಅರ್ಥತಿಳಿದು ಸತ್ಕರ್ಮಮಂ= ಒಳ್ಳೆಯಕಾರ್ಯವನ್ನು, ಸಾರ್ವಕಾಲಂಗೆಯ್ದು= ಸರ್ವಕಾಲದಲ್ಲಿಯೂ ಮಾಡಿ, ಪರವಧೂವಿಷಯಮಂ ಸಾರ್ವ= ಪರವಧೂಗಳ ವಿಷಯವನ್ನು ಪ್ರಚುರಪಡಿಸುವ, ಚಿಂತೆಯನುಳಿದು= ಯೋಚನೆ ಮಾಡದೆ, ಲೋಕಾಪವಾದಮಂ= ಜನರರಿಂದ ಬರುವ ಅಪವಾದವನ್ನು ಪರಿಹರಿಸಿ, ಪರರ ಒಡವೆಗೆ= ಬೇರೆಯವರ ವಸ್ತುಗಳಿಗೆ, ಪಾರ್ವನಲ್ಲದೆ= ಆಸೆಪಡದೆ, ಸದಾಚಾರದಿಂ= ಉತ್ತಮ ಆಚಾರದಿಂದ, ನಡೆದೊಡೆ= ನಡೆದುಕೊಮಡರೆ, ಆಪಾರ್ವನು= ಬ್ರಾಹ್ಮಣನು, ಅವನು ಇಹದೊಳ್=ಈ ಲೋಕದಲ್ಲಿ, ಕೀರ್ತಿಪರನಾಗಿ= ಕೀರ್ತಿವಂತನಾಗಿ, ಬಳಿಕ ಅವಂ= ಸತ್ತನಂತರ ಅವನು, ದೇಹಾವಸಾನದೊಳ್ ಉತ್ತಮ ಗತಿಗೆ ಪಾರ್ವನು= ದೇಹಬಿಟ್ಟನಂತರ ಉತ್ತಮ ಗತಿಗೆ ಹೋಗುವನು, ಭೂಪಾಲನೇ ಕೇಳು, ಎಂದು ಎಂದನು.
(ಪದ್ಯ -೪೯)
1.5.49_84
ಪದ್ಯ ೫೦
1.5.50
ಸರ್ವಧರ್ಮಗಳನರಿದೋವಿದೊಡೆ ರಣಕೆ ಬೇ |
ಸರ್ವನಲ್ಲದೊಡಾತ್ಮವಿದನಾದೊಡಿಳೆಯೊಳ್ ಪೆ |
ಸರ್ವಡೆದು ಕ್ಷತ್ರಿಯಂ ಕಾದಿ ಮಡಿದೊಡೆ ಸೂರೆಗೊಂಬನಮರಾವತಿಯನು ||
ದುರ್ವಚನಮಂ ನುಡಿಯದತಿಥಿಗಳ ಕೆಡೆನುಡಿಯ |
ದುರ್ವಧನಮಂ ಕೂಡಿ ಗೋರಕ್ಷಣಂಮಾಳ್ಪು |
ದುರ್ವರೆಯೊಳಿದು ಕೀರ್ತಿ ವೈಶ್ಯಂಗೆ ಪರಗತಿ ಮುಕುಂದಸೇವೆಯೊಳಪ್ಪುದು ||50||
1.5.50_85
ಸರ್ವಧರ್ಮಗಳನ್ನು ಅರಿದು= ಅರತು, ಓವಿದೊಡೆ= ಅದರಂತೆ ನಡೆದು ರಕ್ಷಿಸಿದರೆ, ರಣಕೆ ಬೇಸರ್ವನಲ್ಲದೊಡೆ ಯುದ್ಧಕ್ಕೆ ಬೇಸರಿಸದಿದ್ದರೆ, ಆತ್ಮವಿದನಾದೊದೆ= ಆತ್ಜ್ಞಾನವುಳ್ಳವನಾದರೆ ಇಳೆಯೊಳ್ ಪೆಸರ್ವಡೆದು= ಭಮಿಯಲ್ಲ ಹೆಸರು ಪಡೆದು, ಕ್ಷತ್ರಿಯಂ ಕಾದಿ ಮಡಿದೊಡೆ=ಕ್ಷತ್ರಿಯನು ಯುದ್ಧಮಾಡಿ ಸತ್ತರೆ, ಸೂರೆಗೊಂಬನು ಅಮರಾವತಿಯನು= ಸ್ವರ್ಗದ ಅಮರಾವತಿಯ ಸುಖವನ್ನು ಯಥೇಶ್ಚವಾಗಿ ಪಡೆಯುವನು. ದುರ್ವಚನಮಂ ನುಡಿಯದೆ= ಕೆಟ್ಟ ಮಾತಾಡದೆ, ಅತಿಥಿಗಳ ಕೆಡೆನುಡಿಯದೆ= ಮನೆಗೆಬಂದವರಿಗೆ ಕೆಟ್ಟಮಾತಾಡದೆ, ಉರ್ವಧನಮಂಹೆಚ್ಚು ಹಣವನ್ನು ಕೂಡಿಟ್ಟುಕೊಂಡು, ಗೋರಕ್ಷಣಂಮಾಳ್ಪುದು= ಗೋವನ್ನು ಪಾಲಿಸಿದರೆ, ಉರ್ವರೆಯೊಳು ಇದು ಕೀರ್ತಿ ವೈಶ್ಯಂಗೆ ಪರಗತಿ=ಭೂಮಿಯಲ್ಲಿ ವೈಶ್ಯನಿಗೆ ಪರಲೋಕದಲ್ಲಿ ಉತ್ತಮ ಗತಿಬರುವುದು, ಮುಕುಂದನ ಸೇವೆಯೊಳ್ ಅಪ್ಪುದು ಸೇವೆಯಲ್ಲಿ= ಅಲ್ಲದೆ ವಷ್ಣುವಿನ ಸೇವೆಯಲ್ಲಿ ಉತ್ತಮ ಗತಿಬರುವುದು.
(ಪದ್ಯ -೫೦)XX
1.5.50_86
ಪದ್ಯ ೫೧
1.5.51
ದ್ವಿಜರಾಸರಂದಳೆದು ಬೆಸಗೈವ ಶೂದ್ರನುಂ |
ದ್ವಿಜರಾಜವಾಹನಸ್ಮರಣೆಯಿಂದೈದುವಂ |
ದ್ವಿಜರಾಜಸನ್ನಿಭದ ಸುಗತಿಯಂ ಜಗದೊಳಂತದು ಕುಲಸ್ತ್ರೀಯರೊಳಗೆ ||
ನಿಜನಾಥಭೀತೆ ಸುಚರಿತ್ರೆ ಗುಣವತಿ ಮಾನಿ |
ನಿ ಜನಾಪವಾದವಿರಹಿತೆಯೆನಿಪ ನಾರಿನ(ಯ) |
ನ್ನಿ ಜನಾರ್ದನಾದಿ ನಿರ್ಜರವರ್ಯವಿನುತೆಯಹಳೆನಲವಳ ಸುಕೃತಮೆಂತೋ ||51||
1.5.51_87
ದ್ವಿಜರ ಆಸರಂ ತಳೆದು = ಬ್ರಾಹ್ಮಣರ ಆಶ್ರಯ ಪಡೆದು, ಬೆಸಗೈವ= ಅವರ ಉಪದೇಶದಂತೆ ನೆಡೆವ, ಶೂದ್ರನುಂ=ಶೂದ್ರನೂ ದ್ವಿಜರಾಜವಾಹನ =ವಿಷ್ಣುವಿನ ಸ್ಮರಣೆಯಿಂದ ಐದುವಂ= ಹೋಗುವನು, ದ್ವಿಜರಾಜ=ವಿಷ್ಣುವಾಹನ ಗರುಡಪಕ್ಷಿಯ(ಚಂದ್ರಪ್ರಕಾಶ) ಸನ್ನಿಭದ= ಸಮಾನವಾದ ಸುಗತಿಯಂ= ಸದ್ಗತಿಯನ್ನು; ಐದುವಂ= ಹೊಂದುವನು. ಜಗದೊಳು= ಜಗತ್ತಿನಲ್ಲಿ, ಅಂತದು ಕುಲಸ್ತ್ರೀಯರೊಳಗೆ= ಉತ್ತಮ ಸ್ತ್ರೀಯರಲ್ಲಿ ನಿಜನಾಥಭೀತೆ= ತನ್ನ ಪತಿತೆಭಯಪಡುವವಳು, ಸುಚರಿತ್ರೆ= ಉತ್ತಮ ನಡತೆಯುಳ್ಳವಳು, ಗುಣವತಿ, ಮಾನಿನಿ= ಮಾನವುಳ್ಳವಲು, ಜನಾಪವಾದವಿರಹಿತೆ ಎನಿಪ= ಜನಾಪವಾದವಿಲ್ಲದವಳು ಎನ್ನಿಸುವ, ನಾರಿ=ಹೆಂಗಸು, ನನ್ನಿಜನಾರ್ದನಾದಿ=ಸುಜನರರೇಮೊದಲಾದ ನಿರ್ಜರವರ್ಯ= ದೇವತಾ ವಿನುತೆಯು= ಸ್ತ್ರೀ ಅಹಳು=ಆಗಿರುವಳು ಎನಲು=ಎನ್ನಲು, ಅವಳ ಸುಕೃತಮೆಂತೋ= ಅವಳ ಪುಣ್ಯವು ಎಂತೋ ಹಳಲಾಗದಷ್ಟು ಹೆಚ್ಚಿನದು.
(ಪದ್ಯ -೫೧)
1.5.51_88
ಪದ್ಯ ೫೨
1.5.52
ಪತಿ ದೈವಮೆಂದರಿದು ನಡೆವ ಸತಿಗಹುದು ಪರ |
ಗತಿಯಲ್ಲದಂಗನೆಯರತಿಸಾಹಸಿಗಳವರ |
ಕೃತಕಶೀಲಂಗಳಂ ನಂಬಲಾಗದು ಮೇಣ್ ಸ್ವತಂತ್ರಮಂ ಕುಡಲಾಗದು ||
ಪಿತನಿಂದೆ ಬಾಲ್ಯದೊಳ್ ಪತಿಯಿಂದೆ ಹರೆಯದೊಳ್ |
ಸುತನಿಂದೆ ವೃದ್ಧಾಪ್ಯದೊಳ್ ಕುಲಸ್ತ್ರೀ ಸುರ |
ಕ್ಷಿತೆಯಾಗದಿರ್ದೊಡವಳಿಂದೆ ನಿಜವಂಶಕುಹಪತಿ ಬಾರದಿರದಿಳೆಯೊಳು ||52||
1.5.52_89
ಪದ್ಯ ೫೩
1.5.53
ವರಯಜ್ಞಶಾಲೆಯುಂ ಬಾಲೆಯುಂ ದ್ವಿಜಪಙ್ತ |
ಪರಿಶೋಭಿಸದೊಡೆ ಸತ್ಯವಿತೆಯುಂ ಯುವತಿಯುಂ |
ಚರಣಗತಿ ಸಮತೆವೆತ್ತಿರದೊಡಬ್ಜಾರಿಯುಂ ನಾರಿಯುಂ ಚಾರುತರದ ||
ಕರಭೋರುಕಾಂತಿ ಸಂಯುಕ್ತಮಾಗಿರದಿರ್ದೊ |
ಡರಸಾಳ್ವ ಧರಣಿಯುಂ ತರುಣಿಯುಂ ಶಾಲಿಸುಂ |
ದರಮಾಗಿರದೊಡೆ ಸೌಮಂಗಳ್ಯಮಾಗಿಯುಂ ಮೇಲೆಯುನ್ನತಿಯಪ್ಪುದೆ ||53||
1.5.53_90
(ಪದ್ಯ -೫೩)
1.5.53_91
ಪದ್ಯ ೫೪
1.5.54
ಮಾವಂಗೆ ಭಾವಂಗೆ ಮೇಣತ್ತೆಗೈದೆ ಸಂ |
ಭಾವಿಸುತೆ ಸೇವಿಸುತೆ ಕಾಂತಂಗೆ ಸುರತಸಂ |
ಜೀವನವನೀವ ನವಯುವತಿಯಹ ಲಕ್ಷಣಂ ಸುಕೃತಫಲಮಂತಲ್ಲದೆ ||
ಪಾವಿನಂತಾವಿನಂತಡಿಗಡಿಗೆ ಮೊರೆದೆದ್ದು |
ಡಾವರಿಸಿ ಸೀವರಿಸಿ ಮನೆಗೆಲಸಮಂ ಗೆಯ್ಯ |
ದಾವನಿತೆ ಸಾವನಿತೆ ಲೇಸೆನಿಸದಿಹಳೆ ತತ್ಪತಿಗೆ ತದ್ಗುರುಜನಕ್ಕೆ ||54||
1.5.54_92
(ಪದ್ಯ -೫೪)
1.5.54_93
ಪದ್ಯ ೫೫
1.5.55
ತಾಲುನಾಲಗೆಗಳುಂ ಕಪ್ಪಾಗಿ ಮೇದಿನಿಯ |
ಮೇಲೆ ಕಾಲಂಗುಳಿಗಳೋರಗೆಯೊಳೊಂದದಿರೆ |
ಬಾಲೆಗೀ ಲಕ್ಷಣಂ ಮುತ್ತೈದೆತನಮಾಗಲರಿಯದು ವಿಧವೆಯಾದೊಡೆ ||
ಶೀಲಮಾಲಂಬಿಸಿ ತವರ್ಮನೆಯೊಳಿರ್ದನಿತು |
ಕಾಲಮಾಲಸ್ಯಮಿಲ್ಲದೆ ಸದಾಚಾರಕನು |
ಕೂಲೆಯಾಗಿರುತಿರ್ದು ದೇಹಮಂ ದಂಡಿಸಲ್ ಪತಿಲೋಕಮಂ ಪಡೆವಳು ||55||
1.5.55_94
ಪದ್ಯ ೫೬
1.5.56
ವಿಟಗೋಷ್ಠಿಯೊಳ್ ಭೋಗಮಂ ಬಯಸಿ ಕಾಮಲಂ |
ಪಟೆಯಾಗಿ ಮೇಣರ್ಥಮಂ ಗಳಿಸಿ ಗರ್ವದಿಂ |
ಜಟರಮಂ ಪೊರೆಯುತ್ತೆ ಗರಿಯೊಗೆದುರಗಿವೊಲಿಹ ದುಷ್ಟವಿಧವೆಯರ ರತಿಯು ||
ಘಟಿಪುದಾವಂಗವನುಮವಳುಮವಳಾಣ್ಮನುಂ |
ಸಟೆಯಲ್ಲ ಮೂವರುಂ ಪತಿತರದರಿಂದೆ ಸಂ |
ಕಟದೊಳಂ ನೋಡಲಾಗದು ಪರಸ್ತ್ರೀಯರಂ ನೆರೆದೊಡುತ್ಕುಲಮಪ್ಪುದೆ ||56|||
1.5.56_95
ಪದ್ಯ ೫೭
1.5.57
ಗೃಹಕೃತ್ಯಮಂ ಬಿಟ್ಟು ನೆರೆಮನೆ ತವರ್ಮನೆಯೊ |
ಳಿಹಳೆಳೆಯರಂ ಚುಂಬಿಸುವಳೊಲಿದು ಪಾಡುವಳ್ |
ಗಹಗಹಿಸಿ ಬರಿದೆ ನಗುವಳ್ ಬೀದಿಗರನೈದೆ ಬಾಗಿಲೊಳ್ ನೋಡುತಿಹಳು ||
ಬಹುಜನದ ಮುಂದೆ ಸುಳಿವಳ್ ನಾಡಮಾತಂ ಗ |
ಳಹುವವಳ್ ತರುವಲಿಗೋಡನಾಡುವಳ್ ತನ್ನ |
ಸಹಜಮಲ್ಲದೆ ಪಿರಿದಲಂಕರಿಸಿ ಕೊಂಬುವಳ್ ನಿಲ್ವಳೇ ಶಿಕ್ಷಿಸಿದೊಡೆ ||57||
1.5.57_96
ಪದ್ಯ ೫೮
1.5.58
ನರ್ತಕಿಯ ನಾಪಿತೆಯ ಪರ್ಣವಿಕ್ರಯಿಯ ಪ್ರ |
ವರ್ತಕಿಯ ದಾಸಿಯ ಬುರುಂಡೆಯ ಕಪಾಲಿನಿಯ |
ಭರ್ತಾರನುಳಿದವಳ ಮಾಲೆಗಾತಿಯ ಜಟಿಯ ಸೂತಕಿಯ ಸೈರಂಧ್ರಿಯ||
ಕರ್ತವ್ಯದಿಂದಿನಿಬರೊಡನಾಡಿದೊಡೆ ಬಾಲೆ |
ಯರ್ತವೆ ದುರಾಚಾರಮಂ ಕಲಿವರದರಿಂ ಬು |
ಧರ್ತರುಣಿಯರ ನಡೆವಳಿಗೆ ಭಂಗಮಂಕುರಿಸದಂತೆ ಪಾಲಿಸವೇಳ್ವುದು ||58||
1.5.58_97
(ಪದ್ಯ -೫೮)XXI
1.5.58_98
ಪದ್ಯ ೫೯
1.5.59
ಪುರುಷಾಂತರಕ್ಕೆಳಸಿ ಪುಷ್ಟಶರತಾಪದಿಂ |
ಕರಗಿ ಕಾತರಿಸಿ ಮೆಲ್ಲನೆ ದೂತಿಯೊರ್ವಳಂ |
ಕರೆದೊಡಂಬಡಿಸಿ ಬೇಡಿದನಿತ್ತು ಸತ್ಕರಿಸಿ ಪೊತ್ತುವೇಳೆಗಳನರಸಿ ||
ನೆರೆಹೊರೆಯರಿಯದಂತೆ ಪತಿಯಂ ಮರೆಸಿ ಮನೆಯ |
ವರನೆಲ್ಲರಂ ಟೊಣೆದು ಮದನಕೇಳಿಗೆ ಸಂದು |
ಮರಳಿ ಮಾನಿನಯರಂತಿರಬಲ್ಲರವರೆ ಜಾರೆಯರವರನೋವಬಹುದೆ ||59||
1.5.59_99
ಪದ್ಯ ೬೦
1.5.60
ಸೋಲ್ದನಂ ಕಂಡು ಕಣ್ಗೊನೆಗೊಲೆದು ನೋಟಮಂ |
ಜೋಲ್ದುರುಬನೊಂದಿಸುವ ನೆವದಿಂದೆ ಕೈನೆಗಪಿ |
ಸಾಳ್ದ ಮೇಲುದನೋಸರಿಸಿ ಮೊಲೆಗೆಲದ ಪೊಗರ್ದೋರಿ ಪುಸಿಲಜ್ಜೆಯಿಂದೆ ||
ತೇಲ್ದವಳ ತೆರದಿಂದೆ ನಸುನಗೆಯ ಪಸರಿಸುತೆ |
ಕಾಲ್ದೆಗೆಯದೊಯ್ಯನೊಯ್ಯನೆ ನಡೆವ ಭಂಗಿಯಂ |
ನಾಲ್ದೆಸೆಗೆ ಕಾಣಿಸುವ ಮೈಸಿರಯ ಕಾಮಿನಿಯರವರೆ ಜಾರೆಯರೆನಿಪರು ||60||
1.5.60_100
ಪದ್ಯ ೬೧
1.5.61
ಚಪಲೆ ಚಂಚಲೆ ಚಾಟುವತಿ ಚಂಡಿ ಛಲವಾದಿ |
ಕುಪಿತೆ ಕುತ್ಸಿತೆ ಕುಹಕೆ ಕುಜೆ ಕುಟಿಲೆ ಕುಲಗೇಡಿ |
ಕಪಟಿ ಕಂಟಕಿ ಕಟಕಿ ಕಡುದುಷ್ಟೆ ಕಲಹಾರ್ಥಿ ವಿರಸೆ ಪರವಶೆ ಪಾದರಿ ||
ವಿಫಲೆ ವಿಹ್ವಲೆ ವಿಷಮೆ ವಿರಹಿ ವಿಪರೀತೆ ಮಿಗೆ |
ತಪಿತೆ ತಸ್ಕರೆ ತವಕಿ ತವೆ ತಂದ್ರಿ ತಾಮಸಿಯೆ |
ನಿಪ ವನಿತೆಯರ ನಿಜಕೆ ನಿಲಿಸಿ ನಿಶ್ಚೈಸಿದೊಡೆ ಬಳಿಕ ಬಳಲಿಕೆ ಬಾರದೆ ||61||
1.5.61_101
ಚಪಲೆ= ಅತಿ ಆಸೆ ಮತ್ತು ಕುತೂಹಲಿಯು, ಚಂಚಲೆ=ಮನಸ್ಸು ಗಟ್ಟಿಯಿಲ್ಲದವಳು. ಚಾಟುವತಿ= ಕೆಟ್ಟ ಮಾತಿನವಳು, ಚಂಡಿ=ಹಠಗೇಡಿ, ಛಲವಾದಿ=ಚಂಡಿ, ಕುಪಿತೆ=ಕೋಪಿಷ್ಠೆ, ಕುತ್ಸಿತೆ=ಕೆಟ್ಟ ನೆಡತೆಯವಳು, ಕುಹಕೆ= ಕೊಂಕು ಮಾತಿನವಳು, ಕುಜೆ= ಹುfಟಿನಲ್ಲಿ ದೋXಇತಳು, ಕುಟಿಲೆ= ಕುತಂತ್ರಿ ಕುಲಗೇಡಿ= ಮನತನಕ್ಕೆ ಕೆಟ್ಟ ಹೆಸರು ತರುವವಳ; ಕಪಟಿ=ಮೋಸಗಅತಿ, ಕಂಟಕಿ=ಕೆಲಸಕಡಿಸುವವಳು, ಕಟಕಿ= ಚುಚ್ಚುವ ಮಾತಿನವಳು, ಕಡುದುಷ್ಟೆ= ಬಹಳ ಕೆಡುಕಿ, ಕಲಹಾರ್ಥಿ=ಜಗಳಬಯಸುವವಳು, ವಿರಸೆ=ಸಂತೋಷ ಕೆಡಿಸುವವಳು, ಪರವಶೆ=ಪರರಿಗೆ ವಿಧೇಯಳು ಪಾದರಿ= ವ್ಭಿಚಾರಿ, ವಿಫಲೆ=ಸರಿಯಾಗಿಕೆಲಸ ಮಾಡದವಳು, ವಿಹ್ವಲೆ= ಸದಾ ಉದ್ವೇಗಿ, ವಿಷಮೆ=ಅಲ್ಲವನ್ನೂ ವರೋಧಿಸುವವಳು, ವಿರಹಿ= ಸ್ನೇಹ,ಪ್ರೀತಿ ವಂಚಿತಳು, ವಿಪರೀತೆ= ಅವಿಧೇಯತೆಯವಳು, ಮಿಗೆತಪಿತೆ=ಆಸೆ ಕಾಮದಾಹದವಳು, ತಸ್ಕರೆ= ಕಳ್ಳಿ, ತವಕಿ=ಪರ ಸಹವಾಸ ಬಹಸುವವಳು, ತವೆ ತಂದ್ರಿ=ಅತಿನಿದ್ರೆಯವಳು, ತಾಮಸಿ= ಅಜ್ಙಾನಿ ಕೀಳನ್ನು ಬಯಸುವವಳು, ಎನಿಪ=ಈ ಬಗೆಯ ವನಿತೆಯರ=ಹೆಂಗಸರನ್ನು ನಿಜಕೆ=ಸನ್ಮಾರ್ಗಕ್ಕೆ ನಿಲಿಸಿ=ತಂದು ನಿಶ್ಚೈಸಿದೊಡೆ=ಸರಿದಾರಿಯಲ್ಲಿಯೇ ಇರುವಂತೆ ಮಾಡಿದರೆ ಬಳಿಕ=ನಂತರ, ಬಳಲಿಕೆ=ರಾಜ್ಯದಲ್ಲಿ ಕಷ್ಟವು, ಬಾರದೆ=ಬರದೇ ಇರುವುದು.
1.5.61_102
(ಪದ್ಯ -೬೧)
1.5.61_103
ಪದ್ಯ ೬೨
1.5.62
ಹಲವು ಮಾತೇನರಸ ಚಿತ್ರದೊಳ್ ಬರೆದ ಕೋ |
ಮಲೆಯರಂ ನಂಬಬಾರದು ನಿರುತಮೆನಲವರ |
ಪೊಲಬುಗಂಡವರುಂಟೆ ಸಾಕದಂತಿರಲಿ ಪರಿಕಲ್ಪಿತವ್ರತ ಸಮಾಧಿ ||
ಸಲೆ ತೀರ್ಥಯಾತ್ರೆ ಜಪತಪನಿಷ್ಠೆ ಬೇಕೆಂಬ |
ವಿಲಗವಿಲ್ಲಾತ್ಮಪತಿಸೇವೆಯಂ ಪ್ರತಿದಿನದೊ |
ಳಲಸದೆ ನೆಗಳ್ಚಿದೊಡೆ ಸತಿಯರ್ಗೆ ಕೀರ್ತಿಸುಗತಿಗಳಪ್ಪು[ದು]ವಿ(ಇ)ಹಪರದೊಳು ||62||
1.5.62_104
ಪದ್ಯ ೬೩
1.5.63
ಭೂಪಾಲ ಕೇಳ್ ಧರ್ಮಸಾರಮಿದು ಜಗದೊಳ್ ಮ |
ಹೀಪತಿಗಳರ್ಥಲೋಲುಪ್ತಿಯಿಂ ತಮ್ಮಯ ಸ |
ಮೀಪದೊಳ್ ದ್ಯೂತರತರಂ ನಾಸ್ತಿಕರನೈದೆ ಪಿಸುಣರನಸೂಯಕರನು ||
ಸೋಪಚಾರದೊಳಿರಿಸಿಕೊಂಡಿರುತಿರಲ್ ಪ್ರಜಾ |
ಲೋಪಮಪ್ಪುದು ರಾಜ್ಯಮದರಿನಪಕೀರ್ತಿಯಿಂ |
ಪಾಪದಿಂದರಸುಗಳ್ಗಿಹಪರಂ ಕಿಡುಗುಮಿದನರಿಯದಿರಬಹುದೆ ನೃಪರು ||63||
1.5.63_105
ಪದ್ಯ ೬೪
1.5.64
ಆಚಾರಧರ್ಮದಿಂ ನಡೆಯಲರಿಯದ ವಿಪ್ರ |
ನೇ ಚಕ್ರಿಯಾಜ್ಞೆಯಂ ಮೀರಿದವನವನಿಂದೆ |
ನೀಚನೆ ಹರಿಪ್ರಿಯಂ ಮಾಧವನ ಪೂಜಗೆಯ್ಯದವಂಗೆ ಸುಗತಿಯುಂಟೆ ||
ಈ ಚತುರ್ದಶ ಜಗದೊಳಂತಿರಲದಿನ್ನು ಸಲೆ |
ಸೂಚಿಪೆಂ ನಿನಗೆ ಬೆಸಗೊಂಬುದೆನೆ ರಮೆ ನೆಲಸಿ |
ಗೋಚರಿಪಳಾವನ ಮನೆಯೊಳೆಂದು ಭೂವರಂ ಕೇಳ್ದೊಡಾಮುನಿ ನುಡಿದನು ||64||
1.5.64_106
ಪದ್ಯ ೬೫
1.5.65
ವತ್ಸ ಕೇಳಾದೊಡೀ ಧರೆಯೊಳಖಿಳಪ್ರಾಣಿ |
ವತ್ಸಲನ ಸತ್ಯಶೌಚಾನ್ವಿತನ ಮನೆಗೆ ಶ್ರೀ |
ವತ್ಸಲಾಂಛನನರಸಿ ತೊಡವೆನಿಪಳಾವಗಂ ಪತಿ ಪರಾಯಣೆಯಾಗಿಹ ||
ಸತ್ಸತಿಯದೆಲ್ಲಿ ಮೇಣುನ್ಮುಖಾನಂಗುಲಿಕ |
ಸತ್ಸರೋಜಾಸ್ತ್ರಕಳುಕದ ಪುರುಷನೆಲ್ಲಿ ವಿಲ |
ಸತ್ಸಮುದ್ರಾತ್ಮಜೆ ಸರಾಗದಿಂದಲ್ಲಿ ಸುಸ್ಥಿರೆಯಾಗಿ ನೆಲಸಿರ್ಪಳು ||65|||
1.5.65_107
(ಪದ್ಯ -೬೫)
1.5.65_108
ಪದ್ಯ ೬೬
1.5.66
ರನ್ನದಿಂ ಧಾನ್ಯಮೆ ವಿಶೇಷಮೆಂದೊದವಿಸುವ |
ನನ್ನಮೇ ಕರಿಸದಿಂ ಕಡೆಯೆಂದು ವೆಚ್ಚಿಸುವ |
ನುನ್ನಿಸಲ್ ಬಾಲಕನುಮತಿಥಿಯುಂ ಸರಿಯೆಂದು ಸತ್ಕರಿಪನಾವನವನ ||
ತನ್ನ ತಾಯ್ತಂದೆ ಸೋದರ ಬಂಧು ಬಳಗಮಂ |
ಮನ್ನಿಸುವನಾವನಾತನ ಸದಾಚಾರಸಂ |
ಪನ್ನನಾವನವನ ಮಂದಿರದೊಳೈಶ್ವರ್ಯ ಲಕ್ಷ್ಮಿನೆಲೆಯಾಗಿರ್ಪಳು ||66||
1.5.66_109
ಪದ್ಯ ೬೭
1.5.67
ಮಧುರವಾಣಿಯ ಕೃತಜ್ಞನ ದಾನಪರನ ಪರ |
ವಧುವಿನೊಲ್ಮೆಯ ಬೇಟಕೊಳಗಾಗದನ ಮಾನ |
ನಿಧಿಯೆನಿಸುವನ ತೀರ್ಥಸಂಗತನ ಸಲೆ ಕೂಟಸಾಕ್ಷ್ಯವಂ ನುಡಿಯದವನ ||
ವಿದಿತಕರ್ಮದ ಮಾಳ್ಕೆಯಂ ಮಾಜದಾತನ ವ |
ಸುಧೆಯೊಳಿಷ್ಟಾರ್ಥವಂ ತವೆ ನೆಗಳ್ಚುವನ ಬಹು |
ವಿಧದ ಧರ್ಮಂಗಳಂ ರಚಿಸುವನ ಮನೆಯೊಳಿಂದಿರೆ ಬಿಡದೆ ನೆಲಸಿರ್ಪಳು ||67||
1.5.67_110
ಮಧುರವಾಣಿಯ= ಒಳ್ಳೆಯರೀತಿ ಮಾತಾಡುವವನ, ಕೃತಜ್ಞನ= ಉಪಕಾರ ಸ್ಮರಿಸುವವನ, ದಾನಪರನಾಗಿರವವನ, ಪರವಧುವಿನ ಒಲ್ಮೆಯ ಬೇಟಕೆ ಒಳಗಾಗದನ= ಪರಪತ್ನಿಯ ಪ್ರೇಮದಕರೆಗೆಮರುಳಾಗದವನ, ಮಾನನಿಧಿಯೆನಿಸುವನ= ಮರ್ಯಾದೆಯುಳ್ಳವನ, ತೀರ್ಥಸಂಗತನ= ಪುಣ್ಯತೀರ್ಥದಲ್ಲಿಮಿಂದವನ, ಸಲೆ= ಮತ್ತು ಕೂಟಸಾಕ್ಷ್ಯವಂ ನುಡಿಯದವನ= ಸುಳ್ಳುಸಾಕ್ಷಿ ಹೇಳದವನ, ವಿದಿತಕರ್ಮದ ಮಾಳ್ಕೆಯಂ ಮಾಜದಾತನ= ಧರ್ಮವಿದಿತ ಕರ್ಮವನ್ನು ಬಿಡದವನ, ವಸುಧೆಯೊಳ್ ಇಷ್ಟಾರ್ಥವಂ ತವೆ ನೆಗಳ್ಚುವನ= ಭೂಮಿಯಲ್ಲಿ ಎಂದರೆ ಸಮಾಜದಲ್ಲಿ ಅಗತ್ಯವಿರುವವರಿಗೆ ಕೋರಿಕೆಯನ್ನು ಈಡೇರಿಸಿ ಕೊಡುವವನ, ಬಹುವಿಧದ ಧರ್ಮಂಗಳಂ ರಚಿಸುವನ= ಅನೇಕ ಧಾರ್ಮಿಕ ಕಾರ್ಯ ಮಾಡುವವನ, ಮನೆಯೊಳ್ ಇಂದಿರೆ= ಮನೆಯಲ್ಲಿ ಲಕ್ಷ್ಮಿ, ಬಿಡದೆ ನೆಲಸಿರ್ಪಳು= ಸದಾ ನೆಲಸಿರುವಳು.
(ಪದ್ಯ -೬೭)
1.5.67_111
ಪದ್ಯ ೬೮
1.5.68
ಹೊಸ್ತಿಲೊರಳೊನಕೆಗೆಳ ಮೇಲೆ ಕುಳ್ಳಿರ್ಪವನ |
ಮಸ್ತಕವನೆರಡುಕಯ್ಯಿಂ ತುರಸಿಕೊಂಬವನ |
ವಿಸ್ತರದ ಜೂಜುಗಳ್ಗೆಳಸುವನ ಪಿರಿದುಂಬುವನ ನಿಂದು ನೀರ್ಗುಡಿವನ ||
ಅಸ್ತಮಯದುದಯಕಾಲದೆ ನಿದ್ರೆಗೈವನಾ |
ತ್ಮಸ್ತುತಿಯ ಪರನಿಂದೆಯವನ ಸಾಧಿಸಿಪರರ |
ವಸ್ತುವಂ ಕಳುವನ ನಿರುದ್ಯೋಗದವನ ಸಿರಿ ತೊಲಗಿದಲ್ಲದೆ ಮಾಣ್ಬಳೆ ||68||
1.5.68_112
ಹೊಸ್ತಿಲು =ಬಾಗಿಲ ಹೊಸಿಲು, ಒರಳು ಒನಕೆಗೆಳ ಮೇಲೆ ಕುಳ್ಳಿರ್ಪವನ= ಕುಳಿತುಕೊಳ್ಳುವವನ, ಮಸ್ತಕವನು= ತಲೆಯನ್ನು ಎರಡುಕಯ್ಯಿಂ= ಎರಡೂ ಕೈಯಿಂದ ತುರಸಿಕೊಂಬವನ= ತುರಿಸಿಕೊಳ್ಳುವವನ, ವಿಸ್ತರದ ಜೂಜುಗಳ್ಗೆ ಎಳಸುವನ= ದೊಡ್ಡ ಜೂಜಾಡುವವನ, ಪಿರಿದು ಉಂಬುವನ= ಹೊಟ್ಟೆಬಾಕನ, ನಿಂದುನೀರ್ ಕುಡಿವನ= ನಿಂತುಕೊಂಡು ನೀರುಕುಡಿಯುವವನ, ಅಸ್ತಮಯದೆ ಉದಯಕಾಲದೆ ನಿದ್ರೆಗೈವನ= ಸೂರ್ಯ ಉದಯ ಮತ್ತು ಸೂರ್ಯ ಮುಳುಗುವ ಸಂಜೆಸಮಯದಲ್ಲಿ ನಿದ್ದೆಮಾಡುವವನ, ಆತ್ಮಸ್ತುತಿಯ ಪರನಿಂದೆಯವನ= ಅತ್ಮಸ್ತುತಿ ಮತ್ತು ಇತರರನ್ನು ಸದಾನಿಂದಿಸುವವನ, ಸಾಧಿಸಿಪರರ ವಸ್ತುವಂ ಕಳುವನ= ಸಮಯನೋಡಿ ಪರರ ವಸ್ತುಗಳನ್ನು ಕದಿಯುವವನ, ನಿರುದ್ಯೋಗದವನ= ಯಾವ ಉದ್ಯೋಗವನ್ನೂ ಮಾಡದೆ ಇರುವವನ ಸಿರಿ= ಲಕ್ಷ್ಮಿಯು ತೊಲಗಿದು ಅಲ್ಲದೆ= ಬಿಟ್ಟು ಹೋಗದೆ, ಮಾಣ್ಬಳೆ= ಇರುವಳೇ? ಸಿರಿ ಬಿಟ್ಟು ಹೋಗುವಳು'
(ಪದ್ಯ -೬೮)
1.5.68_113
ಪದ್ಯ ೬೯
1.5.69
ಜಡನ ಮೂರ್ಖನ ಶಠನ ತಾಮಸನ ನಿಷ್ಠುರದ |
ನುಡಿಯವನ ಪಿಸುಣನ ಕೃತಘ್ನನ ಕರುಬನ ಬಾ |
ಯ್ಬಡಿಕನ ಕುಚೇಷ್ಟಕನ ಕಾಮುಕನ ಹಿಂಸಕನ ಡಾಂಭಿಕನ ಪಾಷಂಡಿಯ ||
ಕಡುಕೋಪದವನ ಬಹುಭಕ್ಷಕನ ಕೊಳಕನ ನ |
ದೃಢನ ಕುತ್ಸಿತನ ಕುಹಕನ ದುರಾಚಾರದಿಂ |
ನಡೆವವನ ವಿಶ್ವಾಸಘಾತಕನ ಪಾತಕನ ಲಕ್ಷ್ಮಿತೊಲಗದೆ ಮಾಣ್ಬಳೆ ||69||
1.5.69_114
ಜಡನ= ಸೋಮಾರಿಯ, ಮೂರ್ಖನ= ತಿಳಿಹೇಳಿದರೂ ಅರ್ಥಮಾಡಿಕೊಳ್ಳದವನ, ಶಠನ= ಹಟಮಾರಿಯ, ತಾಮಸನ= ಅಲಸಿಯ, ನಿಷ್ಠುರದ ನುಡಿಯವನ= ಕಠಿಣ ಮಾತಾಡುವವನ, ಪಿಸುಣನ= ಜಿಪುಣನ, ಕೃತಘ್ನನ= ಉಪಕಾರವನ್ನು ಮರೆಯುವವನ, ಕರುಬನ= ಹೊಟ್ಟೆಕಿಚ್ಚಿನವನ, ಬಾಯ್ಬಡಿಕನ= ಅತಿ ಮಾಡವವನ, ಕುಚೇಷ್ಟಕನ= ಕೆಟ್ಟಕೆಲಸಮಾಡುವವನ, ಕಾಮುಕನ= ಪರಸ್ತ್ರೀಯರನ್ನು ಬಯಸುವವನ, ಹಿಂಸಕನ= ಹಿಂಸೆಮಾಡುವವನ, ಡಾಂಭಿಕನ= ಬೂಟಾಟಿಕೆಯವನ, ಪಾಷಂಡಿಯ=ದೈವ ನಿಂದಕನ, ಕಡುಕೋಪದವನ= ಅತಿ ಕೋಪದವನ; ಬಹುಭಕ್ಷಕನ= ಹೊಟ್ಟೆಬಾಕನ, ಕೊಳಕನ= ಶುಚಿಯಿಲ್ಲದವನ, ನದೃಢನ= ಗಟ್ಟಿ ನಿರ್ಧಾರಮಢದವನ, ಕುತ್ಸಿತನ=ನಿಂದೆಮಾಡವವನ, ಕುಹಕನ= ಅಪಹಾಸ್ಯಮಾಡುವವನ, ದುರಾಚಾರದಿಂ ನಡೆವವನ= ಕೆಟ್ಟ ನೆಡತೆಯವನ, ವಿಶ್ವಾಸಘಾತಕನ= ನಂಬಿಕೆ ದ್ರೋಹಮಾಡುವವನ, ಪಾತಕನ= ಪಾಪಕೃತ್ಯ ಮಾಡುವವನ, ಲಕ್ಷ್ಮಿ ತೊಲಗದೆ=ಬಿಟ್ಟುಹೋಗದೆ ಇರುವಳೇ? ಬಿಟ್ಟು ಹೋಗುವಳು.
(ಪದ್ಯ -೬೯)
1.5.69_115
ಪದ್ಯ ೭೦
1.5.70
ಈ ಪರಿಯೊಳಾ ಮುನಿ ಸಮಸ್ತಧರ್ಮಂಗಳಂ |
ಭೂಪತಿಗೆ ವಿಸ್ತರಿಸಿ ಬಳಿಕ ಮಖಕಾಲಂ ಸ |
ಮೀಪಮಾದಪುದಿನ್ನು ಹಿಮಗಿರಿಯೊಳಿರ್ಪ ಧನಮಂ ತರಿಸವೇಳ್ಪುದೆಂದು ||
ಆ ಪರಾಶರಸುತಂ ನೇಮಿಸಿದೊಡರಸಂ ಚ |
ಮೂಪರಂ ಕರೆಸಿ ಪೊರಮಟ್ಟು ನಡೆಗೊಂಡಂ ಪ್ರ |
ತಾಪದಿಂ ಪಯಣಪಯಣಕೆಬಿಡುವ ಬೀಡುಬೀಡುಗಳ ಸನ್ನಾಹದಿಂದೆ ||70||
1.5.70_116
ಪದ್ಯ ೭೧
1.5.71
ಸವ್ಯಸಾಚಿಪ್ರಮುಖರೊಡಗೂಡಿ ಹಿಮಗಿರಿಯ |
ದಿವ್ಯಸ್ಥಳಂಗಳಂ ನೋಡುತೊಲವಿಂದೆ ವೇ |
ದವ್ಯಾಸಮುನಿವೆರಸಿ ವಿಪ್ರರೊಡಗೂಡಿ ಮರುತಾಧ್ವರದೊಳಂದು ಬಿಸುಟ ||
ದ್ರವ್ಯದೆಡೆಗೈತಂದು ಗಂಧಾಕ್ಷತೆಗಳಿಂದೆ |
ನವ್ಯಕುಸುಮೋತ್ಕರಸುಧೂಪದೀಪಂಗಳಿಂ ||
ಗವ್ಯಮಧುಶರ್ಕರಾದ್ಯುಪಹಾರದಿಂ ನೃಪಂ ಧನದನಂ ಪೂಜಿಸಿದನು ||71||
1.5.71_117
ಪದ್ಯ ೭೨
1.5.72
ಅಷ್ಟದಿಕ್ಪಾಲರ್ಗೆ ಪೂಜೆಯಂ ಮಾಡಿ ಚೌ |
ಷಷ್ಟಿಯೋಗಿನಿಯರ್ಗೆ ಬಲಿಗೊಟ್ಟು ಭೂತಸಂ |
ತುಷ್ಟಿಯಪ್ಪಂತೆ ಕುರಿಕೋಣಂಗಳಂ ಪೊಯ್ಸಿ ಬಣ್ಣಗೂಳಂ ಪಸರಿಸಿ |
ದೃಷ್ಟಮಾದಖಿಳಧನಮಂ ತೆಗೆಸಿ ಭೂಪನು |
ತ್ಕೃಷ್ಟಮಖಮಿನ್ನು ಸಂಪೂರ್ತಿಯಾದಪುದೆಂಬ |
ಹೃಷ್ಟತೆಯೊಳರ್ಥಮಂ ಸಾಗಿಸಿದನಿಭಪುರಿಗೆ ಪೆರ್ವೊರೆಗಳಿಟ್ಟಣಿಸಲು ||72||
1.5.72_118
ಪದ್ಯ ೭೩
1.5.73
ಪೊರೆಯಾಳ್ಗಳೊಟ್ಟೆಪೇಸರಮೆತ್ತು ಬಂಡಿಗಳ್ |
ನೆರೆಕನಕಭಾರದಿಂದೈದಿದುವು ಮಾರ್ಗದೊಳ್ |
ತೆರೆಪಿಲ್ಲಮೆನೆ ಕೋಟಿಸಂಖ್ಯೆಯಿಂ ಕೃಷ್ಣಮುನಿಸಹಿತ ನೃಪನುತ್ಸವದೊಳು ||
ಮೆರೆವ ನಿಜನಗರಪ್ರವೇಶಮಂ ಮಾಡುತ |
ಕ್ಕರೊಳಂದು ಭೀಮನಂ ಕಳುಹಿದಂ ದೇವಪುರ |
ದೆರೆಯ ಲಕ್ಷ್ಮೀಶನಂ ದ್ವಾರಕಿಗೆ ಪೋಗಿ ಬಿಜಯಂಗೈಸಿ ತರ್ಪುದೆಂದು ||73||
1.5.73_119
ಪೊರೆಯಾಳ್ಗಳ್=ಹೊರೆಹೊತ್ತ ಆಳುಗಳು, ಒಟ್ಟೆ=ಒಂಟೆ,ಪೇಸರಮ್=ಹೇಸರಗತ್ತೆ, ಎತ್ತು ಬಂಡಿಗಳ್=ಎತ್ತಿನ ಬಂಡಿಗಳು, ನೆರೆ=ಹೆಚ್ಚಿನ ಕನಕಭಾರದಿಂದ=ಚನ್ನದ ಭಾರದಿಂದ ಐದಿದುವು ಮಾರ್ಗದೊಳ್=ದಾರಿಯಲ್ಲಿ ಹೋದವು. ಹೇಗೆಂದರೆ: ತೆರೆಪಿಲ್ಲಮೆನೆ= ಮಧ್ಯ ಸಂದಿಲ್ಲದಂತ ಕೋಟಿಸಂಖ್ಯೆಯಿಂ=ಕೋಟಿಸಂಖ್ಯೆಯಿಂದ, ಕೃಷ್ಣಮುನಿ ಸಹಿತ= ವೇದವ್ಯಾಸಮುನಿ ಸಹಿತ ನೃಪನು= ರಾಜನು, ಉತ್ಸವದೊಳು=ವಿಜ್ರಂಭಣೆಯಿಂದ, ಮೆರೆವ= ಶೋಭಿಸುತ್ತಿರುವ, ನಿಜ ನಗರಪ್ರವೇಶಮಂ ಮಾಡುತ= ತನ್ನ ಹಸ್ತಿನಾವತಿ ನಗರ ಪ್ರವೇಶವನ್ನು ಮಾಡುತ್ತಾ, ಅಂದು= ಅದೇ ದಿನ ಅಕ್ಕರೊಳು=ಪ್ರೀತಿಯಿಂದ ಭೀಮನಂ= ಭೀಮನನ್ನು ಕಳುಹಿದಂ=ಕಳುಹಿಸಿದನು, ದೇವಪುರ ದೆರೆಯ=ದೇವಪುರದ ಒಡೆಯ, ಲಕ್ಷ್ಮೀಶನಂ=ಕೃಷ್ಣನನ್ನು ದ್ವಾರಕಾಪುರಿಗೆ ಪೋಗಿ= ಹೋಗಿ, ಬಿಜಯಂಗೈಸಿ ತರ್ಪುದೆಂದು=ಯಜ್ಞಕ್ಕೆ ಕರೆದುಕೊಂಡು ಬರಬೇಕೆಂದು(ಭೀಮನನ್ನು ಕಳುಹಿದಂ=ಕಳುಹಿಸಿದನು.
(ಪದ್ಯ -೭೩)XXII
1.5.73_120
♥♥♥ ॐ ♥♥♥
ಸಂಧಿ ೫ಕ್ಕೆ ಒಟ್ಟು ಪದ್ಯ-೨೨೬.
1.5.73_121
ಹೋಗಿ
1.5.73_122
<ಜೈಮಿನಿ ಭಾರತ/ನಾಲ್ಕನೆಯ ಸಂಧಿ
ಜೈಮಿನಿ ಭಾರತ/ಆರನೆಯ ಸಂಧಿ>
1.5.73_123
ನೋಡಿ
1.5.73_124
ಜೈಮಿನಿ ಭಾರತ-ಸಂಧಿಗಳು:*1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22* 23* 24 * 25* 26* 27* 28* 29* 30* 31* 32* 33* 34
1.5.73_125
ಪರಿವಿಡಿ
1.5.73_126
ಉಲ್ಲೇಖ