Pramāṇa · Search · About · API

Karnata Bharata Kathamanjari 1.48: ಸಟೀಕಾ (೧೦.ಗದಾಪರ್ವ::ಸಂಧಿ-೨)

Karṇāṭa Bhārata Kathāmañjarī 1.48

Language
Kannada

ಸಟೀಕಾ (೧೦.ಗದಾಪರ್ವ::ಸಂಧಿ-೨)

1.48.p1

<ಕುಮಾರವ್ಯಾಸ ಭಾರತ
<ಕುಮಾರವ್ಯಾಸಭಾರತ-ಸಟೀಕಾ

1.48.p2

ಗದಾಪರ್ವ: ೨ ನೆಯ ಸಂಧಿ

1.48.p3

ಸೂಚನೆ

1.48.p4

ಸೂಚನೆ~ಸೂ.
ಸಕಲಬಲ ನುಗ್ಗಾಯ್ತು ಸಮಸ
ಪ್ತಕರು ಮಡಿದರು ಪಾರ್ಥಶರದಲಿ
ಶಕುನಿಯನು ಸಂಗ್ರಾಮದಲಿ ಸೀಳಿದನು ಸಹದೇವ [ಸೂ.]

1.48.p5

ॐ

1.48.p6

ಸಂಜಯ ಕೌರವನನ್ನು ಹುಡುಕಿದುದು

1.48.1

ಕೇಳು ಜನಮೇಜಯ ಧರಿತ್ರೀ
ಪಾಲ ಸಂಜಯ ಬಂದು ಕುರುಭೂ
ಪಾಲಕನನರಸಿದನು ಸಂಗರ ರಂಗಭೂಮಿಯಲಿ |
ಮೇಲುಸುಯಿಧಾನದ ತುರಂಗಮ
ಜಾಲ ಸಹಿತಗಲದಲಿ ಕುರುಭೂ
ಪಾಲನಾವೆಡೆಯೆನುತ ಬೆಸಗೊಳುತರಸಿದನು ನೃಪನ || ೧ ||

1.48.2

ವಂದಿಗಳ ನಿಸ್ಸಾಳಬಡಿಕರ
ಮಂದಿ ಹಡಪಿಗ ಚಾಹಿ ಸೂತರ
ಸಂದಣಿಗಳೌಷಧಿಕ ಹಯಗಜಸಂವಿಧಾಯಕರು |
ನಿಂದುದದು ಸಂಖ್ಯಾತವಿನಿಬರ
ನಂದು ಸಂಜಯ ಕರೆದು ಕೇಳಿದ
ನಿಂದುಕುಲಸಂಭವನ ಕಂಡಿರೆ ಕೌರವೇಶ್ವರನ || ೨ ||

1.48.3

ಕೂಡೆ ಸಂಜಯನರಸಿದನು ನಡೆ
ಜೋಡಿನವು ನಾನೂರು ಕುದುರೆಯ
ಕೂಡಿ ಕೌರವನೃಪನ ಕಾಣದೆ ಕಳನ ಚೌಕದಲಿ |
ನೋಡುತಿರೆ ಸಾತ್ಯಕಿ ಚತುರ್ಬಲ
ಗೂಡಿ ಕವಿದನು ಹಯಬಲವ ಹುಡಿ
ಮಾಡಿದನು ನಾನೂರ ಕೊಂದನು ಸರಳ ಸಾರದಲಿ || ೩ ||

1.48.4

ಹಿಡಿದು ಸಂಜಯನನು ವಿಭಾಡಿಸಿ
ಕೆಡಹಿದನು ಬಲುರಾವುತರನವ
ಗಡವ ಕೇಳಿದು ದ್ರೋಣಸುತ ಕೃತವರ್ಮ ಗೌತಮರು |
ಫಡಫಡೆಲವೊ ಸಂಜಯನ ಬಿಡು
ಬಿಡು ಮದೀಯ ಮಹಾಶರಕೆ ತಲೆ
ಗೊಡುವಡಿದಿರಾಗೆನುತ ತರುಬಿದರಿವರು ಸಾತ್ಯಕಿಯ || ೪ ||

1.48.4_7

ಸಾತ್ಯಕಿಯ ಯುದ್ಧ - ಕೌರವನ ಕಣ್ಮರೆ

1.48.5

ದ್ರೋಣಸುತ ಕುರುಪತಿಯ ಸಮರಕೆ
ಹೂಣಿಗನಲೇ ಬಲ್ಲೆವಿದರಲಿ
ಬಾಣವಿದ್ಯೆಯ ಬೀರಿ ಬಿಡಿಸುವರಿವರು ಸಂಜಯನ |
ಕಾಣಲಹುದಂತಿರಲಿ ನಿಮಗೀ
ಕೇಣದಲಿ ಫಲವಿಲ್ಲ ಕೃಪ ತ
ನ್ನಾಣೆ ನೀ ಮರುಳೆಂದು ಸಾತ್ಯಕಿ ಸುರಿದನಂಬುಗಳ || ೫ ||

1.48.5_8

ಕೋಡಕಯ್ಯಲಿ ತಿರುಗಿ ಕೃಪ ಕೈ
ಮಾಡಿದನು ಕೃತವರ್ಮನೆಸುಗೆಯ
ತೋಡುಬೀಡಿನ ಭರವ ಬಲ್ಲವನಾರು ಸಮರದಲಿ
ನೋಡಲೀತನ ಗರುಡಿಯಲಿ ಶ್ರವ
ಮಾಡಿದವರೇ ಮೂರು ಜಗವ ವಿ
ಭಾಡಿಸುವರೆನೆ ಹೊಗಳ್ವನಾವನು ದ್ರೋಣನಂದನನ ೬

1.48.7

ಎಚ್ಚನಶ್ವತ್ಥಾಮನಾ ಕೃಪ
ನೆಚ್ಚನಾ ಕೃತವರ್ಮಕನು ಕವಿ
ದೆಚ್ಚನೀ ಶರಜಾಲ ಜಡಿದವು ಕಿಡಿಯ ಗಡಣದಲಿ |
ಬೆಚ್ಚಿದನೆ ಬೆದರಿದನೆ ಕೈಕೊಂ
ಡೆಚ್ಚು ಸಾತ್ಯಕಿ ರಿಪುಶರಾಳಿಯ
ಕೊಚ್ಚಿದನು ಕೊಡಹಿದನು ಮಿಗೆ ಭಂಗಿಸಿ ವಿಭಾಡಿಸಿದ || ೭ ||

1.48.7_9

ವಿಭಾಡಿಸು= 1. ಬಡಿದು ಹಾಕು. 2. ಸೋಲಿಸು. 3. ತೆಗಳು. 4. ಕತ್ತರಿಸು. ಎಚ್ಚು = ಹೊಡಿ;; ಗಡಣ= ಸಮೂಹ, ರಾಶಿ.

1.48.8

ಎಲೆಲೆ ಸಾತ್ಯಕಿಗಾಹವದ ಧುರ
ಬಲುಹೆನಲು ಸೃಂಜಯರು ಸೋಮಕ
ಬಲ ಶಿಖಂಡಿ ದ್ರುಪದನಂದನ ಪಾಂಡವಾತ್ಮಜರು |
ಚಳಪತಾಕೆಯ ವಿವಿಧವಾದ್ಯದ
ಕಳಕಳದ ಕೈದುಗಳ ಹೊಳಹಿನ
ತಳಪ ಝಳಪಿಸೆ ಜೋಡಿಸಿತು ಸಾತ್ಯಕಿಯ ಬಳಸಿನಲಿ || ೮ ||

1.48.8_10

ತಳಪು= 1. ಹೊಳಪು. 2. ಒಂದಕ್ಕೊಂದು ಹೆಣೆದುಕೊಂಡಿರುವಿಕೆ.

1.48.9

ಹರಿಯದಿಲ್ಲಿಯ ಬವರ ರಾಯನ
ನರಸಬೇಹುದು ಕುರುಪತಿಯ ಮುಂ
ದಿರಿದು ಮೆರೆವುದು ಕೀರ್ತಿ ನಿಷ್ಫಲವಿಲ್ಲ ಶರರಚನೆ |
ಅರಿವೆವೀ ಸಾತ್ಯಕಿಯ ಸಮರದ
ಮುರುಕವನು ಬಳಿಕೆನುತ ಕೌರವ
ನರಿಕೆಯಲಿ ತಿರುಗಿದರು ಕೃಪ ಕೃತವರ್ಮ ಗುರುಸುತರು || ೯ ||

1.48.9_11

ಕೌರವನಿಗಾಗಿ ಮುಂದುವರಿದ ಹುಡುಕುವಿಕೆ

1.48.10

ತೆರಳಿದರು ಗುರುನಂದನಾದಿಗ
ಳರಿನೃಪಾಲನ ಕಾಣೆವಾತನ
ನರಸಬೇಹುದು ಶಕುನಿ ದುರ್ಯೋಧನ ಸುಶರ್ಮಕರು |
ದೊರೆಗಳಿದು ಪರಿಶಿಷ್ಟರುಪಸಂ
ಹರಣವೇ ಕರ್ತವ್ಯವಿದು ದು
ಸ್ತರಣಶ್ರಮಫಲವೆಂದು ನುಡಿದನು ಧರ್ಮಸುತ ನಗುತ || ೧೦ ||

1.48.11

ಮಸಗಿದುದು ಪರಿವಾರ ಕೌರವ
ವಸುಮತೀಶ್ವರನರಕೆಯಲಿ ದಳ
ಪಸಿರಿತು ಬಿಡದರಸಿ ಕಂಡರು ಕಳನ ಮೂಲೆಯಲಿ |
ಮಿಸುಪ ಸಿಂಧದ ಸೀಗುರಿಯ ಝಳ
ಪಿಸುವಡಾಯ್ದ ಸಿತಾತಪತ್ರ
ಪ್ರಸರದಲಿ ಹೊಳೆಹೊಳೆವ ಶಕುನಿಯ ಬಹಳ ಮೋಹರವ || ೧೧ ||

1.48.11_12

ಮಸಗು= ಹರಡು. ಆತುರಪಡು.ಉತ್ಸಾಹಗೊಳ್ಳು. ಕ್ಷೋಭೆಗೊಳ್ಳು.

1.48.11_13

ಅದೆ ಸುಯೋಧನನೊಡ್ಡು ನಸುದೂ
ರದಲಿ ಕವಿಕವಿಯೆನುತ ಧಾಳಿ
ಟ್ಟುದು ಚತುರ್ಬಲ ಭೀಮಪಾರ್ಥರ ರಥದ ಚೂಣಿಯಲಿ
ಹೊದರು ಹಳಚಿತು ಭಟರು ಭುಜಗ
ರ್ವದಲಿ ಗರುವರ ಗಾಢ ಶೌರ್ಯದ
ಮದಕೆ ಮಡುಮುರಿಯಾಯ್ತು ಸಿಲುಕಿತು ಮೌನ ಮೋನದಲಿ ೧೨
ಹಳಚು:ಹಳಚಿತು.= 1. ತಾಗು. 2. ಆಕ್ರಮಿಸು. 3. ವ್ಯಾಪಿಸು;; ಹೊದರು= ಮುಳ್ಳುಗಳಿರುವ ಪೊದೆ; ಗರುವರ= ಗರ್ವಿತರ, ಗೌರವವುಳ್ಳವರ,
ಹೊದರು ಹಳಚಿತು: ಅಥವಾ- ಪೊದೆಯ ಮರೆ ಕಳಚಿ ಕೌರವ ಸಿಕ್ಕಿದನು.??

1.48.11_14

ಕೌರವ ಸೇನೆ - ಪಾಂಡವ ಸೇನೆಗಳ ಯುದ್ಧ

1.48.13

ಹೆಗಲ ಹಿರಿಯುಬ್ಬಣದ ಕೈತಳ
ಮಗುಚಲಮ್ಮದ ವಾಘೆಯಲಿ ಕೈ
ಬಿಗಿದುದುದಂಕಣೆದೊಡಕಿನಲಿ ಮರನಾದವಂಘ್ರಿಗಳು |
ಬಗೆಯ ಮಡಿ ಮಸಳಿಸಿತು ವೀರಕೆ
ಬೆಗಡು ಹುದುವನೆಯಾಯ್ತು ಕೈನಂ
ಬುಗೆಗೆ ಮರಳಿದರೊಬ್ಬರೊಬ್ಬರು ರಾಯರಾವುತರು || ೧೩ ||

1.48.13_15

ಉಬ್ಬಣ = 1. ಬಾಗಿಲನ್ನು ಭದ್ರಪಡಿಸಲು ಹಾಕುವ ಮರದ ತುಂಡು. 2. ಒಂದು ಬಗೆಯ ಆಯುಧ. 3. ಅತಿಶಯ.; ಅಮ್ಮದ = ಸಾಧ್ಯವಾಗದ, ಬೇಡವಾದ
ಮಸಳು= ೧ ಮಂಕಾಗು, ನಿಸ್ತೇಜಗೊಳ್ಳು ೨ ಮಂಕಾಗುವಂತೆ ಮಾಡು;; ಬೆಗಡು= 1. ಆಶ್ಚರ್ಯಪಡು. 2. ಭಯಪಡು (ಬೆಡಗು?)

1.48.14

ಬಂದುದಾ ಮೋಹರ ಸಘಾಡದಿ
ನಿಂದುದೀ ಬಲ ಸೂಠಿಯಲಿ ಹಯ
ವೃಂದ ಬಿಟ್ಟವು ತೂಳಿದವು ಹೇರಾನೆ ಸರಿಸದಲಿ |
ನೊಂದುದಾಚೆಯ ಭಟರು ಘಾಯದೊ
ಳೊಂದಿತೀಚೆಯ ವೀರರುಭಯದ
ಮಂದಿ ಬಿದ್ದುದು ಚೂಣಿಯದ್ದುದು ರುಧಿರಜಲಧಿಯಲಿ || ೧೪ ||

1.48.15

ಜಾರಿದನೆ ಕುರುಪತಿಯಕಟ ಮೈ
ದೋರನೇ ನಮಗೂರುಗಳ ಕೊಡ
ಲಾರದೇ ಕಾಳೆಗವ ಕೊಟ್ಟನು ಮತ್ತೆ ಕೊಂಡನಲಾ |
ತೋರಿಸನೆ ಖಂಡೆಯದ ಸಿರಿ ಮೈ
ದೋರಹೇಳೋ ಕರೆಯೆನುತ ತಲೆ
ದೋರಿದರು ಭೀಮಾರ್ಜುನರು ಸೌಬಲನ ಥಟ್ಟಿನಲಿ || ೧೫ ||

1.48.16

ಫಡಫಡೆಲವೋ ಪಾರ್ಥ ಕುರುಪತಿ
ಯಡಗುವನೆ ನಿನ್ನಡಗ ತರಿದುಣ
ಬಡಿಸನೇ ವೇತಾಳರಿಗೆ ವೈತಾಳಿಕನೆ ನೀನು |
ಗಡಬಡಿಸಿ ಪರರುನ್ನತಿಯ ಕೆಡೆ
ನುಡಿದು ಫಲವೇನೆನುತ ಪಾರ್ಥನ
ತಡೆದನಂದು ಸುಶರ್ಮ ಸಮಸಪ್ತಕರ ದಳ ಸಹಿತ || ೧೬ ||

1.48.16_16

ವೈತಾಳಿಕ: ಪ್ರಾತಃಕಾಲದಲ್ಲಿ ರಾಜನನ್ನು ನಿದ್ರೆಯಿಂದ ಎಚ್ಚರಿಸುವವನು.; ಕೆಡೆನುಡಿದು= ಕೆಡುಕು ಮಾತನಾಡಿ

1.48.16_17

ಮುತ್ತಿದವು ರಥವೇಳುನೂರರು
ವತ್ತು ಹಯವೈನೂರು ಸಾವಿರ
ಮತ್ತಗಜವಿಪ್ಪತ್ತು ಸಾವಿರ ಪಾಯದಳ ಸಹಿತ
ತೆತ್ತಿಸದವಂಬುರವಣಿಸಿ ದೂ
ಹತ್ತಿ ಹೊಳೆದವು ಸಮರದಲಿ ಮುಖ
ಕೆತ್ತುದನೆ ಕೈದುಗಳ ರುಚಿ ವೇಢೈಸಿತರ್ಜುನನ ೧೭
ದೂಹತ್ತಿ= ಒಂದು ಬಗೆಯ ಉದ್ದವಾದ ಕತ್ತಿ,- ಖಡ್ಗ.ವೇಢೆ: ವೇಷ್ಟನ, ಸುತ್ತುವರಿ, (ಸುತ್ತಿರುವ ಪೇಟ); ತೆತ್ತಿಸು: ಹೊಂದಿಸು.

1.48.18

ಶಕುನಿ ಸಹದೇವನನುಳೂಕನು
ನಕುಲನನು ಕುರುರಾಯನನುಜರು
ಚಕಿತ ಚಾಪನ ಕೆಣಕಿದರು ಪವಮಾನನಂದನನ |
ಅಕಟ ಫಲುಗುಣ ಎನುತ ಸಮಸ
ಪ್ತಕರು ಕವಿದರು ನೂರು ಗಜದಲಿ
ಸಕಲದಳಕೊತ್ತಾಗಿ ನಿಂದನು ಕೌರವರಾಯ |\ ೧೮ ||

1.48.19

ಏರಿದರು ಸಮಸಪ್ತಕರು ಕೈ
ದೋರಿದರು ಫಲುಗುಣನ ಜೋಡಿನೊ
ಳೇರು ತಳಿತುದು ನೊಂದವಡಿಗಡಿಗಾತನಶ್ವಚಯ |
ನೂರು ಶರದಲಿ ಬಳಿ ವಿಶಿಖ ನಾ
ನೂರರಲಿ ಬಳಿಶರಕೆ ಬಳಿಶರ
ವಾರು ಸಾವಿರದಿಂದ ತರಿದನು ಪಾರ್ಥನರಿಬಲವ || ೧೯ ||

1.48.20

ಕಡಿವಡೆದವೇಳ್ನೂರು ರಥ ಮುರಿ
ವಡೆದವೈನೂರಶ್ವಚಯ ಮುಂ
ಗೆಡೆದವಂದೈನೂರು ಗಜವಿಪ್ಪತ್ತು (ಪಾ- ಗಜವಿಪ್ಪತು) ಸಾವಿರದ |
ಕಡುಗಲಿಗಳುದುರಿತು ತ್ರಿಗರ್ತರ
ಪಡೆ ಕುರುಕ್ಷೇತ್ರದಲಿ ಪಾರ್ಥನ
ಬಿಡದೆ ಬಳಲಿಸಿಯನಿಬರಳಿದುದು ಭೂಪ ಕೇಳೆಂದ || ೨೦ ||

1.48.20_18

ದೊರೆಗಳವರಲಿ ಸತ್ಯಕರ್ಮನು
ವರ ಸುಶರ್ಮನು ದ್ರೋಣಸಮರದೊ
ಳೆರಡನೆಯ ದಿವಸದಲಿ ರಚಿಸಿದರಗ್ನಿ ಸಾಕ್ಷಿಕವ
ಧುರದ ಶಪಥದೊಳರ್ಜುನನ ಸಂ
ಗರಕೆ ಬೇಸರಿಸಿದ ಪರಾಕ್ರಮ
ಪರಿಗತರು ಪವಡಿಸಿದರಂದು ಧನಂಜಯಾಸ್ತ್ರದಲಿ ೨೧

1.48.20_19

ತರಿದನಗ್ಗದ ಸತ್ಯಕರ್ಮನ
ಧುರವ ಸಂತೈಸುವ ತ್ರಿಗರ್ತರ
ದೊರೆ ಸುಶರ್ಮನನವನ ಸಹಭವ ಗೋತ್ರ ಬಾಂಧವರ
ಒರಸಿದನು ಕುರುರಾಯನಾವೆಡೆ
ಬರಲಿ ತನ್ನಾಪ್ತರಿಗೆ ಕೊಟ್ಟೆನು
ಹರುವನಿನ್ನಾಹವ ವಿಲಂಬವ ಮಾಡಬೇಡೆಂದ ೨೨

1.48.23

ಇತ್ತ ಭೀಮನ ಕೂಡೆ ನೂರರು
ವತ್ತು ಗಜ ಸಹಿತರಿಭಟರೊಳು
ದ್ವೃತ್ತನಿದಿರಾದನು ಸುದರ್ಶನನಂಧನೃಪಸೂನು |
ಹೆತ್ತಳವ್ವೆ ವಿರೋಧಿಸೇನೆಯ
ಮತ್ತ ಗಜಘಟೆಗೋಸುಗರವಿವು
ಮತ್ತೆ ದೊರಕವು ಕೊಂದಡೆಂದುಮ್ಮಳಿಸಿದನು ಭೀಮ || ೨೩ ||

1.48.24

ಸೊಕ್ಕಿದಾನೆಯ ಕೈಯ ಕದಳಿಯ
ನಿಕ್ಕಿ ಬಿಡಿಸುವನಾರು ಪವನಜ
ನೆಕ್ಕತುಳದಲಿ ದಂತಿಘಟೆಗಳ ಮುರಿದನುರವಣಿಸಿ |
ಇಕ್ಕಡಿಯ ಬಸುರುಚ್ಚುಗಳ ನರ
ಸುಕ್ಕುಗಳ ನಾಟಕದವೊಲು ಕೈ
ಯಿಕ್ಕಿದಾನೆಯ ಹಿಂಡು ಮುರಿದುದು ನಿಮಿಷಮಾತ್ರದಲಿ || ೨೪ ||

1.48.24_20

ಸಹದೇವನಿಂದ ಶಕುನಿಯ ವಧೆ

1.48.25

ಕೆಡಹಿ ದುರ್ಯೋಧನನ ತಮ್ಮನ
ನಡಗುದರಿ ಮಾಡಿದನುಳೂಕನ
ಕಡಿದು ಬಿಸುಟನು ನಕುಲನಿಪ್ಪತ್ತೈದು ಬಾಣದಲಿ |
ತುಡುಕಿದನು ಸಹದೇವನಂಬಿನ
ಗಡಣದಲಿ ಸೌಬಲನ ಸೇನೆಯ
ಕಡಲ ಮೊಗೆದನು ಮೋದಿದನು ಶರಜಾಲ ಝಂಕೃತಿಯ || ೨೫ ||

1.48.26

ಎಲವೊ ಕಪಟದ್ಯೂತ ಬಂಧದೊ
ಳಳಲಿಸಿದಲಾ ಪಾಪಿ ಕೌರವ
ಕುಲದ ತಲೆ ಸೆಂಡಾಡಿದವ ನೀನೋ ಮದಗ್ರಜನೊ |
ಸಿಲುಕಿದೆಯಲಾ ನಮ್ಮ ಬಾಣದ
ಬಲೆಗೆ ನಿನ್ನನು ಕಾವನಾವವ
ನೆಲೆ ಕುಠಾರ ಎನುತ್ತ ನುಡಿದನು ನಗುತ್ತ ಸಹದೇವ || ೨೬ ||

1.48.27

ವ್ಯರ್ಥವಲೆ ಸಹದೇವ ನಿನ್ನ ಕ
ದರ್ಥನಕೆ ಫಲವಿಲ್ಲ ನೀ ಕದ
ನಾರ್ಥಿಯೇ ದಿಟ ತೋರಿಸಾದರೆ ಬಾಹುವಿಕ್ರಮವ |
ಪಾರ್ಥ ಭೀಮರ ಮರೆಯೊಳಿರ್ದು ನಿ
ರರ್ಥಕರನಿರಿದಿರಿದು ಜಯವ ಸ
ಮರ್ಥಿಸುವೆ ಫಡ ಹೋಗೆನುತ ತೆಗೆದೆಚ್ಚನಾ ಶಕುನಿ || ೨೭ ||

1.48.28

ಮರುಗದಿರು ನಿನ್ನುಭಯ ಪಕ್ಷವ
ತರಿದು ತುಂಡವ ಸೀಳುವೆನು ತಾ
ಮರೆವನೇ ಭವದೀಯ ರಚಿತ ವಿಕಾರ ವಿಭ್ರಮವ |
ನೆರೆ ಪತತ್ರಿಗಳಿವೆ ಪತತ್ರಿಯ
ಮರುವೆಸರು ನಿನಗಿವರ ಕೇಣಿಗೆ
ತೆರಹುಗೊಡು ನೀನೆಂದು ಮಾದ್ರೀತನುಜ ಮಗುಳೆಚ್ಚ || ೨೮ ||

1.48.29

ಎಸಲು ಸಹದೇವಾಸ್ತ್ರವನು ಖಂ
ಡಿಸಿ ಶರೌಘದಿನಹಿತವೀರನ
ಮುಸುಕಿದನು ಮೊನೆಗಣೆಗಳೀಡಿರಿದವು ರಥಾಗ್ರದಲಿ
ಕುಸುರಿದರಿದತಿರಥನ ಬಾಣ
ಪ್ರಸರವನು ರಥ ತುರುಗವನು ಭಯ
ರಸದೊಳದ್ದಿದನುದ್ದಿದನು ಸಹದೇವ ಸೌಬಲನ || ೨೯ ||

1.48.30

ತೇರು ಹುಡಿಹುಡಿಯಾಗೆ ಹೊಯ್ದನು
ವಾರುವನ ಮೇಲುಗಿದಡಾಯುಧ
ದಾರುಭಟೆಯಲಿ ಬಿಟ್ಟನಾ ಸಹದೇವನಭಿಮುಖಕೆ |
ವೀರನಹೆಯೋ ಶಕುನಿ ಜೂಜಿನ
ಚೋರವಿದ್ಯೆಯ ಬಿಟ್ಟೆಲಾ ಜು
ಜ್ಝಾರನಹೆ ಮಝ ಪೂತೆನುತ ಖಂಡಿಸಿದನಾ ಹಯವ || ೩೦ ||

1.48.30_21

ಬಳಿಕ ಕಾಲಾಳಾಗಿ ಖಡುಗವ
ಝಳಪಿಸುತ ಬರೆ ಶಕ್ತಿಯಲಿ ಕೈ
ಚಳಕ ಮಿಗೆ ಸಹದೇವನಿಟ್ಟನು ಸುಬಲನಂದನನ
ಖಳನೆದೆಯನನೊದೆದಪರಭಾಗಕೆ
ನಿಲುಕಿತದು ಗಾಂಧಾರಬಲ ಕಳ
ವಳಿಸೆ ಸುಳಿದನು ಶಕುನಿ ಸುರತರುಣಿಯರ ತೋಳಿನಲಿ ೩೧
ಖಳನ+ ಎದೆಯನೊದೆದು ಅಪರಭಾಗಕೆ(ಹಿಂಭಾಗ, ಬೆನ್ನು) ನಿಲುಕಿತು+ ಅದು ಗಾಂಧಾರ ಬಲ ಕಳವಳಿಸೆ ಸುಳಿದನು ಶಕುನಿ ಸುರತರುಣಿಯರ ತೋಳಿನಲಿ

1.48.32

ಕವಿದುದಾ ಪರಿವಾರ ವಡಬನ
ತಿವಿವ ತುಂಬಿಗಳಂತೆ ಶಕುನಿಯ
ಬವರಿಗರು ಮಂಡಳಿಸೆ ಸಹದೇವನ ರಥಾಗ್ರದಲಿ |
ತೆವರಿಸಿದನನಿಬರ ಚತುರ್ಬಲ
ನಿವಹವನು ನಿಮಿಷಾರ್ಧದಲಿ ಸಂ
ತವಿಸಿದನು ಸಹದೇವ ಕೊಂದನು ಸೌಬಲನ ಬಲವ || ೩೨ ||

1.48.33

ಹರಿಬದಲಿ ಹೊಕ್ಕೆರಡು ಸಾವಿರ
ತುರುಗ ಬಿದ್ದವು ನೂರು ಮದಸಿಂ
ಧುರಕೆ ಗಂಧನವಾಯ್ತು ಪಯದಳವೆಂಟು ಸಾವಿರದ |
ಬರಹ ತೊಡೆದುದು ನೂರು ರಥ ರಿಪು
ಶರದೊಳಕ್ಕಾಡಿತು ವಿಡಂಬದ
ಕುರುಬಲಾಂಬುಧಿ ಕೂಡೆ ಬರತುದು ನೃಪತಿ ಕೇಳೆಂದ || ೩೩ ||

1.48.33_22

ನಕಲ, ಧರ್ಮಜ, ಭೀಮರನ್ನು ಎದುರಿಸದೆ ಕೌರವ ಜಾರಿಹೊದನು

1.48.34

ಓಡಿದವರಲ್ಲಲ್ಲಿ ಧೈರ್ಯವ
ಮಾಡಿ ಹರಿಹಂಚಾದ ಸುಭಟರು
ಕೂಡಿಕೊಂಡುದು ನೂರು ಮದದಾನೆಯಲಿ ಕುರುಪತಿಯ |
ಓಡಲೇಕಿನ್ನೊಂದು ಹಲಗೆಯ
ನಾಡಿ ನೋಡುವೆನೆಂಬವೊಲು ಕೈ
ಮಾಡಿದನು ಕುರುರಾಯನಾ ಸಹದೇವನಿದಿರಿನಲಿ || ೩೪ ||

1.48.35

ಧರಣಿಪನ ಥಟ್ಟಣೆಗೆ ನಿಲ್ಲದೆ
ತೆರಳಿದನು ಸಹದೇವನಾತನ
ಹಿರಿಯನಡ್ದೈಸಿದಡೆ ಕೊಟ್ಟನು ಬೋಳೆಯಂಬಿನಲಿ |
ಶರಹತಿಗೆ ಸೆಡೆದಾ ನಕುಲ ಪೈ
ಸರಿಸಿದನು ನೂರಾನೆಯಲಿ ಡಾ
ವರಿಸಿದನು ಧರ್ಮಜನ ದಳದಲಿ ಧೀರ ಕುರುರಾಯ || ೩೫ ||

1.48.36

ಎಲೆ ನಪುಂಸಕ ಧರ್ಮಸುತ ಫಡ
ತೊಲಗು ಕರೆಯಾ ನಿನಗೆ ಭೀಮನ
ಬಲುಹೆ ಬಲುಹರ್ಜುನನ ವಿಕ್ರಮ ವಿಕ್ರಮವು ನಿನಗೆ |
ಮಲೆತು ಮೆರೆಯಾ ಕ್ಷತ್ರಧರ್ಮವ
ನಳುಕದಿರು ನೀ ನಿಲ್ಲೆನುತಲಿ
ಟ್ಟಳಿಸಿ ಬರಲೂಳಿಗದ ಬೊಬ್ಬೆಯ ಕೇಳಿದನು ಭೀಮ || ೩೬ ||

1.48.37

ತೂಳಿ ತುಳಿದವು ನೂರು ಗಜ ಭೂ
ಪಾಲಕನ ನೆರೆಗಡಿತದಡವಿಗೆ
ಬಾಳೆ ಹೆಮ್ಮರವಾಯ್ತು ಗಡ ಫಡ ನೂಕು ನೂಕೆನುತ |
ಆಲಿ ಕಿಡಿಯಿಡೆ ಕುಣಿವ ಮೀಸೆ ಕ
ರಾಳ ವದನದ ಬಿಗಿದ ಹುಬ್ಬಿನ
ಮೇಲುಗೋಪದ ಭೀಮ ಬಂದನು ಬಿಟ್ಟ ಸೂಠಿಯಲಿ || ೩೭ ||

1.48.38

ನೆತ್ತಿಯಗತೆಯೊಳೂರಿದಂಕುಶ
ವೆತ್ತಿದಡೆ ತಲೆಗೊಡಹಿದವು ಬೆರ
ಳೊತ್ತುಗಿವಿಗಳ ಡಾವರಿಪ ಡಾವರದ ಡಬ್ಬುಕದ |
ಕುತ್ತುವಾರೆಯ ಬಗೆಯದಾನೆಗ
ಳಿತ್ತ ಮುರಿದವು ಸಿಂಹನಾದಕೆ
ಮತ್ತಗಜ ಮೊಗದಿರುಹಿದವು ದಳವುಳಿಸಿದನು ಭೀಮ || ೩೮ ||

1.48.39

ಮೆಟ್ಟಿದನು ಬಲವಂಕವನು ಹೊರ
ಗಟ್ಟಿದನು ವಾಮದ ಗಜಂಗಳ
ನಿಟ್ಟನೊಂದರೊಳೊಂದನಪ್ಪಳಿಸಿದನು ಪರಿಘದಲಿ |
ಘಟ್ಟಸಿದನೊಗ್ಗಿನ ಗಜಂಗಳ
ಥಟ್ಟುಗೆಡಹಿದನಮಮ ಹೆಣಸಾ
ಲಿಟ್ಟವೈ ಕುರುನೃಪನ ನೂರಾನೆಗಳು ನಿಮಿಷದಲಿ || ೩೯ ||

1.48.40

ಉಳಿದುದಿದಿರಲಿ ಛತ್ರ ಚಮರಾ
ವಳಿಯವರು ಹಡಪಿಗರು ಬಿರುದಾ
ವಳಿಯವರು ಪಾಠಕರು ವಾದ್ಯದ ಮಲ್ಲಗಾಯಕರು |
ಸಲಿಲ ಭಕ್ಷ್ಯವಿದಾನಗಜಹಯ
ಕುಲದ ರಕ್ಷವ್ರಣಚಿಕಿತ್ಸಕ
ದಳಿತ ರಥಚಾರಕರು ಕಾರ್ಮುಕಬಾಣದಾಯಕರು || ೪೦ ||

1.48.41

ಕುದುರೆ ರಾವ್ತರು ಜೋದಸಂತತಿ
ಮದಗಜವ್ರಜವತಿರಥಾವಳಿ
ಪದಚರರು ಚತುರಂಗಬಲವೊಂದುಳಿಯದಿದರೊಳಗೆ |
ಪದದಲೇ ಕೌರವನೃಪತಿ ಜಾ
ರಿದನು ಕುಂತೀಸುತರು ಬಹಳಾ
ಭ್ಯುದಯರಾದರು ವೀರನಾರಾಯಣನ ಕರುಣದಲಿ || ೪೧ ||

1.48.41_23

♠♠♠
ॐ

1.48.41_24

ನೋಡಿ

1.48.41_25

ಕುಮಾರವ್ಯಾಸ ಭಾರತ
ಕುಮಾರವ್ಯಾಸಭಾರತ-ಸಟೀಕಾ

1.48.41_26

ಸಂಧಿಗಳು

1.48.41_27

ಕುಮಾರವ್ಯಾಸ ಭಾರತ/ಸಟೀಕಾ (೧೦.ಗದಾಪರ್ವ::ಸಂಧಿ-೧)
ಕುಮಾರವ್ಯಾಸ ಭಾರತ/ಸಟೀಕಾ (೧೦.ಗದಾಪರ್ವ::ಸಂಧಿ-೨)
ಕುಮಾರವ್ಯಾಸ ಭಾರತ/ಸಟೀಕಾ (೧೦.ಗದಾಪರ್ವ::ಸಂಧಿ-೩)
ಕುಮಾರವ್ಯಾಸ ಭಾರತ/ಸಟೀಕಾ (೧೦.ಗದಾಪರ್ವ::ಸಂಧಿ-೪)
ಕುಮಾರವ್ಯಾಸ ಭಾರತ/ಸಟೀಕಾ (೧೦.ಗದಾಪರ್ವ::ಸಂಧಿ-೫)
ಕುಮಾರವ್ಯಾಸ ಭಾರತ/ಸಟೀಕಾ (೧೦.ಗದಾಪರ್ವ::ಸಂಧಿ-೬)
ಕುಮಾರವ್ಯಾಸ ಭಾರತ/ಸಟೀಕಾ (೧೦.ಗದಾಪರ್ವ::ಸಂಧಿ-೭)
ಕುಮಾರವ್ಯಾಸ ಭಾರತ/ಸಟೀಕಾ (೧೦.ಗದಾಪರ್ವ::ಸಂಧಿ-೮)
ಕುಮಾರವ್ಯಾಸ ಭಾರತ/ಸಟೀಕಾ (೧೦.ಗದಾಪರ್ವ::ಸಂಧಿ-೯)
ಕುಮಾರವ್ಯಾಸ ಭಾರತ/ಸಟೀಕಾ (೧೦.ಗದಾಪರ್ವ::ಸಂಧಿ-೧೦)
ಕುಮಾರವ್ಯಾಸ ಭಾರತ/ಸಟೀಕಾ (೧೦.ಗದಾಪರ್ವ::ಸಂಧಿ-೧೧)
ಕುಮಾರವ್ಯಾಸ ಭಾರತ/ಸಟೀಕಾ (೧೦.ಗದಾಪರ್ವ::ಸಂಧಿ-೧೨)
ಕುಮಾರವ್ಯಾಸ ಭಾರತ/ಸಟೀಕಾ (೧೦.ಗದಾಪರ್ವ::ಸಂಧಿ-೧೩)

1.48.41_28

ಪರಿವಿಡಿ

1.48.41_29

ಉಲ್ಲೇಖ