Pramāṇa · Search · About · API

Karnata Bharata Kathamanjari 1.38: ಸಟೀಕಾ (೪-ವಿರಾಟಪರ್ವ::ಸಂಧಿ-೭)

Karṇāṭa Bhārata Kathāmañjarī 1.38

Language
Kannada

ಸಟೀಕಾ (೪-ವಿರಾಟಪರ್ವ::ಸಂಧಿ-೭)

1.38.p1

<ಕುಮಾರವ್ಯಾಸಭಾರತ-ಸಟೀಕಾ

1.38.p2

ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೭)

1.38.p3

ಸೂಚನೆ:

1.38.p4

ಕದನ ಚೌಪಟ ಮಲ್ಲ ಪರಬಲ
ಮದನ ಮದಹರ ರುದ್ರನಹಿತರ
ಸದೆದು ಮರಳಿಚಿದನು ವಿರಾಟನ ನಿಖಿಳ ಗೋಕುಲವ ||ಸೂಚನೆ||

1.38.p5

ಕದನ ಚೌಪಟ ಮಲ್ಲ= ಯುದ್ಧದಲ್ಲಿ ಶ್ರೇಷ್ಠಯೋಧನೂ; ಪರಬಲ ಮದನ ಮದಹರ ರುದ್ರನು+= ಶತ್ರು ಸೈನ್ಯವೆಂಬ ಮನ್ಮಥನಿಗೆ ಮದನನ ಅಹಂಕಾರವನ್ನು ಸುಡುವ ರುದ್ರನಂತಿರುವ ಅರ್ಜುನನು,// ಅಹಿತರ- ಶತ್ರುಗಳನ್ನು ಸದೆದು ಮರಳಿಚಿದನು ವಿರಾಟನ ನಿಖಿಳ ಗೋಕುಲವ= ಶತ್ರುಗಳನ್ನು ಸದೆಬಡಿದು- ಸೋಲಿಸಿ, ಮರಳಿಚಿದನು ವಿರಾಟನ ನಿಖಿಳ ಗೋಕುಲವ= ವಿರಾಟನ ಎಲ್ಲಾ ಗೋವುಗಳನ್ನೂ ಮರಳಿ ಮತ್ಸ್ಯನಗರಕ್ಕೆ ತಂದನು.
~~ಓಂ~~

1.38.p6

ದ್ರೋಣ ಭೀಷ್ಮರು ಅರ್ಜುನನ ಬಂದುದನ್ನು ತಿಳಿದು ಹೊಗಳಿದರು

1.38.1

ಭಯವು ಭಾರವಿಸಿತ್ತು ಜನಮೇ
ಜಯ ಮಹೀಪತಿ ಕೇಳು ಕುರು ಸೇ
ನೆಯಲಿ ಭೀಷ್ಮ ದ್ರೋಣರರಿದರು ಪಾರ್ಥನೆಂಬುದನು |
ಜಯವು ಜೋಡಿಸಲರಿಯದಿದು ಸಂ
ಶಯದ ಸುಳಿವುತ್ಪಾತ ಶತವಿದು
ಲಯದ ಬೀಜವು ಭೀಷ್ಮ ಚಿತ್ತವಿಸೆಂದನಾ ದ್ರೋಣ || ೧ ||

1.38.1_7

ಭಯವು ಭಾರವಿಸಿತ್ತು ಜನಮೇಜಯ ಮಹೀಪತಿ ಕೇಳು ಕುರು ಸೇನೆಯಲಿ= ಜನಮೇಜಯ ರಾಜನೇ ಕೇಳು, ಕೌರವನ ಸೇನೆಯಲ್ಲಿ ಭಯವು ಆವರಿಸಿತ್ತು.// ಭೀಷ್ಮ ದ್ರೋಣು+ ಅರಿದರು ಪಾರ್ಥನು+ ಎಂಬುದನು= ಭೀಷ್ಮ ದ್ರೋಣರು ಬಂದವನು ಪಾರ್ಥನು ಎಂಬುದನ್ನು ಧನಷ್ಠಂಕಾರ ಕಪಿಯ ಘರ್ಜನೆ ಕೇಳಿ ತಿಳಿದು ಕೊಂಡರು.//ಜಯವು ಜೋಡಿಸಲು+ ಅರಿಯದು+= ಅವರು ಇದರಲ್ಲಿ ತಮಗೆ ಜಯವು ಲಭಿಸಲಾರದು,//+ ಇದು ಸಂಶಯದ ಸುಳಿವು+ ಉತ್ಪಾತ ಶತವಿದು= ಅನೇಕ ಅಪಶಕುನವಾಗುತ್ತಿದೆ; ಈ ನೂರಾರು ಅಪಶಕುನಗಳು ಜಯದ ಬಗೆಗೆ ಸಂಶಯದ ಸುಳಿವನ್ನು- ಸೂಚನೆಯನ್ನು ಕೊಡುವುದು.// ಲಯದ ಬೀಜವು ಭೀಷ್ಮ ಚಿತ್ತವಿಸು+ ಎಂದನು ಆ ದ್ರೋಣ= ಈ ಯುದ್ಧವು ಮುಂದಿನ ಕುಲದ ನಾಶದ ಬೀಜದಂತಿದೆ, ಭೀಷ್ಮನೇ ಗಮನಿಸಿ ಕೇಳು ಎಂದನು, ದ್ರೋಣ.

1.38.1_8

ಸುರಿಸುತಿವೆ ಕಂಬನಿಗಳನು ಗಜ
ತುರಗಚಯವೊರೆಯುಗಿದಡಾಯುಧ
ಮುರಿದು ಬಿದ್ದುದು ಬೀಸುತಿದೆ ಬಿರುಗಾಳಿ ಬಲ ಬೆದರೆ
ಹರಿವುತಿವೆ ತಾರಕಿಗಳಭ್ರದೊ
ಳರುಣಮಯ ಜಲಧಾರೆಯಿದೆ ತರ
ತರದಲಿದೆ ಪಡಿಸೂರ್ಯಮಂಡಲವೆಂದನಾ ದ್ರೋಣ ೨
ಸುರಿಸುತಿವೆ ಕಂಬನಿಗಳನು ಗಜತುರಗಚಯ= ಆನೆ ಕುದುರೆಗಳ ಸಮೂಹ ಕಣ್ನಲ್ಲಿ ನೀರು ಸುರಿಸುತ್ತಿವೆ./ ವೊರೆಯುಗಿದಡೆ+ ಆಯುಧ ಮುರಿದು ಬಿದ್ದುದು= ಒರೆಯಿಂದ ಕತ್ತಿ ತೆಗೆದರೆ ಕತ್ತಿಯೇ ಮುರಿದು ಬಿದ್ದಿತು./ ಬೀಸುತಿದೆ ಬಿರುಗಾಳಿ, ಬಲ ಬೆದರೆ ಹರಿವುತಿವೆ ತಾರಕಿಗಳು+ ಅಭ್ರದೊಳು+= ಬಿರುಗಾಳಿ ಬೀಸುತ್ತಿದೆ. ಸೈನ್ಯ ಹೆದರುವಂತೆನಕ್ಷತ್ರಗಳು/ ಉಲ್ಕೆಗಳು ಆಕಾಶದಲ್ಲಿ ಬೀಳುತ್ತಿದೆ./ ಅರುಣಮಯ ಜಲಧಾರೆಯಿದೆ ತರತರದಲಿದೆ ಪಡಿ- ಸೂರ್ಯಮಂಡಲವು+= ಕೆಂಪು ಬಣ್ಣದ ಜಲಧಾರೆ- ಮಳೆ ಬರುತ್ತಿದೆ; ತರತರದಲಿದೆ ಪಡಿ- ಸೂರ್ಯಮಂಡಲವು ವಿಚಿತ್ರವಾಗಿದೆ. ಎಂದನು+ ಆ ದ್ರೋಣ.

1.38.3

ಇದೆ ಬಹಳ ಭೂಕಂಪವದುಭುತ
ವಿದೆ ದಿಶಾವಳಿ ಧೂಮಕೇತುಗ
ಳಿದೆ ಪತಾಕಾಭಂಗವಿದೆ ವಿಪರೀತ ಪರಿವೇಷ |
ಇದು ಸಮಾಹಿತವಲ್ಲ ರಾಜಾ
ಭ್ಯುದಯಕರವೇ ಭೀಷ್ಮ ನಮ್ಮನು
ಸದೆಯದಿಹನೇ ಸುರಪನಂದನನೆಂದನಾ ದ್ರೋಣ || ೩ ||

1.38.4

ಬಿರಿಯಲಬುಜಭವಾಂಡವಿದೆ ಕಪಿ
ವರನ ಕಳಕಳ ದೇವದತ್ತದ
ಧರಧುರದ ದೆಖ್ಖಾಳವಿದೆ ಗಾಂಡಿವದ ಬೊಬ್ಬೆಯಿದೆ |
ನರನ ನಿಷ್ಠುರ ಸಿಂಹ ರವವಿದೆ
ತುರಗ ದಳ್ಳುರಿ ಸಾರುತಿದೆ ಸಂ
ಗರಕೆ ಸಾಹಸ ಮಲ್ಲ ಮೊಳಗಿದನೆಂದನಾ ದ್ರೋಣ || ೪ ||

1.38.4_9

ಪ್ರಕೃತಿಯ ಸಂಕೇತಗಳನ್ನು ನೋಡಿ, ದ್ರೋಣ ತನ್ನ ಮೆಚ್ಚಿನ ಶಿಷ್ನ ಅರ್ಜುನನ ಆಗಮನದಿಂದ ಸಂತಸಗೊಂಡು ಅವನನ್ನು ಹೊಗಳಿ ಭೀಷ್ಮನಿಗೆ ಹೇಳಿದನು,'ಬಿರಿಯಲು+ ಅಬುಜಭವಾಂಡವಿದೆ- ಅಬುಜಾಂಡ= ಬ್ರಹ್ಮಾಂಡ, = ಬ್ರಹ್ಮಾಂಡವು ಬಿರಿಯುವಹಾಗಿದೆ; ಕಪಿವರನ ಕಳಕಳ- ಕೀಚುಸದ್ದು, ಕಪಿದ್ವಜದಿಂದ ಮಾರುತಿಯ ಕಿರಿಚಾಟವಿದೆ, ದೇವದತ್ತದ ಧರ- ಧರಿಸಿದವನು ಇದ್ದಾನೆ,= ದೇವದತ್ತ ಶಂಖವನ್ನು ಧರಿಸಿದ ಪಾರ್ಥನೇ ಬಂದಿದ್ದಾನೆ,, ಧುರದ ದೆಖ್ಖಾಳವಿದೆ- ಆರ್ಭಟವಿದೆ= ಯುದ್ಧದ ಆರ್ಭಟವಿದೆ ಮತ್ತು ಗಾಂಡಿವದ ಠೇಂಕಾರವಿದೆ.- ಠೇಂಕಾರ, ನರನ ನಿಷ್ಠುರ ಸಿಂಹ ರವವು - ಘರ್ಜನೆ + ಇದೆ= ಅರ್ಜುನನ ಸಿಂಹನಾದವಿದೆ, ತುರಗ ದಳ್ಳುರಿ ಸಾರುತಿದೆ = ಕುದುರೆಗಳು ಬುಸುಗುಟ್ಟುತ್ತಿವೆ;, ಸಂಗರಕೆ ಸಾಹಸ ಮಲ್ಲ ಮೊಳಗಿದನು+ ಎಂದನು+ ಆ ದ್ರೋಣ= ಯುದ್ಧವನ್ನು ಆರಂಬಿಸಲು ಅರ್ಜುನನು ದೇವದತ್ತ ಶಂಖವನ್ನು ಊದಿದನು,ಎಂದನು+ ಆ ದ್ರೋಣ.

1.38.4_10

ಭೀಷ್ಮ ದ್ರೋಣರಿಗೆ ಕರ್ಣನ ಭರ್ತ್ಸನೆ

1.38.5

ಬಲವ ಬೆದರಿಸಿ ಹಗೆಯ ಭುಜದ
ಗ್ಗಳಿಕೆಯನೆ ಕೊಂಡಾಡಿ ಸಾಮಿಯ
ನಿಳಕೆಗಾಬಿರಿ ನಿಮ್ಮ ಪೈಕಕೆ ಖುಲ್ಲತನ ಸಹಜ |
ಫಲುಗುಣನೆಯಾಗಲಿ ಸುರೇಂದ್ರನೆ
ನಿಲಲಿ ಭಾರ್ಗವ ರಾಮನಾಗಲಿ
ಗೆಲಿದು ಕೊಡುವೆನು ನಿಮಿಷಕೆಂದನು ಖಾತಿಯಲಿ ಕರ್ಣ || ೫ ||

1.38.6

ನರನು ನರನೆಂದನವರತ ತಲೆ
ಬಿರಿಯೆ ಹೊಗಳುವಿರಾನಿರಲು ಸಂ
ಗರಕೆ ತಲೆದೋರಿದೊಡೆ ತರಿವೆನು ಲೋಕಪಾಲಕರ |
ನರನ ತೆತ್ತಿಗರಹಿರಿ ತತ್ತರೆ
ಪುರದೊಳಗೆ ಕೌರವನವರು ದು
ಶ್ಚರಿತರೆರಡಿಟ್ಟಿಹಿರಿ ಖೂಳರು ನಿಮ್ಮೊಳೇನೆಂದ || ೬ ||

1.38.6_11

ನರನು ನರನು+ ಎಂದು+ ಅನವರತ= ಯಾವಾಗಲೂ, ತಲೆಬಿರಿಯೆ ಹೊಗಳುವಿರಿ+ ಆನು= ನಾನು+ ಇರಲು, ಸಂಗರಕೆ= ಯುದ್ಧಕ್ಕೆ, ತಲೆದೋರಿದೊಡೆ= ನಿಂತರೆ ತರಿವೆನು= ಕತ್ತರಿಸಿಹಾಕುವೆನು, ಲೋಕಪಾಲಕರ= ದೇವತೆಗಳನ್ನು, ನರನ ತೆತ್ತಿಗರು+ ಅಹಿರಿ= ಅರ್ಜುನನ ಸೇವಕರಾಗಿರುವಿರಿ, ತತ್ತರೆ- ಬಂದುಗಳು, ಪುರದೊಳಗೆ (ಹಸ್ತಿನಾಪುರದೊಳಗೆ) ಮಾತ್ರಾ! (ನಿಮಗೆ) ಕೌರವನವರು ದುಶ್ಚರಿತರೆ= ಕೆಟ್ಟವರೇ?+ ಎರಡಿಟ್ಟು+ ಇಹಿರಿ= ಕೌರವನಿಗೆ ಎರಡು ಬಗೆಯುತ್ತಿರುವಿರಿ ಖೂಳರು- ದುಷ್ಟರು, ನಿಮ್ಮೊಳು+ ಏನೆಂದ- ನಿಮ್ಮೊಡನೆ ಮಾತನಾಡಿ ಏನು ಪ್ರಯೋಜನ ಎಂದ ಕರ್ಣ.

1.38.7

ಹೊಕ್ಕು ತಾ ಬಳಲಿಸಿದೊಡೆ ಹಿಂ
ದಿಕ್ಕಿ ಕೊಂಬವರಾರು ಹಗೆವನ
ಸಿಕ್ಕಿದುರಗವ ಸೆಳೆವನಾವನು ಗರುಡ ತುಂಡದಲಿ |
ಎಕ್ಕತುಳದಲಿ ವೈರಿ ಪಾರ್ಥನ
ನೊಕ್ಕಲಿಕ್ಕುವೆನರಸ ನಿನ್ನೀ
ಚುಕ್ಕಿಗಳ ಚಾಪಲವ ಕೇಳದಿರೆಂದನಾ ಕರ್ಣ || ೭ ||

1.38.7_12

ಹೊಕ್ಕು ತಾ ಬಳಲಿಸಿದೊಡೆ ಹಿಂದಿಕ್ಕಿ ಕೊಂಬವರು+ ಆರು ಹಗೆವನ= ರಾಜನೇ, ತಾನು ಕೊಕ್ಕು- ನುಗ್ಗಿ ಬಳಲಿಸಿದೊಡೆ - ಸೋಲುವಂತೆ ಆಯಾಸಪಡಿಸಿದರೆ, ಆ ಶತ್ರುವನ್ನು ತಮ್ಮ ಬೆನ್ನುಹಿಂದೆ ಇಟ್ಟುಕೊಂಡು ರಕ್ಷಿಸುವವರು ಯಾರು ಈ ಪಡೆಯಲ್ಲಿ - ಅವರೇ ಈ ಭೀಷ್ಮದ್ರೋಣರು; ಸಿಕ್ಕಿದ+ ಉರಗವ ಸೆಳೆವನು+ ಆವನು ಗರುಡ ತುಂಡದಲಿ (ಗರುಡನ ತುಂಡದಲಿ- ಗರುಡನ ತುಂಡು- ಮಹಾವೀರ, ಗರುಡನಂಥ ವೀರರಲ್ಲಿ ಸಿಕ್ಕಿದ ಸರ್ಪವನ್ನು ಸರೆಹಿಡಿದವನು ಯಾರು? , ಎಕ್ಕತುಳದಲಿ- ಪರಾಕ್ರಮದಲ್ಲಿ ವೈರಿ ಪಾರ್ಥನನು+ ಒಕ್ಕಲಿಕ್ಕುವೆನು= ಗರುಡನಂಥ ವೀರನು- ನಾನು ಪರಾಕ್ರಮದಿಂದ ವೈರಿ ಪಾರ್ಥನನ್ನು ಸೋಲಿಸುವೆನು; ಒಕ್ಕಲಿಕ್ಕುವೆನು- ಸೋಲಿಸುವೆನು,+ ಅರಸ ನಿನ್ನ+ ಈ ಚುಕ್ಕಿಗಳ- ಅಲ್ಪರ, ಚಾಪಲವ- ಚಪಲದ ಮಾತುಗಳನ್ನು,ಕೇಳದಿರು+ ಎಂದನು+ ಆ ಕರ್ಣ.

1.38.7_13

ಕರ್ಣನ ನಿಂದನೆ - ಅರ್ಜುನನ ಸಾಹಸ ವರ್ಣನೆ - ಕರ್ಣನ ವ್ಯಂಗ್ಯ- ವಾಗ್ವಾದ

1.38.8

ಎನಲು ಭುಗಿಲೆಂದನು ಕೃಪಾಚಾ
ರ್ಯನು ಸುಯೋಧನ ಕೇಳು ರಾಧಾ
ತನಯನಿವ ಬೊಗುಳಿದೊಡೆ ನಿಶ್ಚಯವೆಂದು ನಂಬದಿರು |
ಅನುವರದೊಳರ್ಜುನನ ಗೆಲುವೊಡೆ
ಯೆನಗೆ ನಿನಗೀತಂಗೆ ಕೆಲಬರಿ
ಗನಿಮಿಪರಿಗಳವಲ್ಲ ಬಲ್ಲೈ ಪಾರ್ಥನಧಟುಗಳ || ೮ ||

1.38.9

ಮಾಡಿದನು ಹರನೊಡನೆ ಖಾಡಾ
ಖಾಡಿಯನು ಸುರಪತಿಯ ತೋಟವ
ಬೇಡಿದೊಡೆ ಬೇಳಿದನು ವಹ್ನಿಗೆ ರಾಜಸೂಯದಲಿ |
ರೂಢಿಗುತ್ತರ ಕುರುಗಳರ್ಥವ
ಹೂಡಿಸಿದನರಮನೆಗೆ ದೈತ್ಯರ
ಬೀಡ ಬರಿಗೈದನು ಹಿರಣ್ಯಕಪುರ ನಿವಾಸಿಗಳ || ೯ ||

1.38.10

ಬಾಗಿಸಿದ ಬಿಲ್ಲಿನಲಿ ರಾಯರ
ಮೂಗ ಕೊಯ್ದನು ಮದುವೆಯಲಿ ನೀ
ನೀಗಳೊದರುವೆ ಕೌರವೇಂದ್ರನನಂದು ಬಿಡಿಸಿದೆಲ |
ಆ ಗರುವ ಸೈಂಧವನ ಮುಡಿಯ ವಿ
ಭಾಗಿಸಿದ ಭಟನಾರು ಪಾರ್ಥನ
ಲಾಗುವೇಗವನಾರು ಬಲ್ಲರು ಕರ್ಣ ಕೇಳೆಂದ || ೧೦ ||

1.38.11

ಮರುಳ ಕಣ್ಣಿಗೆ ಕೊಡನ ತೋರದ
ಲಿರದೆ ಸಾಸವೆ ನಿಮ್ಮ ಕಣ್ಣಿಗೆ
ನರನು ದೊಡ್ಡಿತು ಉಳಿದ ವೀರರ ಕಣ್ಗೆ ತುಸು ಮಾತ್ರ |
ಮರುಳು ಹಾರುವ ಗದ್ಯಪದ್ಯದ
ಸರಸ ವಿದ್ಯಗಳಲ್ಲದೀ ಸಂ
ಗರದ ಕರ್ಕಶ ವಿದ್ಯೆ ನಿಮಗೇಕೆಂದನಾ ಕರ್ಣ || ೧೧ ||

1.38.12

ಹಣೆಗೆ ಮಟ್ಟಿಯ ಬಡಿದು ದರ್ಭೆಯ
ಹಣಿದು ಬೆರಳಲಿ ಸೆಕ್ಕಿ ಧೋತ್ರದ
ದಣಿಬವನು ನಿರಿವಿಡಿದು ಮಹಳದ ಮನೆಯ ಚೌಕದಲಿ |
ಮಣೆಗೆ ಮಂಡಿಸಿ ಕುಳ್ಳಿತುಂಬೌ
ತಣದ ವಿದ್ಯವ ಬಲ್ಲಿರಲ್ಲದೆ
ರಣ ವಿಚಾರದ ವಿದ್ಯೆ ನಿಮಗೇಕೆಂದನಾ ಕರ್ಣ || ೧೨ ||

1.38.13

ಇಂದು ಪಿತೃದಿನವಿಂದು ಸಂಕ್ರಮ
ಣಿಂದು ಸೂರ್ಯಗ್ರಹಣ ಹರಿದಿನ
ವಿಂದು ಯಜ್ಞಾರಂಭ ದಿನ ವಡ್ಡಂತಿ ಲೇಸೆಂದು |
ಬಂದು ನಾನಾ ಮುಖದ ದಾನಕೆ
ತಂದ ವಸ್ತುವ ಬಾಚಿ ಹೊಳ್ಳಿಸಿ
ತಿಂದು ಕೊಬ್ಬಿದ ನಿಮಗೆ ಸುಭಟರ ಮಾತದೇಕೆಂದ || ೧೩ ||

1.38.14

ಬಲ್ಲಿರೈ ಕೌರವನ ಧನವನು
ಹೊಳ್ಳಿಸಲು ಮೃಷ್ಟಾನ್ನದಿಂದವೆ
ಡೊಳ್ಳ ಬೆಳಸಿಯೆ ರಾಜಗುರುತನದಿಂದ ಬೆರತಿಹಿರಿ |
ಬಿಲ್ಲ ವಿದ್ಯಾ ವಿಷಯ ರಿಪುಭಟ
ಮಲ್ಲರೊಡನೆಯ ಕದನವಿದು ಜಡ
ರೆಲ್ಲರಿಗೆ ಸುಲಭವೆ ಜಪಾನುಷ್ಠಾನವಲ್ಲೆಂದ || ೧೪ ||

1.38.15

ಕೇಳಿದಶ್ವತ್ಥಾಮ ಕಿಡಿಗಳ
ನಾಲಿಗೆಗಳಲುಗಳಿದನು ಕೇಳೆಲೆ
ಖೂಳ ಸೂತನ ಮಗನೆ ಸುಭಟಾಂಗದಲಿ ಖರೆಯನಲ |
ಕೀಳು ಜಾತಿಗೆ ತಕ್ಕ ನುಡಿಗಳು
ಮೇಳವಿಸಿದವು ಕುಲವ ನಾಲಗೆ
ಹೇಳಿತೆಂಬುದು ತಪ್ಪದಾಯಿತು ಕರ್ಣ ಕೇಳೆಂದ || ೧೫ ||

1.38.15_14

ಕೇಳಿದ+ ಅಶ್ವತ್ಥಾಮ= ಕೃಪನ ತಂಗಿಯ ಮಗ ಅಶ್ವತ್ಥಾಮನು ವಯೋವೃದ್ದನಾದ ತನ್ನ ಮಾವನಿಗೆ ಅಪಮಾನ ಮಾಡುವ ನೆವದಲ್ಲಿ ಕೃಪನನ್ನೂ ವಿಪ್ರರನ್ನೂ ಅವಹೇಳನ ಮಾಡುವ ಕರ್ಣನ ಕುಹಕ ನುಡಿಗಳನ್ನು ಕೇಳಿ ಕೋಪೋದ್ರೇಕದಿಂದ, 'ಕಿಡಿಗಳ ನಾಲಿಗೆಗಳಲಿ'+ ಉಗಳಿದನು- ಬೆಂಕಿಯಂತೆ ಸುಡುವ ಮಾತುಗಳನ್ನು ಹೇಳಿದನು. 'ಕೇಳು+ ಎಲೆ ಖೂಳ ಸೂತನ ಮಗನೆ! ಸುಭಟಾಂಗದಲಿ- ಉತ್ತಮರಿರುವ ಈ ರಣರಂಗದಲ್ಲಿ ಖರೆಯನಲ- ಗಾದೆಯು ನಿಜ ವೆನ್ನವಂತೆ 'ಕೀಳು ಜಾತಿಗೆ ತಕ್ಕ ನುಡಿಗಳು ಮೇಳವಿಸಿದವು- ನಿನ್ನಬಾಯಿಂದ ಬಂದವು' 'ಕುಲವ ನಾಲಗೆ ಹೇಳಿತು' ಎಂಬುದು ತಪ್ಪದಾಯಿತು -ನಿನ್ನಿಂದ ಅದು ತಪ್ಪದೆ ನಿಜವಾಯಿತು, ಕರ್ಣನೇ ಕೇಳು,' ಎಂದ

1.38.16

ನಗುವೆ ವಿಪ್ರರನಾವ ರಾಯರ
ಮಗನು ಹೇಳಾ ದಾನ ಧರ್ಮಾ
ದಿಗಳೊಳರ್ಧವನಾರು ಕೊಂಬರು ದ್ವಿಜರು ಹೊರಗಾಗಿ |
ಜಗವ ರಕ್ಷಿಸಲಾವು ಕೊಂಬೆವು
ಮಗುಳೆ ಕೊಡುವೆವು ಕ್ಷತ್ರ ವೈಶ್ಯಾ
ದಿಗಳು ಕೊಡುವರು ತತ್ಪ್ರತಿಗ್ರಹ ಯೋಗ್ಯವಲ್ಲೆಂದ || ೧೬ ||

1.38.16_15

ಅಶ್ವತ್ಥಾಮನು ಕರ್ಣನ್ನು ಕುರಿತು, 'ನಗುವೆ ವಿಪ್ರರನು+ ಆವ ರಾಯರ ಮಗನು ಹೇಳಾ= ವಿಪ್ರರನ್ನು - ಬ್ರಾಹ್ಮಣರನ್ನು ನೋಡಿ ಅಪಹಾಸ್ಯಮಾಡಿ ನಗುವೆಯಲ್ಲಾ! ನೀನು ಯಾವ ಕ್ಷತ್ರಿಯ ರಾಜನ ಮಗನಯ್ಯಾ?// ದಾನ ಧರ್ಮಾದಿಗಳೊಳು+ ಅರ್ಧವನು+ ಆರು ಕೊಂಬರು ದ್ವಿಜರು ಹೊರಗಾಗಿ= ಕ್ಷತ್ರಿಯರು ವೈಶ್ಯರು ಮಾಡುವ ದಾನ ಧರ್ಮಾದಿಗಳನ್ನು ಬ್ರಾಹ್ಮಣರಲ್ಲದೆ ಬೇರೆ ಯಾರು ತೆಗೆದುಳ್ಳುತ್ತಾರೆ? ಜಗವ ರಕ್ಷಿಸಲು ಆವು ಕೊಂಬೆವು= ಜಗತ್ತಿನ ಮತ್ತು ದಾನಿಗಳ ಕ್ಷೇಮಕ್ಕಾಗಿ ದಾನವನ್ನು ಪಡೆಯುತ್ತೇವೆ. ಮಗುಳೆ ಕೊಡುವೆವು= ಅದನ್ನು ಪುನಹ ಜಪ ತಪಾದಿಗಳ ಮೂಲಕ ದಾನಿಗಳಿಗೆ ಸುಖ ಸಂಪತ್ತನ್ನು ಹಾರೈಸುವೆವು, ಹಾಗೆ ಹಿಂತಿರುಗಿಸುವೆವು- ಕೊಡುವೆವು. ಕ್ಷತ್ರ ವೈಶ್ಯಾದಿಗಳು ಕೊಡುವರು; ತತ್ ಪ್ರತಿಗ್ರಹ ಯೋಗ್ಯವಲ್ಲೆಂದ= ಅದರೆ ಧಾರ್ಮಿಕ ಕಾರ್ಯದಲ್ಲಿ ಕ್ಷತ್ರಿಯರು ಮತ್ತು ವೈಶ್ಯಾದಿಗಳು ದಾನಗಳನ್ನು ಪಡೆಯಲು ಯೋಗ್ಯರಲ್ಲ, ಎಂದ.

1.38.17

ಉಳಿದ ವರ್ಣತ್ರಯಕೆ ಬೆಸಕೈ
ವಳತೆಯಲಿ ಶೂದ್ರನು ಕೃತಾರ್ಥನು
ತಿಳಿಯೆ ನೀನಾರಿದರೊಳಗೆ ಕೊಂಬವನೊ ಕೊಡುವವನೊ |
ಕುಲವಿಹೀನನ ತಂದು ಕೌರವ
ತಿಲಕ ಪತಿಕರಿಸಿದೊಡೆ ನಾಲಗೆ
ಯುಲಿಯಲಾಯಿತು ಕರ್ಣ ನಿನ್ನವ ಭವವ ನೆನೆಯೆಂದ || ೧೭ ||

1.38.17_16

ಉಳಿದ ವರ್ಣತ್ರಯಕೆ ಬೆಸಕೈವ+ ಅಳತೆಯಲಿ ಶೂದ್ರನು ಕೃತಾರ್ಥನು= ಶೂದ್ರನು ಸೇವೆ ಮಾಡಿ ಕೃತಾರ್ಥನಾಗುತ್ತಾನೆ., ತಿಳಿಯೆ ನೀನಾರು+ ಇದರೊಳಗೆ ಕೊಂಬವನೊ ಕೊಡುವವನೊ? ಕುಲವಿಹೀನನ ತಂದು ಕೌರವ ತಿಲಕ ಪತಿಕರಿಸಿದೊಡೆ- ಅಂಗೀಕರಿಸದರೆ - ಆದರಿಸಿದರೆ, ನಾಲಗೆಯು+ ಉಲಿಯಲಾಯಿತು= ಕೌರವ ಶ್ರೇಷ್ಟನು ಕುಲವಿಹೀನನ್ನು ತಂದು ಅಂಗೀಕರಿಸಿ - ಆದರಿಸಿದರೆ ಅದಕ್ಕೆ ಪ್ರತಿಯಾಗಿ ನಿನ್ನ ನಾಲಗೆಯು ಕುಲವನ್ನು ಉಲಿಯಲಾಯಿತು- ಹೇಳಿತು; ಕರ್ಣ ನಿನ್ನ+ ಅವಭವವ- ಕೆಟ್ಟ ಪಾಪ, ದುಃಖ, ಕಷ್ಟಗಳನ್ನು ನೆನೆ+ ಯ+ ಎಂದ.

1.38.17_17

ಪರರು ಪತಿಕರಿಸಿದೊಡೆ ಲಜ್ಜೆಗೆ
ಶಿರವ ನಸುಬಾಗುವರು ಗರುವರು
ದುರುಳ ನೀ ದುರುದುಂಬಿತನದಲಿ ನಿನ್ನ ಹೊಗಳಿದೊಡೆ
ಗರುವ ಮಾನ್ಯರು ಮೆಚ್ಚುವರೆ ಸಸಿ
ನಿರು ಮಹಾತ್ಮರು ನಿನ್ನೊಡನೆ ಉ
ತ್ತರವ ಕೊಡುವರೆ ಗಳಹತನ ನಮ್ಮೊಡನೆ ಬೇಡೆಂದ ೧೮

1.38.19

ತೆಗೆದು ತಾಳಿಗೆ ಗಡಿತನಕ ನಾ
ಲಗೆಯ ಕೀಳ್ವೆನು ಮುನಿದು ತನ್ನೋ
ಲಗವ ತೆಗೆಸಲಿ ಕೌರವನು ನಿನಗೊಲಿದು ಪತಿಕರಿಸಿ |
ಅಗಣಿತದ ಗರುವರನು ನಿಂದಿಸಿ
ನಗುವೆ ನಿನ್ನನು ಕೊಲುವೆನೆಂದಾ
ಳುಗಳ ದೇವನು ಸೆಳೆದನಶ್ವತ್ಥಾಮ ಖಂಡೆಯವ || ೧೯ ||

1.38.19_18

ಅಗಣಿತದ ಗರುವರನು - ಅಳತೆಗೆ ಮೀರಿದ ಬಹಳ ಗೌರವಾನ್ವಿತನು ಮತ್ತು ವಯೋವೃದ್ಧನು: ಕೃಪನು ವೇದ ಶಾಸ್ತ್ರಗಳಲ್ಲಿ ಹಾಗೂ ಯುದ್ಧವಿದ್ಯೆಯಲ್ಲಿ ಪರಿಣತನು. ಕೌರವ ಪಾಂಡವರರಿಗೆ ಮತ್ತು ಇತರ ರಾಜಕುಮಾರರಿಗೆ ವೇದ- ಶಾಸ್ತ್ರಗಳನ್ನೂ ಪ್ರಾಥಮಿಕ ಯುದ್ಧವಿದ್ಯೆಯನ್ನೂ ಕಲಿಸಿದ ಗುರುವು. ಕೌರವ ಪಾಂಡವರೂ, ಇತರ ರಾಜರೂ ಕೃಪ ದ್ರೋಣರನ್ನು ಗುರು ಸ್ಥಾನದಲ್ಲಿ ಬಹಳ ಗೌರವದಿಂದ ಕಾಣುವರು.

1.38.19_19

ಕೌರವನ ಸಮಾಧಾನದ ಮಾತುಗಳು - ಸಂಧಿಗೆ ಭೀಷ್ಮರ ಹಿತವಚನ

1.38.20

ಆಳು ಮತ್ಸರದಧಿಕ ರೋಷದ
ಮೇಲುನುಡಿಯಂಕುರಿಸೆ ಕುರು ಭೂ
ಪಾಲನಿಬ್ಬರ ತೆಗೆದನುಚಿತೋಕ್ತಿಯಲಿ ಸಂತೈಸಿ |
ಕಾಳಗಕೆ ತನ್ನವನೊಡನೆ ನಿ
ಮ್ಮಾಳುತನವನು ತೋರಿಯೊಳಗೊಳ
ಗಾಳು ವಾಸಿಯ ತೋಟಿ ಬೇಡೆಂದರಸ ಮಾಣಿಸಿದ || ೨೦ ||

1.38.20_20

ಆಳು (ವೈಯುಕ್ತಿಕ) ಮತ್ಸರದ (ಹೊಟ್ಟೆಕಿಚ್ಚಿನ)+ ಅಧಿಕ ರೋಷದ ಮೇಲುನುಡಿಯು= ಮಿತಿಮೀರಿದ ಮಾತುಗಳು, ಅಂಕುರಿಸೆ= ಹುಟ್ಟಲು ಬಾಯಿಂದ ಬರಲು, ಕುರು ಭೂಪಾಲನು- ಕೌರವನು+ ಇಬ್ಬರ ತೆಗೆದನು- ಇಬ್ಬರನ್ನೂ ಬೇರ್ಪಡಿಸಿದನು,+ ಉಚಿತ+ ಉಕ್ತಿಯಲಿ ಸಂತೈಸಿ= ಉಚಿತವಾದ ಮಾತುಗಳಿಂದ ಅವರನ್ನು ಸಮಾಧಾನ ಪಡಿಸಿ, ಕಾಳಗಕೆ ತನ್ನವನೊಡನೆ ನಿಮ್ಮಾಳುತನವನು= ಶೌರ್ಯವನ್ನು, ತೋರಿ+ ಯ+ ಒಳಗೊಳಗೆ+ ಆಳು ವಾಸಿಯ- ವೈಯುಕ್ತಿಕ, ತೋಟಿ ಬೇಡೆಂದು= ನಮ್ಮ ನಮ್ಮೊಳಗೆ ಪರಾಕ್ರಮದ ಸ್ಪರ್ಧೆಯು ಬೇಡ ಎಂದು ಹೇಳಿ,+ ಅರಸ ಮಾಣಿಸಿದ= ಅವರನ್ನು ಅರಸನು ತಡೆದನು, ಸುಮ್ಮನಿರಿಸಿದನು.

1.38.21

ಬಂದು ಭೀಷ್ಮಂಗೆರಗಿ ಕೈಮುಗಿ
ದೆಂದನೀತನು ಪಾರ್ಥನಾದೊಡೆ
ಹಿಂದಣಂತಿರೆ ನವೆಯಬೇಹುದು ವರುಷ ಹದಿಮೂರ |
ಸಂದುದಿಲ್ಲಜ್ಞಾತವಾಸಕೆ
ಮುಂದೆ ದಿನವುಂಟೆನ್ನ ಲೆಕ್ಕ
ಕ್ಕೆಂದು ಕುರುಪತಿ ನುಡಿಯೆ ನಗುತಿಂತೆಂದನಾ ಭೀಷ್ಮ || ೨೧ ||

1.38.22

ಮಗನೆ ಕೇಳಿರೈದು ವರುಷಕೆ
ಮಿಗುವವೆರಡೇ ಮಾಸ ಮಾಸಾ
ದಿಗಳನವರನುಭವಿಸಿದರು ಹದಿಮೂರು ವತ್ಸರವ |
ಮಿಗುವವಧಿ ಬುಧರರಿಯೆ ನಿನ್ನಿನ
ಹಗಲು ನಿನ್ನದು ಪಾಂಡುತನಯರು
ಹೊಗುವಡಿಂದಿನ ದಿವಸವವರದು ಕಂದ ಕೇಳೆಂದ || ೨೨ ||

1.38.22_21

ಜಲಧಿ ಮೇರೆಯನೊದೆದು ಹಾಯಲಿ
ನೆಲನನಿಳುಹಲಿ ದಿಗಿಭವಿನಮಂ
ಡಲಕೆ ಕಾಳಿಕೆಯಿಡಲಿ ನಡೆದಾಡಲಿ ಕುಲಾದ್ರಿಗಳು
ಅಳುಪಲರಿವನೆ ಸತ್ಯಭಾಷೆಗೆ
ಕಲಿ ಯುಧಿಷ್ಠಿರ ನೃಪತಿಯನ್ವಯ
ತಿಲಕನಲ್ಲಾ ಕಂದ ಕೌರವಯೆಂದನಾ ಭೀಷ್ಮ ೨೩

1.38.22_22

ಸಾಕದಂತಿರಲಿನ್ನು ಕಾಳಗ
ನೂಕಲರಿಯದು ಪಾರ್ಥ ಕೊಲುವಡೆ
ಬೇಕು ಬೇಡೆಂಬುವರ ಕಾಣೆನು ಹಲವು ಮಾತೇನು
ಆ ಕುಮಾರರ ಕರೆಸಿ ಸಂಧಿಯ
ನಾಕೆವಾಳರ ಮುಂದೆ ಮಾಡಲು
ಲೋಕದಲಿ ನಿನಗಿಲ್ಲ ಸರಿ ಕುರುರಾಯ ಕೇಳೆಂದ ೨೪

1.38.22_23

ಕೌರವನ ಯುದ್ಧ ನಿಶ್ಚಯ

1.38.25

ಕಂಡುದಳವಿ ವಿರೋಧಿಗೆಮಗೆಯು
ಕೊಂಡುದೇ ಬಲುಗೈದು ಮನ ಮುಂ
ಕೊಂಡು ಹೊಕ್ಕುದು ಕಳನದಲ್ಲದೆ ಪಾಂಡು ಸುತರೊಡನೆ |
ಉಂಡು ಮೇಣುಟ್ಟೊಲಿದು ಬದುಕುವ
ಭಂಡತನವೆನಗಿಲ್ಲ ವೈರವ
ಕೊಂಡೆಸಗಬೇಕೆಂದು ಬಿನ್ನವಿಸಿದನು ಕುರುರಾಯ || ೨೫ ||

1.38.26

ಮೇಲೆ ನೆಗಳುವ ಹದನನಿಲ್ಲಿಂ
ಮೇಲೆ ನೀನೇ ಬಲ್ಲೆಯೆನುತ ವಿ
ಶಾಲಮತಿ ಬಿಸುಸುಯ್ದು ಕೌರವ ಕೆಟ್ಟನಕಟೆನುತ |
ಕಾಳಗವ ನಾವಾನುವೆವು ಪಶು
ಜಾಲ ಸಹಿತಿಭುಪುರಿಗೆ ನೀ ಕಿರಿ
ದಾಳೊಡನೆ ನಡೆಯೆಂದು ಸೇನೆಯನೆರಡ ಮಾಡಿಸಿದ || ೨೬ ||

1.38.27

ಕೌರವೇಂದ್ರನ ಕೂಡೆ ಸೇನಾ
ಭಾರವನು ಪರುಠವಿಸಿ ಕಳುಹಿದ
ನಾರುಭಟೆಯಲಿ ಭೀಷ್ಮ ನಿಂದನು ಥಟ್ಟ ಮೇಳೈಸಿ |
ವೀರ ಕರ್ಣ ದ್ರೋಣ ಗೌತಮ
ಭೂರಿಬಲ ಗುರುಸೂನು ಶಕುನಿ ಮ
ಹಾರಥಾದಿಯ ಕೂಡಿಕೊಂಡನು ನರನ ಸಂಗರಕೆ || ೨೭ ||

1.38.28

ಇತ್ತಲಖಿಲ ಮಹಾರಥಾದಿಯ
ನೊತ್ತಲಿಕ್ಕಿ ಸುಯೋಧನನು ಪುರ
ದತ್ತ ಗೋಕುಲ ಸಹಿತ ಹಾಯ್ದನು ಪೂತು ಮಝರೆನುತ |
ಮುತ್ತಯನು ಮಾಡಿದ ನಿಯೋಗದ
ತತ್ತವಣೆ ಲೇಸಾಯ್ತು ಬೇಗದೊ
ಳುತ್ತರನೆ ಕೊಳ್ಳೆಡದ ವಾಘೆಯನೆಂದನಾ ಪಾರ್ಥ || ೨೮ ||

1.38.28_24

ತುರುಗಳನು ಮರಳಿಚುವದಿದು ನಮ
ಗುರುವ ಕಾರ್ಯವು ಮಿಕ್ಕ ಕೆಲಸದ
ಹೊರಿಗೆಯನು ನಿರ್ಣೈಸಿ ಬಳಿಕಿನಲಿವರ ಸಾಹಸವ
ಅರಿದು ಕೊಂಬೆನು ಕೊಳ್ಳು ವಾಘೆಯ
ನಿರಿತದೆಡೆಯಲಿ ಭೀತಿಗೊಳ್ಳದೆ
ತರಿದು ತಿರುಗುವ ಲಾಗುವೇಗವ ನೋಡು ನೀನೆಂದ ೨೯

1.38.28_25

ಯುದ್ಧ

1.38.30

ಎನಲು ಚಪ್ಪರಿಸಿದನು ತೇಜಿಗ
ಳನಿಲ ಜವದಲಿ ನಿಗುರಿದವು ಮುಂ
ಮೊನೆಯವರ ಮನ್ನಿಸದೆ ಬೆಂಬತ್ತಿದನು ಕೌರವನ |
ಜನಪ ಬಿಡು ಬಿಡು ತುರುಗಳನು ಫಲು
ಗುಣ ಕಣಾ ಬಂದವನು ಕುರುಕುಲ
ವನ ದವಾನಳನರಿಯೆನುತಲುತ್ತರನು ಬೊಬ್ಬಿರಿದ || ೩೦ ||

1.38.31

ಎಲೆಲೆ ನರ ಜಾರಿದನು ರಾಯನ
ಬಳಿಯ ಹತ್ತಿದನಡ್ಡ ಹಾಯ್ದತಿ
ಬಲನ ತೆಗೆ ನಮ್ಮತ್ತಲೆನುತಾ ದ್ರೋಣ ಗೌತಮರು |
ಹಿಳುಕ ಕೆನ್ನೆಗೆ ಸೇದಿ ಬೊಬ್ಬೆಯ
ಕಳಕಳದಿಯಡಗಟ್ಟಿದರು ನಿ
ಲ್ಲೆಲವೊ ಫಲುಗುಣ ಕಾದಿ ನೀನೊಟ್ಟೈಸಿ ಹೋಗೆನುತ || ೩೧ ||

1.38.32

ನಗುತ ಫಲುಗುಣನೆರಡೆರಡು ಕೋ
ಲುಗಳನವರವರಂಘ್ರಿಗೆಚ್ಚನು
ತೆಗೆದು ಹಾಯ್ದನು ಮುಂದೆ ಕೌರವ ರಾಯ ಮೋಹರಕೆ |
ಹೊಗರೊಗುವ ಹೊಸ ಕಣೆಯ ದಡ್ಡಿಯ
ಬಿಗಿದನೆಡಬಲನಿದಿರಿನಲಿ ಸೆಗ
ಳಿಗೆಯ ಸಸಿಯಂತಾಯ್ತು ಕೌರವ ಸೇನೆ ನಿಮಿಷದಲಿ || ೩೨ ||

1.38.33

ಬಿರಿದವಾನೆಗಳರ್ಜುನನ ಬಿಲು
ದಿರುವಿನಬ್ಬರಕತಿರಥರ ಬಾ
ಯ್ದೊರಳೆ ಹಾಯ್ದವು ವೀರ ಹನುಮನ ಗಾಡ ಗರ್ಜನೆಗೆ |
ಶಿರವೊಡೆದು ಸಿಡಿಯಿತು ಕಿರೀಟಿಯ
ಪರಮ ಶಂಖಧ್ವನಿಗೆ ಕುರುಬಲ
ಹೊರಳಿಯೊಡೆದುದು ಹಾರಿ ಬಿದ್ದುದು ಹೆದರಿ ಹಮ್ಮೈಸಿ || ೩೩ ||

1.38.34

ಎಲೆಲೆ ನರನೋ ಸುಭಟ ಜೀವನ
ದಳವುಳಿಗನೋ ದಿಟ್ಟ ರಾಯರ
ದಳದ ದಾವಾನಲನೊ ಪಾರ್ಥನೊ ಕಾಲಭೈರವನೊ |
ಗೆಲುವರಾವೆಡೆ ಕರ್ಣ ಕೃಪ ಸೌ
ಬಲ ಜಯದ್ರಥರೆಂಬವರ ಹೆಡ
ತಲೆಗೆ ನಾಲಗೆ ಹೋಯಿತೆಂದುದು ಕೂಡೆ ಕುರುಸೇನೆ || ೩೪ ||

1.38.35

ಮರಳಿ ಹೊಡೆ ಹಿಂಡಾಕಳನು ಗೋ
ವರನು ಬಿಡು ಹೆಡಗೈಯ ಕೊಯ್ ನ
ಮ್ಮರಸ ನಯದಪ್ಪಿದನು ತುರು ಸೆರೆವಿಡಿವರೇ ನೃಪರು |
ಕೊರಳ ಕಡಿತಕೆ ಹೊತ್ತ ಹಗೆವನ
ಸರಳಿಗಸುಗಳ ತೆರೆದಿರೆಂದ
ಬ್ಬರಿಸಿ ಕುರುಬಲ ಬಾಯಬಿಟ್ಟದು ರಾಯರಿದಿರಿನಲಿ || ೩೫ ||

1.38.36

ಬೊಬ್ಬಿರಿದು ನರನೆಸಲು ಕಣೆಗಳು
ಹಬ್ಬಿದವು ಹುರಿಗೊಂಡು ಹೂಣಿಗ
ರೊಬ್ಬುಳಿಯ ಹರೆಗಡಿದು ಕರಿಗಳ ಹೊದರ ಮೆದೆಗೆಡಹಿ |
ತೆಬ್ಬನೊದೆದುರೆ ಬಳಿಕ ಗರಿ ಮೊರೆ
ದಬ್ಬರಿಸಿ ಕಬ್ಬಕ್ಕಿ ಗಗನವ
ಹಬ್ಬಿದಂತಿರೆ ಮಸಗಿದವು ಫಲುಗುಣನ ಶರಜಾಲ || ೩೬ ||

1.38.37

ತುಡುಕಿ ಖಂಡವ ಕಚ್ಚಿ ಹಾರುವ
ಗಿಡಗನಂತಿರೆ ಭಟರ ಗಂಟಲ
ಕಡಿದು ಹಾಯ್ದಂಬುಗಳು ಬಳಿಯಲಿ ಕೊಂದ ತಲೆಗಳಲಿ |
ಅಡಸಿದವು ನಿರಿನಿಟಿಲುಗರೆದೆಲು
ವೊಡೆಯೆ ಥಟ್ಟುಗಿದಾನೆಗಳ ನಡೆ
ಗೆಡಹಿದವು ಗರಿ ಸಹಿತ ಹಾಯ್ದವು ಹಯದ ಹೊಟ್ಟೆಯಲಿ || ೩೭ ||

1.38.38

ಕರುಳ ಬಾಯಲಿ ಕಾರಿ ಕಾಲಾ
ಳೊರಳಿ ಕೆಡೆದುದು ಬೋಳೆಯಂಬುಗ
ಳರಿಯೆ ಸಮ ಸೀಳಾಗಿ ಬಿದ್ದುವು ಗಜದ ಹೋಳುಗಳು |
ಕೊರಳು ಹರಿದೊರೆವೆದ್ದ ರಕುತದ
ಹೊರಳಿಗಳ ಹೊನಲಿನಲಿ ಮುಳುಗಿತು
ತುರುಗ ರಥದಳರಾಜಿ ಹೊಸ ಕುಮ್ಮರಿಯ ಹೋಲಿಸಿತು || ೩೮ ||

1.38.38_26

(ಬೋಳೆಯ (ನಾ)= 1. ದೇವತೆ. 2. ಕಪಟವನ್ನರಿಯದವನು. (ಕನ್ನಡ ಸಾಹಿತ್ಯ ಪರಿಷತ್ ನಿಘಂಟು)
ಕುಮ್ಮರಿ (ನಾ)= ಕಾಡನ್ನು ಕಡಿದು ಸಾಗುವಳಿ ಮಾಡಿದ ಪ್ರದೇಶ.(ಕನ್ನಡ ಸಾಹಿತ್ಯ ಪರಿಷತ್ ನಿಘಂಟು)

1.38.38_27

ಹರಿಗೆ ಖಂಡಿಸಿ ಜೋಡು ಸೀಸಕ
ಜರಿದು ಬಲುದೋಳುಡಿದು ಗೋಣರೆ
ಹರಿದು ನಿಟ್ಟೆಲು ಮುರಿದು ತೊಡೆಯರೆಗಡಿದು ತಲೆಯೊಡೆದು
ನರ ಹರಿದು ಕರುಳೊಕ್ಕು ನೆಣನು
ಬ್ಬರಿಸಿ ಕಾಳಿಜ ಹಾಯ್ದು ನೆತ್ತರು
ಸುರಿದು ಹರಿದೊಗಲಿನಲಿ ಹೊರಳಿತು ವೈರಿ ಪಾಯದಳ ೩೯

1.38.40

ಮುಂದೆ ಕವಿವಂಬುಗಳು ಸುಭಟರ
ಕೊಂದು ಬಿದ್ದವು ಮತ್ತೆ ಬಳಿಯಲಿ
ಬಂದವಕೆ ಗುರಿಯಿಲ್ಲ ಹೇಳುವೆನೇನನದ್ಭುತವ |
ಒಂದು ಗುರಿಗೆರಡಂಬ ತೊಡಬೇ
ಡೆಂದು ಪಾರ್ಥನ ಬೇಡಿಕೊಂಡವು
ಸಂದ ಮಂತ್ರಾಸ್ತ್ರಂಗಳೆಲೆ ಜನಮೇಜಯ ಕ್ಷಿತಿಪ || ೪೦ ||

1.38.40_28

ಮುಂದೆ ಕವಿವ+ ಅಂಬುಗಳು ಸುಭಟರ ಕೊಂದು ಬಿದ್ದವು= ಮುಂದೆ ಆವರಿಸಿ ನುಗ್ಗಿದ ಬಾಣಗಳು ಕವರವನ ಸುಭಟರನ್ನು ಕೊಂದು ಬಿದ್ದವು. ಮತ್ತೆ ಬಳಿಯಲಿ ಬಂದ+ ಅವಕೆ ಗುರಿಯಿಲ್ಲ ಹೇಳುವೆನು+ ಏನನು+ ಅದ್ಭುತವ= ಮತ್ತೆ ಅರ್ಜುನನ ಬಳಿಗೆ ಬಂದ ಆ ಮಂತ್ರಾಸ್ತ್ರಗಳಿಗೆ, ಅವಕ್ಕೆ ಪನಃ ಹೊಡೆಯಲು ಗುರಿಯಿಲ್ಲ- ಶತ್ರುಗಳೇ ಇಲ್ಲ. ಹೇಳುವೆನು+ ಏನನು+ ಅದ್ಭುತವ, ಒಂದು ಗುರಿಗೆ+ ಎರಡು+ ಅಂಬ ತೊಡಬೇಡ+ ಎಂದು ಪಾರ್ಥನ ಬೇಡಿಕೊಂಡವು, ಸಂದ ಮಂತ್ರಾಸ್ತ್ರಂಗಳು= ಈ ಅದ್ಭುತದ ಬಗೆಗೆ ಏನನ್ನು ಹೇಳಲಿ! ಒಂದು ಗುರಿಗೆ ಎರಡು ಬಾಣಗಳನ್ನು ತೊಡಬೇಡ, ಗುರಿ ತಪ್ಪಬೇಡ ಎಂದು ಪಾರ್ಥನನ್ನು ಹೊಡೆದ ಮಂತ್ರಾಸ್ತ್ರಂಗಳು ಬೇಡಿಕೊಂಡವು, ಎಲೆ ಜನಮೇಜಯ ಕ್ಷಿತಿಪ.

1.38.40_29

ಮುಂದೆ ಕವಿವಂಬುಗಳು ಸುಭಟರ
ಕೊಂದು ಬಿದ್ದವು ಮತ್ತೆ ಬಳಿಯಲಿ
ಬಂದವಕೆ ಗುರಿಯಿಲ್ಲ ಹೇಳುವೆನೇನನದ್ಭುತವ |
ಒಂದು ಗುರಿಗೆರಡಂಬ ತೊಡಬೇ
ಡೆಂದು ಪಾರ್ಥನ ಬೇಡಿಕೊಂಡವು
ಸಂದ ಮಂತ್ರಾಸ್ತ್ರಂಗಳೆಲೆ ಜನಮೇಜಯ ಕ್ಷಿತಿಪ || ೪೦ ||

1.38.40_30

ಮುಂದೆ ಕವಿವ+ ಅಂಬುಗಳು ಸುಭಟರ ಕೊಂದು ಬಿದ್ದವು= ಮುಂದೆ ಆವರಿಸಿ ನುಗ್ಗಿದ ಬಾಣಗಳು ಕವರವನ ಸುಭಟರನ್ನು ಕೊಂದು ಬಿದ್ದವು. ಮತ್ತೆ ಬಳಿಯಲಿ ಬಂದ+ ಅವಕೆ ಗುರಿಯಿಲ್ಲ ಹೇಳುವೆನು+ ಏನನು+ ಅದ್ಭುತವ= ಮತ್ತೆ ಅರ್ಜುನನ ಬಳಿಗೆ ಬಂದ ಆ ಮಂತ್ರಾಸ್ತ್ರಗಳಿಗೆ, ಅವಕ್ಕೆ ಪನಃ ಹೊಡೆಯಲು ಗುರಿಯಿಲ್ಲ- ಶತ್ರುಗಳೇ ಇಲ್ಲ. ಹೇಳುವೆನು+ ಏನನು+ ಅದ್ಭುತವ, ಒಂದು ಗುರಿಗೆ+ ಎರಡು+ ಅಂಬ ತೊಡಬೇಡ+ ಎಂದು ಪಾರ್ಥನ ಬೇಡಿಕೊಂಡವು, ಸಂದ ಮಂತ್ರಾಸ್ತ್ರಂಗಳು= ಈ ಅದ್ಭುತದ ಬಗೆಗೆ ಏನನ್ನು ಹೇಳಲಿ! ಒಂದು ಗುರಿಗೆ ಎರಡು ಬಾಣಗಳನ್ನು ತೊಡಬೇಡ, ಗುರಿ ತಪ್ಪಬೇಡ ಎಂದು ಪಾರ್ಥನನ್ನು ಹೊಡೆದ ಮಂತ್ರಾಸ್ತ್ರಂಗಳು ಬೇಡಿಕೊಂಡವು, ಎಲೆ ಜನಮೇಜಯ ಕ್ಷಿತಿಪ.

1.38.41

ಹಿಕ್ಕಿದವು ಹಯಬಲದ ಸುಭಟರ
ನೊಕ್ಕಿ ತೂರಿದವಾನೆಗಳ ಸಾ
ಲಿಕ್ಕಿ ನಟ್ಟವು ಬಹಳ ರಕ್ತದ ಕೆಸರ ಕೈಗಳಲಿ |
ಮುಕ್ಕಿದವು ಮಲೆತವರ ಮಾಂಸವ
ನಿಕ್ಕಿದವು ದ್ವಿಜಗಣಕೆ ಛತ್ರವ
ನಿಕ್ಕಿದವು ದಿಗುವಳೆಯದಲಿ ರಣಧೀರನಂಬುಗಳು || ೪೧ ||

1.38.41_31

ಹಿಕ್ಕು = 1. ಎಳೆದುಕೊಳ್ಳು. 2. ಸೆಳೆದು ಅಪ್ಪಿಕೊಳ್ಳು. 3. ತಲೆಗೂದಲನ್ನು ಹಣಿಗೆಯಿಂದ ಹಿಕ್ಕು,- ಸಿಕ್ಕು ಬಿಡಿಸಿ ಓರಣಗೊಳಿಸು. 4. ದೋಚು. 5. ಒಟ್ಟುಗೂಡು.(ಸಾಹಿತ್ಯ ಪರಿಷತ್ ನಿಘಂಟು)
ಹಿಕ್ಕುದವು ಹಯಬಲದ ಸುಭಟರನು+ ಒಕ್ಕಿ, ತೂರಿದವು+ = ಹಯಬಲದ/ ಕುದುರೆ ಸೈನ್ಯದ ಸುಭಟರನ್ನು ಬಾಚಿ (ತಲೆಕೂದಲಿನಿಂದ ಹೇನನ್ನು ತೆಗೆಯುವಂತೆ ) ಒಟ್ಟುಗೂಡಿಸಿ ತೂರಿ ಓಡಿಸಿದವು. ಆನೆಗಳ ಸಾಲು+ ಇಕ್ಕಿ, ನಟ್ಟವು ಬಹಳ ರಕ್ತದ ಕೆಸರ ಕೈಗಳಲಿ= ಅವನ ಬಾಣಗಳು ಆನೆಗಳನ್ನು ಸಾಲು ಸಾಲಾಗಿ (ಬತ್ತದ ಸಸಿಗಳನ್ನು ಇಕ್ಕಿ ನೆಡುವಂತೆ) ಬಡಿದು ಮಲಗಿಸಿ ರಕ್ತದ ಕೆಸರ ಕೈಗಳಲಿ ನೆಟ್ಟವು. ಮುಕ್ಕಿದವು ಮಲೆತವರ ಮಾಂಸವನು,+= ಎದುರು ನಿಂತವರ ಮಾಂಸವನ್ನು ಹೊಕ್ಕು ತಿಂದವು. ಇಕ್ಕಿದವು ದ್ವಿಜಗಣಕೆ ಛತ್ರವನು,= ಬ್ರಾಹ್ಮಣರಿಗೆ ಶ್ರಾದ್ಧದ ಊಟವನ್ನು ಛತ್ರದಲ್ಲಿ ಹಾಕಿಸಿದವು. + ಇಕ್ಕಿದವು ದಿಗುವಳೆಯದಲಿ- ದಿಕ್+ ವಲಯದಲಿ ರಣಧೀರನ+ ಅಂಬುಗಳು= ಎಲ್ಲಾ ದಿಕ್ಕಿನಲ್ಲಿ ರಣಧೀರ ಅರ್ಜುನನ ಅಂಬುಗಳು/ಬಾಣಗಳು ಇಕ್ಕಿದವು-ನೆಟ್ಟವು.

1.38.42

ಒಗ್ಗೊಡೆಯದೌಕಿದ ಮಹೀಶರು
ಮುಗ್ಗಿದರು ಮುನ್ನಾಳ ಮೇಳದ
ವೊಗ್ಗಿನಲಿ ಮುಂಕೊಂಡು ಬಿರುದರು ಬಿಸುಟರೊಡಲುಗಳ |
ನುಗ್ಗುನುಸಿಯಾಯ್ತತಿರಥರು ಗಜ
ಮೊಗ್ಗರದ ಮೊನೆ ಮುರಿದು ಕಾಲನ
ಸಗ್ಗಳೆಯ ಸೆಳೆದಂತೆ ಸುರಿದವು ರಕ್ತ ಧಾರೆಗಳು || ೪೨ ||

1.38.42_32

ಒಗ್ಗೊಡೆಯದ+ ಔಕಿದ (ಒತ್ತಿದ, ಹಿಸುಕಿದ) ಮಹೀಶರು ಮುಗ್ಗಿದರು= ಒಗ್ಗಟ್ಟಾಗದ ವತ್ತಡಕ್ಕೆ ಸಿಲುಕಿದ ರಾಜರು ಮುಗ್ಗಿದರು- ಸೋತರು; ಮುನ್ನಾಳ ಮೇಳದ ವೊಗ್ಗಿನಲಿ ಮುಂಕೊಂಡು ಬಿರುದರು ಬಿಸುಟರು+ ಒಡಲುಗಳ= ಮುಂದಿನ ಸಾಲಿನ ಸೈನಿಕರು ಜೊತೆಸೇರಿಕೊಂಡು ಒಟ್ಟಾಗಿ ಮುಂದೆ ನಿಂತುಕೊಂಡು ಹೋರಾಡಿದ ಬಿರುದುಳ್ಳ ಶೂರರು, ಬಿಸುಟರು+ ಒಡಲುಗಳ- ಅರ್ಜುನನ ಬಾಣಕ್ಕೆ ದೇಹವನ್ನು ಬಿಟ್ಟು ಸ್ವರ್ಗಕ್ಕೆ ಹೋದರು, ಮರಣ ಹೊಂದಿದರು. ನುಗ್ಗುನುಸಿಯಾಯ್ತು+ ಅತಿರಥರು ಗಜ ಮೊಗ್ಗರದ (ಗುಂಪು- ದಳ) ಮೊನೆ ಮುರಿದು ಕಾಲನ ಸಗ್ಗಳೆಯ ಸೆಳೆದಂತೆ ಸುರಿದವು ರಕ್ತ ಧಾರೆಗಳು= ಅತಿರಥರು ಮತ್ತು ಗಜ ಸೈನ್ಯದ ದಳದ ಎದುರು ಸಾಲು ಮುರಿದುಬಿದ್ದು ನುಗ್ಗುನುಸಿಯಾಯಿತು, ನಿರ್ನಾಮವಾಯಿತು. ಕಾಲನ- ಯಮನ ಸಗ್ಗಳೆಯ ಸೆಳೆದಂತೆ= ಕಾಲನ ರಕ್ತ ತುಂಬಿದ ಚರ್ಮದ ಚೀಲ ಹರಿದಹಾಗೆ ರಕ್ತ ಧಾರೆಗಳು ಸುರಿದವು.
ಸಗ್ಗಳೆ= 1. ನೀರುತುಂಬುವ ಚರ್ಮದ ಚೀಲ. (ಸಾ.ಪ.ನಿ.)

1.38.43

ಕಾಲದಲಿ ಪರಿಪಕ್ವವಾದ ವಿ
ಶಾಲಿತ ಸ್ಥಾವರದ ಜಂಗಮ
ಜಾಲವನು ಕಾಲಾಗ್ನಿ ಕವಿಕವಿದಟ್ಟಿ ಸುಡುವಂತೆ |
ಮೇಲು ಮೇಲೊಡಗವಿವ ಬಾಣ
ಜ್ವಾಲೆಯಲಿ ಕುರುಸೈನ್ಯ ಕಾನನ
ಮಾಲೆಯನು ಕಲಿಪಾರ್ಥ ಪಾವಕನುರುಹಿದನು ಮುಳಿದು || ೪೩||

1.38.44

ಯಾವ ಬಿಲ್ಲಾಳಾವ ಲಾಘವ
ದಾವ ಗಾಡಿಕೆ ಯಾವ ಚಳಕವ
ದಾವ ಶರ ಸಂಧಾನವಾವ ವಿಹಾರವಾವ ಪರಿ |
ರಾವಣನೊಳಿಂದ್ರಾರಿ ರಾಘವ
ದೇವ ಲಕ್ಷ್ಮಣರಲ್ಲಿ ಕಾಣೆನಿ
ದಾವ ಧನು ಶರವಿದ್ಯೆ ಮಝ ಭಾಪೆಂದನಾ ಹನುಮ || ೪೪ ||

1.38.45

ಕಾಣಬಾರದು ಬಿಡುವ ಹೂಡುವ
ಕೇಣವನು ಪರಮಾಣು ಪುಂಜವ
ಕಾಣವೇ ಕಣ್ಣುಗಳು ನಮ್ಮವು ಮರ್ತ್ಯರಾಲಿಗಳೆ |
ಜಾಣಪಣವಿದು ಶಿವ ಸುದರ್ಶನ
ಪಾಣಿಗಳಿಗಹುದಮರಪತಿ ಪದ
ದಾಣೆ ಹುಸಿಯಲ್ಲೆನುತ ಬೆರಗಾಯ್ತು ಸುರ ಕಟಕ || ೪೫ ||

1.38.45_33

ಕೇಣ = ವ್ಯಾಪಾರ ಶ್ರೇಣಿ, ವಿಧಾನ; ಮರ್ತ್ಯರ ಆಲಿಗಳು= ಮಾನವರ ಕಣ್ಣುಗಳು

1.38.46

ಏರುವಡೆದರು ಕೆಲರು ಕೆಲರಸು
ಸೂರೆಯೋದದು ಮತ್ತೆ ಕೆಲರೆದೆ
ಡೋರುಗಳ ಪೂರಾಯ ಗಾಯದಲುಸುರ ತೆಗೆಬಗೆಯ |
ಕಾರಿದರು ರಕ್ತವನು ಸಗ್ಗಕೆ
ಗೂರು ಮಾರಾಡಿದರು ತಲೆಗಳ
ಹೇರಿದರು ಹರಣವನುವೊಟ್ಟಿಗೆ ಕಾಲನರಮನೆಗೆ || ೪೬ ||

1.38.46_34

ಏರುವಡೆದರು (ಆಯಾಸದಿಂದ - ಉಬ್ಬಸದಿಂದ ಏದುಸಿರು ಬಿಟ್ಟರು) ಕೆಲರು, ಕೆಲರ+ಅಸು ಸೂರೆಯೋದದು= ಯುದ್ಧದಲ್ಲಿ ಕೌರವಬ ಸೇನೆಯ ಕೆಲವರು ಏದುಸಿರು ಪಡೆದರು, ಕೆಲವರ ಪ್ರಾಣವೇ ಹೊರಟುಹೋಯಿತು.// ಮತ್ತೆ ಕೆಲರ+ ಎದೆ ಡೋರುಗಳ ಪೂರಾಯ ಗಾಯದಲಿ+ ಉಸುರ ತೆಗೆ ಬಗೆಯ ಕಾರಿದರು ರಕ್ತವನು= ಎದೆಯಗೂಡಿನ ಆಳವಾದ ಗಾಯದಲ್ಲಿ, ಉಸಿರು ಬಿಟ್ಟರೆ ಅದರಲ್ಲಿ ರಕ್ತವನ್ನೇ ಕಾರಿದರು.// ಸಗ್ಗಕೆ ಗೂರು ಮಾರಾಡಿದರು ತಲೆಗಳ ಹೇರಿದರು ಹರಣವನುವೊಟ್ಟಿಗೆ ಕಾಲನ+ ಅರಮನೆಗೆ= ಕೆಲವರು ಹೆದರಿ ಉಬ್ಬಸ ಹೆಚ್ಚಿ ತಲೆಗಳ ಮಾಲೆಮಾಡಿದರು, ಅವರ ಪ್ರಾಣಗಳನ್ನು ಒಟ್ಟು ಸೇರಿಸಿ ಯಮನ ಅರಮನೆಗೆ ಹೇರಿ ಕಳಿಸದರು.

1.38.47

ಚೆಲ್ಲಿ ಹೋಯಿತು ಕೆಲಕೆ ಕೆಲಬರು
ಬಿಲ್ಲ ಬಿರುಕೋಲುಗಳ ಬಿಸುಟರು
ಗಲ್ಲೆಗೆಡೆದರು ಕೆಲರು ಪಾರ್ಥನ ಕೋಲ ತೋಹಿನಲಿ |
ಮೆಲ್ಲ ಮೆಲ್ಲನೆ ಸರಿವ ಕೌರವ
ಮಲ್ಲನನು ಕಂಡಟ್ಟಿದನು ತುರು
ಗಳ್ಳ ಹೋಗದಿರೆನುತ ಮೂದಲಿಸಿದನು ಕಲಿಪಾರ್ಥ || ೪೭ ||

1.38.48

ಕಾಯಲಾಪರೆ ಕರೆಯಿರಾ ಕ
ರ್ಣಾಯತಾಸ್ತ್ರರನಕಟ ಕೌರವ
ರಾಯ ಸಿಲುಕಿದನೆಲ್ಲಿ ಭೀಷ್ಮ ದ್ರೋಣ ಕೃಪರೆನುತ |
ಬಾಯ ಬಿಡೆ ಕುರುಸೇನೆ ಗುರು ಗಾಂ
ಗೇಯ ಶಕುನಿ ವಿಕರ್ಣ ಕೃಪ ರಾ
ಧೇಯ ಸೈಂಧವ ಚಿತ್ರಸೇನಾದಿಗಳು ಜೋಡಿಸಿತು || ೪೮ ||

1.38.48_35

ಗೋವುಗಳ ರಕ್ಷಣೆ

1.38.49

ಇತ್ತ ತುರುಗಳ ಬಿಸುಟು ರಾಯನ
ತೆತ್ತಿಗರು ತಲ್ಲಣಿಸಿ ಹಾಯ್ದರು
ಹೊತ್ತಿದವು ಮುಸುಡುಗಳು ಸಂಗರ ವಿಜಯಗರ್ವಿತರ |
ಸುತ್ತ ಗೋವರ ಸನ್ನೆಯಲಿ ಪುರ
ದತ್ತ ಮುಂದಾದವು ಪಶುವ್ರಜ
ವುತ್ತರನು ಮುಳುಗಿದನು ಪರಿತೋಷ ಪ್ರವಾಹದಲಿ || ೪೯ ||

1.38.50

ಬಿಗಿದ ಕೆಚ್ಚಲ ತೊರೆದೊಗುವ ಹಾ
ಲುಗಳ ಮಿಗೆ ಸೂಳೆದ್ದ ಬಾಲವ
ಮೊಗ ನೆಗಹಿ ದೆಸೆದೆಸೆಯ ನೋಡುತ ಬೆಚ್ಚಿ ಬಿರುವರಿವ |
ಅಗಿದು ಸರಳಿಸಿ ನಿಲುವ ಹೊಸಬರ
ಸೊಗಡಿಗವ್ವಳಿಸುತ್ತ ಗೋವರು
ತೆಗೆದ ಪಥದಲಿ ತೆಕ್ಕೆವರಿದವು ಹಿಂಡು ಹಿಂಡಿನಲಿ || ೫೦ ||

1.38.51

ಕೆಲವು ಕಡೆಗಂದಿಗಳು ಬಾಲದ
ಬಳಿಗೆ ಮೂಗಿಟ್ಟಡಿಗಡಿಗೆ ಮನ
ನಲಿದು ಮೋರೆಯನೆತ್ತಿ ಸುಕ್ಕಿಸಿ ಮತ್ತೆ ಹರಿ ಹರಿದು |
ಮಲೆತು ಕಾಲಲಿ ನೆಲನ ಕೆರೆದ
ವ್ವಳಿಸಿ ಮತ್ತೊಂದಿದಿರುವರೆ ಬಲು
ಸಲಗನೀಡಿರಿದಾಡುತಿರ್ದದು ಹಿಂಡು ಹಿಂಡಿನಲಿ || ೫೧ ||

1.38.51_36

ಕಡೆಗಂದಿ = ಕೊನೆಯ ಕರು ಹಾಕಿದ ಹಸು; (ಸಿರಿಗನ್ನಡ ಅರ್ಥಕೋಶ- ಕೊ.ಶಿ.ಕಾ.)- ಇಲ್ಲಿ ಬೆಳೆದ ಹೋರಿಗಳು ಎಂದು ಅರ್ಥಮಾಡುವುದೇ ಸರಿ- ಏಕೆಂದರೆ ಹಸುವಿನ ಬಾಲದ ಬುಡದ ಪುಚ್ಛಿಯ ವಾಸನೆ ನೋಡಿ ಆನಂದ ಪಡುವುದು ಹೋರಿಗಳು. ಮುಂದೆ ಹೋರಾಡುವ ಆಟವಾಡುವುದೂ ಹೋರಿಗಳ ಬಗೆಗೆ ಇದೆ.
ಕೆಲವು ಕಡೆಗಂದಿ ಹಸುಗಳು ಬಾಲದ ಬಳಿಗೆ ಮೂಗಿಟ್ಟು, ತಮ್ಮ ಊರುಕಡೆ ಹೋಗುತ್ತಿರುವುದನ್ನು ತಿಳಿದು,ಅಡಿಗಡಿಗೆ- ಮತ್ತೆ ಮತ್ತೆ ಮನನಲಿದು- ಮನಸ್ಸಿನಲ್ಲಿ ಆನಂದಪಟ್ಟು, ಮೋರೆಯನು-ಮುಸುಡಿಯನ್ನು- ಸುಂಡಿಯನ್ನು + ಎತ್ತಿ ಸುಕ್ಕಿಸಿ- ನಿರಿಗೆಮಾಡಿ, ಮತ್ತೆ ಹರಿ ಹರಿದು- ಮುಂದೆ ಮುಂದೆ ಹೋಗಿ, ಮಲೆತು- ಸೊಕ್ಕಿನಿಂದ ಕಾಲಲಿ ನೆಲನ- ನೆಲವನ್ನು ಕೆರೆದು+ಅವ್ವಳಿಸಿ- ಬೇಸರಪಟ್ಟು, ಮತ್ತೊಂದು ಹೋರಿ,+ ಇದಿರುವರೆ- ಇದಿರು ಬರಲು, ಬಲುಸಲಗನು ಗಟ್ಟಿಮುಟ್ಟಾದ ಹೋರಿಯು,+ ಈಡಿ-ಸುಂಡಿಯನ್ನು ಬಗ್ಗಿಸಿ ಕೋಡನ್ನು ಎದುರುಮಾಡಿ, ಗುರಿಯಿಟ್ಟು+ ಇರಿದು+ ಆಡುತಿರ್ದದು- ಆಡುತ್ತಿತ್ತು, ಹಿಂಡು ಹಿಂಡಿನಲಿ- ಹಿಂಡಿನಲ್ಲಿ.

1.38.52

ತಿರುಗಿ ಕೆಂದೂಳಿಡುತ ತುರುಗಳು
ಪುರಕೆ ಹಾಯ್ದವು ನಲವು ಮಿಗಲು
ತ್ತರ ಕಿರೀಟಿಗಳಾಂತುಕೊಂಡರು ಮತ್ತೆ ಕಾಳಗವ
ಅರಸು ಮೋಹರ ಮುರಿದು ಹರಿಬವ
ಮರಳಿಚುವ ಮಿಡುಕುಳ್ಳ ವೀರರ
ಧುರಕೆ ಬರಹೇಳೆನುತ ಬಾಣವ ತೂಗಿದನು ಪಾರ್ಥ || ೫೨ ||

1.38.52_37

♠♠♠
♦♣♣♣♣♣♣♣♣♣♣♣♣♣♣♣♣♣♣♣♦

1.38.52_38

ನೋಡಿ

1.38.52_39

ಕುಮಾರವ್ಯಾಸ ಭಾರತ
ಕುಮಾರವ್ಯಾಸಭಾರತ-ಸಟೀಕಾ
ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೧)
ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೨)
ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೩)
ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೪)
ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೫)
ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೬)
ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೭)
ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೮)
ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೯)
ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೧೦)

1.38.52_40

ಪರಿವಿಡಿ

1.38.52_41

ಉಲ್ಲೇಖ