Pramāṇa · Search · About · API

Karnata Bharata Kathamanjari 1.3: ಸಟೀಕಾ (ಪರ್ವ-೧::ಸಂಧಿ-೨)

Karṇāṭa Bhārata Kathāmañjarī 1.3

Language
Kannada

ಸಟೀಕಾ (ಪರ್ವ-೧::ಸಂಧಿ-೨)

1.3.p1

<ಕುಮಾರವ್ಯಾಸಭಾರತ-ಸಟೀಕಾ

1.3.p2

ಕುಮಾರವ್ಯಾಸ ಭಾರತ/ಸಟೀಕಾ (೧.ಆದಿಪರ್ವ::ಸಂಧಿ-೨)

1.3.p3

ಆದಿಪರ್ವ - ಎರಡನೆಯ ಸಂಧಿ:

1.3.p4

ಸೂಚನೆ:

1.3.p5

ರಾಯ ಜನಮೇಜಯಗೆ ವೈಶಂ
ಪಾಯನನು ಹೇಳಿದನು ಮುನಿ ದ್ವೈ
ಪಾಯನಭಿವರ್ಣಿಸಿದ ಭಾರತ ವರ ಕಥಾಮೃತವ ||

1.3.p6

ಪದ್ಯ-ಸೂಚನೆ:ಅರ್ಥ:ಜನಮೇಜಯ ರಾಜನಿಗೆ ವೈಶಂಪಾಯನ ಮನಿಯು ವೇದವ್ಯಾಸರು ವಿವರವಾಗಿ ಹೇಳಿದ, ಶ್ರೇಷ್ಠವಾದ ಅಮೃತದಂತಿರುವ ಭಾರತ ಕಥೆಯನ್ನು ಹೇಳಿದನು.

1.3.p7

ನೈಮಿಷಾರಣ್ಯಕ್ಕೆ ಸೂತ ಪುರಾಣಿಕರ ಆಗಮನ

1.3.1

ಸೂತನೈತಂದನು ಜಗದ್ವಿ
ಖ್ಯಾತ ಶೌನಕಮುಖ್ಯ ಮುನಿ ಸಂ
ಘಾತ ಪಾವನ ನೈಮಿಶಾರಣ್ಯಕ ವರಾಶ್ರಮಕೆ ||
ಆತನನು ಕಂಡುದು ತಪಸ್ವಿ
ವ್ರಾತ ಕುಶಲಕ್ಷೇಮ ಮಧುರ
ಪ್ರೀತಿ ವಚನಾಮೃತದಿ ಸಂಭಾವನೆಯ ಮಾಡಿದರು || ೧ ||

1.3.1_8

ಪದ್ಯದ :ಅರ್ಥ: ಜಗದ್ವಿಖ್ಯಾತರಾದ ಶೌನಕಮುಖ್ಯರಾಗಿ ಅನೇಕ ಮುನಿಗಳಿರುವ ಪಾವನವಾದ ನೈಮಿಶಾರಣ್ಯಕದ ಶ್ರೇಷ್ಠ ಆಶ್ರಮಕ್ಕೆ ಸೂತ ಪುರಾಣಿಕನು ಬಂದನು. ತಪಸ್ವಿಗಳ ಗುಂಪು ಆತನನ್ನು ನೋಡಿದರು. ಆಗ ಕುಶಲ, ಕ್ಷೇಮವಿಚಾರಿಸಿದರು. ಮಧರವಾದ ಅಮೃತದಂತಿರುವ ವಚನದಿಂದ ಸ್ವಾಗತ ಮಾಡಿದರು. (ಆಗ ಶೌನಕ ಮುನಿಗಳು ಸತ್ರಯಾಗವನ್ನು ಮಾಡುತ್ತಿದ್ದರು.)

1.3.2

ಪರಮಪೌರಾಣಿಕ ಶಿರೋಮಣಿ
ಬರವಿದೆತ್ತಣದಾಯ್ತು ಕೌತುಕ
ವರಕಥಾ ಪೀಯೂಷಸಾರ ವಿಶೇಷವೇನುಂಟು ||
ಚರಿತ ಚತುರಾಶ್ರಮ ತಪೋ ನಿ
ಷ್ಠರಿಗೆ ವಿಶ್ರಮವೈ ಭವಾದೃಶ
ದರುಶನವು ನಮಗೆಂದು ನುಡಿದರು ರೋಮಹರ್ಷಣಿಯ || ೨ ||

1.3.2_9

ಪದ್ಯದ :ಅರ್ಥ:ಶ್ರೇಷ್ಠರಾದ ಪೌರಾಣಿಕ ಶಿರೋಮಣಿಯೇ ಈಗ ಯಾವಕಡೆಯಿಂದ ಬಂದಿರಿ? ಕುತೂಹಲಕರವಾದ ಅಮೃತ ಸಮಾನವಾದ ಉತ್ತಮ ಕಥೆಯು,ಏನಾದರೂ ಇದೆಯೇ? ನಾಲ್ಕು ಆಶ್ರಮಗಳಲ್ಲೂ ಉತ್ತಮ ತಪೋನಿಷ್ಠರಾದವರಿಗೆ ನಿಮ್ಮಂಥವರ ದರ್ಶನವು ಶಾಂತಿಯನ್ನು, ನೀಡುವುದು ಎಂದು ಸೂತಪುರಾಣಿಕರಾದ ರೋಮಹರ್ಷಣಿ ಮುನಿಯನ್ನು ಕುರಿತು ಶೌನಕಾಶ್ರಮದ ಮನಿಗಳು ಹೇಳಿದರು.

1.3.3

ವಂದಿಸಿದೆನೈ ವರ ತಪೋಧನ
ವೃಂದ ಚಿತ್ತೈಸುವುದು ತಾನೇ
ನೆಂದು ನುಡಿವೆನು ಕೌತುಕಾಮೃತಸರದ ಕಡುಗಡಲ ||
ಹಿಂದೆ ಕೇಳಿದುದಲ್ಲ ಹೇಳ್ವುದು
ಮುಂದೆ ಹುಸಿ ವರ ನಿಗಮ ಶತವಿದ
ರೊಂದೊರೆಗೆ ಬರಲರಿಯದೆಂದನು ಸೂತ ಕೈಮುಗಿದು || ೩ ||

1.3.3_10

ಪದ್ಯದ :ಅರ್ಥ:(ನಿಮಗೆಲ್ಲರಿಗೂ) ನಮಸ್ಕರಿಸುತ್ತಿದ್ದೇನೆ, ಶ್ರೇಷ್ಠರಾದ ತಪೋಧನರೇ ದಯವಿಟ್ಟು ಕೇಳಿ, ಈ ಕುತೂಹಲಕರವಾದ ಅಮೃತರಸದ ಗಹನವಾದ ಸಮುದ್ರದ ವಿಷಯವನ್ನು ನಾನು ಏನೆಂದು ಹೇಳಲಿ? ಅದರ ಹಿರಿಮೆ ಅಷ್ಟು ದೊಡ್ಡದು. ಹಿಂದೆ ಯಾರೂ ಕೇಳಿದ ಕಥೆ ಅಲ್ಲ, ಈಗ ಹೇಳುವುದರ ಮುಂದೆ, ಶ್ರೇಷ್ಠ ನೂರು ವೇದಗಳೂ, ಇದರ ಸಮನಾಗಿ ಬರಲಾರದು, ಎಂದು ಸೂತ ಪುರಾಣಿಕರು ಕೈಮುಗಿದು ಹೇಳಿದರು.

1.3.4

ಕೇಳಿದನು ಜನಮೇಜಯ ಕ್ಷಿತಿ
ಪಾಲಕನು ವರ ಸರ್ಪಯಜ್ಞ
ಸ್ಥೂಲ ಪಾಪವಿಘಾತಿಗೋಸುಗವೀ ಮಹಾಕಥೆಯ ||
ಕೇಳಿದೆನು ತಾನಲ್ಲಿ ಮುನಿಜನ
ಮೌಳಿ ಮಂಡಿತ ಚರಣಕಮಲ ವಿ
ಶಾಲ ವೇದವ್ಯಾಸಕೃತ ಭಾರತಕಥಾಮೃತವ || ೪ ||

1.3.4_11

ಪದ್ಯದ :ಅರ್ಥ: ಶ್ರೇಷ್ಠಷಾದ ಸರ್ಪಯಜ್ಞದ ದೊಡ್ಡ ಪಾಪವನ್ನು ಕಳೆದುಕೊಳ್ಳಲು ಜನಮೇಜಯ ರಾಜನು ಈ ಮಹಾಕಥೆಯನ್ನು ಕೇಳಿದನು. ಮುನಿಜನರು ಯಾರ ಪಾದಕಮಲಕ್ಕೆ ತಲೆಬಾಗಿ ನಮಸ್ಕರಿಸುವರೋ ಆ ವಿಶಾಲ ಜ್ಞಾನದ ವೇದವ್ಯಾಸರು ರಚಿಸಿದ ಭಾರತಕಥಾಮೃತವನ್ನು ತಾನು 'ಅಲ್ಲಿ ಕೇಳಿದೆನು' ಎಂದು ಸೂತರು ಹೇಳಿದರು.

1.3.4_12

ಶೌನಕರು ಮತ್ತು ಇತರ ಮುನಿಗಳ ಸಂತಸ

1.3.5

ಹಾ ಮಹಾದೇವಾಯಿದೆಂತೈ
ರೋಮಹರ್ಷಣಿ ನಾವು ಮಾಡಿದ
ಸೋಮಪಾನಾದಿಗಳ ಪುಣ್ಯಸ್ತೋಮ ತರುಗಳಿಗೆ ||
ಈ ಮಹಾಭಾರತ ಕಥಾಮೃತ
ರಾಮಣೀಯಕ ಫಲವಲಾ ನಿ
ಸ್ಸೀಮ ಪುಣ್ಯರು ಧನ್ಯರಾವೆಂದುದು ಮುನಿಸ್ತೋಮ || ೫ ||

1.3.5_13

ಪದ್ಯದ :ಅರ್ಥ:ಅಹಾ! ಮಹಾದೇವಾ! ಇದು ಎಂತಹ ಪುಣ್ಯ! ರೋಮಹರ್ಷಣಿ ಮುನಿಗಳೇ, ನಾವು ಇದುವರೆಗೆ ಯಜ್ಞದಲ್ಲಿ ಮಾಡಿದ ಸೋಮರಸ ಪಾನ ಮತ್ತು ಇತರ ಕರ್ಮಗಳ ಪುಣ್ಯದ ರಾಶಿಯೆಂಬ ವೃಕ್ಷಗಳಿಗೆ ಈ ಕಥೆಯು ಫಲದಂತಿದೆ ಎಂದರು.

1.3.6

ಹೇಳು ಸಾಕೆಲೆ ಸೂತ ದುರಿತ
ವ್ಯಾಳ ವಿಷಜಾಂಗುಳಿಕವನು ನೀ
ಕೇಳಿದಂದದೊಳಂದು ಜನಮೇಜಯನ ಯಾಗದಲಿ ||
ಮೌಳಿಗಳಲಾನುವೆವು ನಿನ್ನಯ
ಹೇಳಿಕೆಯನೆನೆ ನಿಖಿಳ ಮುನಿಗಳ
ನೋಲಗಿಸುವೆನು ನಿಮ್ಮನುಜ್ಞೆಯಲೆಂದು ಕೈಮುಗಿದ || ೬ ||

1.3.6_14

ಪದ್ಯದ :ಅರ್ಥ: ಎಲೆ ಸೂತರೇ ಸಾಕು ಹೇಳಿರಿ, ಪಾಪಗಳೆಂಬ ಸರ್ಪದ ವಿಷಕ್ಕೆ ಔಷಧಿಯಂತಿರುವ ಮಹಾಭಾರತದ ಕಥೆಯನ್ನು, ಜನಮೇಜಯನ ಯಾಗದಲ್ಲಿ ಅಂದು ನೀವು ಕೇಳಿದಂತೆಯೇ ಹೇಳಿರಿ; ಆ ಕಥೆಯನ್ನು ನಮ್ಮ ತಲೆಯಲ್ಲಿ ಅದನ್ನು ಧರಿಸುವೆವು, ಎನ್ನಲು; ಮುನಿಗಳಾದ ನಿಮ್ಮೆಲ್ಲರ ಆಸೆ ಮತ್ತು ಅನುಜ್ಞೆಯಂತೆ ಅದನ್ನು ನೀವು ಆಲಿಸುವಂತೆ ಹೇಳುವನು ಎಂದು ಸೂತರು ಕೈಮುಗಿದರು.

1.3.7

ಸರ್ಪಯಜ್ಞದಲಾದ ದುರಿತದ
ದರ್ಪವನು ಕೆಡೆಬೀಳಲೊದೆಯಲು
ತರ್ಪಣಾದಿ ಕ್ರಿಯೆಗಳಲಿ ಸಾಮರ್ಥ್ಯವಿಲ್ಲೆಂದು ||
ದರ್ಪಕಾಹಿತ ಮೂರ್ತಿ ಮುನಿಮುಖ
ದರ್ಪಣನು ಶಿಷ್ಯನನು ಕರೆದು ಸ
ಮರ್ಪಿಸಿದನರಸಂಗೆ ವೇದವ್ಯಾಸಮುನಿರಾಯ || ೭ ||

1.3.7_15

ದಾಸ ಸಾಹಿತ್ಯ ನಿಘಂಟು:-ದರ್ಪಕ - ಮನ್ಮಥ, ಕಾಮ
ಪದ್ಯದ :ಅರ್ಥ: ಸರ್ಪಯಜ್ಞದಲ್ಲಿ ಆದ ಪಾಪಕರ್ಮದ ಅತಿಶಯವನ್ನು,ನಾಶಮಾಡುವಂತೆ ಹೊಡೆದೋಡಿಸಲು, ತರ್ಪಣವೇ ಮೊದಲಾದ ಶಾಂತಿಕರ್ಮಗಳಲ್ಲಿ ಸಾಮರ್ಥ್ಯವಿಲ್ಲ ಎಂದು, ಮನ್ಮಥನಿಗೆ ಶತ್ರುವಂತಿರುವ, ಮುನಿಗಳಿಗೆ ಕನ್ನಡಿಯಂತಿರುವ ವೇದವ್ಯಾಸ ಮುನಿಯು, ಶಿಷ್ಯನನು ಕರೆದು, ಅರಸ ಜನಮೇಜಯನಿಗೆ ವೇದವ್ಯಾಸ ಮುನಿಯು ಹೇಳಿದನು.

1.3.8

ರಾಯ ಕೇಳೈ ನಿಮ್ಮ ಪಾಂಡವ
ರಾಯಚರಿತವನೆಂದು ವೈಶಂ
ಪಾಯನಿಗೆ ಬೆಸಸಿದನು ಕೊಟ್ಟನು ಬಳಿಕ ಪುಸ್ತಕವ ||
ರಾಯನತಿ ಭಕ್ತಿಯಲಿ ವೈಶಂ
ಪಾಯನಿಗೆ ವಂದಿಸಿ ನಿಜಾಭಿ
ಪ್ರಾಯವನು ಕೇಳಿದನು ಚಿತ್ತೈಸುವುದು ಮುನಿನಿಕರ || ೮ ||

1.3.8_16

ಪದ್ಯದ :ಅರ್ಥ:ರಾಜನೇ ನಿಮ್ಮ ಪಾಂಡವರಾಜನ ಚರಿತ್ರೆಯನ್ನು ಕೇಳು ಎಣದು ವ್ಯಾಸರು ಹೇಳಿ, ತಮ್ಮ ಶಿಷ್ಯ ವೈಶಂಪಾಯಮುನಿಗೆ ಅದನ್ನು ಹೇಳಲು ತಿಳಿಸಿದನು. ಬಳಿಕ ಪುಸ್ತಕವನ್ನು ಅವನಿಗೆ ಕೊಟ್ಟನು. ಜನಮೇಜಯ ರಾಜನು ಅತಿ ಭಕ್ತಿಯಿಂದ ವೈಶಂಪಾಯನಿಗೆ ವಂದಿಸಿ ಸತ್ ವಚಾರವನ್ನು ಅವನಿಂದ ಕೇಳಿದನು. ಚಿತ್ತೈಸುವುದು ಮುನಿಗಳೇ ಆ ಸದ್ವಿಚಾರವನ್ನು ಕೇಳಿರಿ, ಎಂದರು ಸೂತ ಪುರಾಣಿಕರು.

1.3.8_17

ವೈಶಂಪಾಯನಿಂದ ಗ್ರಂಥ, ದೇವ, ಮುನಿ ಸ್ಥುತಿ

1.3.9

ವಿತತ ಪುಸ್ತಕವನು ಸುಗಂಧಾ
ಕ್ಷತೆಯೊಳರ್ಚಿಸಿ ಸೋಮ ಸೂರ್ಯ
ಕ್ಷಿತಿ ಜಲಾನಲ ವಾಯು ಗಗನಾದಿಗಳಿಗಭಿನಮಿಸಿ ||
ಶತಮಖಾದಿ ಸಮಸ್ತ ದೇವ
ಪ್ರತತಿಗೆರಗಿ ಸರೋಜಭವ ಪಶು
ಪತಿಗಳಿಗೆ ಕೈಮುಗಿದು ವಿಮಲ ಜ್ಞಾನಮುದ್ರೆಯಲಿ || ೯ ||

1.3.9_18

ವಿತತ (ಗು):1. ಹರಡಿಕೊಂಡಿರುವ. 2. ಉತ್ತಮವಾದ.
ಪದ್ಯದ :ಅರ್ಥ:ವೈಶಂಪಾಯನ ಮುನಿಯು, ಶ್ರೇಷ್ಠವಾದ ಪುಸ್ತಕವನ್ನು ಸುಗಂಧ ಅಕ್ಷತೆಗಳಿಂದ ಪೂಜಿಸಿ, ನಂತರ ಚಂದ್ರ ಸೂರ್ಯರಿಗೂ, ಪಂಚಭೂತಗಳಾದ
ಭೂಮಿ, ಜಲ, ಅಗ್ನಿ, ವಾಯು, ಗಗನ ಮೊದಲಾದವುಗಳಿಗೆ ಅಭಿನಮಿಸಿದನು. ಇಂದ್ರನೇ ಮೊದಲಾದ ದೇವತೆಗಳಿಗೆ ವಂದಿಸಿ, ಬ್ರಹ್ಮ ಮತ್ತು ಶಿವರಿಗೆ ಕೈಮುಗಿದು
ಪೂಜ್ಯವಾದ ಜ್ಞಾನಮುದ್ರೆಯನ್ನು ಹೊಂದಿ- ಕಥೆಯನ್ನು ಆರಂಭಿಸಿದನು.

1.3.10

ಮನದೊಳಾದ್ಯಂಪುರುಷಮೀಶಾ
ನನನು ಪುರುಹೂತನ ಪುರಸ್ಕೃತ
ನನಘನೇಕಾಕ್ಷರ ಪರಬ್ರಹ್ಮನ ಸನಾತನನ ||
ದನುಜರಿಪು ಸುವ್ಯಕ್ತನವ್ಯ
ಕ್ತನನು ಸದಸದ್ರೂಪನವ್ಯಯ
ನೆನಿಪ ವಿಷ್ಣುವ ನೆನೆದು ಮುನಿ ವಿಸ್ತರಿಸಿದನು ಕಥೆಯ || ೧೦ ||

1.3.10_19

ಪದ್ಯದ :ಅರ್ಥ: ಮುನಿಯು ಬಳಿಕ ತನ್ನ ಮನಸ್ಸಿನಲ್ಲಿ ಆದಿಪುರುಷನೂ ಈಶಾನನನೂ ಇಂದ್ರನೂ ನಮಸ್ಕರಿಸಿದ, ಪಾಪರಹಿತನೂ, ಏಕ ಅಕ್ಷರವಾದ ಓಂಕಾರಸ್ವರೂಪನೂ, ಪರಬ್ರಹ್ಮನೂ, ಸನಾತನನೂ, ರಾಕ್ಷಸರ ಶತ್ರುವೂ, ಸಾಕಾರನೂ, ನಿರಾಕಾರನೂ, ಸತ್- ಅಸದ್ ರೂಪನೂ, ಅವ್ಯಯನೂ ಆದ ವಿಷ್ಣುವನ್ನು ನೆನೆದು ವೈಶಂಪಾಯನ ಮುನಿಯು ಕಥೆಯನ್ನು ವಿಸ್ತಾರವಾಗಿ ಹೇಳಿದನು.

1.3.11

ವೇದ ನಾಲ್ಕದರಂಗವಾರ
ಷ್ಟಾದಶಾದಿ ಪುರಾಣ ಸ್ಮೃತಿಗಳೊ
ಳಾದಪೂರ್ವೋತ್ತರದ ಮೀಮಾಂಸದ ಪರಿಕ್ರಮದ |\
ವಾದ ವಿಲಸನ್ನ್ಯಾಯವನು ಶ
ಬ್ದೋದಧಿಯನಳವಡಿಸಿ ರಚಿಸಿದ
ಬಾದರಾಯಣನಂಘ್ರಿಯನು ಭಜಿಸಿದನು ಮನದೊಳಗೆ || ೧೧ ||

1.3.11_20

ಪದ್ಯದ :ಅರ್ಥ:ನಾಲ್ಕು ವೇದ, ಅದರ ಆರು ಅಂಗಗಳು, ಹದಿನೆಂಟು ಪುರಾಣ, ಸ್ಮೃತಿಗಳಲ್ಲಿ ಇರುವ ಪೂರ್ವ ಮತ್ತು ಉತ್ತರ ಮೀಮಾಂಸಗಳ- ಪರಿಕ್ರಮದವಾದ- ಮುಂದುವರಿದ ಅರಳಿದ ನ್ನ್ಯಾಯಶಾಸ್ತ್ರದ ಶಬ್ದಗಳ ಸಾಗರವನ್ನು ಅಳವಡಿಸಿ ಮಹಾಭಾರತವನ್ನು ರಚಿಸಿದ ಬಾದರಾಯಣನ ಪಾದಗಳನ್ನು ವೈಶಂಪಾಯನ ಮುನಿಯು ಮನದಲ್ಲಿ ಭಜಿಸಿದನು.

1.3.11_21

ಕಥಾರಂಭ

1.3.12

ಅರಸ ಕೇಳೈ ನಾರದಾದ್ಯರು
ಸರಸಿರುಹ ಸಂಭವನ ಸಭೆಯೊಳು
ವರಮಹಾಭಾರತವ ಕೊಂಡಾಡಿದರು ಭಕ್ತಿಯಲಿ ||
ವರ ಮಹತ್ವದಿ ಭಾರವತ್ವದಿ
ವರಮಹಾಭಾರತವಿದೊಂದೇ
ದುರಿತದುರ್ಗ ವಿಭೇದಕರವೀರೇಳು ಲೋಕದಲಿ || ೧೨ ||

1.3.13

ಹೇಳಿದನು ಪೌಲೋಮ ಚರಿತೋ
ದ್ಧಾಲಕಾಖ್ಯರ ಚರಿತವನು ಮುನಿ
ಹೇಳಿದನು ಫಣಿನಿಕರ ಗರುಡಾಸ್ತಿಕರ ಸಂಭವವ ||
ಮೇಲೆ ಬಳಿಕ ಪರೀಕ್ಷಿದವನೀ
ಪಾಲ ಶಾಪದ ಮರಣವನು ನೆರೆ
ಹೇಳಿದನು ಮುನಿಗಳಿಗೆ ಸರ್ಪಾಧ್ವರದ ಸಂಗತಿಯ || ೧೩ ||

1.3.14

ಕೇಳಿದನು ಜನಮೇಜಯಕ್ಷಿತಿ
ಪಾಲ ವೈಶಂಪಾಯನನು ತಾ
ಕೀಳು ದುರಿತಂಗಳಿಗೆ ಪ್ರಾಯಶ್ಚಿತ್ತ ರೂಪದಲಿ ||
ಕೇಳಿರೈ ಮುನಿನಿಕರವೀ ಕಲಿ
ಕಾಲದಲಿ ಫಲಿಸುವುದು ಲಕ್ಷ್ಮೀ
ಲೋಲ ನಾಮಸ್ತುತಿಮಹಾಭಾರತ ಕಥಾಶ್ರವಣ || ೧೪ ||

1.3.15

ರಾಯ ಚಿತ್ತೈಸೆಂದು ವೈಶಂ
ಪಾಯಮುನಿ ಹೇಳಿದನು ಕಮಲದ
ಳಾಯತಾಕ್ಷನ ಬಾಲಕೇಳಿ ವಿಧೂತ ಕಿಲ್ಬಿಷವ ||
ಕಾಯ ಕಲ್ಮಷಹರವಖಿಳ ನಿ
ಶ್ರೇಯಸದ ಸದ್ರೂಪುವಿನ ಸಂ
ದಾಯಕವ ನಿರ್ಮಲ ಮಹಾಭಾರತ ಕಥಾಮೃತವ || ೧೫ ||

1.3.15_22

ದಾಸ ಸಾಹಿತ್ಯ ನಿಘಂಟು:ವಿಧೂತಾಶುಭವ್ರಾತ - ಅಮಂಗಳಗಳ ಸಮೂಹ.
ಪ್ರೊ. ಜಿ. ವೆಂಕಟಸುಬ್ಬಯ್ಯ ಕನ್ನಡ-ಕನ್ನಡ ನಿಘಂಟು:ಕಲ್ಮಷ ಹೆಸರುಪದ(ಸಂ) ೧ ಕೊಳೆ, ಮಾಲಿನ್ಯ ೨ ಪಾಪ ೩ ಕುಂದು
ಕ.ಸಾ.ಪ.ನಿಘಮಟು:ನಿಶ್ರೇಯಸ (ನಾ)1. ಅತಿಶ್ರೇಷ್ಠವಾದುದು. 2. ಶ್ರೇಷ್ಠಪದವಿ.
ಪದ್ಯದ :ಅರ್ಥ:ರಾಜನೇ ಕೇಳು, ಎಂದು ವೈಶಂಪಾಯಮುನಿಯು ಕೃಷ್ನನ ಬಾಲಲಿಲೆಯಕಥೆಯನ್ನು ಅಮಂಗಳವಾದ ಕಾಣದಪಾಪಗಳನ್ನು, ನರಕನ್ನು ಹೊಗಲಾಡಿಸಿವ, ಎಲ್ಲದಕ್ಕಿಂತ ಅತಿಶ್ರೇಷ್ಠವಾದ ಆತ್ಮಸ್ವರೂಪವನ್ನು ಪಡೆಯುವ ಪರಿಶುದ್ಧ ಮಹಾಭಾರತ ಕಥಾಮೃತವನ್ನು ಹೇಳಿದನು.

1.3.15_23

ಸೃಷ್ಠಿ ಕ್ರಮ

1.3.16

ಆದಿ ಸೃಷ್ಟಿಯೊಳುದಿಸಿದರು ದ
ಕ್ಷಾದಿ ವಿಮಲ ನವಪ್ರಜೇಶ್ವರ
ರಾದರಂಬುಜಭವನ ಲೀಲಾಮಾತ್ರ ಸೂತ್ರದಲಿ ||
ಆದನವರೊಳಗತ್ರಿಮುನಿ ಬಳಿ
ಕಾದನಾ ಮುನಿಪತಿಗೆ ಜಗದಾ
ಹ್ಲಾದಕರ ಹಿಮಕಿರಣನಾತನಲಾಯ್ತು ಶಶಿವಂಶ || ೧೬ ||

1.3.17

ಪದ್ಯದ :ಅರ್ಥ:ಆದಿ ಸೃಷ್ಟಿಯಲ್ಲಿ ದಕ್ಷನೇಮೊದಲಾದ ಶ್ರೇಷ್ಠ ಒಂಭತ್ತು ಬ್ರಹ್ಮರು (ಪ್ರಜೇಶ್ವರರು) ಚತುರ್ಮುಖ ಬ್ರಹ್ಮನ ಲೀಲಾಮಾತ್ರ ಕ್ರಮದಿಂದ ಹುಟ್ಟಿದರು. ನಂತರ ಅವರಲ್ಲಿ ಅತ್ರಿಮುನಿಗೆ ಜಗತ್ತಿಗೆ ಆನಂದ ಕೊಡುವ ಚಂದ್ರನು ಹುಟ್ಟಿದನು. ಅವನಿಂದ ಚಂದ್ರವಂಶವಾಯಿತು.
ಸೋಮನಿಂ ಬುಧನಾ ಬುಧಂಗೆಯು
ಭೂಮಿಯಲ್ಲಿ ಪುರೂರವನು ಬಳಿ
ಕಾ ಮಹೀಪತಿಗೂರ್ವಶಿಯೊಳಾಯುಃ ಕುಮಾರಕನು ||
ಆ ಮಹೀಶಗೆ ನಹುಷ ನಹುಷಂ
ಗಾ ಮಹಾತ್ಮ ಯಯಾತಿ ಬಳಿಕೀ
ಸೋಮಕುಲವೆರಡಾಯ್ತು ಯದು ಪೂರುಗಳ ದೆಸೆಯಿಂದ || ೧೭ ||

1.3.18

ಪದ್ಯದ :ಅರ್ಥ: ಚಂದ್ರನಿಂದ ಶಶಿವಂಶ ಆಯಿತು: ಸೋಮನಿಂದ ಬುಧನೂ, ಅವನಿಂದ ಭೂಮಿಯಲ್ಲಿ ಪುರೂರವನೂ, ಬಳಿಕ ಆ ರಾಜನಿಗೆ ಊರ್ವಶಿಯಿಂದ ಆಯು ಕುಮಾರಕನೂ,
ಅವನಿಗೆ ನಹುಷನುಹುಟ್ಟಿದನು; ನಹುಷನಿಗೆ ಮಹಾತ್ಮ ಯಯಾತಿಯೂ ಬಳಿಕ ಈ ಸೋಮಕುಲವು ಎರಡು ಕವಲಾಯ್ತು. ಅದು ಯದುವಂಶ ಪೂರುವಿನ ವಂಶ ಅದೇ ಮುಂದೆ ಕುರುವಂಶವಾಯಿತು.
ಯದುಪರಂಪರೆಯಿಂದ ಯಾದವ
ರುದಿಸಿದರು ಪೂರುವಿನ ದೆಸೆಯಿಂ
ದಿದುವೆ ಕೌರವ ವಂಶವಾಯ್ತು ಯಯಾತಿ ಪೌತ್ರರಲಿ ||
ವಿದಿತ ಪೂರ್ವೋತ್ತರದ ಯದು ವಂ
ಶದ ಕಥಾವಿಸ್ತಾರವನು ಹೇ
ಳಿದನು ದುಷ್ಯಂತನಲಿ ಶಾಕುಂತಲೆಯ ಕಥೆ ಸಹಿತ || ೧೮ ||

1.3.18_24

ಪದ್ಯದ :ಅರ್ಥ:ಯದುವಿನ ಪರಂಪರೆಯಿಂದ ಯಾದವರು ಹುಟ್ಟಿದರು. ಪೂರುವಿನ ದೆಸೆಯಿಂದ ಮಂದೆ ಇದೇ ಕೌರವ ವಂಶವಾಯ್ತು. ಯಯಾತಿಯ ಮೊಮ್ಮಕ್ಕಳಲ್ಲಿ ಪ್ರಸಿದ್ಧವಾದ ಪೂರ್ವೋತ್ತರದ ಯದು ವಂಶದ ಹಿಂದಿನ ಮತ್ತು ಮುಂದಿನ ಯದು ವಂಶದ ಕಥಾ-ವಿಸ್ತಾರವನ್ನು, ಅದರಲ್ಲಿ ದುಷ್ಯಂತ ಮತ್ತು ಶಾಕುಂತಲೆಯ ಕಥೆ ಸಹಿತ ಹೇಳಿದನು.

1.3.18_25

ಕುರುವಂಶದ ಬೆಳವಣಿಗೆ

1.3.19

ಭರತನಾ ದುಷ್ಯಂತನಿಂದವ
ತರಿಸಿದನು ತತ್ಪೂರ್ವ ನೃಪರಿಂ
ಹಿರಿದು ಸಂದನು ಬಳಿಕ ಭಾರತವಂಶವಾಯ್ತಲ್ಲಿ ||
ಭರತಸೂನು ಸುಹೋತ್ರನಾತನ
ವರಕುಮಾರಕ ಹಸ್ತಿ ಹಸ್ತಿನ
ಪುರಿಗೆ ಹೆಸರಾಯ್ತಾತನಿಂದವೆ ನೃಪತಿ ಕೇಳೆಂದ || ೧೯ ||

1.3.19_26

ಪದ್ಯದ :ಅರ್ಥ:ದುಶ್ಯಂತನ ಮಗ ಭರತನು; ಆ ದುಷ್ಯಂತನಿಂದ ಹುಟ್ಟಿದ ಅವನು ಹಿಂದಿನ ರಾಜರಿಗಿಂತ ಕೀರ್ತಿವಂತನಾದನು. ಬಳಿಕ ಅದು ಭಾರತವಂಶವೆಂದು ಹೆಸರಾಯಿತು. ಭರತನ ಮಗ ಸುಹೋತ್ರನು; ಆತನ ಮಗ ಹಸ್ತಿ, ಹಸ್ತಿನಾಪುರಿಗೆ ಅವನಿಂದಲೇ ಆ ಹೆಸರಾಯ್ತು, ನೃಪತಿಯೇ ಕೇಳು ಎಂದ, ಮುನಿ.

1.3.20

ವರಕುಮಾರರ ಪಂಕ್ತಿಯಲಿ ಸಂ
ವರಣನಾತಗೆ ಸೂರ್ಯಪುತ್ರಿಗೆ
ಕುರು ಮಹೀಪತಿ ಜನಿಸಿದನು ಬಳಿಕಾಯ್ತು ಕುರುವಂಶ ||
ವರ ಪರಂಪರೆಯೋಳ್ ಪ್ರತೀಪನು
ಧರಣಿಪತಿಯಾತನಲಿ ಶಂತನು
ಧರೆಗಧೀಶ್ವರನಾಗಿ ಬೆಳಗಿದನರಸ ಕೇಳೆಂದ || ೨೦ ||

1.3.20_27

ಪದ್ಯದ :ಅರ್ಥ:ಆ ಚಂದ್ರವಂಶ ಪರಂಪರೆಯಲ್ಲಿ ಸಂವರಣನು ಸೂರ್ಯಪುತ್ರಿ ತಪತಿಯನ್ನು ವಿವಾಹವಾಗಿ ಅವಳಿಂದ, ಕುರು ಮಹೀಪತಿ ಜನಿಸಿದನು. ಬಳಿಕ ಕುರುವಂಶ ಎಂದು ಹೆಸರಾಯಿತು; ಉತ್ತಮ ಪರಂಪರೆಯಲ್ಲಿ ಪ್ರತೀಪನು ಧರಣಿಪತಿಯಾದನು. ಆತನ ಮಗ ಶಂತನು ಭೂಮಿಗೆ ಅಧಿಪತಿಯಾಗಿ ಬೆಳಗಿದನು. ಅರಸನೇ ಕೇಳು, ಎಂದನು ಮುನಿ.

1.3.20_28

ಸರಸಿಜಾಸನ ಕೊಟ್ಟ ಶಾಪದಿ
ಯರಸಿಯಾದಳು ಗಂಗೆ ಬಳಿಕಿ
ಬ್ಬರಿಗೆ ಮಕ್ಕಳು ವಸುಗಳೆಂಟು ವಸಿಷ್ಠ ಶಾಪದಲಿ
ನಿರಪರಾಧಿಗಳೇಳು ಜನನಾಂ
ತರಕೆ ಮರಣವ ಕಂಡರುಳಿದಂ
ಗಿರವು ಭೂಲೋಕದಲಿ ಬಲಿದುದು ಭೀಷ್ಮನಾಮದಲಿ ೨೧

1.3.20_29

ಪದ್ಯದ :ಅರ್ಥ:ಕಮಲವನ್ನು ಆಸನವಾಗಿ ಉಳ್ಳ ಬ್ರಹ್ಮನು ಕೊಟ್ಟ ಶಾಪದಿಂದ ಗಂಗೆಯು ಶಂತನುವಿಗೆ ಪತ್ನಿಯಾದಳು. ಬಳಿಕ ಆ ಇಬ್ಬರಿಗೆ ಎಂಟು ವಸುಗಳು ವಸಿಷ್ಠ ಶಾಪದಿಂದ ಮಕ್ಕಳಾಗಿ ಜನಿಸಿದರು. ಎಂಟು ವಸುಗಳಲ್ಲಿ ನಿರಪರಾಧಿಗಳಾದ ಏಳು ವಸುಗಳು ಹುಟ್ಟಿದ ಕೂಡಲೆ ಗಂಗೆಯು ನದಿಗೆ ಹಾಕಿದ್ದರಿಂದ ಮರಣಹೊಂದಿದರು, ಉಳಿದ ಒಬ್ಬ ವಸುವು ಭೂಲೋಕದಲ್ಲಿ ಬದುಕಿ ಉಳಿದನು. ಸತ್ಯವ್ರತನೆಂಬ ಅವನಿಗೆ ಭೀಷ್ಮ ಎಂಬ ಹೆಸರು ಗಟ್ಟಿಯಾಗಿ ಉಳಿಯಿತು.

1.3.20_30

ಶಾಪ ಹಿಂಗಿತು ಸುರನದಿಗೆ ಬಳಿ
ಕಾ ಪರಾಕ್ರಮಿ ಭೀಷ್ಮ ಶಂತನು
ಭೂಪತಿಗೆ ಮಗನಾಗಿ ಬೆಳಗಿದನಖಿಳ ದಿಕ್ತಟವ
ಭೂಪ ಕೇಳೈ ಉಪರಿಚರ ವಸು
ರೂಪಗರ್ಭವು ಮೀನ ಬಸುರಲಿ
ವ್ಯಾಪಿಸಿತು ಜನಿಸಿದುದು ಮಿಥುನವು ಮತ್ಸ್ಯ ಜಠರದಲಿ ೨೨

1.3.20_31

ಪದ್ಯದ :ಅರ್ಥ: ಗಂಗೆಗೆ ಬ್ರಹ್ಮನ ಶಾಪವು ಉಪಶಮನವಾಯಿತು. ಅವಳು ಗಂಗಾನದಿಯಲ್ಲಿ ಲೀನವಾದಳು. ಬಳಿಕ ಆ ಪರಾಕ್ರಮಿಯಾದ ಭೀಷ್ಮನು, ಶಂತನು ರಾಜನಿಗೆ ಮಗನಾಗಿ ಎಲ್ಲ ದಿಕ್ಕುಗಳಲ್ಲಿ ಕೀರ್ತಿಪಡೆದನು. ರಾಜನೇ ಕೇಳು, ಈ ಕಡೆ, ಉಪರಿಚರ ಉಪರಿಚರ ವಸುವಿನ ರೂಪದ ಗರ್ಭವು ನದಿಗೆ ಬಿದ್ದ ಅವನ ವೀರ್ಯದಿಂದ ಮೀನಿನ ಗರ್ಭದಲ್ಲಿ ಬೆಳೆದು, ಮೀನಿನ ಗರ್ಭದಿಂದ ಅವಳಿ ಮಕ್ಕಳು ಜನಿಸಿದರು.

1.3.20_32

ವೇದವ್ಯಾಸರ ಜನನ

1.3.23

ಬಳಿಕ ಮತ್ಸ್ಯದ ಬಸಿರಲುದಿಸಿದ
ನಳಿನಲೋಚನೆ ಮತ್ಸ್ಯಗಂಧಿನಿ
ಬೆಳೆವುತಿರ್ದಳು ಸಂಗವಾಯ್ತು ಪರಾಶರವ್ರತಿಯ ||
ಬಳಿಕ ಯೋಜನಗಂಧಿಯಲ್ಲಿಂ
ದಿಳಿದನಭ್ರಶ್ಯಾಮನುರು ಪಿಂ
ಗಳ ಜಟಾಪರಿಬದ್ಧ ವೇದವ್ಯಾಸ ಮುನಿರಾಯ || ೨೩ ||

1.3.24

ದ್ವೀಪದಲ್ಲಿ ಹುಟ್ಟಿದ್ದರಿಂದ ದ್ವೈಪಾಯನ; ಕಂದು ಬಣ್ಣದವನಾದುದರಿಂದ ಕೃಷ್ಣ; ವೇದವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿದ್ದರಿಂದ ವೇದವ್ಯಾಸ. ಬಾದರಾಯಣ ಸೂತ್ರ= ಬ್ರಹ್ಮಸೂತ್ರ; ಪ್ರಾಚೀನ ಸೂತ್ರವನ್ನು ರಚಿಸಿದ್ದರಿಂದ ಬಾದರಾಯಣ
ಪದ್ಯದ :ಅರ್ಥ:ಬಳಿಕ ಮೀನಿನ ಬಸಿರಲಿ ಸುಂದರ ಕಮಲದ ಎಸಳಿನಂತಿರುವ ವಿಶಾಲ ಕಣ್ಣುಳ್ಳ ಹೆಣ್ಣುಮಗು ಮತ್ಸ್ಯಗಂಧಿನಿ ಹುಟ್ಟಿದಳು. (ಇನ್ನಂದು ಮಗು ಗಂಡು- ಅವಳ ಅಣ್ನ) ಅವಳು ದಿನೇ ದಿನೇ ಬೆಳೆಯುತ್ತಿದ್ದಳು, ಪ್ರಾಯದ ಅವಳಿಗೆ ಪರಾಶರ ಮುನಿಯ ದೇಹಸಂಗವಾಯಿತು. ಬಳಿಕ ಆನಂತರ ಆ ಮುನಿಯ ವರದಿಂದ ಅವಳ ದೇಹದ ಮೀನಿನ ವಾಸನೆ ಹೋಗಿ ಅವಳು ಸುವಾಸನೆಯ ಯೋಜನಗಂಧಿಯಾದಳು. ಅವಳ ಗರ್ಭದಿಂದ ಶ್ರೇಷ್ಠನಾದ ಕಂದು ಬಣ್ಣದ ಜಟಾಧಾರಿಯಾದ ವೇದವ್ಯಾಸ ಮುನಿರಾಯ ಹುಟ್ಟಿದನು .
ನೆನೆ ವಿಪತ್ತಿನೊಳೆಂದು ತಾಯನು
ತನುಜ ಬೀಳ್ಕೊಂಡನು ಪರಾಶರ
ಮುನಿ ಪುನಃ ಕನ್ಯತ್ವವನು ಕರುಣಿಸಿದನಾ ಸತಿಗೆ ||
ವಿನುತ ಯಮುನಾ ತೀರದಲಿ ಮಾ
ನಿನಿಯ ಕಂಡನು ಬೇಂಟೆಯಾಡುತ
ಜನಪ ಶಂತನು ಮರುಳುಗೊಂಡನು ಮದನನೆಸುಗೆಯಲಿ || ೨೪ ||

1.3.24_33

ಪದ್ಯದ :ಅರ್ಥ:ಕಷ್ಟದಲ್ಲಿ ತನ್ನನ್ನು ನೆನೆಪಿಸಿಕೊಂಡಲ್ಲಿ ಬರುವೆನು ಎಂದು ತಾಯಿಯನ್ನು ಮಗ ವೇದವ್ಯಾಸನು ಬೀಳ್ಕೊಂಡು ತಂದೆಯೊಡನೆ ಹೋದನು. ಪರಾಶರಮುನಿಯು ಬೆಸ್ತಕನ್ಯೆ ಯೋಜನಗಂಧಿಗೆ ಪುನಃ ಕನ್ಯತ್ವವನ್ನು ಕೊಟ್ಟನು. (ಸಂಭೋಗ ಮತ್ತು ಹೆರಿಗೆಯ ನಂತರ ಹೆಣ್ಣಿನ ಕನ್ಯತ್ವ ವು ಹೋಗುತ್ತದೆ). ಪವಿತ್ರವಾದ ಯಮುನಾ ತೀರದಲ್ಲಿ ಆ ಯೊಜನಗಂಧಿಯನ್ನು ಕಂಡನು ಬೇಂಟೆಯಾಡುತ್ತಾ ಬಂದ ರಾಜ ಶಂತನು ಕಂಡು ಅವಳಿಗೆ ಮನ್ಮಥನ ಬಾಣದ ಪೆಟ್ಟಿನಿಂದ (ಕಾಮ ವಶನಾಗಿ) ಮರುಳುಗೊಂಡು ಮನಸೋತನು.

1.3.25

ಪರಿಮಳದ ಬಳಿವಿಡಿದು ಬಂದೀ
ತರುಣಿಯನು ಕಂಡಾರು ನೀನೆಂ
ದರಸ ಬೆಸಗೊಳುತೆಸುವ ಕಾಮನ ಶರಕೆ ಮೈಯೊಡ್ಡಿ ||
ಅರಮನೆಗೆ ನಡೆಯೆನಲು ತಂದೆಯ
ಪರಮ ವಚನವಲಂಘ್ಯವೆನೆ ಕಾ
ತರಿಸಿ ಭಗ್ನ ಮನೋರಥನು ಮರಳಿದನು ಮಂದಿರಕೆ || ೨೫ ||

1.3.25_34

ಪದ್ಯದ :ಅರ್ಥ:ಬೆಸ್ತ ಕನ್ಯೆ ಯೋಜನಗಂಧಿಯ ಪರಿಮಳವನ್ನು ಅನುಸರಿಸಿ ಬಂದು ತರುಣಿಯನ್ನು ಕಂಡು,ಯಾರು ನೀನು ಎಂದು, ರಾಜನು ಕೇಳುತ್ತಾ, ಮನ್ಮಥನ ಬಾಣದ ಪೆಟ್ಟಿನಿಂದ ಮನಸೋತು, ಕಾಮವಶನಾಗಿ, ಮದುವೆಯಾಗುವೆನು ಅರಮನೆಗೆ ಬಾ ಎಂದನು. ಅವಳು ತಂದೆಯ ಮಾತನ್ನು ಮೀರಲಾರೆ; ಅವರ ಒಪ್ಪಿಗೆ ಪಡೆಯಿರಿ ಎಂದಳು.ಹಾಗೆ ಹೇಳಲು, ರಾಜನು ಸಂಕಟಪಟ್ಟು, ಮನದಾಸೆ ಈಡೇರದೆ, ಅರಮನೆಗೆ ಹಿಂತಿರುಗಿ ಬಂದನು.

1.3.26

ವಿರಹದಾವುಗೆ ಕಿಚ್ಚು ಭೂಮೀ
ಶ್ವರನ ಮುಸುಕಿತು ಬಲಿದವಸ್ಥೆಯ
ನರಸ ಬಣ್ಣಿಸಲರಿಯೆನೇಳೆಂಟೊಂಬತರ ಬಳಿಯ ||
ಮರಣವೀತಂಗೆಂಬ ಜನದು
ಬ್ಬರದ ಗುಜುಗುಜುವರಿದು ಯಮುನಾ
ವರನದಿಯ ತೀರಕ್ಕೆ ಬಂದನು ಭೀಷ್ಮ ವಹಿಲದಲಿ || ೨೬ ||

1.3.26_35

ಪದ್ಯದ :ಅರ್ಥ:ಪ್ರೀತಿಸಿದ ಹೆಣ್ಣಿನ ಅಗಲಿಕೆಯ, ಒಲೆಯ ಬೆಂಕಿ, ರಾಜನನ್ನು ಆವರಿಸಿತು, ರಾಜನ ತೀವ್ರವಾದ ಸ್ಥಿತಿಯನ್ನು, ಅರಸ ಜನಮೇಜಯನೇ, ನಾನು ವರ್ಣಿಸಲು ಅರಿಯೆನು ಎಂದನು ವೈಶಂಪಾಯನ; ಜನರು ಬಹಳವಾಗಿ ಗುಜುಗುಜು ಎಂದು ಗುಟ್ಟಿನಲ್ಲಿ ಇವನಿಗೆ- ರಾಜನಿಗೆ ಏಳು, ಎಂಟು ಅಥವಾ ಒಂಭತ್ತು ದಿನಗಳ ಹತ್ತಿರದಲ್ಲಿ ಮರಣವು ಬರುವುದು ಎಂದು ಮಾತನಾಡಿಕೊಳ್ಳತ್ತಿರುವುದನ್ನು ತಿಳಿದು ಭೀಷ್ಮನು ಅವಸರದಲ್ಲಿ ಪೂಜ್ಯಯಮುನಾ ನದಿಯ ತೀರಕ್ಕೆ ಬಂದನು.

1.3.26_36

ಭೀಷ್ಮ ಪ್ರತಿಜ್ಞೆ

1.3.27

ಕರೆಸಿದನು ಧೀವರನನಯ್ಯಂ
ಗರಸಿಯಾಗಲಿ ನಿನ್ನ ಮಗಳೆನ
ಲರಸಿಯಾದರೆ ಮಗಳ ಮಕ್ಕಳು ರಾಜ್ಯವಾಳುವರೆ ||
ಅರಿದು ಸಲಿಸುವಡಿದನು ನೀ ಬರಿ
ಯರಸುತನ ನಮಗೇಕೆನಲು ಧೀ
ವರನ ಮಾತಿಂಗೀತನೆಂದನು ರಾಯ ಕೇಳೆಂದ || ೨೭ ||

1.3.27_37

ಪದ್ಯದ :ಅರ್ಥ:ಯೋಜನಗಂಧಿಯ ಸಾಕುತಂದೆ ಧೀವರನೆಂಬ ಬೆಸ್ತರ ರಾಜನನ್ನು ಭೀಷ್ಮನು ಕರೆಸಿದನು, ನಿನ್ನ ಮಗಳನ್ನು ತನ್ನ ತಂದೆ ಶಂತನುವಿಗೆ ಕೊಡು, ಅವಳು ಈ ದೇಶದ ಅರಸಿಯಾಗುವಳು ಎಂದನು; ಅವಳು ರಾಣಿಯಾದರೆ ಹಿರಿಯನು ನೀನು ಇರುವಾಗ ಅವಳ ಮಕ್ಕಳಿಗೆ ರಾಜ್ಯ ಸಿಗುವುದೇ, ಎಂದನು ಧೀವರ. ಇದನ್ನು ನೀನು ತಿಳಿದೂ ಕೊಟ್ಟರೆ, ಬರಿಯ ರಾಣಿಪದವಿ ನಮಗೆ ಏಕೆ? ಬೇಡ ಎಂದನು ಬೆಸ್ತರ ಒಡೆಯ. ಧೀವರನ ಮಾತಿಗೆ ಭೀಷ್ಮನು ಎಂದುದನ್ನು, ರಾಜನೇ ಕೇಳು ಎಂದನು ಮುನಿ.

1.3.28

ಆದರಿಲ್ಲಿಂ ಮೇಲೆ ನಾರಿಯ
ರಾದವರು ಭಾಗೀರಥಿಗೆ ಸರಿ
ಮೇದಿನಿಯ ಸಲಿಸುವೆನು ನಿನ್ನಯ ಮಗಳ ಮಕ್ಕಳಿಗೆ ||
ಈ ದಿವಿಜರೀ ಹರಿ ಹರ ಬ್ರ
ಹ್ಮಾದಿ ದೇವರು ಸಾಕ್ಷಿ ಹೋಗೆಂ
ದಾ ದಯಾಂಬುಧಿ ನಗುತ ನಿನ್ನಯ ಮಗಳ ಕರೆಸೆಂದ || ೨೮ ||

1.3.28_38

ಪದ್ಯದ :ಅರ್ಥ:ಭೀಷ್ಮನು, ಇನ್ನು ಮಂದೆ ಎಲ್ಲಾ ಹೆಂಗಸರೂ ನನ್ನ ತಾಯಿಗೆ ಸಮಾನರು, ನಾನು ರಾಜ್ಯವನ್ನೂ ನಿನ್ನ ಮಗಳ ಮಕ್ಕಳಿಗೆ ಕೊಡುವೆನು. ಆ ದಯಾಸಾಗರನಾದ ಭೀಷ್ಮನು ತಂದೆಯ ಪ್ರಾಣ ಉಳಿಸಲು ಬ್ರಾಹ್ಮಣರು ಹರಿ ಹರ ಬ್ರಹ್ಮಾದಿ ದೇವರ ಸಾಕ್ಷಿಯಾಗಿ ಪ್ರತಿಜ್ಞೆ ಮಾಡಿದನು. ನಂತರ ಹೋಗು ನಿನ್ನ ಮಗಳನ್ನು ಕರೆಸು ವಿವಾಹಕ್ಕೆ ಸಿದ್ಧವಾಗಲಿ ಎಂದನು.

1.3.28_39

ಶಂತನು ಮತ್ತು ಸತ್ಯವತಿ ವಿವಾಹ; ಅವರ ಮಗ ವಿಚಿತ್ರವೀರ್ಯನಿಗೆ ಪಟ್ಟ

1.3.29

ತರಿಸಿದನು ದಂಡಿಗೆಯ ದಂಡಿಯ
ಚರರ ನೆಲನುಗ್ಗಡಣೆಯಲಿ ಸರ
ಸಿರುಹಮುಖಿಯನು ತಂದು ಮದುವೆಯ ಮಾಡಿದನು ಪಿತಗೆ ||
ಉರವಣಿಸಿ ಮಗ ನುಡಿದ ಭಾಷೆಯ
ನರಸ ಕೇಳಿದು ಬಳಿಕ ಭೀಷ್ಮಗೆ
ವರವನಿತ್ತನು ಮರಣವದು ನಿನ್ನಿಚ್ಛೆ ಹೋಗೆಂದ || ೨೯ ||

1.3.29_40

ಪದ್ಯದ :ಅರ್ಥ:ಭೀಷ್ಮನು ಪಲ್ಲಕ್ಕಿಯನ್ನು, ಅದನ್ನು ಹೊರುವವರನ್ನು ಕರೆಸಿದನು, ಚಾರರು ನದೆಯುವ ಸದ್ದಿನೊಂದಿಗೆ ಯೋಜನಗಂಧಿಯನ್ನು (ನಂತರ ಇವಳಿಗೆ ಸತ್ಯವತಿಯೆಂದು ನಾಮಕರಣವಾಗುವುದು) ಕರೆದುಕೊಂಡು ಬಂದು ತಂದೆಗೆ ವಿವಾಹ ಮಾಡಿದನು. ಮಗನು ವೀರತನದಿಂದ ಮಾಡಿದ ಪ್ರತಿಜ್ಞೆಯನ್ನು ಶಂತನು ಕೇಳಿ ತಿಳಿದುಕೊಂಡು, ಭೀಷ್ಮನಿಗೆ,'ನಿನ್ನ ಮರಣವು ನಿನ್ನ ಅಪೇಕ್ಷೆ ಇದ್ದಾಗ ಮಾತ್ರಾ ಆಗಲಿ,' ಎಂದು ವರವನ್ನು ಕೊಟ್ಟನು. ಶಂತನು ಮಗನಿಗೆ ಹೋಗು ಸುಖವಾಗಿರು ಎಂದನು.

1.3.30

ಬಳಿಕ ಯೋಜನಗಂಧಿಯಲಿ ಮ
ಕ್ಕಳುಗಳವತರಿಸಿದರು ದೀಪ್ತ
ಜ್ವಲನತೇಜನರು ಕಲ್ಪಭೂಜರು ಹಿಮಕರಾನ್ವಯಕೆ ||
ಲಲಿತ ಮಂಗಳ ಜಾತಕರ್ಮಾ
ವಳಿಯ ಚಿತ್ರಾಂಗದನನಾ ನೃಪ
ತಿಲಕ ನೆಗಳೆ ವಿಚಿತ್ರವೀರ್ಯನ ನಾಮಕರಣದಲಿ || ೩೦ ||

1.3.30_41

ಪದ್ಯದ :ಅರ್ಥ:ಬಳಿಕ ಯೋಜನಗಂಧಿಯಲ್ಲಿ ಎರಡು ಮಕ್ಕಳು ಹುಟ್ಟಿದರು. ಅವರು ಚಂದ್ರವಂಶಕ್ಕೆ ಅಗ್ನಿಯಂತೆ ತೇಜಸ್ಸುಳ್ಳವರು, ಕಲ್ಪವೃಕ್ಷದಂತಿರುವವರು. ಅವರಿಗೆ ಚಂದದಲ್ಲಿ ಜಾತಕರ್ಮ,ನಾಮಕರಣ ಮೊದಲಾದ ಸಂಸ್ಕಾರಗಳನ್ನು ಮಾಡಿದರು. ಅವರಿಗೆ ರಾಜಶ್ರೇಷ್ಠನು ಕೀರ್ತಿಶಾಲಿಗಳಾಗುವಂತೆ ಚಿತ್ರಾಂಗದ, ವಿಚಿತ್ರವೀರ್ಯ ಎಂದು ನಾಮಕರಣ ಮಾಡಿದನು.

1.3.31

ಇರಲಿರಲು ಶಂತನು ಮಹೀಪತಿ
ಸುರರೊಳಗೆ ಸೇರಿದನು ಬಳಿಕೀ
ಧರಣಿಯೊಡೆತನವಾಯ್ತು ಚಿತ್ರಾಂಗದ ಕುಮಾರಂಗೆ ||
ಅರಸ ಕೇಳೈ ಕೆಲವು ಕಾಲಾಂ
ತರದಲಾತನು ಕಾದಿ ಗಂಧ
ರ್ವರಲಿ ಮಡಿದನು ಪಟ್ಟವಾಯ್ತು ವಿಚಿತ್ರವೀರ್ಯಂಗೆ || ೩೧ ||

1.3.31_42

ಪದ್ಯದ :ಅರ್ಥ: ಕೆಲವುಕಾಲಾನಂತರ ಶಂತನುರಾಜನು ಸ್ವರ್ಗಸ್ಥನಾದನು. ಚಿತ್ರಾಂಗದ ಕುಮಾರನಿಗೆ ರಾಜಪಟ್ಟವನ್ನು ಕಟ್ಟಿದರು. ಜನಮೇಜಯ ಅರಸನೇ ಕೇಳು, ಕೆಲವು ವರ್ಷಗಳ ನಂತರ, ಆತನು ಗಂಧರ್ವರೊಡನೆ ಯುದ್ಧಮಾಡಿ ಮರಣಹೊಂದಿದನು. ನಂತರ ವಿಚಿತ್ರವೀರ್ಯನಿಗೆ ರಾಜನಾಗಿ ಪಟ್ಟಕಟ್ಟಿದರು.

1.3.32

ರಾಯ ಕೇಳೈ ಸಕಲ ರಾಜ್ಯ
ಶ್ರೀಯನಾತಂಗಿತ್ತು ಭೀಷ್ಮನು
ತಾಯ ಚಿತ್ತವ ಪಡೆದು ಮೆಚ್ಚಿಸಿದನು ಜಗತ್ರಯವ ||
ರಾಯ ಕುವರನ ಮದುವೆಗಬ್ಜದ
ಳಾಯತಾಕ್ಷಿಯರನು ವಿಚಾರಿಸಿ
ಹಾಯಿದನು ದಳದುಳದೊಳೊಂದು ವಿವಾಹ ಮಂಟಪಕೆ || ೩೨ ||

1.3.32_43

ದಳದುಳ: ಲೂಟಿ ಮಾಡುವ ಸೈನ್ಯ,- ದಳ. 4. ಉತ್ಸಾಹ.(ಕನ್ನಡ ಸಾಹಿತ್ಯ ಪರಿಷತ್ ನಿಘಂಟು)
ಪದ್ಯದ :ಅರ್ಥ: ಜನಮೇಜಯ ಅರಸನೇ ಕೇಳು, ಸಕಲ ರಾಜ್ಯವನ್ನೂ ಅತನಿಗೆ ಭೀಷ್ಮನು ಕೊಟ್ಟು, ತಾಯಿಯ ಮನಸ್ಸನ್ನೂ ಮೂರುಜಗತ್ತನ್ನೂ ಮೆಚ್ಚಿಸಿದನು. ರಾಜಕುಮಾರ ವಿಚಿತ್ರವೀರ್ಯನಿಗೆ ಮದುವೆ ಮಾಡಲು ಕನ್ಯೆಯರನ್ನು ವಿಚಾರಿಸಿ ಹುಡುಕಿ, ಕೊನೆಗೆ, ಸೈನ್ಯ ಸಮೇತ ಒಂದು ವಿವಾಹ ಮಂಟಪಕ್ಕೆ ವೇಗವಾಗಿ ಹೋದನು,

1.3.33

ಅಲ್ಲಿ ನೆರೆದಾ ಕ್ಷತ್ರವರ್ಗವ
ಚೆಲ್ಲಬಡಿದು ವಿವಾಹ ಶಾಲೆಯ
ಚೆಲ್ಲೆಗಂಗಳ ಕಮಲಮುಖಿಯರ ಮೂವರನು ಪಿಡಿದು ||
ಘಲ್ಲಣೆಯ ಖಂಡೆಯದ ಚೌಪಟ
ಮಲ್ಲ ಭೀಷ್ಮನು ಪುರಕೆ ತಂದವ
ರೆಲ್ಲರನು ತಮ್ಮಂಗೆ ಮದುವೆಯ ಮಾಡಲನುವಾದ || ೩೩ ||

1.3.33_44

ಪದ್ಯದ :ಅರ್ಥ:ಆ ವಿವಾಹ ಮಂಟಪದಲ್ಲಿ ಸೇರಿದ ಆ ಕ್ಷತ್ರಿಯರನ್ನು ಸೋಲಿಸಿ, ವಿವಾಹ ಶಾಲೆಯಲ್ಲಿದ್ದ ಚಂಚಲಕಣ್ಣಿನ ಮೂವರು ಸುಂದರಿಯರನ್ನು ಹಿಡಿದು, ಆರ್ಭಟದ ಖಡ್ಗಹಿಡಿದ ವೀರನಾದ ಭೀಷ್ಮನು ಹಸ್ತಿನಾವತಿ ನಗರಕ್ಕೆ ಅವರೆಲ್ಲರನ್ನೂ ತಮ್ಮನಿಗೆ ಮದುವೆಯ ಮಾಡಲು ಸಿದ್ಧನಾದನು.

1.3.34

ಆ ಕಮಲಲೋಚನೆಯರೊಳು ಮೊದ
ಲಾಕೆ ಭೀಷ್ಮನ ಗಂಡನೆಂದೇ
ನೂಕಿ ಭಾಷೆಯ ಮಾಡಿ ನಿಂದಳು ಛಲದ ಬಿಗುಹಿನಲಿ ||
ಆಕೆ ಮಾಣಲಿ ಮಿಕ್ಕವರು ಬರ
ಲೀ ಕುಮಾರಂಗೆಂದು ವೈದಿಕ
ಲೌಕಿಕೋತ್ಸವದಿಂದ ಮದುವೆಯ ಮಾಡಿದನು ಭೀಷ್ಮ || ೩೪ ||

1.3.34_45

ಪದ್ಯದ :ಅರ್ಥ:ಆ ಸುಂದರಯರಲ್ಲಿ ಹಿರಿಯವಳು, ಭೀಷ್ಮನು ಗೆದ್ದುದರಿಂದ ಅವನೇ ಗಂಡನಾಗಬೇಕೆಂದು ಹಟಹಿಡಿದಳು. ಅವಳು ಮದುವೆಗೆ ವಿರೋಧಿಸಲಿ, ಉಳಿದ ಇಬ್ಬರು ಈ ಕುಮಾರನಿಗೆ ವವಾಹವಾಗಲಿ ಎಂದು, ವೈದಿಕ ಮತ್ತು ಲೌಕಿಕವಾಗಿ ವಿಜೃಂಭಣೆಯಿಂದ ಭೀಷ್ಮನ ವಿಚಿತ್ರವೀರ್ಯನಿಗೆ ಮದುವೆಯನ್ನು ಮಾಡಿದನು

1.3.34_46

ಅಂಬೆಯ ಪ್ರತಿಜ್ಞೆ

1.3.35

ಅರಸ ಚಿತ್ತೈಸಂಬೆಯೆಂಬಳು
ದುರುಳೆ ಭೀಷ್ಮನ ಕೂಟವಲ್ಲದೆ
ಮರಣದೆಡೆಯಲಿ ಬೆರಸಿದಲ್ಲದೆ ಪಂಥವಿಲ್ಲೆಂದು ||
ಪರಶುರಾಮನ ಭಜಿಸಿ ಹಸ್ತಿನ
ಪುರಕೆ ತಂದಳು ಹೇಳಿಸಿದಳೀ
ಸುರನದೀನಂದನನು ಮಾಡಿದ ಪರಿಯ ಕೇಳೆಂದ || ೩೫ ||

1.3.35_47

ಪದ್ಯದ :ಅರ್ಥ:ಜನಮೇಜಯ ಅರಸ ಕೇಳು, ಅಂಬೆಯೆಂಬಳು ದುಷ್ಟೆ, ಭೀಷ್ಮನೊಡನೆ ಮದುವೆಯಾಗದಿದ್ದರೆ ಮರಣವನ್ನು ಹೊಂದುವೆ, ಇದು ತನ್ನ ಶಪಥ' -'ಇಲ್ಲದಿದ್ದರೆ ಶಪಥಕ್ಕೆ ತಪ್ಪಿದಂತೆ,' ಎಂದು ಭೀಷ್ಮನ ಗುರುವಾದ ಪರಶುರಾಮನನ್ನು ಪ್ರಾರ್ಥಿಸಿ, ಹಸ್ತಿನಾಪುರಕ್ಕೆ ಕರೆದುಕೊಂಡುಬಂದಳು, ಅವನಿಂದ ತನ್ನನ್ನು ವಿವಾಹವಾಗುಲು ಭೀಷ್ಮನಿಗೆ ಪರಷುರಾಮನಿಂದ ಹೇಳಿಸಿದಳು. ಈ ಭೀಷ್ಮನು ಮಾಡಿದ ರೀತಿಯನ್ನು, ಕೇಳು ಎಂದರು ವೈಶಂಪಅಯನರು.

1.3.36

ಸತಿಯನೊಲ್ಲೆನು ಬ್ರಹ್ಮಚರ್ಯ
ಸ್ಥಿತಿಗೆ ತಪ್ಪುವನಲ್ಲ ನೀವನು
ಚಿತವ ನೆನೆದರೆ ನಡೆಯಿ ಕೊಟ್ಟೆನು ಕಾಳಗವ ನಿಮಗೆ ||
ವ್ರತದನಿಧಿ ಕುರುಭೂಮಿಯಲಿ ಶರ
ತತಿಯಲಿಪ್ಪತ್ತೊಂದು ದಿನ ಭೃಗು
ಸುತನೊಡೆನೆ ಕಾದಿದನು ವಿರಥನ ಮಾಡಿದನು ಭೀಷ್ಮ || ೩೬ ||

1.3.36_48

ಪದ್ಯದ :ಅರ್ಥ:ಅಂಬೆಯನ್ನು ಪತ್ನಿಯಾಗಿ ಸ್ವೀಕರಿಸಲಾರೆನು. ಬ್ರಹ್ಮಚರ್ಯ ವೃತಕ್ಕೆ, ತಪ್ಪುವವನಲ್ಲ; ನೀವು ಅದರ್ಮವಾದುದನ್ನು ಹೇಳಿದರೆ, ಅದನ್ನು ಪಾಲಿಸಲು ಸಾದ್ಯವಿಲ್ಲ, ನಿಮ್ಮ ಅಪೇಕ್ಷೆಯಂತೆ ಯುದ್ಧಕ್ಕೆ ಸಿದ್ಧನಾಗಿದ್ದೇನೆ ಎಂದನು ಭೀಷ್ಮ. ನಿಮ್ಮೊಡನೆ ಕುರುಕ್ಷೇತ್ರದಲ್ಲಿ ಯುದ್ಧವನ್ನು ಮಾಡವೆನು ಎಂದು ವ್ರತವನ್ನೇ ಸಂಪತ್ತಾಗಿ ಉಳ್ಳ ಭೀಷ್ಮ ಹೇಳಿದ. ಪರಷುರಾಮರೊಡನೆ ಬಿಲ್ಲು ಯುದ್ಧದಲ್ಲಿ ಇಪ್ಪತ್ತೊಂದು ದಿನ ಯುದ್ಧಮಾಡಿದನು. ಪರಷುರಾಮರ ರಥವನ್ನು ನಾಶಮಾಡಿ ಅವರು ವಿರಥರಾಗಿ ಸೋಲುವಂತೆ ಮಾಡಿದನು.

1.3.37

ನುಡಿಯ ಭಂಗಿಸಲೆಂದು ಗುರುವವ
ಗಡಿಸಿ ಹೊಕ್ಕರೆ ಸರಳಮೊನೆಯಲಿ
ಕೊಡಹಿ ಬಿಸುಟನು ಬಿಟ್ಟುದಿಲ್ಲ ಮಹಾವ್ರತಸ್ಥಿತಿಯ ||
ನುಡಿಯ ಮೀರದ ನಮ್ಮ ಶಿಷ್ಯನ
ನೊಡಬಡಿಸಿಕೊಳ್ಳೆಂದು ನಾರಿಗೆ
ನುಡಿದು ತನ್ನಾಶ್ರಮಕೆ ಸರಿದನು ಪರಶುರಾಮಮುನಿ || ೩೭ ||

1.3.37_49

ಪದ್ಯದ :ಅರ್ಥ: ತನ್ನ ಪ್ರತಿಜ್ಞೆಯನ್ನು ಬಿಡುವಂತೆ ಮಾಡಲು ಗುರುವೇ ಹೇಳಿದರೂ, ಗುರುವನ್ನೇ ಎದುರಿಸಿ, ಯುದ್ಧಕ್ಕೆ ಬಂದು ಬಿಲ್ಲು ಯುದ್ಧದಲ್ಲಿ ಸೋಲಿಸಿಬಿಟ್ಟನು; ಆದರೆ ಅವನು ತನ್ನ ಬ್ರಹ್ಮಚರ್ಯದ ಮಹಾವ್ರತಸ್ಥಿತಿಯನ್ನು ಬಿಡಲಿಲ್ಲ. ಪ್ರತಿಜ್ಞೆಗೆ ತಪ್ಪದ ತನ್ನ ಶಿಷ್ಯ ಭೀಷ್ಮನನ್ನು, ನೀನೇ ಮದುವೆಗೆ ಒಪ್ಪಿಸಿಕೊ ಎಂದು ಅಂಬೆಗೆ ಹೇಳ, ಪರಶುರಾಮಮುನಿ ತನ್ನ ಆಶ್ರಮಕ್ಕೆ ಹೋದರು.

1.3.37_50

ಅಂಬೆ ಭೀಷ್ಮನ ಬೈದು ಕಂಬನಿ
ದುಂಬಿ ಹೋದಳು ತಪಕೆ ಬಳಿಕೀ
ಯಂಬಿಕೆಯನಂಬಾಲೆಯನು ರಮಿಸಿದನು ನೃಪಸೂನು
ಬೆಂಬಲಕೆ ಕಲಿಭೀಷ್ಮನಿರೆ ಚತು
ರಂಬುಧಿಯ ಮಧ್ಯದ ನೃಪಾಲ ಕ
ದಂಬವೀತಂಗಿದಿರೆ ಸಲಹಿದನಖಿಳ ಭೂತಳವ ೩೮

1.3.37_51

ಪದ್ಯದ :ಅರ್ಥ: ಅಂಬೆಯು ಭೀಷ್ಮನನ್ನು ತನ್ನಜೀವನವನ್ನು ಹಾಳುಮಾಡಿದೆ ಎಂದು ನಿಂದಿಸಿ, ಕಣ್ಣಲ್ಲಿ ನೀರು ತುಂಬಿಕೊಂಡು, ತಪಸ್ಸಿಗೆ ಹೋದಳು. ಬಳಿಕ ರಾಜಕುಮಾರ ವಿಚಿತ್ರವೀರ್ಯನು ಅಂಬಿಕೆಯನ್ನೂ ಅಂಬಾಲೆಯರನ್ನೂ ಪ್ರೀತಿಯಿಂದ ನೋಡಿಕೊಂಡನು. ಬೆಂಬಲಕ್ಕೆ ಶೂರನಾದ ಭೀಷ್ಮನು ಇರುವಾಗ, ನಾಲ್ಕು ಸಮುದ್ರವು ಸುತ್ತುವರಿದ ಭೂಮಿಯ ರಾಜರೆಂಬ ಮರಗಳು ಇವನಿಗೆ ಎದುರು ನಿಲ್ಲಬಲ್ಲರೇ? ಎಲ್ಲರೂ ಶರಣಾಗತರಾದರು. ವಿಚಿತ್ರವೀರ್ಯ ರಾಜನು ಭೂಮಂಡಲವೆಲ್ಲವನ್ನೂ ವಶಪಡಿಸಿಕೊಂಡು ರಾಜ್ಯವಾಳಿದನು.
♦
♦♣♣♣♣♣♣♣♣♣♣♣♣♣♣♣♣♣♣♣♦
ॐ

1.3.37_52

ನೋಡಿ

1.3.37_53

*ಕುಮಾರವ್ಯಾಸ ಭಾರತ
* ಕುಮಾರವ್ಯಾಸಭಾರತ-ಸಟೀಕಾ
* ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೧)
* ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೨)
* ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೩)
*ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೪)
*ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೫)
*ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೬)
*ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೭)
*ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೮)
*ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೯)
*ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೧೦)

1.3.37_54

ಪರಿವಿಡಿ

1.3.37_55

ಉಲ್ಲೇಖ