<!-- Pramāṇa, a library of Indian primary sources · https://indike.org/pramana/in.lit.mahabharata.bhasa.kumaravyasa.1.2 -->

[Pramāṇa](https://indike.org/pramana/) › [Indian literature](https://indike.org/pramana/in) › [Epic, Poetry, Drama & Narrative](https://indike.org/pramana/in.lit) › [The Mahābhārata and its versions](https://indike.org/pramana/in.lit.mahabharata) › [Mahābhāratas in Indian regional languages](https://indike.org/pramana/in.lit.mahabharata.bhasa) › [Karnata Bharata Kathamanjari](https://indike.org/pramana/in.lit.mahabharata.bhasa.kumaravyasa) › 1.2

# Karnata Bharata Kathamanjari 1.2: ಸಟೀಕಾ (೧-ಆದಿಪರ್ವ::ಸಂಧಿ-೧)

Karṇāṭa Bhārata Kathāmañjarī 1.2

- **Language:** Kannada

### ಸಟೀಕಾ (೧-ಆದಿಪರ್ವ::ಸಂಧಿ-೧)

### [1.2.p1](https://indike.org/pramana/in.lit.mahabharata.bhasa.kumaravyasa.1.2.p1)

\<ಕುಮಾರವ್ಯಾಸ ಭಾರತ  
\<ಕುಮಾರವ್ಯಾಸಭಾರತ-ಸಟೀಕಾ

### [1.2.p2](https://indike.org/pramana/in.lit.mahabharata.bhasa.kumaravyasa.1.2.p2)

ಕುಮಾರವ್ಯಾಸ ಭಾರತ/ಸಟೀಕಾ (೧.ಆದಿಪರ್ವ::ಸಂಧಿ-೧)

### [1.2.p3](https://indike.org/pramana/in.lit.mahabharata.bhasa.kumaravyasa.1.2.p3)

ಆದಿಪರ್ವ - ಪೀಠಿಕಾ ಸಂಧಿ(ಮೊದಲನೆಯ ಸಂಧಿ:)

### [1.2.p4](https://indike.org/pramana/in.lit.mahabharata.bhasa.kumaravyasa.1.2.p4)

ಪ್ರಾರ್ಥನೆ

### [1.2.p5](https://indike.org/pramana/in.lit.mahabharata.bhasa.kumaravyasa.1.2.p5)

ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ  
ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪಶಾಂತಯೇ

### [1.2.p6](https://indike.org/pramana/in.lit.mahabharata.bhasa.kumaravyasa.1.2.p6)

ನಾರಾಯಣಂ ನಮಸ್ಕೃತ್ಯ ನರಂ ಚೈವ ನರೋತ್ತಮಮ್  
ದೇವೀಂ ಸರಸ್ವತೀಂ ವ್ಯಾಸಂ ತತೋ ಜಯಮುದೀರಯೇತ್  
ॐ

### [1.2.p7](https://indike.org/pramana/in.lit.mahabharata.bhasa.kumaravyasa.1.2.p7)

ಪೀಠಿಕಾ ಸಂಧಿ

### [1.2.p8](https://indike.org/pramana/in.lit.mahabharata.bhasa.kumaravyasa.1.2.p8)

ವಿಷ್ಣು ಸ್ತುತಿ

### [1.2.1](https://indike.org/pramana/in.lit.mahabharata.bhasa.kumaravyasa.1.2.1)

ಶ್ರೀವನಿತೆಯರಸನೆ ವಿಮಲ ರಾ  
ಜೀವ ಪೀಠನ ಪಿತನೆ ಜಗಕತಿ  
ಪಾವನನೆ ಸನಕಾದಿ ಸಜ್ಜನನಿಕರ ದಾತಾರ||  
ರಾವಾಣಾಸುರ ಮಥನ ಶ್ರವಣ ಸು  
ಧಾ ವಿನೂತನ ಕಥನ ಕಾರಣ  
ಕಾವುದಾನತ ಜನವ ಗದುಗಿನ ವೀರನಾರಯಣ ||೧||

### [1.2.1\_9](https://indike.org/pramana/in.lit.mahabharata.bhasa.kumaravyasa.1.2.1_9)

ಶಿವಸ್ತುತಿ

### [1.2.2](https://indike.org/pramana/in.lit.mahabharata.bhasa.kumaravyasa.1.2.2)

ಶರಣಸಂಗವ್ಯಸನ ಭುಜಗಾ  
ಭರಣನಮರ ಕಿರೀಟ ಮಂಡಿತ  
ಚರಣ ಚಾರುಚರಿತ್ರ ನಿರುಪಮ ಭಾಳಶಿಖಿನೇತ್ರ ||  
ಕರಣನಿರ್ಮಲ ಭಜಕರಘ ಸಂ  
ಹರಣ ದಂತಿ ಚಮೂರು ಚರ್ಮಾಂ  
ಬರನೆ ಸಲಹುಗೆ ಭಕುತ ಜನರನು ಪಾರ್ವತೀರಮಣ ||೨ ||

### [1.2.2\_10](https://indike.org/pramana/in.lit.mahabharata.bhasa.kumaravyasa.1.2.2_10)

ವಿಘ್ನೇಶ್ವರನ ಸ್ತುತಿ

### [1.2.3](https://indike.org/pramana/in.lit.mahabharata.bhasa.kumaravyasa.1.2.3)

ವರಮಣಿಗಳಿಂದೆಸೆವ ಮೌಳಿಯ  
ಸರಸಿಜಾರಿಯ ಕಿರಣದೋಳಿಯ  
ವಿರಚಿಸಿದ ಸಿಂಧೂರಭಾಳದಿ ಕುಣಿವ ಕುಂತಳದ ||  
ಕರಿ ನಿಭಾಕೃತಿಯೆನಿಪ ವದನದ  
ಕರದ ಪಾಶದ ಮೋದಕದ ವಿ  
ಸ್ತರದ ಗಣಪತಿ ಮಾಡೆಮಗೆ ನಿರ್ವಿಘ್ನದಾಯಕವ ||೩||

### [1.2.4](https://indike.org/pramana/in.lit.mahabharata.bhasa.kumaravyasa.1.2.4)

ಗಜಮುಖನೆ ಮೆರೆವೇಕದಂತನೆ  
ನಿಜಗುಣಾನ್ವಿತ ಪರಶುಧಾರನೆ  
ರಜತಗಿರಿಗೊಡೆಯನ ಕುಮಾರನೆ ವಿದ್ಯೆವಾರಿಧಿಯೆ ||  
ಅಜನು ಹರಿ ರುದ್ರಾದಿಗಳು ನೆರೆ  
ಭಜಿಸುತಿಹರನವರತ ನಿನ್ನನು  
ತ್ರಿಜಗವಂದಿತ ಗಣಪ ಮಾಳ್ಪುದು ಮತಿಗೆ ಮಂಗಳವ || ೪ ||

### [1.2.4\_11](https://indike.org/pramana/in.lit.mahabharata.bhasa.kumaravyasa.1.2.4_11)

ಗಣಪತಿಗೆ ಏಕದಂತನೆಂದು ಹೆಸರು: ಗಣಪತಿ ಎಡವಿ ಬಿದ್ದಾಗ ಚಂದ್ರನು ನಕ್ಕನು; ಅದಕ್ಕೆ ಗಣಪತಿಯು ತನ್ನ ಒಂದು ದಂತವನ್ನು ಮುರಿದು ಚಂದ್ರನಿಗೆ ಹೊಡೆದನು ಹಾಗಾಗಿ ಚಂದ್ರನು ಮುಕ್ಕಾದನು- ಇವನು ಏಕದಂತನಾದನು- ಕಥೆ.

### [1.2.4\_12](https://indike.org/pramana/in.lit.mahabharata.bhasa.kumaravyasa.1.2.4_12)

ಶಾರದೆಯ ಪ್ರಾರ್ಥನೆ

### [1.2.5](https://indike.org/pramana/in.lit.mahabharata.bhasa.kumaravyasa.1.2.5)

ವಾರಿಜಾಸನೆ ಸಕಲಶಾಸ್ತ್ರ ವಿ  
ಚಾರದುದ್ಭವೆ ವಚನರಚನೋ  
ದ್ಧಾರೆ ಶ್ರುತಿ ಪೌರಾಣದಾಗಮ ಸಿದ್ದಿದಾಯಕಿಯೆ ||  
ಶೌರಿ ಸುರಪತಿ ಸಕಲ ಮುನಿಜನ  
ಸೂರಿಗಳಿಗನುಪಮದ ಯುಕುತಿಯೆ  
ಶಾರದೆಯೆ ನರ್ತಿಸುಗೆ ನಲಿದೊಲಿದೆನ್ನ ಜಿಹ್ವೆಯಲಿ || ೫ ||

### [1.2.6](https://indike.org/pramana/in.lit.mahabharata.bhasa.kumaravyasa.1.2.6)

ಆದಿ ನಾರಾಯಣಿ ಪರಾಯಣಿ  
ನಾದಮಯೆ ಗಜಲಕ್ಷ್ಮಿ ಸತ್ವಗು  
ಣಾಧಿದೇವತೆ ಅಮರ ವಂದಿತ ಪಾದಪಂಕರುಹೆ ||  
ವೇದಮಾತೆಯೆ ವಿಶ್ವತೋಮುಖೆ  
ಯೈದು ಭೂತಾಧಾರಿಯೆನಿಪೀ  
ದ್ವಾದಶಾತ್ಮ ಜ್ಯೋತಿರೂಪಿಯೆ ನಾದೆ ಶಾರದೆಯೆ || ೬ ||

### [1.2.6\_13](https://indike.org/pramana/in.lit.mahabharata.bhasa.kumaravyasa.1.2.6_13)

ಕವಿಯ ಬಿನ್ನಪ (ಕೋರಿಕೆ)

### [1.2.7](https://indike.org/pramana/in.lit.mahabharata.bhasa.kumaravyasa.1.2.7)

ವೀರನಾರಾಯಣನೆ ಕವಿ ಲಿಪಿ  
ಕಾರ ಕುವರವ್ಯಾಸ ಕೇಳುವ  
ಸೂರಿಗಳು ಸನಕಾದಿಗಳು ಜಂಗಮ ಜನಾರ್ದನರು ||  
ಚಾರುಕವಿತೆಯ ಬಳಕೆಯಲ್ಲ ವಿ  
ಚಾರಿಸುವೊಡಳವಲ್ಲ ಚಿತ್ತವ  
ಧಾರು ಹೋ ಸರ್ವಜ್ಞರಾದರು ಸಲುಗೆ ಬಿನ್ನಪವ || ೭ ||

### [1.2.7\_14](https://indike.org/pramana/in.lit.mahabharata.bhasa.kumaravyasa.1.2.7_14)

ಶ್ರೀ ರಾಮನಲ್ಲಿ ಪ್ರಾರ್ಥನೆ

### [1.2.8](https://indike.org/pramana/in.lit.mahabharata.bhasa.kumaravyasa.1.2.8)

ಶ್ರೀಮದಮರಾಧೀಶ ನತಪದ  
ತಾಮರಸ ಘನವಿಪುಳ ನಿರ್ಮಲ  
ರಾಮನುಪಮ ಮಹಿಮ ಸನ್ಮುನಿ ವಿನುತ ಜಗಭರಿತ ||  
ಶ್ರೀಮದೂರ್ಜಿತ ಧಾಮ ಸುದಯಾ  
ನಾಮನಾಹವ ಭೀಮ ರಘುಕುಲ  
ರಾಮ ರಕ್ಷಿಸುವೂಲಿದು ಗದುಗಿನ ವೀರನಾರಯಣ || ೮ ||

### [1.2.8\_15](https://indike.org/pramana/in.lit.mahabharata.bhasa.kumaravyasa.1.2.8_15)

ಶ್ರೀ ಲಕ್ಷ್ಮಿಯ ಪ್ರಾರ್ಥನೆ

### [1.2.9](https://indike.org/pramana/in.lit.mahabharata.bhasa.kumaravyasa.1.2.9)

ಶರಧಿಸುತೆ ಸನಕಾದಿ ವಂದಿತೆ  
ಸುರನರೋರಗ ಮಾತೆ ಸುಜನರ  
ಪೂರೆವ ದಾತೆ ಸುರಾಗ್ರಗಣ್ಯಸುಮೌನಿ ವರಸ್ತುತ್ಯೆ ||  
ಪರಮ ಕರುಣಾ ಸಿಂಧು ಪಾವನ  
ಚರಿತೆ ಪದ್ಮಜ ಮುಖ್ಯ ಸಕಲಾ  
ಮರ ಸುಪೂಜಿತೆ ಲಕ್ಷ್ಮಿ ಕೊಡುಗೆಮಗಧಿಕ ಸಂಪದವ || ೯ ||

### [1.2.9\_16](https://indike.org/pramana/in.lit.mahabharata.bhasa.kumaravyasa.1.2.9_16)

ಗೌರಿಯ ಸ್ತುತಿ

### [1.2.10](https://indike.org/pramana/in.lit.mahabharata.bhasa.kumaravyasa.1.2.10)

ಗಜಮುಖನ ವರಮಾತೆ ಗೌರಿಯೆ  
ತ್ರಿಜಗದರ್ಚಿತ ಚಾರು ಚರಣಾಂ  
ಭುಜೆಯೆ ಪಾವನಮೂರ್ತಿ ಪದ್ಮಜಮುಖ್ಯ ಸುರಪೂಜ್ಯೆ ||  
ಭಜಕರಘ ಸಂಹರಣೆ ಸುಜನ  
ವ್ರಜ ಸುಸೇವಿತೆ ಮಹಿಷ ಮರ್ದಿನಿ  
ಭುಜಗ ಭೂಷಣನರಸಿ ಕೊಡು ಕಾರುಣ್ಯದಲಿ ಮತಿಯ || ೧೦ ||

### [1.2.10\_17](https://indike.org/pramana/in.lit.mahabharata.bhasa.kumaravyasa.1.2.10_17)

ವೇದವ್ಯಾಸ ಗುರು ಸ್ತುತಿ

### [1.2.11](https://indike.org/pramana/in.lit.mahabharata.bhasa.kumaravyasa.1.2.11)

ದುರಿತಕುಲಗಿರಿ ವಜ್ರದಂಡನು  
ಧರೆಯ ಜಂಗಮ ಮೂರ್ತಿ ಕವಿ ವಾ  
ರಿರುಹ ದಿನಮಣಿ ನಿಖಿಲ ಯತಿಪತಿ ದಿವಿಜವಂದಿತನು  
ತರಳನನು ತನ್ನವನೆನುತ ಪತಿ  
ಕರಿಸಿ ಮಗನೆಂದೊಲಿದು ಕರುಣದಿ  
ವರವನಿತ್ತನು ದೇವ ವೇದವ್ಯಾಸ ಗುರುರಾಯ || ೧೧ ||

### [1.2.11\_18](https://indike.org/pramana/in.lit.mahabharata.bhasa.kumaravyasa.1.2.11_18)

ಕುಲಪರ್ತಗಳು = ಕುಲಾಚಲ, ನೀಲ, ನಿಷಧ, ವಿಂಧ್ಯ, ಪಾರಿಯಾತ್ರ ಮೊದಲಾದ ಎತ್ತರದ ಪರ್ವತಗಳು.  
ದಾಸ ಸಾಹಿತ್ಯ ನಿಘಂಟು;ಪತಿಕರಿಸು -ದಯೆತೋರು, ಅನುಗ್ರಹಿಸು, ಅಂಗೀಕರಿಸು, ಸ್ವೀಕರಿಸು, ಕಾಪಾಡು.

### [1.2.11\_19](https://indike.org/pramana/in.lit.mahabharata.bhasa.kumaravyasa.1.2.11_19)

ಗುರುದೇವ ದತ್ತಾತ್ರೇಯ ಸ್ತುತಿ

### [1.2.12](https://indike.org/pramana/in.lit.mahabharata.bhasa.kumaravyasa.1.2.12)

ವಂದಿತಾಮಳ ಚರಿತನಮರಾ  
ನಂದ ಯದುಕುಲ ಚಕ್ರವರ್ತಿಯ  
ಕಂದ ನತಸಂಸಾರ ಕಾನನ ಘನ ದವಾನಳನು  
ನಂದನಂದನ ಸನ್ನಿಭನು ಸಾ  
ನಂದದಿಂದಲೆ ನಮ್ಮುವನು ಕೃಪೆ  
ಯಿಂದ ಸಲಹುಗೆ ದೇವ ಜಗದಾರಾಧ್ಯ ಗುರುರಾಯ || ೧೨ ||

### [1.2.12\_20](https://indike.org/pramana/in.lit.mahabharata.bhasa.kumaravyasa.1.2.12_20)

ಕವಿಯ ಉದ್ದೇಶ

### [1.2.13](https://indike.org/pramana/in.lit.mahabharata.bhasa.kumaravyasa.1.2.13)

ತಿಳಿಯ ಹೇಳುವೆ ಕೃಷ್ಣಕಥೆಯನು  
ಇಳೆಯ ಜಾಣರು ಮೆಚ್ಚುವಂತಿರೆ  
ನೆಲೆಗೆ ಪಂಚಮ ಶ್ರುತಿಯನೊರೆವೆನು ಕೃಷ್ಣ ಮೆಚ್ಚಲಿಕೆ ||  
ಹಲವು ಜನ್ಮದ ಪಾಪ ರಾಶಿಯ  
ತೊಳೆವ ಜಲವಿದು ಶ್ರೀಮದಾಗಮ  
ಕುಲಕೆ ನಾಯಕ ಭಾರತಾಕೃತಿ ಪಂಚಮ ಶ್ರುತಿಯ || ೧೩ ||

### [1.2.13\_21](https://indike.org/pramana/in.lit.mahabharata.bhasa.kumaravyasa.1.2.13_21)

ನೆಲೆ: ಆಶ್ರಯಸ್ಥಾನ, ಹಿತಕರವಾದುದು, ಶ್ರೇಯಸ್ಕರವಾದುದು, ತಳಹದಿ.

### [1.2.14](https://indike.org/pramana/in.lit.mahabharata.bhasa.kumaravyasa.1.2.14)

ಪದದಪ್ರೌಢಿಯ ನವರಸಂಗಳ  
ವುದಿತವೆನುವಭಿಧಾನ ಭಾವವ  
ಬೆದಕಲಾಗದು ಬಲ್ಲ ಪ್ರೌಢರುಮಾ ಕಥಾಂತರಕೆ ||  
ಇದ ವಿಚಾರಿಸೆ ಬರಿಯ ತೊಳಸಿಯ  
ವುದಕದಂತಿರೆಯಲ್ಲಿ ನೋಳ್ಪುದು  
ಪದುಮನಾಭನ ಮಹಿಮೆ ಧರ್ಮವಿಚಾರ ಮಾತ್ರವನು || ೧೪ ||

### [1.2.14\_22](https://indike.org/pramana/in.lit.mahabharata.bhasa.kumaravyasa.1.2.14_22)

ಅಭಿಧಾನ: ನೆಪ, ನಿಮಿತ್ತ, ಉಪಮಾಲಂಕಾರದಲ್ಲಿ ಒಂದು ಬಗೆ.

### [1.2.14\_23](https://indike.org/pramana/in.lit.mahabharata.bhasa.kumaravyasa.1.2.14_23)

ಕವಿಯ ಹೆಗ್ಗಳಿಕೆ

### [1.2.15](https://indike.org/pramana/in.lit.mahabharata.bhasa.kumaravyasa.1.2.15)

ಹಲಗೆ ಬಳಪವ ಪಿಡಿಯದೊಂದ  
ಗ್ಗಳಿಕೆ ಪದವಿಟ್ಟಳುಪದೊಂದ  
ಗ್ಗಳಿಕೆ ಪರರೊಡ್ಡವದ ರೀತಿಯ ಕೊಳ್ಳದಗ್ಗಳಿಕೆ ||  
ಬಳಸಿ ಬರೆಯಲು ಕಂಠಪತ್ರದ  
ವುಲುಹುಗೆಡದಗ್ಗಳಿಕೆಯೆಂಬೀ  
ಬಲುಹು ಗದುಗಿನ ವೀರನಾರಾಯಣನ ಕಿಂಕರಗೆ || ೧೫ ||

### [1.2.15\_24](https://indike.org/pramana/in.lit.mahabharata.bhasa.kumaravyasa.1.2.15_24)

ಒಡ್ಡವ: ಹೆಸರುಪದ (ದೇ) ವಿನ್ಯಾಸ, ರಚನಾಕ್ರಮ.(ಜಿವೆಂ)

### [1.2.15\_25](https://indike.org/pramana/in.lit.mahabharata.bhasa.kumaravyasa.1.2.15_25)

ಕವಿಯ ಬಿನ್ನಪ

### [1.2.16](https://indike.org/pramana/in.lit.mahabharata.bhasa.kumaravyasa.1.2.16)

ಕೃತಿಯನವಧರಿಸುವುದು ಸುಕವಿಯ  
ಮತಿಗೆ ಮಂಗಳವೀವುದಧಿಕರು  
ಮಥಿಸುವುದು ತಿದ್ದುವುದು ಮೆರೆವುದು ಲೇಸ ಸಂಚಿಪುದು ||  
ನುತಗುಣರು ಭಾವುಕರು ವರಪಂ  
ಡಿತರು ಸುಜನರು ಸೂಕ್ತಿಕಾರರು  
ಮತಿಯನೀವುದು ವೀರನಾರಯಣನ ಕಿಂಕರಗೆ || ೧೬ ||

### [1.2.16\_26](https://indike.org/pramana/in.lit.mahabharata.bhasa.kumaravyasa.1.2.16_26)

ತನ್ನ ಸಾಮರ್ಥ್ಯ

### [1.2.17](https://indike.org/pramana/in.lit.mahabharata.bhasa.kumaravyasa.1.2.17)

ತಿಣಿಕಿದನು ಫಣಿರಾಯ ರಾಮಾ  
ಯಣದ ಕವಿಗಳ ಭಾರದಲಿ ತಿಂ  
ತಿಣಿಯ ರಘುವರ ಚರಿತೆಯಲಿ ಕಾಲಿಡಿಲು ತೆರಪಿಲ್ಲ ||  
ಬಣಗು ಕವಿಗಳ ಲೆಕ್ಕಿಪನೆ ಸಾ  
ಕೆಣಿಸದಿರು ಶುಕರೂಪನಲ್ಲವೆ  
ಕುಣಿಸಿ ನಗನೇ ಕವಿ ಕುಮಾರವ್ಯಾಸನುಳಿದವರ || ೧೭ ||

### [1.2.17\_27](https://indike.org/pramana/in.lit.mahabharata.bhasa.kumaravyasa.1.2.17_27)

ದಾಸ ಸಾಹಿತ್ಯ ನಿಘಂಟು:ತಿಂತಿಣಿ= ತಿಂಥಿಣಿ - ಗುಂಪು, ಸಮೂಹ, ರಾಶಿ;  
ದಾಸ ಸಾಹಿತ್ಯ ನಿಘಂಟು: ಬಣಗು= ಕೀಳು, ಅಲ್ಪ;

### [1.2.17\_28](https://indike.org/pramana/in.lit.mahabharata.bhasa.kumaravyasa.1.2.17_28)

ಈ ಕಾವ್ಯದ ಮಹಿಮೆ

### [1.2.18](https://indike.org/pramana/in.lit.mahabharata.bhasa.kumaravyasa.1.2.18)

ಹರಿಯ ಬಸುರೊಳಗಖಿಲ ಲೋಕದ  
ವಿರಡವಡಗಿಹವೋಲು ಭಾರತ  
ಶರಧಿಯೊಳಗಡಗಿಹವನೇಕ ಪುರಾಣ ಶಾಸ್ತ್ರಗಳು ||  
ಪರಮ ಭಕ್ತಿಯಲೀ ಕೃತಿಯನವ  
ಧರಿಸಿ ಕೇಳ್ದಾನರರ ದುರಿತಾಂ  
ಕುರದ ಬೇರಿನ ಬೇಗೆಯೆಂದರುಹಿದನು ಮುನಿನಾಥ || ೧೮ ||

### [1.2.18\_29](https://indike.org/pramana/in.lit.mahabharata.bhasa.kumaravyasa.1.2.18_29)

ಕಾವ್ಯದ ಹಿರಿಮೆ

### [1.2.19](https://indike.org/pramana/in.lit.mahabharata.bhasa.kumaravyasa.1.2.19)

ಅರಸುಗಳಿಗಿದು ವೀರ ದ್ವಿಜರಿಗೆ  
ಪರಮ ವೇದದ ಸಾರ ಯೋಗೀ  
ಶ್ವರರ ತತ್ವವಿಚಾರ ಮಂತ್ರಿಜನಕ್ಕೆ ಬುದ್ಧಿಗುಣ ||  
ವಿರಹಿಗಳ ಶೃಂಗಾರ ವಿದ್ಯಾ  
ಪರಿಣತರಲಂಕಾರ ಕಾವ್ಯಕೆ  
ಗುರುವೆನಲು ರಚಿಸಿದ ಕುಮಾರವ್ಯಾಸ ಭಾರತವ || ೧೯ ||

### [1.2.19\_30](https://indike.org/pramana/in.lit.mahabharata.bhasa.kumaravyasa.1.2.19_30)

ಫಲಶ್ರುತಿ

### [1.2.20](https://indike.org/pramana/in.lit.mahabharata.bhasa.kumaravyasa.1.2.20)

ವೇದ ಪಾರಾಯಣದ ಫಲ ಗಂ  
ಗಾದಿ ತೀರ್ಥಸ್ನಾನ ಫಲ ಕೃ  
ಚ್ಛ್ರಾದಿ ತಪಸಿನ ಫಲವು ಜ್ಯೋತಿಷ್ಟೋಮಯಾಗ ಫಲ ||  
ಮೇದಿನಿಯನೊಲಿದಿತ್ತ ಫಲ ವ  
ಸ್ತ್ರಾದಿ ಕನ್ಯಾದಾನ ಫಲವಹು  
ದಾದರಿಸಿ ಭಾರತದೊಳೊಂದಕ್ಷರವ ಕೇಳ್ದರಿಗೆ || ೨೦ ||

### [1.2.20\_31](https://indike.org/pramana/in.lit.mahabharata.bhasa.kumaravyasa.1.2.20_31)

ಜ್ಯೋತಿಷ್ಮ = ಸೂರ್ಯ; ಜ್ಯೋತಿಷ್ಟೋಮಯಾಗ = ಸೂರ್ಯನನ್ನು ಕುರಿತ ಯಾಗ(?).

### [1.2.21](https://indike.org/pramana/in.lit.mahabharata.bhasa.kumaravyasa.1.2.21)

ಹೇಮ ಖುರ ಶೃಂಗಾಭರಣದಲಿ  
ಕಾಮಧೇನು ಸಹಸ್ರ ಕಪಿಲೆಯ  
ಸೋಮ ಸೂರ್ಯ ಗ್ರಹಣದಲಿ ಸುರನದಿಯ ತೀರದಲಿ ||  
ಶ್ರೀಮುಕುಂದಾರ್ಪಣವೆನಿಸಿ ಶತ  
ಭೂಮಿದೇವರಿಗಿತ್ತ ಫಲವಹು  
ದೀ ಮಹಾಭಾರತದೊಳೊಂದಕ್ಷರವ ಕೇಳ್ದರಿಗೆ || ೨೧ ||

### [1.2.21\_32](https://indike.org/pramana/in.lit.mahabharata.bhasa.kumaravyasa.1.2.21_32)

ನಿಂದಿಸದಿರಿ

### [1.2.22](https://indike.org/pramana/in.lit.mahabharata.bhasa.kumaravyasa.1.2.22)

ಚೋರ ನಿಂದಿಸಿ ಶಶಿಯ ಬೈದಡೆ  
ಕ್ಷೀರವನು ಕ್ಷಯರೋಗಿ ಹಳಿದರೆ  
ವಾರಣಾಸಿಯ ಹೆಳವ ನಿಂದಿಸಿ ನಕ್ಕರೇನಹುದು ||  
ಭಾರತದ ಕಥನ ಪ್ರಸಂಗವ  
ಕ್ರೂರ ಕರ್ಮಿಗಳೆತ್ತ ಬಲ್ಲರು  
ಘೋರತರ ರೌರವವ ಕೆಡಿಸುಗು ಕೇಳ್ದ ಸಜ್ಜನರ || ೨೨ ||

### [1.2.22\_33](https://indike.org/pramana/in.lit.mahabharata.bhasa.kumaravyasa.1.2.22_33)

ಪ್ರಾರ್ಥನೆ

### [1.2.23](https://indike.org/pramana/in.lit.mahabharata.bhasa.kumaravyasa.1.2.23)

ವೇದ ಪುರುಷನ ಸುತನ ಸುತನ ಸ  
ಹೋದರನ ಹೆಮ್ಮಗನ ಮಗನ ತ  
ಳೋದರಿಯ ಮಾತುಳನ ರೂಪನನತುಳ ಭುಜ ಬಲದಿ |  
ಕಾದಿ ಗೆಲಿದವನಣ್ಣನವ್ವೆಯ  
ನಾದಿನಿಯ ಜಠರದಲಿ ಜನಿಸಿದ  
ನಾದಿ ಮೂರುತಿ ಸಲಹೊ ಗದುಗಿನ ವೀರನಾರಯಣ || ೨೩ ||

### [1.2.23\_34](https://indike.org/pramana/in.lit.mahabharata.bhasa.kumaravyasa.1.2.23_34)

ನಾದಿನಿಯ ಜಠರದಲಿ ಜನಿಸಿದ ಅನಾದಿ ಮೂರುತಿ (ಅಥವಾ -ಜನಿಸಿದನು ಆದಿ ಮೂರುತಿ) ಸಲಹೊ ಗದುಗಿನ ವೀರನಾರಯಣ.

### [1.2.23\_35](https://indike.org/pramana/in.lit.mahabharata.bhasa.kumaravyasa.1.2.23_35)

ಅರ್ಥ-:

### [1.2.23\_36](https://indike.org/pramana/in.lit.mahabharata.bhasa.kumaravyasa.1.2.23_36)

ವೇದ ಪುರುಷನ -ನಾರಾಯಣನ ; ಸುತನ -ಬ್ರಹ್ಮನ ;  
ಸುತನ -ನಾರದನ ; ಸಹೋದರನ - ಮರೀಚಿಯ ;  
ಹೆಮ್ಮಗನ - ಇಂದ್ರನ (ಮರೀಚಿಯ ಮೊಮ್ಮಗ)  
(ಬ್ರಹ್ಮನ ಮಗ ಮರೀಚಿ, ಮರೀಚಿಯ ಮಗ ಕಶ್ಯಪ -ಅವನ ಮಗ ಇಂದ್ರ )  
ಮಗನ - ಅರ್ಜುನನ ; (ಇಂದ್ರನ ಮಗ-ಅರ್ಜುನ)  
ತಳೋದರಿಯ - ಸುಭದ್ರೆಯ : ಮಾತುಳನ -ಮಾವನ ಕಂಸನ  
(ಎಂದರೆ ಸುಭದ್ರೆಯ ತಾಯಿ ದೇವಕಿ -ದೇವಕಿಯ ತಂದೆ ದೇವಕ,  
ದೇವಕನ ಅಣ್ಣ ಉಗ್ರಸೇನ , ಉಗ್ರಸೇನನ ಮಗ ಕಂಸ ;  
ಆದ್ದರಿಂದ ದೇವಕಿಗೆ ಕಂಸ ಅಣ್ಣ -ದೊಡ್ಡಪ್ಪನ ಮಗ ;  
ಸುಭದ್ರೆಗೆ ದೇವಕಿಯ ಅಣ್ಣ ಕಂಸ ಸೋದರಮಾವ ; )  
ರೂಪನನು - ಕಂಸನಿಗೆ ಸರಿಸಮಾನನು - ಜರಾಸಂಧನನ್ನು ;  
ಅತುಳ ಭುಜ ಬಲದಿ - ಅಸಾಧಾರಣ ಭುಜ ಬಲದಿಂದ ;  
ಕಾದಿ ಗೆಲಿದವನ - ಯುದ್ಧ ಮಾಡಿ ಗೆದ್ದವನ -ಭೀಮನ ; ಅಣ್ಣನ -ಯುಧಿಷ್ಠಿರನ ;  
ಅವ್ವೆಯ - ತಾಯಿಯ ಎಂದರೆ ಕುಂತಿಯ ; ನಾದಿನಿಯ - ದೇವಕಿಯ  
(ಕುಂತಿಯ ತಮ್ಮ ವಸುದೇವ , ತಮ್ಮನ ಹೆಂಡತಿ - ನಾದಿನಿ-  
ನಾದಿನಿಯು -ವಸುದೇವನ ಪತ್ನಿ ದೇವಕಿ) ;  
ನಾದಿನಿಯ ಜಠರದಲಿ ಜನಿಸಿದ -  
ದೇವಕಿಯ ಗರ್ಭದಲ್ಲಿ ಜನಿಸಿದ ;  
ಅನಾದಿ ಮೂರುತಿ -ಆದಿ ಇಲ್ಲದ ದೇವ ;(ಕೃಷ್ಣ )  
ಸಲಹೊ - ಕಾಪಾಡು ; ಗದುಗಿನ ವೀರನಾರಯಣ -  
ಗದುಗಿನ ದೇವಾಲಯದಲ್ಲಿರುವ - ವೀರ ನಾರಾಯಣ .

### [1.2.23\_37](https://indike.org/pramana/in.lit.mahabharata.bhasa.kumaravyasa.1.2.23_37)

ಪದ್ಯ (ಪಾಠಭೇದ)

### [1.2.23\_38](https://indike.org/pramana/in.lit.mahabharata.bhasa.kumaravyasa.1.2.23_38)

ವೇದಪುರುಷನ ಸುತನ ಸುತನ ಸ  
ಹೋದರನ ಹೆಮ್ಮಗನ ಮಗನ ತ  
ಳೋದರಿಯ ಮಾತುಳನ ಮಾವನನತುಳ ಭುಜಬಲದಿ ||  
ಕಾದಿ ಗೆಲಿದವನಣ್ಣನವ್ವೆಯ  
ನಾದಿನಿಯ ಜಠರದಲಿ ಜನಿಸಿದ  
ನಾದಿ ಮೂರುತಿ ಸಲಹೊ ಗದುಗಿನ ವೀರನಾರಯಣ || ೨೩ ||

### [1.2.23\_39](https://indike.org/pramana/in.lit.mahabharata.bhasa.kumaravyasa.1.2.23_39)

ಓರಿಯೆಂಟಲ್ ಲೈಬ್ರರಿ ಪ್ರತಿಯಲ್ಲಿ ಈ ಕೆಳಗಿನ ಶಿವಸ್ತುತಿ ಇದೆ:

### [1.2.24](https://indike.org/pramana/in.lit.mahabharata.bhasa.kumaravyasa.1.2.24)

ಶ್ರೀಗಿರಿಜೆಯರಸನನು ವಿಮಲಗು  
ಣಾಗಮೋತ್ತಮವರ್ಣ್ಯನನು ಯೋ  
ಗಾಭಿವಂದ್ಯನನಖಿಳಶ್ರುತಿಪೌರಾಣದಾಯಕನ ||  
ನಾಗಭೂಷಣನಮರವಂದಿತ  
ಯೋಗಿಜನಹೃದಯನನು ಕರಣಾ  
ಸಾಗರನ ಬಲಗೊಂಡು ಭಾರತಕಥೆಯ ವಿರಚಿಸುವೆ || ೨೪||

### [1.2.24\_40](https://indike.org/pramana/in.lit.mahabharata.bhasa.kumaravyasa.1.2.24_40)

( ಪ್ರಕ್ಷಿಪ್ತವಿದ್ದರೂ ಇರಬಹುದು)

### [1.2.24\_41](https://indike.org/pramana/in.lit.mahabharata.bhasa.kumaravyasa.1.2.24_41)

♦  
♦♣♣♣♣♣♣♣♣♣♣♣♣♣♣♣♣♣♣♣♦  
ॐ

### [1.2.24\_42](https://indike.org/pramana/in.lit.mahabharata.bhasa.kumaravyasa.1.2.24_42)

ನೋಡಿ

### [1.2.24\_43](https://indike.org/pramana/in.lit.mahabharata.bhasa.kumaravyasa.1.2.24_43)

\*ಕುಮಾರವ್ಯಾಸ ಭಾರತ  
\* ಕುಮಾರವ್ಯಾಸಭಾರತ-ಸಟೀಕಾ  
\* ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೧)  
\* ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೨)  
\* ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೩)  
\*ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೪)  
\*ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೫)  
\*ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೬)  
\*ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೭)  
\*ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೮)  
\*ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೯)  
\*ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೧೦)

### [1.2.24\_44](https://indike.org/pramana/in.lit.mahabharata.bhasa.kumaravyasa.1.2.24_44)

ಪರಿವಿಡಿ

### [1.2.24\_45](https://indike.org/pramana/in.lit.mahabharata.bhasa.kumaravyasa.1.2.24_45)

ಉಲ್ಲೇಖ

---
Source: [https://indike.org/pramana/in.lit.mahabharata.bhasa.kumaravyasa.1.2](https://indike.org/pramana/in.lit.mahabharata.bhasa.kumaravyasa.1.2) · Pramāṇa
