Karnata Bharata Kathamanjari 1.4: ಸಟೀಕಾ (ಪರ್ವ-೧::ಸಂಧಿ-೩)
Karṇāṭa Bhārata Kathāmañjarī 1.4
- Language
- Kannada
ಸಟೀಕಾ (ಪರ್ವ-೧::ಸಂಧಿ-೩)
1.4.p1
<ಕುಮಾರವ್ಯಾಸಭಾರತ-ಸಟೀಕಾ
1.4.p2
ಕುಮಾರವ್ಯಾಸ ಭಾರತ/ಸಟೀಕಾ (೧.ಆದಿಪರ್ವ::ಸಂಧಿ-೩)
1.4.p3
ಆದಿಪರ್ವ - ಮೂರನೆಯ ಸಂಧಿ:
1.4.p4
ಸೂಚನೆ:
1.4.p5
ಚಂಡಮುನಿ ಮಂತ್ರಾಹ್ವಯದಿ ಬರೆ
ಚಂಡಕರ ತತ್ತೇಜನಾಹವ
ಚಂಡ ವಿಕ್ರಮನವನಿಯಲಿ ಜನಿಸಿದನು ಕಲಿಕರ್ಣ ||
1.4.p6
ಧೃತರಾಷ್ಟ್ರ - ಪಾಂಡು - ವಿದುರರ ಜನನ
1.4.1
ಅರಸ ಕೇಳೈ ಕೆಲವು ಕಾಲಾಂ
ತರಕೆ ನಿಮ್ಮ ವಿಚಿತ್ರವೀರ್ಯನು
ನೆರೆದನಮರಸ್ತ್ರೀಯರಲಿ ಬಳಿಕೀ ನದೀಸುತನ ||
ಕರೆದು ನುಡಿದಳು ಮಗನೆ ರಾಜ್ಯವ
ಧರಿಸು ನೀನಿನ್ನುತ್ತರದ ಹಿಮ
ಕರಕುಲವ ಬೆಳಗೆಂದು ಯೋಜನಗಂಧಿ ಬೆಸಸಿದಳು || ೧ ||
1.4.2
ತಾಯೆ ನಿಮ್ಮೋಪಾದಿ ರಾಜ್ಯ
ಸ್ತ್ರೀಯಳೆಂದಾ ನುಡಿಯೊಳಗೆ ಗಾಂ
ಗೇಯ ಮುಳುಗನು ಭೀಷ್ಮವಚನಕೆ ಬೇರೆ ಮೊಳೆಯುಂಟೆ ||
ಕಾಯಕಲ್ಪ ಸುಖಕ್ಕೆ ಘನ ನಿ
ಶ್ರೇಯಸವ ಕೆಡಿಸುವೆನೆ ಯೆಲವದ
ಕಾಯಿಗೋಸುಗ ಕಲ್ಪವೃಕ್ಷವ ಕಡಿವನಲ್ಲೆಂದ || ೨ ||
1.4.3
ಮರುಗಿ ಯೋಜನಗಂಧಿ ಚಿಂತೆಯ
ಸೆರೆಗೆ ಸಿಲುಕಿದಳೊಂದು ರಾತ್ರಿಯೊ
ಳರಿದು ನೆನೆದಳು ಪೂರ್ವಸೂಚಿತ ಪುತ್ರಭಾಷಿತವ ||
ಮುರಿದ ಭರತಾನ್ವಯದ ಬೆಸುಗೆಯ
ತೆರನು ತೋರಿತೆ ಪುಣ್ಯವೆನುತೆ
ಚ್ಚರಿತು ನುಡಿದಳು ಮಗನೆ ವೇದವ್ಯಾಸ ಬಹುದೆಂದು || ೩ ||
1.4.4
ಕೆಂಜೆಡೆಯ ಕೃಷ್ಣಾಜಿನದ ಮೊನೆ
ಮುಂಜೆರಗಿನುಡಿಗೆಯ ಬಲಾಹಕ
ಪುಂಜಕಾಂತಿಯ ಪಿಂಗತರಮುಖ ಕೇಶದುನ್ನತಿಯ ||
ಕಂಜನಾಭನ ಮೂರ್ತಿ ಶೋಭಾ
ರಂಜಿತನು ಜನದುರಿತ ದಶಮದ
ಭಂಜಕನು ತಾಯ್ಗೆರಗಿ ನುಡಿದನು ವ್ಯಾಸಮುನಿರಾಯ || ೪||
1.4.5
ನೆನೆದಿರೇನೌತಾಯೆ ಕೃತ್ಯವ
ನೆನಗೆ ಬೆಸಸೆನೆ ಮಗನೆ ಭಾರತ
ವಿನುತಕುಲ ಜಲರಾಶಿಯೆಡೆವರಿತುದು ವಿಚಿತ್ರನಲಿ ||
ತನುಜ ನೀನೇ ಬಲ್ಲೆಯೆನೆ ಕೇಳ್
ಜನನಿ ನಿಮ್ಮಡಿಯಾಜ್ಞೆಯಲಿ ಸಂ
ಜನಿಪುವೆನು ವೈಚಿತ್ರವೀರ್ಯ ಕ್ಷೇತ್ರದಲಿ ಸುತರ || ೫ ||
1.4.6
ಎಂದು ಬಳಿಕೇಕಾಂತ ಭವನದೊ
ಳಂದು ಮುನಿಯಿರಲಂಬಿಕೆಯನರ
ವಿಂದಮುಖಿಯಟ್ಟಿದಳು ಸೊಸೆಯನು ಮುನಿಯ ಪೂರೆಗಾಗಿ ||
ಬಂದು ಮುನಿಪನ ದಿವ್ಯರೂಪವ
ನಿಂದುಮುಖಿ ಕಂಡಕ್ಷಿಗಳ ಭಯ
ದಿಂದ ಮುಚ್ಚಿದಳಾಕೆ ತಿರುಗಿದಳರಸ ಕೇಳೆಂದ || ೬ ||
1.4.7
ಬಳಿಕಲಂಬಾಲಿಕೆಯನಲ್ಲಿಗೆ
ಕಳುಹಲಾಕೆಗೆ ಭಯದಿ ಮುಖದಲಿ
ಬಿಳುಪು ಮಸಗಿತು ಮುನಿಯ ರೌದ್ರಾಕಾರದರ್ಶನದಿ ||
ಲಲನೆ ಮರಳಿದಳೊಬ್ಬ ಸತಿಯನು
ಕಳುಹಲಾ ವಧು ಚಪಲದೃಷ್ಟಿಯೊ
ಳಳುಕದೀಕ್ಷಿಸಲಾಯ್ತು ಗರ್ಭಾದಾನವನಿಬರಿಗೆ || ೭ ||
1.4.8
ಬಂದು ಮುನಿಪತಿ ತಾಯ್ಗೆ ಕೈಮುಗಿ
ದೆಂದನಂಬಿಕೆಯಲ್ಲಿ ಜನಿಸುವ
ನಂದನನು ಜಾತ್ಯಂಧನಂಬಾಲಿಕೆಗೆ ಪಾಂಡುಮಯ ||
ಬಂದ ಬಳಿಕಿನ ಚಪಲೆಗತಿಬಲ
ನೆಂದು ಹೇಳಿದು ತನಗೆ ನೇಮವೆ
ಯೆಂದು ತನ್ನಾಶ್ರಮಕೆ ಸರಿದನು ಬಾದರಾಯಣನು || ೮ ||
1.4.9
ತುಂಬಿದುದು ನವಮಾಸ ಜನಿಸಿದ
ನಂಬಿಕೆಯ ಬಸುರಿನಲಿ ಸೂನು ಗ
ತಾಂಬಕನು ಮಗನಾದನಂಬಾಲಿಕೆಗೆ ಪಾಂಡುಮಯ ||
ಚುಂಬಿಸಿತು ಪರಿತೋಷ ನವ ಪುಳ
ಕಾಂಬುಗಳು ಜನಜನಿತವದನೇ
ನೆಂಬೆನುತ್ಸವವನು ಕುಮಾರೋದ್ಭವದ ವಿಭವದಲಿ || ೯ ||
1.4.10
ಜಾತಕರ್ಮಾದಿಯನು ಪಾರ್ಥಿವ
ಜಾತಿ ವಿಧಿವಿಹಿತದಲಿ ಗಂಗಾ
ಜಾತ ಮಾಡಿಸಿ ತುಷ್ಟಿಪಡಿಸಿದ ನಿಖಿಳ ಯಾಚಕರ ||
ಈತನೇ ಧೃತರಾಷ್ಟ್ರನೆರಡನೆ
ಯಾತ ಪಾಂಡು ವಿಲಾಸಿನೀ ಸಂ
ಭೂತನೀತನು ವಿದುರನೆಂದಾಯ್ತುವರಿಗಭಿಧಾನ || ೧೦ ||
1.4.11
ಬೆಳೆವುತಿರ್ದರು ಹರಿಣಪಕ್ಷದ
ನಳಿನರಿಪುವಿನವೊಲ್ ಕುಮಾರರು
ಕುಲವಿಹಿತ ಚೌಲೋಪನಯನವನಿಬ್ಬರಿಗೆ ರಚಿಸಿ ||
ಕಲಿತ ವಿದ್ಯರ ಮಾಡಿ ತಾಯು
ಮ್ಮಳಿಸದಂತಿರೆ ಸೋಮವಂಶದ
ಬೆಳವಿಗೆಯನೇ ಮಾಡಿಕೊಂಡಾಡಿದನು ಕಲಿಭೀಷ್ಮ || ೧೧ ||
1.4.12
ಧಾರುಣೀಪತಿ ಚಿತ್ತವಿಸು ಗಾಂ
ಧಾರದೇಶದ ಸುಬಲರಾಜ ಕು
ಮಾರಿ ಕುಲವಧುವಾದಳಾ ಧೃತರಾಷ್ಟ್ರ ಭೂಪತಿಗೆ ||
ನಾರಿಯರೊಳುತ್ತಮೆಯಲಾ ಗಾಂ
ಧಾರಿಯೆನಿಸಿ ಪತಿವ್ರತಾ ವಿ
ಸ್ತಾರಗುಣದಲಿ ಮೆರೆದಳಬಲೆ ಸಮಸ್ತಜನ ಹೊಗಳೆ || ೧೨ ||
1.4.13
ಇತ್ತ ಕುಂತೀಭೋಜನನೆಂಬ ನೃ
ಪೋತ್ತಮನ ಭವನದಲಿ ಮುರಹರ
ನತ್ತೆ ಬೆಳೆವುತ್ತಿರ್ದಳಾ ವಸುದೇವನೃಪನನುಜೆ ||
ಹೆತ್ತವರಿಗೋಲೈಸುವರಿಗೆ ಮ
ಹೋತ್ತಮರಿಗುಳಿದಖಿಳ ಲೋಕದ
ಚಿತ್ತಕಹುದೆನೆ ನಡೆವ ಗುಣದಲಿ ಮೆರೆದಳಾ ಕುಂತಿ || ೧೩ ||
1.4.14
ಒಂದು ದಿನ ದೂರ್ವಾಸಮುನಿ ನೃಪ
ಮಂದಿರಕೆ ಬರಲಾ ಮಹೀಪತಿ
ಬಂದ ಬರವಿನಲವರ ಮರೆದನು ರಾಜಕಾರ್ಯದಲಿ ||
ಇಂದು ಕುಂತೀಭೋಜನೊಡೆತನ
ಬೆಂದುಹೋಗಲಿಯೆಂಬ ಶಾಪವ
ನಿಂದುಮುಖಿ ನಿಲಿಸಿದಳು ಹೊರಳಿದಳವರ ಚರಣದಲಿ || ೧೪ ||
1.4.15
ತರುಣಿಯೊಡಗೊಂಡೊಯ್ದು ಕನ್ಯಾ
ಪರಮ ಭವನದಲಾ ಮುನಿಯನುಪ
ಚರಿಸಿದಳು ವಿವಿಧಾನ್ನ ಪಾನ ರಸಾಯನಂಗಳಲಿ ||
ಹರ ಮಹಾದೇವೀ ಮಗುವಿನಾ
ದರಣೆಗೀ ವಿನಯೋಪಚಾರಕೆ
ಹಿರಿದು ಮೆಚ್ಚಿದೆನೆಂದು ತಲೆದೂಗಿದನು ದೂರ್ವಾಸ || ೧೫ ||
1.4.16
ಮಗಳೆ ಬಾ ಕೊಳ್ ಐದು ಮಂತ್ರಾ
ಳಿಗುಳನಿವು ಸಿದ್ದಪ್ರಯೋಗವು
ಸೊಗಸು ದಿವಿಜರೊಳಾರ ಮೇಲುಂಟವರ ನೆನೆ ಸಾಕು ||
ಮಗನು ಜನಿಸುವನೆಂದು ಮುನಿ ಕುಂ
ತಿಗೆ ರಹಸ್ಯದೊಳರುಹಿ ಮುನಿ ಮೌ
ಳಿಗಳ ಮಣಿ ಪರಿತೋಷದಲಿ ಸರಿದನು ನಿಜಾಶ್ರಮಕೆ || ೧೬ ||
1.4.17
ಮಗುವುತನದಲಿ ಬೊಂಬೆಯಾಟಕೆ
ಮಗುವನೇ ತಹೆನೆಂದು ಬಂದಳು
ಗಗನನದಿಯಲಿ ಮಿಂದಳುಟ್ಟಳು ಲೋಹಿತಾಂಬರವ ||
ವಿಗಡಮುನಿಪನ ಮಂತ್ರವನು ನಾ
ಲಗೆಗೆ ತಂದಳು ರಾಗರಸದಲಿ
ಗಗನಮಣಿಯನು ನೋಡಿ ಕಣ್ಮುಚ್ಚಿದಳು ಯೋಗದಲಿ || ೧೭ ||
1.4.18
ಅರಸ ಕೇಳ್ ಮುನಿಯಿತ್ತ ಮಂತ್ರಾ
ಕ್ಷರದ ಕರಹಕೆ ತಳುವಿದರೆ ದಿನ
ಕರನ ತೇಜವ ಕೊಂಬನೇ ದೂರ್ವಾಸ ವಿಗಡನಲ ||
ಧರೆಗೆ ಬಂದನು ಸೂರ್ಯನಾತನ
ಕಿರಣ ಲಹರಿಯ ಹೊಯ್ಲಿನಲಿ ಸರ
ಸಿರುಹಮುಖಿ ಬೆಚ್ಚಿದಳು ಬಿಜಯಂಗೈಯಿ ನೀವೆನುತ ||೧೮ ||
1.4.18_7
ಸೂರ್ಯನು ಕುಂತಿಗೆ ಮಗನನ್ನು ಕರುಣಿಸಿದನು
1.4.19
ಎನ್ನಬಾರದಲೇ ಋಷಿಪ್ರತಿ
ಪನ್ನ ಮಂತ್ರವಮೋಘವದರಿಂ
ದೆನ್ನ ತೂಕದ ಮಗನಹನು ನೀನಂಜಬೇಡೆನುತ ||
ಕನ್ನಿಕೆಯ ಮುಟ್ಟಿದನು ಮುನ್ನಿನ
ಕನ್ನೆತನ ಕೆಡದಿರಲಿಯೆನುತವೆ
ತನ್ನ ರಥವಿದ್ದೆಡೆಗೆ ರವಿ ತಿರುಗಿದನು ವಹಿಲದಲಿ || ೧೯ ||
1.4.20
ಅರಸ ಕೇಳ್ ಆಶ್ಚರ್ಯವನು ತಾ
ವರೆಯ ಮಿತ್ರನ ಕರಗಿ ಕರುವಿನೊ
ಳೆರೆದರೆಂದೆನೆ ಥಳಥಳಿಸಿ ತೊಳಗುವ ತನುಚ್ಛವಿಯ ||
ಕುರುಳುದಲೆ ನಿಟ್ಟೆಸಳುಗಂಗಳ
ಚರಣ ಕರಪಲ್ಲವದ ಕೆಂಪಿನ
ವರಕುಮಾರನ ಕಂಡು ಬೆರಗಿನೊಳಿರ್ದಳಾ ಕುಂತಿ || ೨೦ ||
1.4.21
ಅಳುವ ಶಿಶುವನು ತೆಗೆದು ತೆಕ್ಕೆಯ
ಪುಳಕ ಜಲದಲಿ ನಾದಿ ಹರುಷದ
ಬಳಿಯ ಲಜ್ಜೆಯ ಭಯದ ಹೋರಟೆಗಳುಕಿ ಹಳುವಾಗಿ ||
ಕುಲದ ಸಿರಿ ತಪ್ಪುವುದಲಾ ಸಾ
ಕಿಳುಹ ಬೇಕೆಂದೆನುತ ಗಂಗಾ
ಜಲದೊಳಗೆ ಹಾಯ್ಕಿದಳು ಜನದಪವಾದ ಭೀತಿಯಲಿ || ೨೧ ||
1.4.22
ತಾಯೆ ಬಲ್ಲಂದದಲಿ ಕಂದನ
ಕಾಯಿ ಮೇಣ್ ಕೊಲ್ಲೆನುತ ಕಮಲ ದ
ಳಾಯತಾಕ್ಷಿ ಕುಮಾರಕನ ಹಾಯ್ಕಿದಳು ಮಡುವಿನಲಿ ||
ರಾಯ ಕೇಳೈ ಸಕಲ ಲೋಕದ
ತಾಯಲಾ ಜಾಹ್ನವಿ ತರಂಗದಿ
ನೋಯಲೀಯದೆ ಮುಳುಗಲೀಯದೆ ಚಾಚಿದಳು ತಡಿಗೆ || ೨೨ ||
1.4.23
ಕೆದರಿ ಕಾಲಲಿ ಮಳಲ ರಾಶಿಯ
ನೊದೆದು ಕೈಗಳ ಕೊಡಹಿ ಭೋಯೆಂ
ದೊದದುರುತಿರ್ದನು ಶಿಶುಗಳರಸನು ರವಿಯನೀಕ್ಷಿಸುತ ||
ಇದನು ಕಂಡನು ಸೂತನೊಬ್ಬನು
ಮುದದ ಮದದಲಿ ತನ್ನ ಮರೆದು
ಬ್ಬಿದನಿದೆತ್ತಣ ನಿಧಿಯೊ ಶಿವಶಿವಯೆಂದು ನಡೆತಂದ || ೨೩ ||
1.4.24
ತರಣಿಬಿಂಬದ ಮರಿಯೊ ಕೌಸ್ತುಭ
ವರಮಣಿಯ ಖಂಡದ ಕಣಿಯೊ ಮ
ರ್ತ್ಯರಿಗೆ ಮಗನಿವನಲ್ಲ ಮಾಯಾ ಬಾಲಕನೊ ಮೇಣು ||
ಇರಿಸಿ ಹೋದವಳಾವಳೋ ಶಿಶು
ವರನ ತಾಯ್ ನಿರ್ಮೋಹೆಯೈ ಹರ
ಹರ ಮಹಾದೇವೆನುತ ತೆಗೆದಪ್ಪಿದನು ಬಾಲಕನ || ೨೪ ||
1.4.24_8
ಸೂತನ ಮನೆಯಲ್ಲಿ ಕರ್ಣ ಬೆಳೆಯುತ್ತಿದ್ದನು
1.4.25
ತೃಣವಲಾ ತ್ರೈಲೋಕ್ಯ ರಾಜ್ಯವ
ಗಣಿಸುವೆನೆ ತಾನಿನ್ನು ತನ್ನಲಿ
ಋಣವಿಶೇಷವಿದೇನೊ (ಪಾ-; ಋಣವಿಶೇಷವಿದೇನೋ) ಮೇಣ್ ಈ ಬಾಲಕಂಗೆನುತ||
ಕ್ಷಣದೊಳೊದಗುವ ಬಾಷ್ಪ ಲುಳಿತೇ
ಕ್ಷಣನು ಬಂದನು ಮನೆಗೆ ಪರುಷದ
ಕಣಿಯ ತಂದೆನು ರಮಣಿ ಕೊಳ್ಳೆಂದಿತ್ತನರ್ಭಕನ || ೨೫ ||
1.4.26
ಆದರಿಸಿದನು ರಾಧೆಯಲಿ ಮಗ
ನಾದನೆಂದುತ್ಸವವ ಮಾಡಿ ಮ
ಹೀ ದಿವಿಜರನು ದಾನ ಮಾನಂಗಳಲಿ ಸತ್ಕರಿಸಿ ||
ಆ ದಿನಂ ಮೊದಲಾಗಿ ಉಧ್ಬವ
ವಾದುದವನೈಶ್ವರ್ಯ ಉನ್ನತ
ವಾದನಾ ರವಿನಂದನನು ರಾಧೇಯ ನಾಮದಲಿ || ೨೬ ||
1.4.27
ಹೊಳೆ ಹೊಳೆದು ಹೊಡೆಮರಳಿ ನಡು ಹೊ
ಸ್ತಿಲಲಿ ಮಂಡಿಸಿ ಬೀದಿ ಬೀದಿಗ
ಳೊಳಗೆ ಸುಳಿವರ ಸನ್ನೆಯಲಿ ಕರೆಕರೆದು ನಸುನಗುತ ||
ಲಲಿತರತ್ನದ ಬಾಲದೊಡಿಗೆಯ
ಕಳಚಿ ಹಾಯ್ಕುವ ಹೆಸರು ಜಗದಲಿ
ಬೆಳೆವುತಿರ್ದುದು ಹಬ್ಬಿದುದು ಜನಜನದ ಕರ್ಣದಲಿ || ೨೭ ||
1.4.28
ಅರಸ ಕೇಳೈ ಕರ್ಣ ಪಾರಂ
ಪರೆಯೊಳೀತನ ಹೆಸರು ಜಗದಲಿ
ಹರಿದುದಲ್ಲಿಂ ಬಳಿಕಲೀತನ ನಾಮಕರಣದಲಿ ||
ಸುರನರೋರಗ ನಿಕರವೇ ವಿ
ಸ್ತರಿಸಿದುದು ಕರ್ಣಾಭಿಧಾನವ
ಗುರುಪರಾಕ್ರಮಿ ಬೆಳೆವುತಿರ್ದನು ಸೂತಭವನದಲಿ || ೨೮ ||
1.4.28_9
♦
♦♣♣♣♣♣♣♣♣♣♣♣♣♣♣♣♣♣♣♣♦
ॐ
1.4.28_10
ನೋಡಿ
1.4.28_11
*ಕುಮಾರವ್ಯಾಸ ಭಾರತ
* ಕುಮಾರವ್ಯಾಸಭಾರತ-ಸಟೀಕಾ
* ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೧)
* ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೨)
* ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೩)
*ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೪)
*ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೫)
*ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೬)
*ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೭)
*ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೮)
*ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೯)
*ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೧೦)
1.4.28_12
ಪರಿವಿಡಿ
1.4.28_13
ಉಲ್ಲೇಖ