Karnata Bharata Kathamanjari 1.36: ಸಟೀಕಾ (೪-ವಿರಾಟಪರ್ವ::ಸಂಧಿ-೫)
Karṇāṭa Bhārata Kathāmañjarī 1.36
- Language
- Kannada
ಸಟೀಕಾ (೪-ವಿರಾಟಪರ್ವ::ಸಂಧಿ-೫)
1.36.p1
<ಕುಮಾರವ್ಯಾಸ ಭಾರತ/ಸಟೀಕಾ
<ಕುಮಾರವ್ಯಾಸಭಾರತ-ಸಟೀಕಾ
1.36.p2
ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೫)
1.36.p3
ಸೂಚನೆ:
1.36.p4
ವೈರಿಭಟ ಸಂವರ್ತನೂತನ
ಭೈರವನು ಕಲಿಪಾರ್ಥ ಸಮರೋ
ದ್ಧಾರ ಸಾರಥಿಯಾದನಂದು ವಿರಾಟನಂದನಗೆ ||ಸೂಚನೆ||
1.36.p5
~~ಓಂ~~
1.36.p6
ಮತ್ಸ್ಯನಗರದ ಉತ್ತರಭಾಗದಲ್ಲಿ ಕೌರವನ ಧಾಳಿ
1.36.1
ಕೇಳು ಜನಮೇಜಯ ಸುಯೋಧನ
ನಾಳು ಮುತ್ತಿತು ತುರುಗಳನು ಮೇ
ಲಾಳು ಕವಿದುದು ಭೀಷ್ಮ ಕರ್ಣ ದ್ರೋಣ ಮೊದಲಾಗಿ |
ಕೋಲ ಸೂಟಿಯ ಸರಿವಳೆಗೆ ಗೋ
ಪಾಲ ಪಡೆ ಮುಗ್ಗಿದುದು ಗೋವರ
ಸಾಲ ಹೊಯ್ದರು ಕರ್ಣ ದುಶ್ಶಾಸನ ಜಯದ್ರಥರು || ೧ ||
1.36.2
ರಾಯ ಚೂಣಿಯ ಚಾತುರಂಗದ
ನಾಯಕರು ಮೇಳವಿಸಿ ಸಮರೋ
ಪಾಯದಲಿ ಹಿಂದಿಕ್ಕಿ ಕವಿದರು ಕೋಡಕೈಯವರು |
ಸಾಯಲಲಸದ ಗೋವರನು ಕೈ
ಗಾಯದೆಸುತವ ಸೆರೆಯ ಕೊಂಡರು
ಮಾಯವಾಯಿತು ಹರಿಬಕಾರರ ಸೇನೆ ರಣದೊಳಗೆ || ೨ ||
1.36.2_7
ರಾಯ- ಕೌರವನ, ಚೂಣಿಯ= ಮುಂದಿನ, ಚಾತುರಂಗದ ನಾಯಕರು ಮೇಳವಿಸಿ= ಒಟ್ಟಾಗಿ, ಸಮರೋಪಾಯದಲಿ ಹಿಂದಿಕ್ಕಿ ಕವಿದರು ಕೋಡಕೈಯವರು(ಕೋಡ = ಬಾಣ ಹಿಡಿದವರು) ಸಾಯಲು+ ಅಲಸದ= ಹಿಂಜರಿಯದ, ಗೋವರನು= ಗೋವಳರ ನಾಯಕನು, ಕೈಗಾಯದ+ ಎಸುತವ = ಕಾಪಾಡಲಾರದ ಸ್ಥಿತಿಯನ್ನು ನೋಡಿ, ಸೆರೆಯ ಕೊಂಡರು(ಗೋವುಗಳನ್ನು ಸರೆಹಿಡಿದರು.) ಮಾಯವಾಯಿತು ಹರಿಬಕಾರರ()ಕರ್ತವ್ಯನಿರತರಾದ ಗೋವಳರ ಸೇನೆ. ಸೇನೆ ರಣದೊಳಗೆ (ಯುದ್ಧದಲ್ಲಿ)
1.36.3
ಮೇಲುದಳಕಿದಿರಾಗಿ ಬರೆ ಹರಿ
ಗಾಳಗದೊಳೊಡೆಮುರಿದು ಗೋವರು
ಧೂಳಿಗೋಟೆಯಗೊಂಡರಮರರ ರಾಜಧಾನಿಗಳ |
ಸಾಲರಿದು ಕೆಟ್ಟೋಡಿದರು ಗೋ
ಪಾಲನೊಬ್ಬನ ಹಿಡಿದು ಮೂಗಿನ
ಮೇಲೆ ಸುಣ್ಣವ ಬರೆದು ಬಿಟ್ಟರು ಹಗೆಯ ಪಟ್ಟಣಕೆ || ೩ ||
1.36.3_8
ಮೇಲುದಳಕೆ (ಮುಖ್ಯದೊಡ್ಡ ಸೈನ್ಯಕ್ಕೆ)+ ಇದಿರಾಗಿ ಬರೆ-ಬರಲು, ಹರಿಗಾಳಗದೊಳು- ಕುದುರೆ ಸೈನ್ಯದಲ್ಲಿ,+ ಒಡೆಮುರಿದು- ಒಡೆಯನು- ನಾಯಕನು ಸತ್ತು, ಗೋವರು ಧೂಳಿಗೋಟೆಯಗೊಂಡರು- ಧೂಳಿಪಟವಾದರು, ಅನೇಕರುಉ ಸತ್ತು, ಪೂರ್ಣ ಸೋತುಹೋದರು,+ ಅಮರರ ರಾಜಧಾನಿಗಳ ಸಾಲರಿದು ಕೆಟ್ಟೋಡಿದರು= ದೇವತೆಗಳ ರಾಜಧಾನಿ ಅಮರಾವತಿಗೆ ಸತ್ತು ಓಡಿಹೋದರು- ಸ್ವರ್ಗಸ್ಥರಾದರು;, ಗೋಪಾಲನ+ ಒಬ್ಬನ ಹಿಡಿದು ಮೂಗಿನಮೇಲೆ ಸುಣ್ಣವ ಬರೆದು ಬಿಟ್ಟರು ಹಗೆಯ ಪಟ್ಟಣಕೆ= ಕೌರವರು ಗೋಪಾಲನ+ ಒಬ್ಬನ ಹಿಡಿದು- ಒಬ್ಬ ಗೋವಳನನ್ನು ಹಿಡಿದು ಮೂಗಿನಮೇಲೆ ಸುಣ್ಣವ ಬರೆದು, ಬಿಟ್ಟರು ಹಗೆಯ ಪಟ್ಟಣಕೆ- ವರಾಟನ ನಗರಕ್ಕೆ ಹೋಗಲು ಬಿಟ್ಟರು.
1.36.4
ಗರುವ ಗೋವರು ಹುಯ್ಯಲಿಗೆ ಹರಿ
ಹರಿದು ಕೆಡೆದರು ರಾಯ ಮೋಹರ
ತೆರಳಿ ತುರುಗಳ ಹಿಡಿದು ಹಿಂದಿಕ್ಕಿದರು ಕಾಳಗಕೆ |
ಬಿರುದರನು ಬರಹೇಳು ಹೋಗೆನೆ
ಕರದ ಬಿಲ್ಲನು ಬಿಸುಟು ಬದುಕಿದ
ಶಿರವ ತಡವುತ ಗೋವನೊಬ್ಬನು ಪುರಕೆ ಹರಿತಂದ || ೪ ||
1.36.4_9
ಗರುವ= ಗರ್ವದ -ಬಲಿಷ್ಠ ಗೋವರು ಹುಯ್ಯಲಿಗೆ= ಆರ್ಭಟಕ್ಕೆ, ಹರಿಹರಿದು= ಓಡು ಓಡುತ್ತಾ,(ಬಂದು ಎದುರಿಸಿ) ಕೆಡೆದರು= ಬಿದ್ದರು, ರಾಯಮೋಹರ= ರಾಜ ಸೈನ್ಯವು, ತೆರಳಿ ತುರುಗಳ ಹಿಡಿದು ಹಿಂದಿಕ್ಕಿದರು= ತೆರಳಿ ಮುಂದೆ ಹೋಗಿ, ತುರುಗಳ ಹಿಡಿದು- ಗೋವುಗಳನ್ನು ಹಿಡಿದುಕೊಂಡು, ಹಿಂದಿಕ್ಕಿದರು ಕಾಳಗಕೆ+= ಪುನಃ ಬಿರುದರನು ಬರಹೇಳು ಹೋಗು+ ಎನೆ= ಯುದ್ಧಕ್ಕೆ ದೊಡ್ಡವರನ್ನ ಬರಲು ಹೇಳು ಎನ್ನಲು,/ ಕರದ ಬಿಲ್ಲನು ಬಿಸುಟು ಬದುಕಿದ ಶಿರವ ತಡವುತ ಗೋವನೊಬ್ಬನು ಪುರಕೆ ಹರಿತಂದ= ಕೈಯಲ್ಲಿದ್ದ ಬಿಲ್ಲನ್ನು ಬಿಸುಟು-ಎಸೆದು, ಬದುಕಿದ ಶಿರವ ತಡವುತ= ಶತ್ರುಗಳು ಕಡಿಯದೆ ಬಿಟ್ಟ ತನ್ನ ತಲೆಯನ್ನ ಸವರಿಕೊಳ್ಳುತ್ತಾ,/ ಗೋವನೊಬ್ಬನು ಪುರಕೆ ಹರಿತಂದ= ಒಬ್ಬ ಗೋವಳನು ವಿರಾಟನಗರಕ್ಕೆ ಓಡಿಬಂದ.
1.36.5
ಗಣನೆಯಿಲ್ಲದು ಮತ್ತೆ ಮೇಲಂ
ಕಣದ ಭಾರಣಿ ನೂಕಿತೆಲವೋ
ರಣದ ವಾರ್ತೆಯದೇನೆನುತ ಜನವೆಲ್ಲ ಗಜಬಜಿಸೆ |
ರಣವು ಕಿರಿದಲ್ಲೆನುತ ಢಗೆ ಸಂ
ದಣಿಸಲವನೈತಂದು ಮೇಳದ
ಗಣಿಕೆಯರ ಮಧ್ಯದಲಿ ಮೆರೆದಿರೆ ಕಂಡನುತ್ತರನ || ೫ ||
1.36.5_10
ಗಣನೆಯಿಲ್ಲ+ ಅದು ಮತ್ತೆ ಮೇಲಂಕಣದ ಭಾರಣಿ ನೂಕಿತು+= ಲೆಕ್ಕಕ್ಕೆಸಿಗದಷ್ಟು ದೊಡ್ಡದು ಅದು, ಗೋವಳರಾದ ನಮ್ಮ ಶಕ್ತಿಯನ್ನು ಮೀರಿದ ಭಾರದ ಹೊಣೆ; ಎಲವೋ ರಣದ ವಾರ್ತೆಯು+ ಅದು+ ಏನು+ ಎನುತ ಜನವೆಲ್ಲ ಗಜಬಜಿಸೆ= ಎಲವೋ ಯುದ್ಧದ ವಾರ್ತೆಯ ವಿಚಾರ ಅದೇನು ಎನ್ನುತ್ತಾ ಜನರೆಲ್ಲಾ ಗಜಬಜಿಸಿ ಗದ್ದಲ ಮಾಡಲು, ಗೋವಳನು,/ ರಣವು ಕಿರಿದಲ್ಲ+ ಎನುತ= ಯುದ್ಧವು ಅದು ಸಾಮಾನ್ಯದ್ದಲ್ಲ ಎಂದು ಹೇಳುವಾಗ,/ ಢಗೆ ಸಂದಣಿಸಲು+= ಓಡಿಬಂದ ಆಯಾಸದಿಂದ ಮೇಲುಸಿರು ಸಿಕ್ಕಲು, ಏದುಸಿರು ಬಿಡುತ್ತಾ/ ಅವನು+ ಐತಂದು ಮೇಳದ- ಸಮೂಹದ ಗಣಿಕೆಯರ ಮಧ್ಯದಲಿ ಮೆರೆದಿರೆ ಕಂಡನು+ ಉತ್ತರನ= ಅವನು ಬಂದು ಅರಮನೆಯ ವೇಶ್ಯೆಯರ ಸಮೂಹದ ಮಧ್ಯದಲ್ಲಿ ಮೆರೆದು ಶೋಭಿಸುತ್ತಿದ್ದ ವಿರಾಟನ ಮಗ ಉತ್ತರನನ್ನು ಕಂಡನು.
1.36.5_11
ಉತ್ತರನ ಪೌರುಷ
1.36.6
ಬೆಗಡು ಮುಸುಕಿದ ಮುಖದ ಭೀತಿಯ
ಢಗೆಯ ಹೊಯ್ಲಿನ ಹೃದಯ ತುದಿ ನಾ
ಲಗೆಯ ತೊದಳಿನ ನುಡಿಯ ಬೆರಗಿನ ಬರತ ತಾಳಿಗೆಯ |
ಅಗಿವ ಹುಯ್ಯಲುಗಾರ ಬಹಳೋ
ಲಗಕೆ ಬಂದನು ನೃಪ ವಿರಾಟನ
ಮಗನ ಕಾಲಿಂಗೆರಗಿದನು ದೂರಿದನು ಕಳಕಳವ || ೬ ||
1.36.6_12
ಬೆಗಡು= ಆಶ್ಚರ್ಯ. ಭಯ; ಮುಸುಕಿದ ಮುಖದ ಭೀತಿಯ ಢಗೆಯ ಹೊಯ್ಲಿನ ಹೃದಯ= ಏದುಸಿರಿನ, ಬಡಿದುಕೊಳ್ಳತ್ತಿರುವ ಹೃದಯದ ಸದ್ದಿನ, ತುದಿ ನಾಲಗೆಯ ತೊದಳಿನ ನುಡಿಯ= ನಾಲಗೆಯಾಡದೆ ತುದಿನಾಲಿಗೆಯಲ್ಲಿ ತೊದಲುತ್ತಿರುವ, ಬೆರಗಿನ= ಅಚ್ಚರಿಯ, ಬರತ ತಾಳಿಗೆಯ ಅಗಿವ= ಒಣಗಿದ ನಾಲಿಗೆ ಅಂಕುಲಿನೊಡನೆ ಬಾಯಿಬಾಯಿ ಬಿಡುತ್ತಿರುವ,, ಹುಯ್ಯಲುಗಾರ= ಗೋಳಾಡುವ, ಬಹಳ+ ಓಲಗಕೆ= ಬಹಳ ಹೆಂಗಳೆಯರೂ ಜನರೂ ಇದ್ದ ಸಭೆಗೆ ಬಂದನು. ನೃಪ ವಿರಾಟನ ಮಗನ ಕಾಲಿಂಗೆ+ ಎರಗಿದನು ದೂರಿದನು ಕಳಕಳವ= ನೃಪ ವಿರಾಟನ ಮಗನ ಕಾಲಿಗೆ ಬಿದ್ದು ಎದುರಾದ ಸಂಕಟವನ್ನು ದೂರಿದನು.
1.36.7
ಏಳು ಮನ್ನೆಯ ಗಂಡನಾಗು ನೃ
ಪಾಲ ಕೌರವ ರಾಯ ತುರುಗಳ
ಕೋಳ ಹಿಡಿದನು ಸೇನೆ ಬಂದುದು ಧರಣಿಯಗಲದಲಿ |
ದಾಳಿ ಬರುತಿದೆ ಕರೆಸಿಕೋ ನಿ
ನ್ನಾಳು ಕುದುರೆಯ ರಾಣಿವಾಸದ
ಗೂಳೆಯವ ತೆಗೆಸೆಂದು ನುಡಿದನು ಬಿನ್ನಹದ ಬಿರುಬ || ೭ ||
1.36.7_13
ಏಳು ಮನ್ನೆಯ ಗಂಡನಾಗು= ಗೋಪಾಲಕನು ಉತ್ತರನಿಗೆ, 'ಏಳು ಮನ್ನೆಯ- ಶೂರರ, ಗೌರವವುಳ್ಳವರ ಗಂಡನಾಗು- ಮುಖ್ಯನಾಗು, ನೃಪಾಲ ಕೌರವ ರಾಯ ತುರುಗಳ ಕೋಳ ಹಿಡಿದನು= ರಾಜ ಕೌರವರಾಯನು ತುರುಗಳ ಕೋಳ(ಕುಟ್ಟುವ ಕೆಲಸಕ್ಕೆ ಉಪಯೋಗಿಸುವ ಕಬ್ಬಿಣದ ಒಂದು ಉಪಕರಣ) ಹಿಡಿದನು= ನಮ್ಮ ಗೋವುಗಳ ಕೊರಳ ಹಗ್ಗವನ್ನು ಹಿಡಿದಿದ್ದಾನೆ. ಸೇನೆ ಬಂದುದು ಧರಣಿಯ+ ಅಗಲದಲಿ ದಾಳಿ ಬರುತಿದೆ+= ಭೂಮಿಯ ಅಗಲಕ್ಕೂ ತುಂಬಿದ ದೊಡ್ಡ ಸೇನೆ ಬಂದಿದೆ. ಅದು ದಾಳಿ ಮಾಡಲು ಬರುತ್ತಿದೆ. ತಡಮಾಡದೆ ನಿನ್ನ ಸೈನಿಕರಗಳನ್ನೂ, ಕುದುರೆಗಳನ್ನೂ ಕರೆಸಿಕೋ. ರಾಣಿವಾಸದ ಗೂಳೆಯವ ತೆಗೆಸು+ ಎಂದು ನುಡಿದನು ಬಿನ್ನಹದ ಬಿರುಬ -ಗಡುಸಾದ= ರಾಣಿವಾಸದ ಗುಂಪನ್ನು ತೆಗೆಸು, ಎಂದು ಗೋವಳಮು ಗಡುಸಾದ ಭಾಷೆಯಲ್ಲಿ ಬಿನ್ನಹ - ವಿಜ್ಞಾಪನೆಯನ್ನು ನುಡಿದನು- ಮಾಡಿದನು. -
1.36.8
ಏನೆಲವೊ ತುದಿ ಮೂಗಿನಲಿ ಬಿಳು
ಪೇನು ಢಗೆ ಹೊಯ್ದೇಕೆ ಬಂದೆಯಿ
ದೇನು ನಿನ್ನಿನ ರಣವನಯ್ಯನು ಗೆಲಿದುದೇನಾಯ್ತು |
ಏನು ಭಯ ಬೇಡಿನ್ನು ಕಲಹನಿ
ಧಾನ ವಾರ್ತೆಯದೇನೆನಲು ಕುರು
ಸೇನೆ ಬಂದುದು ತುರುವ ಹಿಡಿದರು ಬಡಗ ದಿಕ್ಕಿನಲಿ || ೮ ||
1.36.8_14
ಏನು+ ಎಲವೊ ತುದಿ ಮೂಗಿನಲಿ ಬಿಳುಪೇನು= ಏನಯ್ಯಾ, ಎಲವೊ ನಿನ್ನ ತುದಿ ಮೂಗಿನಲಿ ಬಿಳುಪ ನಾಮ ಅದೇಕೆ?// ಢಗೆ ಹೊಯ್ದ+ ಏಕೆ ಬಂದೆ?= ಏದುಸಿರು ಬಿಡುತ್ತಾ ಅದೇಕೆ ಹೀಗೆ ಬಂದೆ? +ಯಿ+ ಇದೇನು ನಿನ್ನಿನ ರಣವನು+ ಅಯ್ಯನು ಗೆಲಿದುದು+ ಏನಾಯ್ತು?= ಇದೇನು ನಿನ್ನೆಯ ದಿನ ಅಯ್ಯನು- ನನ್ನತಂದೆ, ಗೆಲಿದುದು- ಯುದ್ಧದಲ್ಲಿ ಗೆದ್ದುದು+ ಏನಾಯ್ತು? ಏನು?= ಏನು ಮತ್ತೆ ಸಮಾಚಾರ? ಭಯ ಬೇಡ'+ ಇನ್ನು ಕಲಹ ನಿಧಾನ ವಾರ್ತೆಯು+ ಅದು+ ಏನು+= ಇನ್ನು ಕಲಹ ಮುಖ್ಯ ವಾರ್ತೆಯು+ ಅದು+ ಏನು?+ ಎನಲು ಕುರುಸೇನೆ ಬಂದುದು ತುರುವ ಹಿಡಿದರು ಬಡಗ(ಉತ್ತರ) ದಿಕ್ಕಿನಲಿ= ಗೋವಳನು, ಕುರುಸೇನೆ ಬಂದಿದೆ; ಉತ್ತರ) ಈಗ ದಿಕ್ಕಿನಲಿ ತುರುವ- ಗೋವುಗಳನ್ನು ಹಿಡಿದರು ಬಡಗ(ಉತ್ತರ) ದಿಕ್ಕಿನಲಿ.
1.36.9
ರಾಯ ತಾನೈತಂದನಾತನ
ನಾಯಕರು ಗುರುಸುತನು ಗುರು ಗಾಂ
ಗೇಯ ಶಕುನಿ ವಿಕರ್ಣ ಕರ್ಣ ಜಯದ್ರಥಾದಿಗಳು |
ಜೀಯ ಬಿನ್ನಹ ದಳದ ತೆರಳಿಕೆ
ತಾಯಿಮಳಲಂಬುಧಿಗೆ ಮೋಹರ
ದಾಯತವ ನಾನೆತ್ತು ಬಲ್ಲೆನು ಹೊಕ್ಕು ಹೊಗಳುವರೆ || ೯ ||
1.36.10
ಎತ್ತ ದುವ್ವಾಳಿಸುವಡಾಲಿಗ
ಳತ್ತಲಾನೆಯ ಥಟ್ಟು ಕಾಲಾ
ಳೊತ್ತರದ ರಥವಾಜಿ (ಪಾಠ- ರಣವಾಜಿ)ರೂಢಿಯ ರಾಯ ರಾವುತರು |
ಸುತ್ತ ಬಳಸಿಹುದೆತ್ತ ಮನ ಹರಿ
ವತ್ತ ಮೋಹರವಲ್ಲದನ್ಯವ
ಮತ್ತೆ ಕಾಣೆನು ಜೀಯ ಹದನಿದು ವೈರಿ ವಾಹಿನಿಯ || ೧೦ ||
1.36.10_15
ಎತ್ತ ದುವ್ವಾಳಿಸುವಡೆ+ ಆಲಿಗಳ+= ಯಾವಕಡೆ ಕಣ್ಣೋಟ ಹರಿಸಿದರೆ,/ ಅತ್ತಲು+ ಆನೆಯ ಥಟ್ಟು= ಅಲ್ಲಿ ಆನೆಗಳ ಸಮೂಹ,, ಕಾಲಾಳು+ ಒತ್ತರದ ರಥವಾಜಿ (ಪಾ: ರಣವಾಜಿ) ರೂಢಿಯ ರಾಯ ರಾವುತರು ಸುತ್ತ ಬಳಸಿಹುದು+= ಮತ್ತೆ ಸೈನಿಕರು, ಒತ್ತಿ ನಿಂತಿರುವ ರಥಗಳು- ಕುದುರೆಗಳು,// ಎತ್ತ ಮನ ಹರಿವತ್ತ ಮೋಹರವಲ್ಲದೆ+ ಅನ್ಯವ ಮತ್ತೆ ಕಾಣೆನು= ಎತ್ತ -ಯಾವಕಡೆ, ಮನ ಹರಿವತ್ತ- ಮನಸ್ಸುಹರಿದ ಕಡೆ ನೋಡಿದರೂ, ಮೋಹರವಲ್ಲದೆ+ ಅನ್ಯವ ಮತ್ತೆ ಕಾಣೆನು= ಸೈನ್ಯವಲ್ಲದೆ ಬೇರೆ ಏನನ್ನೂ ಕಾಣಲಿಲ್ಲ.// ಜೀಯ ಹದನು+ ಇದು ವೈರಿ ವಾಹಿನಿಯ (ಸೈನ್ಯದ)= ಓಡೆಯಯನೇ ಇದು ಸತ್ರು ಸೈನ್ಯದ ಹದನು- ನಿಜಸ್ಥಿತಿ, ಎಂದನು ಗೋವಳ.
1.36.11
ಒಡ್ಡಿದರೊ ಪಡಿನೆಲನನವನಿಯ
ದಡ್ಡಿಯೋ ಮೇಣೆನಲು ಝಲ್ಲರಿ
ಯೊಡ್ಡು ತಳಿತುದು ಚಮರ ಸೀಗುರಿಗಳ ಪತಾಕೆಯಲಿ |
ಅಡ್ಡ ಹಾಯ್ದಿನ ಕಿರಣ ಪವನನ
ಖಡ್ಡತನ ನಗೆಯಾಯ್ತು ಕೌರವ
ನೊಡ್ಡನಭಿವರ್ಣಿಸುವಡರಿಯೆನು ಜೀಯ ಕೇಳೆಂದ || ೧೧ ||
1.36.11_16
ಒಡ್ಡಿದರೊ (ತುಂಬಿಸಿದರೊ) ಪಡಿನೆಲನನು+ ಅವನಿಯ- ಭೂಮಿಯ, ದಡ್ಡಿಯೋ= ತೆರೆ, ಮುಸುಕು,/ ಮೇಣ್+ ಎನಲು ಝಲ್ಲರಿಯೊಡ್ಡು= ಗೊಂಡೆ, ಕೊಡೆ, ಬಲೆಯಂತಹಸಿಂಗಾರವಸ್ತ್ರಗಳ ರಾಶಿ;// ಗೊಂಡೆ;ಕೊಡೆ;ಬಲೆಯಂತಹಸಿಂಗಾರವಸ್ತ್ರ;= ಅಲಂಕಾರದ ಗೊಂಡೆಗಳು, ಬಿಳಿಯ, ಮತ್ತು ಬಣ್ಣದ ಕೊಡೆಗಳು; ಬಲೆಯಂತಹ ಸಿಂಗಾರವಸ್ತ್ರಗಳ ಬಾವುಟಗಳು; ಅಡ್ಡ ಹಾಯ್ದಿನ ಕಿರಣ ಪವನನ ಖಡ್ಡತನ ನಗೆಯಾಯ್ತು= ಅಡ್ಡ ಹಾಯ್ದಿನ ಕಿರಣ- ಸೂರ್ಯನ ಕಿರಣಗಳು ಅವನ್ನು ದಾಟಿ ಹಾಯಲಾರದಯ, ಪವನನ(ವಾಯು) ಖಡ್ಡತನ ನಗೆಯಾಯ್ತು= ಗಾಳಿಯು ಅದನ್ನು ದಾಟಲು ಹೋಗಿ ಆಗದೆ ನೆಗೆಪಾಟಲಾಗಿತ್ತು, ಅಷ್ಟು ಸೈನ್ಯ ದಟ್ಟೈಸಿದೆ. ಕೌರವನ+ ಒಡ್ಡನು+ ಅಭಿವರ್ಣಿಸುವಡೆ+ ಅರಿಯೆನು ಜೀಯ ಕೇಳೆಂದ= ಜೀಯ ಕೇಳು, ಕೌರವನ ಒಡ್ಡನು- ಸೈನ್ಯವನ್ನು, ಅಭಿವರ್ಣಿಸುವಡೆ- ವಿವರಿಸಲು, ಅರಿಯೆನು- ನನಗೆ ತಿಳಿಯದು. ಜೀಯ ಕೇಳು ಎಂದ ಗೋವಳ.
1.36.12
ಒಳಗೆ ನೀ ಕಾದುವೊಡೆ ದುರ್ಗವ
ಬಲಿಸು ಬವರಕೆ ಹಿಂದುಗಳೆಯದೆ
ನಿಲುವ ಮನ ನಿನಗೀಗಲುಂಟೇ ನಡೆಯಬೇಕೆನಲು |
ಕೆಲಬಲನ ನೋಡಿದನು ಮೀಸೆಯ
ನಲುಗಿದನು ತನ್ನಿದಿರ ಮೇಳದ
ಲಲನೆಯರ ಮೊಗ ನೋಡತುತ್ತರ ಬಿರುದ ಕೆದರಿದನು || ೧೨ ||
1.36.12_17
ಒಳಗೆ ನೀ ಕಾದುವೊಡೆ ದುರ್ಗವ ಬಲಿಸು=ಗೋಪಾಲಕ ಹೇಳಿದನು, ಕೋಟೆಯ ಒಳಗಿದ್ದು ಯುದ್ಧವನ್ನು ಮಾಡುವುದಾದರೆ ದುರ್ಗಕ್ಕೆ ಕಾವಲನ್ನು ಬಲಪಡಿಸು. ಬವರಕೆ ಹಿಂದುಗಳೆಯದೆ ನಿಲುವ ಮನ ನಿನಗೆ+ ಈಗಲುಂಟೇ= ಯುದ್ಧಕ್ಕೆ ಹಿಂದೆಗೆಯದೇ ಶತ್ರುವನ್ನು ಎದುರಿಸಲು ಈಗ ನಿನಗೆ ಮನಸ್ಸಿದೆಯೇ? ನಡೆಯಬೇಕು+ ಎನಲು= ಕೂಡಲೆ ನೀವು ಯುದ್ಧಕ್ಕೆ ಹೊರಡಬೇಕು,ಎನ್ನಲು,// ಕೆಲಬಲನ ನೋಡಿದನು ಮೀಸೆಯನು+ ಅಲುಗಿದನು= ಅತ್ತಿತ್ತ ಇದ್ದವರನ್ನು ನೋಡಿದನು; ತನ್ನ ಮೀಸೆಯನ್ನು ಕುಣಿಸಿದನು. ತನ್ನ+ ಇದಿರ ಮೇಳದ ಲಲನೆಯರ ಮೊಗ ನೋಡತು+ ಉತ್ತರ ಬಿರುದ ಕೆದರಿದನು= ಎದುರಿನಲ್ಲಿ ಇದ್ದ ಮೇಳದ- ಗುಂಪಿನ ಲಲನೆಯರ/ ಹೆಂಗಳೆಯರ ಮೊಗ ನೋಡತು+ ಉತ್ತರ ಬಿರುದ ಕೆದರಿದನು= ಮುಖವನ್ನು ನೋಡುತ್ತಾ ತನ್ನ ಶೌರ್ಯವನ್ನು ಕೊಚ್ಚಿಕೊಂಡನು/ ಹೊಗಳಿಕೊಂಡನು.
1.36.13
ನೂಕು ಕುನ್ನಿಯನಾಹವದ ಭೀ
ತಾಕುಳನು ತಾನೀಗ ಹೆಂಡಿರ
ಸಾಕಿ ಬದುಕುವ ಲೌಲ್ಯತೆಯಲೊಟ್ಟೈಸಿ ಬಂದೆನೆಗೆ |
ಕಾಕ ಬಳಸುವನಿವನು ತಾನು
ದ್ರೇಕಿಸಿಯೆ ಸಮರದಲಿ ನಿಲಲು ಪಿ
ನಾಕಧರನಿಗೆ ನೂಕದೆಂದನು ಸತಿಯರಿದಿರಿನಲಿ || ೧೩ ||
1.36.13_18
ನೂಕು ಕುನ್ನಿಯನು+ ಆಹವದ ಭೀತಾಕುಳನು,= ಈ ಗೋಪಾಲಕನನ್ನು ಆಚೆ ತಳ್ಳು- ತಳ್ಳಿರಿ;/ ತಾನು+ ಈಗ ಹೆಂಡಿರ ಸಾಕಿ ಬದುಕುವ ಲೌಲ್ಯತೆಯಲಿ+ ಒಟ್ಟೈಸಿ ಬಂದು+ ಎನೆಗೆ ಕಾಕ ಬಳಸುವನು+ ಇವನು= ಇವನು ತಾನು ಈಗ ತನ್ನ ಹೆಂಡಿರನ್ನು ಮೋಹದಿಂದ ಸಾಕಿ ಬದುಕುವ ಲೌಲ್ಯತೆಯಲಿ - ಲೋಲುಪ್ತಿಯಲ್ಲಿ- ಬಡಿವಾರದಲ್ಲಿ+ ಒಟ್ಟೈಸು ಬಂದು+ ಎನೆಗೆ ಕಾಕ ಬಳಸುವನು+ < ಇವನು- ಒತ್ತಡದಿಂದ ಬಂದು ತನಗೆ ಕೀಳಾಗಿ ಮಾತನಾಡುವನು.// ತಾನು+ ಉದ್ರೇಕಿಸಿಯೆ ಸಮರದಲಿ ನಿಲಲು ಪಿನಾಕಧರನಿಗೆ ನೂಕದು+ ಎಂದನು ಸತಿಯರ+ ಇದಿರಿನಲಿ= ತಾನು ಉದ್ರೇಕಿಸಿಯೆ- ಸಿಟ್ಟಿನಿಂದ, ಸಮರದಲಿ ನಿಲಲು- ಯುದ್ಧಕ್ಕೆ ನಿಂತರೆ, ಪಿನಾಕಧರನಿಗೆ ನೂಕದು+ = ತ್ರಿಶೂಲವನ್ನು ಧರಿಸಿದ ಶಿವನಿಗೂ ನನ್ನೊಡನೆ ಸೆಣಸಲು ನೂಕದು ಆಗದು,ಎಂದನು ಸತಿಯರ+ ಇದಿರಿನಲಿ- ಹೆಂಗಳೆಯರ ಎದುರಿನಲ್ಲಿ - ಉತ್ತರಕುಮಾರನು.
1.36.14
ಎನಿತು ಬಲ ಘನವಾದೊಡೇನದು
ನಿನಗೆ ಗಹನವೆ ಜೀಯ ಜಗದಲಿ
ದಿನಪನಿದಿರಲಿ ದಿಟ್ಟತನವೇ ತಮದ ಗಾವಳಿಗೆ |
ಬಿನುಗು ರಾಯರ ಬಿಂಕ ಗೋವರ
ಮೊನೆಗೆ ಮೆರೆದೊಡೆ ಸಾಕು ನಿಂದಿರು
ಜನಪ ತೋರಿಸು ಕೈಗುಣವ ಕೌರವನ ಥಟ್ಟಿನಲಿ || ೧೪ ||
1.36.14_19
ಎನಿತು ಬಲ ಘನವಾದೊಡೆ+ ಏನು+ ಅದು ನಿನಗೆ ಗಹನವೆ ಜೀಯ,= ದೊರೆಯೇ, ಎನಿತು ಬಲ-ಸೈನ್ಯವು ಘನವಾದೊಡೆ+ ಏನು+- ಎಷ್ಟು ದೊಡ್ಡದಾದರೇನು, ಅದು ನಿನಗೆ ಗಹನವೆ- ಕಷ್ಟವೇ? // ಜಗದಲಿ ದಿನಪನ+ ಇದಿರಲಿ ದಿಟ್ಟತನವೇ ತಮದ ಗಾವಳಿಗೆ= ಜಗತ್ತಿನಲ್ಲಿ ಸುರ್ಯನ ಎದುರಿನಲ್ಲಿ ತಮದ ಗಾವಳಿಗೆ- ಕತ್ತಲೆಯ ತಂಟೆಯು ದಿಟ್ಟತನ- ದೈರ್ಯವನ್ನುತೋರಬಲ್ಲದೇ? ಬಿನುಗು- ಅಲ್ಪರಾದ, ಕೌರವ ರಾಯರ ಬಿಂಕ- ಸೊಕ್ಕು ಶೌರ್ಯ, ಗೋವರ ಮೊನೆಗೆ ಮೆರೆದೊಡೆ- ಗೋಪಾಳಕರ ಎದುರು ತೋರಿಕೊಂಡರೆ ಲೆಕ್ಕವೇ. ಸಾಕು ನಿಂದಿರು- ಮಾತು ಸಾಕು, ನೀನು ಅವರ ಎದುರು ನಿಲ್ಲು; ಜನಪ,- ರಾಜನೇ, ತೋರಿಸು ಕೈಗುಣವ ಕೌರವನ ಥಟ್ಟಿನಲಿ= ನಿನ್ನ ಶೌರ್ಯವನ್ನು ಕೌರವರ ಸೈನ್ಯದಲ್ಲಿ ತೋರಿಸು, ಎಂದನು ಗೋವಳ.
1.36.15
ಎಂದಡುಬ್ಬರಿಸಿದನು ತಾ ಕಲಿ
ಯೆಂದು ಬಗೆದನು ಮೀಸೆಯನು ಬೆರ
ಳಿಂದ ತಿರುಹುತ ಮುಗುಳುನಗೆ ಹರುಷದಲಿ ಮೈಮರೆದ |
ಸಂದಣಿಸಿ ರೋಮಾಂಚ ಕೆಲಬಲ
ದಿಂದುಮುಖಿಯರ ನೋಡಿದನು ನಲ
ವಿಂದ ನುಡಿದನು ತನ್ನ ಪೌರುಷತನದ ಪರಿಣತೆಯ || ೧೫ ||
1.36.15_20
ಎಂದಡೆ+ ಅಬ್ಬರಿಸಿದನು ತಾ ಕಲಿಯೆಂದು ಬಗೆದನು= ಗೋವಳನು ಇವನನ್ನು ಹೊಗಳಲು, ತಾನು ವೀರನೆಂದು ಭಾವಿಸಿದನು.// ಮೀಸೆಯನು ಬೆರಳಿಂದ ತಿರುಹುತ ಮುಗುಳುನಗೆ ಹರುಷದಲಿ ಮೈಮರೆದ ಸಂದಣಿಸಿ ರೋಮಾಂಚ= ಮೀಸೆಯನ್ನು ಬೆರಳಿನಿಂದದ ತಿರುಹುತ್ತಾ, ಮುಗುಳುನಗೆ ಸೂಸುತ್ತಾ, ಹರ್ಷದಿಂದ ಉಬ್ಬಿ ಮೈಮರೆತು, ಅವನ ದೇಹದಲ್ಲಿ ರೋಮಾಂಚನವು ಸಂದಣಿಸಲು,// ಕೆಲಬಲದ+ ಇಂದುಮುಖಿಯರ ನೋಡಿದನು= ತನ್ನ ಆಚೇ ಈಚೆ ಸುತ್ತಲೂ ಇದ್ದ ಅಂದದ ಹೆಂಗೆಳೆಯರನ್ನು ನೋಡಿದನು. ನಲವಿಂದ ನುಡಿದನು ತನ್ನ ಪೌರುಷತನದ ಪರಿಣತೆಯ= ಅವರ ಎದುರಲ್ಲಿ ಆನಂದದಿಂದ. ತನ್ನ ಪೌರುಷತನದ ಪರಿಣತೆಯನ್ನು ಹೇಳಿದನು.
1.36.15_21
ಅಹುದಹುದು ತಪ್ಪೇನು ಜೂಜಿನ
ಕುಹಕದಲಿ ಪಾಂಡವರ ಸೋಲಿಸಿ
ಮಹಿಯ ಕೊಂಡಂತೆನ್ನ ಕೆಣಕಿದನೇ ಸುಯೋಧನನು
ಸಹಸದಿಂದವೆ ತುರುವ ಮರಳಿಚಿ
ತಹೆನು ಬಳಿಕಾ ಕೌರವನ ನಿ
ರ್ವಹಿಸಲೀವೆನೆ ಸೂರೆಗೊಂಬೆನು ಹಸ್ತಿನಾಪುರವ ೧೬
ಅಹುದಹುದು ತಪ್ಪೇನು= ನಿಜ ನಿಜ, ತಪ್ಪಿಲ್ಲ ಸುಯೋಧನನದು, ಏಕೆಂದರೆ, ಅವನು- ಜೂಜಿನ ಕುಹಕದಲಿ ಪಾಂಡವರ ಸೋಲಿಸಿ ಮಹಿಯ ಕೊಂಡಂತೆ= ಜೂಜಿನ ಮೋಸದ ಆಟದಲ್ಲಿ ಪಾಂಡವರನ್ನು ಸೋಲಿಸಿ ಭೂಮಿಯನ್ನು, ಕೊಂಡಂತೆ- ಅಪಹರಿಸಿದಂತೆ,+ ಎನ್ನ- ನನ್ನನ್ನು ಕೆಣಕಿದನೇ- ಸುಯೋಧನನು? ಸಹಸದಿಂದವೆ ತುರುವ ಮರಳಿಚಿ ತಹೆನು= ಸಾಹಸದಿಂದಲೇ ತುರುವ- ಹಸುಗಳನ್ನು ಮರಳಿಚಿ- ಹಿಂದಕ್ಕೆ ತಹೆನು- ತರುತ್ತೇನೆ. ಬಳಿಕ+ ಆ ಕೌರವನ ನಿರ್ವಹಿಸಲು+ ಈವೆನೆ ಸೂರೆಗೊಂಬೆನು ಹಸ್ತಿನಾಪುರವ= ಬಳಿಕ- ಆನಂತರ, ಆ ಕೌರವನ ನಿರ್ವಹಿಸಲು+ ಈವೆನೆ= ಆ ಕೌರವನಿಗೆ ರಾಜ್ಯದ ಆಡಳಿತವನ್ನು ನೆಡೆಸಲು ಬಿಡುವೆನೇ,// ಸೂರೆಗೊಂಬೆನು ಹಸ್ತಿನಾಪುರವ= ಹಸ್ತಿನಾಪುರವನ್ನು ಸೂರೆಗೊಂಬೆನು- ಕೊಳ್ಳೆಹಡೆಯುತ್ತೇನೆ ಎಂದನು ಉತ್ತರ.
1.36.15_22
ಹಿಡಿದು ರಾಜ್ಯವ ಕೊಂಡು ಹೆಂಗುಸ
ಬಡಿದು ಪಾಂಡವ ರಾಯರನು ಹೊರ
ವಡಿಸಿ ಕೊಬ್ಬಿದ ಭುಜಬಲವನೆನ್ನೊಡನೆ ತೋರಿದನೆ
ಬಡ ಯುಧಿಷ್ಠಿರನೆಂದು ಬಗೆದನೆ
ಕಡುಗಿದೊಡೆ ಕೌರವನ ಕೀರ್ತಿಯ
ತೊಡೆವೆನರಿಯನಲಾಯೆನುತ ಸುಕುಮಾರ ಖತಿಗೊಂಡ ೧೭
ಹಿಡಿದು ರಾಜ್ಯವ ಕೊಂಡು ಹೆಂಗುಸ ಬಡಿದು ಪಾಂಡವರಾಯರನು ಹೊರವಡಿಸಿ ಕೊಬ್ಬಿದ ಭುಜಬಲವನು+ ಎನ್ನೊಡನೆ ತೋರಿದನೆ= ಪಾಂಡವರನ್ನು ಹಿಡಿದು (ಜೂಜಿಗೆ ಕರೆದು) ರಾಜ್ಯವವನ್ನು ಕಸಿದುಕೊಂಡು, ಹೆಂಗುಸನ್ನು ಬಡಿದು- ದ್ರೌಪದಿಯನ್ನ ಎಳೆದು ತಂದು ಹೊಡೆದು, ಪಾಂಡವರಾಯರನ್ನು ರಾಜ್ಯದಿಂದ ಹೊರಹೊಂಡಿಸಿ, ಕೌರವನು ತನ್ನ ಕೊಬ್ಬಿದ ಭುಜಬಲವನ್ನು- ಶೌರ್ಯವನ್ನು+ ಎನ್ನೊಡನೆ- ತನ್ನಡನೆ ತೋರಿಸಿದನೆ?// ಬಡ ಯುಧಿಷ್ಠಿರನೆಂದು ಬಗೆದನೆ= ತಾನು ಈ ಉತ್ತರನು, ಬಡ ಯುಧಿಷ್ಠಿರನೆಂದು ಬಗೆದನೆ- ತಿಳಿದುಕೊಂಡನೆ?// ಕಡುಗಿದೊಡೆ ಕೌರವನ ಕೀರ್ತಿಯ ತೊಡೆವೆನು+= (ಕಡುಗು- ಗಟ್ಟಿಯಾಗು) ಕಡುಗಿದೊಡೆ- ತಾನು ಸಿಟ್ಟಾಗಿ ನಿಂತರೆ ಕೌರವನ ಕೀರ್ತಿಯ ತೊಡೆವೆನು- ನಾಶಮಾಡುವೆನು.// ಅರಿಯನಲಾ!- ಇದನ್ನು ಕೌರವ ತಿಳಿಯದೇ ಹೋದನಲ್ಲಾ!+ ಯ+ ಎನುತ ಸುಕುಮಾರ ಖತಿಗೊಂಡ- ಎಂದು ಹೇಳುತ್ತಾ ಉತ್ತರ ಕೊಮಾರ ಕೋಪತಾಳಿದನು.
1.36.18
ತನಗೆ ಬಡ ಪಾಂಡವರ ತೆವರಿದ
ಮನದ ಗರ್ವದ ಕೊಬ್ಬು ಕಾಲನ
ಮನೆಯನಾಳ್ವಿಪುದಲ್ಲದಿದ್ದೊಡೆ ತನ್ನ ವೈರವನು |
ನೆನೆದು ದುರ್ಯೋಧನನು ತಾ ಮೇ
ದಿನಿಯನಾಳ್ವನೆ ಹಾ ಮಹಾ ದೇ
ವೆನುತಲುತ್ತರ ಬಿರುದ ನುಡಿದನು ಹೆಂಗಳಿದಿರಿನಲಿ || ೧೮ ||
1.36.19
ಜವನ ಮೀಸೆಯ ಮುರಿದನೋ ಭೈ
ರವನ ದಾಡೆಯನಲುಗಿದನೊ ಮೃ
ತ್ಯುವಿನ ಮೇಲುದ ಸೆಳೆದನೋ ಕೇಸರಿಯ ಕೆಣಕಿದನೊ |
ಬವರವನು ತೊಡಗಿದನಲಾ ಕೌ
ರವನಕಟ ಮರುಳಾದನೆಂದಾ
ಯುವತಿಯರ ಮೊಗ ನೋಡುತುತ್ತರ ಬಿರುದ ಕೆದರಿದನು || ೧೯ ||
1.36.19_23
ಜವನ ಮೀಸೆಯ ಮುರಿದನೋ= ಯಮನ ಮೀಸೆಯನ್ನು ತಿರುಚಿದಂತೆ ಆಗಿದೆ, ಭೈರವನ ದಾಡೆಯನಲುಗಿದನೊ= ಕಾಲಭಯರವನ ಕೋರೆದಾಡೆಯನ್ನು ಅಲುಗಾಡಿಸಿದಂತಾಗಿದೆ, ಮೃತ್ಯುವಿನ ಮೇಲುದ ಸೆಳೆದನೋ= ಮಲಗಿದ್ದ ಮೃತ್ಯವಿನ ಮುಸುಕನ್ನು ತೆಗೆದು ಕರೆದಂತಾಗಿದೆ, ಕೇಸರಿಯ ಕೆಣಕಿದನೊ= ಸಿಂಹವನ್ನು ಕೆನಕಿದಂತಾಗಿದೆ, ಬವರವನು ತೊಡಗಿದನಲಾ ಕೌರವನು+= ಯುದ್ಧವನ್ನು ಆರಂಬಿದ್ದಾನಲ್ಲಅ ಈ ಕೌರವನು; ಅಕಟ ಮರುಳಾದನು+ ಎಂದು ಆ ಯುವತಿಯರ ಮೊಗ ನೋಡುತ+ ಉತ್ತರ ಬಿರುದ ಕೆದರಿದನು= ತನ್ನನ್ನು ಕೆಣಕಿ ಮರುಳಾದನು, ಮೂರ್ಖ ಕೆಲಸ ಮಾಡಿದನು, ಹುಚ್ಚುಕೆಲಸ ಮಾಡಿದನು, ಎಂದು ಆ ಯುವತಿಯರ ಮುಖವನ್ನು ನೋಡುತ್ತಾ ಉತ್ತರನು ತನ್ನ ಪೌರುಷವನ್ನು ಕೊಚ್ಚಿಕೊಂಡನು.
1.36.20
ಆರೊಡನೆ ಕಾದುವೆನು ಕೆಲಬರು
ಹಾರುವರು ಕೆಲರಂತಕನ ನೆರೆ
ಯೂರವರು ಕೆಲರಧಮ ಕುಲದಲಿ ಸಂದು ಬಂದವರು ||
ವೀರರೆಂಬವರಿವರು ಮೇಲಿ
ನ್ನಾರ ಹೆಸರುಂಟವರೊಳೆಂದು ಕು
ಮಾರ ನೆಣಗೊಬ್ಬಿನಲಿ ನುಡಿದನು ಹೆಂಗಳಿದುರಿನಲಿ || ೨೦ ||
1.36.20_24
ಆರೊಡನೆ- ಆರ+ಒಡನೆ ಕಾದುವೆನು= ಯಾರೆಡನೆ ಯುದ್ಧಮಾಡಲಿ, ಕೆಲಬರು ಹಾರುವರು= ಕೆಲವರು ಬ್ರಾಹ್ಮಣರು - ಕೊಲ್ಲುವಂತಿಲ್ಲ (ದ್ರೋಣ ಅಸ್ವತ್ಥಾಮ, ಕೃಪ); ಕೆಲರು+ ಆಂತಕನ ನೆರೆಯೂರವರು= ಅದರಲ್ಲಕೆಲವರು ಮುಪ್ಪಿನ ಮುದುಕರು, ಅಂತಕನ- ಯಮನ ಊರಿನ ಪಕ್ಕದ ಊರಿಗೆ ಆಗಲೇ ಹೋಗಿದ್ದಾರೆ. (ಮುಟ್ಟಿದರೆ ಸಾಯುವರು - ಭೀಷ್ಮ ವಿದುರರು ಮುದುಕರು) ಕೆಲರು+ ಅಧಮ ಕುಲದಲಿ ಸಂದು ಬಂದವರು= ಕೆಲವರು ಕ್ಷತ್ರಿಯರೊಡನೆ ಯುದ್ಧಮಅಡಲು ಯೋಗ್ಯರಲ್ಲದ ಕುಲದವರು (ಕರ್ಣ); ವೀರರೆಂಬವರು+ ಇವರು ಮೇಲೆ+ ಇನ್ನಾರ ಹೆಸರುಂಟು+ ಅವರೊಳು+ = ಇವರೇ ಆ ಕೌರವನಸೈನ್ಯದಲ್ಲಿ ವೀರರು ಎಂದು ಬೀಗುವವರು! ಇವರಲ್ಲಿ ತನಗೆ ಸಮಾನರಾದ ವಿರರೇ ಇಲ್ಲ, ಯಾರೊಡನೆ ಯುದ್ಧಮಾಡಲಿ, ಎಂದು ಕುಮಾರ, ನೆಣಗೊಬ್ಬಿನಲಿ ನುಡಿದನು ಹೆಂಗಳ+ ಇದುರಿನಲಿ= ಹೀಗೆ ನೆಣದ ಕೊಬ್ಬು- ಮಾಂಸದ ಕೊಬ್ಬುನಿಂದ ಹೆಂಗಸರ ಎದುರಿನಲ್ಲಿ ಉತ್ತರಕುಮಾರ ಹೇಳಿದ.
1.36.21
ಪೊಡವಿಪತಿಗಳು ಬಂದು ತುರುಗಳ
ಹಿಡಿವರೇ ಲೋಕದಲಿ ಅಧಮರ
ಬಡಮನದ ಮನ್ನೆಯರ ಮೈಸಿರಿ ಕೌರವನೊಳಾಯ್ತು |
ಕಡೆಗೆ ದುರಿಯತವುಳಿವುದಲ್ಲದೆ
ಬಿಡುವೆನೇ ಗೋಧನವನೆನ್ನೊಳು
ತೊಡಕಿ ಬದಕುವನಾವನೆಂದನು ಖಂಡೆಯವ ಜಡಿದು || ೨೧ ||
1.36.21_25
ಪೊಡವಿಪತಿಗಳು= ಭೂಮಿಯ ಒಡೆಯರು - ರಾಜರು, ಬಂದು ತುರುಗಳ= ಗೋವುಗಳನ್ನು, ಹಿಡಿವರೇ ಲೋಕದಲಿ= ಈ ಜಗತ್ತಿನಲ್ಲಿ ಹಿಡಿಯುವರೇ? ಅಧಮರ ಬಡಮನದ ಮನ್ನೆಯರ ಮೈಸಿರಿ ಕೌರವನೊಳಾಯ್ತು= ಕೀಳು ಜನರಾದ ಹೆಂಗಸರ ಸೌಂದರ್ಯವಿದ್ದಂತಾಯಿತು ಕೌರವನ ನೆಡತೆ; ಕಡೆಗೆ ದುರಿಯತ+ ವುಳಿವುದಲ್ಲದೆ= ಕೊನೆಗೆ ಅವನಿಗೆ ಗೋವನ್ನು ಕದ್ದವನು ಎಂಬ ಕೆಟ್ಟಹೆಸರು ಉಳಿಯುವುದು; ಬಿಡುವೆನೇ ಗೋಧನವನು+ = ಅದಲ್ಲದೇ ಗೋವುಗಳನ್ನು ಬಿಡುವೆನೇ ಗೋಧನವನು+ ಎನ್ನೊಳು ತೊಡಕಿ= ನನ್ನೊಡನೆ ಯುದ್ಧದಲ್ಲಿ ತೊಡಗಿಕೊಂಡು. ಬದಕುವನು+ ಆವನು+ ಎಂದನು ಖಂಡೆಯವ ಜಡಿದು= ಯಾವನು ಬದುಕಬಲ್ಲನು ಎಂದು ಕತ್ತಿಯನ್ನು ಝಳಪಿಸಿ ಹೇಳಿದನು.
1.36.22
ಖಳನ ಮುರಿವೆನು ಹಸ್ತಿನಾಪುರ
ದೊಳಗೆ ಠಾಣಾಂತರವನಿಕ್ಕುವೆ
ತೊಲಗಿಸುವೆ ಕೌರವನ ಸೇನೆಯ ಧೂಳಿಪಟ ಮಾಡಿ |
ಗೆಲವ ತಹೆನೆಂದುತ್ತರನು ಕೋ
ಮಲೆಯರಿದಿರಲಿ ಬಾಯ್ಗೆ ಬಂದುದ
ಗಳಹುತಿದ್ದನು ಬೇಕು ಬೇಡೆಂಬವರ ನಾ ಕಾಣೆ || ೨೨ ||
1.36.22_26
ಖಳನ ಮುರಿವೆನು ಹಸ್ತಿನಾಪುರದೊಳಗೆ ಠಾಣಾಂತರವನು+ ಇಕ್ಕುವೆ= ದುಷ್ಟ ದುರ್ಯೋಧನನ್ನು ಕೊಂದು ಹಾಕುತ್ತೇನೆ, ಹಸ್ತಿನಾಪುರಕ್ಕೆ ಧಾಳಿ ಇಟ್ಟು ಅಲ್ಲಿ ನಮ್ಮ ಹೊಸ ಠಾಣೆಯನ್ನು ಹೂಡುವೆನು, ತೊಲಗಿಸುವೆ ಕೌರವನ ಸೇನೆಯ ಧೂಳಿಪಟ ಮಾಡಿ= ಕೌರವನ ಸೇನೆಯನ್ನು ಸೋಲಿಸಿ ಧೂಳಿಪಟ ಮಾಡಿ ತೊಲಗಿಸುವೆ- ಓಡಿಸುತ್ತೇನೆ. ಗೆಲವ ತಹೆನೆಂದು+ ಕೌರವನ ಮೇಲೆ ವಿಜಯವನ್ನು ಸಾಧಿಸುತ್ತೇನೆ. ಎಂದ ಉತ್ತರನು ಕೋಮಲೆಯರ+ ಇದಿರಲಿ- ಎದುರಿನಲ್ಲಿ ಬಾಯ್ಗೆ- ಬಾಯಿಗೆ ಬಂದುದ ಗಳಹುತಿದ್ದನು- ಹೇಳುತ್ತಿದ್ದನು; ಬೇಕು ಬೇಡ+ ಎಂಬವರ ನಾ ಕಾಣೆ. ವೈಶಂಪಾಯನ ಮುನಿಯು ನಾನು ಕಾಣೆ- ತಿಳಿಯಲಾರೆ ಎಂದನು
1.36.23
ಅರಿಯನೇ ಗಾಂಗೇಯನನು ತಾ
ನರಿಯದವನೇ ದ್ರೋಣ ಕುಲದಲಿ
ಕೊರತೆಯೆನಿಸುವ ಕರ್ಣನೆಂಬವನೆನಗೆ ಸಮಬಲನೆ |
ಬರಿಯ ಬಯಲಾಡಂಬರದಿ ಬರಿ
ತುರುವ ಹಿಡಿದೊಡೆ ತನ್ನ ಹೆಂಡಿರ
ಸೆರೆಯ ತಾರದೆ ಮಾಣೆನೆಂದನು ನಾರಿಯರ ಮುಂದೆ || ೨೩ ||
1.36.23_27
ಉತ್ತರನು ಮುಂದುವರಿದು, ಗಾಂಗೇಯನನ್ನು ಅವನ ಶಕ್ತಿಯನ್ನು ನಾನು ಅರಿಯನೇ - ತಿಳಿದಿಲ್ಲವೇ!, ತಾನು+ ಆರಿಯದವನೇ ದ್ರೋಣ- ದ್ರೋಣನು ನನಗೆ ತಿಳಿಯದವನೇ!; ಕುಲದಲಿ ಕೊರತೆಯೆನಿಸುವ ಕರ್ಣನೆಂಬವನು+ ಎನಗೆ ಸಮಬಲನೆ- ಕೆಳ-ಕುಲದಲ್ಲಿ ಜನಿಸಿದ ದಾಸಿಪುತ್ರ ತನಗೆ ಸಮಬಲನೆ! ಅಲ್ಲವೇ ಅಲ್ಲ! ಬರಿಯ ಬಯಲಾಡಂಬರದಿ- ಸತ್ವ ಇಲ್ಲದ ಆಡಂಬರದಿಂದ ಕೇವಲ ಗೋವುಗಳನ್ನು ಹಿಡಿದರೆ-> ಬರಿ ತುರುವ ಹಿಡಿದೊಡೆ, ತನ್ನ ಹೆಂಡಿರ ಸೆರೆಯ ತಾರದೆ ಮಾಣೆನು- ಬಿಡೆನು+ ಎಂದನು ನಾರಿಯರ ಮುಂದೆ= ಅವರಹೆಂಡತಿಯರನ್ನು ಸೆರೆಹಿಡಿದು ತರದೆ ಬಿಡುವುದಿಲ್ಲ ಎಂದು ಆ ಹೆಂಗಳೆಯರ ಎದುರಲ್ಲಿ ಆರ್ಭಟಿಸಿದನು.
1.36.24
ನುಡಿದು ಫಲವೇನಿನ್ನು ಸಾರಥಿ
ಮಡಿದ ನಿನ್ನಿನ ಬವರದಲಿ ತಾ
ನುಡುಹನಾದೆನು ಶಿವ ಶಿವಾಯಿಂದೆನ್ನ ಕೈ ಮನಕೆ |
ಗಡಣಿಸುವ ಸಾರಥಿಯನೊಬ್ಬನ
ಪಡೆದನಾದೊಡೆ ಕೌರವೇಂದ್ರನ
ಪಡೆಗೆ ಹಬ್ಬವ ಮಾಡುವೆನು ತೋರುವೆನು ಕೈಗುಣವ || ೨೪ ||
1.36.24_28
ನುಡಿದು ಫಲವೇನು+ ಇನ್ನು= ಹೆಚ್ಚು ಮಾತನಾಡಿ ಏನು ಫಲ?, ಸಾರಥಿ ಮಡಿದ ನಿನ್ನಿನ ಬವರದಲಿ,= ನಿನ್ನೆಯ ಯುದ್ಧದಲ್ಲಿ ತನ್ನ ಸಾರಥಿ ಸತ್ತನು- ಮಡಿದುಹೋದನು. ತಾನು+ ಉಡುಹನಾದೆನು (ಉಡುಹ-> ಉಡುಪ - ಕೈಕಾಲುಗಳಿಲ್ಲದ ಅಂಗಹೀನ)= ಈಗ ತಾನು ಕೈಯಿಲ್ಲದಂತಾದೆನು. ಶಿವ ಶಿವಾ+ ಯಿಂದು+ ಎನ್ನ ಕೈ ಮನಕೆ ಗಡಣಿಸುವ ಸಾರಥಿಯನು+ ಒಬ್ಬನ ಪಡೆದನಾದೊಡೆ= ದೇವರೇ, ನನ್ನ ಕೈಗೆ, ಮನಸ್ಸಿಗೆ ಗಡಣಿಸುವ- ಸೇರುವ ಹೊಂದುವ, ಒಪ್ಪುವ ಸಾರಥಿಯನು+ ಒಬ್ಬನ - ಒಬ್ಬನನ್ನು ಪಡೆದನಾದೊಡೆ, ಕೌರವೇಂದ್ರನ ಪಡೆಗೆ- ಸೈನ್ಯಕ್ಕೆ, ಹಬ್ಬವ ಮಾಡುವೆನು ತೋರುವೆನು (ತನ್ನ) ಕೈಗುಣವ.(ಹಬ್ಬ ಎಂದರೆ ಸಂತಸದಿಂದ ಗಲಾಟೆ- ಕೂಗಾಡುವುದು, ವ್ಯಂಗವಾಗಿ- ಬಾಯಿ ಬಡಿದುಕೊಂಡು ಗೋಳಾಡುವುದು- ಕಷ್ಟಕ್ಕೆ ಸಿಲುಕುವುದು)
1.36.25
ಸಾರಥಿಯ ಶಿವ ಕೊಟ್ಟನಾದೊಡೆ
ಮಾರಿಗುಬ್ಬಸವಾಗದಂತಕ
ನೂರು ತುಂಬದೆ ದೊಳ್ಳು ನೂಕದೆ ರಣಪಿಶಾಚರಿಗೆ |
ದೋರೆಗರುಳಲಿ ದಾನವಿಯರೊಡ
ಲೇರು ಹತ್ತದೆ ಹಬ್ಬವಾಗದೆ
ಭೂರಿ ಬೇತಾಳರಿಗೆ ಹೋಹುದೆ ಬರಿದೆ ರಣವೆಂದ || ೨೫ ||
1.36.25_29
ಸಾರಥಿಯ ಶಿವ ಕೊಟ್ಟನಾದೊಡೆ ಮಾರಿಗೆ+ ಉಬ್ಬಸವಾಗದೆ+ = ದೇವ ಶಿವನು ಸಾರಥಿಯನ್ನು ನನಗೆ ಕೊಟ್ಟಿದ್ದೇ ಆದರೆ, ರಕ್ತಕುಡಿದು ಮಾರಿಗೆ ಉಬ್ಬಸವಾಗದೆ- ಏದುಸಿರು ಬರದೆ ಇರುವುದೆ? ಅಂತಕ ನೂರು ತುಂಬದೆ= ಯಮನ ಪಟ್ಟಣ ಸತ್ತವರ ಪ್ರೇತಗಳಿಂದ ತುಂಬದೆ ಇರುವುದೇ?, ದೊಳ್ಳು ನೂಕದೆ ರಣಪಿಶಾಚರಿಗೆ= ರಣರಂಗದಲ್ಲಿರುವ ರಣಪಿಶಾಚರುಗಳಿಗೆ ಹೆಣಗಳನ್ನು ತಿಂದು ಹೊಟ್ಟೆ ಮುಂದಕ್ಕೆ ಚಾಚದೇ ಇರುವುದೇ?, ದೋರೆ+ ಗ+ ಕರುಳಲಿ ದಾನವಿಯರ+ ಒಡಲು+ ಏರು ಹತ್ತದೆ= ರಣರಂಗಕ್ಕೆ ಮಾನವರ ರಕ್ತವನ್ನು ಕುಡಿಯುವ ರಕ್ಕಸಿಯರ ಹೊಟ್ಟೆ ಏರುಹತ್ತದೇ - ಉಬ್ಬಿ ಹೋಗದೇ?, ಹಬ್ಬವಾಗದೆ ಭೂರಿ ಬೇತಾಳರಿಗೆ= ಬೇತಾಳಗಳಿಗೆ ಸತ್ತವರ ಹೆಣದ ಊಟದಿಂದ ಭೂರಿ- ದೊಡ್ಡ ಹಬ್ಬವಾಗದೇ?, ಹೋಹುದೆ ಬರಿದೆ ರಣವು (ಯುದ್ಧ)+ ಎಂದ-= ಯುದ್ಧವು ಹಾಗೆಯೇ ಸುಮ್ಮನೇ ಹೋಗುವುದೇ?' ಎಂದ ಉತ್ತರ.
1.36.26
ಕೇಳಿದನು ಕಲಿಪಾರ್ಥನೀತನ
ಬಾಲ ಭಾಷೆಗಳೆಲ್ಲವನು ಪಾಂ
ಚಾಲೆಗೆಕ್ಕಟಿ ನುಡಿದ ನಾವಿನ್ನಿಹುದು ಮತವಲ್ಲ |
ಕಾಲ ಸವೆದುದು ನಮ್ಮ ರಾಜ್ಯದ
ಮೇಲೆ ನಿಲುಕಲು ಬೇಕು ಕೌರವ
ರಾಳು ನಮಗೋಸುಗವೆ ಬಂದುದು ಕಾಂತೆ ಕೇಳೆಂದ || ೨೬ ||
1.36.26_30
ಕಲಿಪಾರ್ಥನು+ ಈತನ ಬಾಲ ಭಾಷೆಗಳೆಲ್ಲವನು= ಕಲಿಪಾರ್ಥನು- ವೀರನಾದ ಅರ್ಜುನನು+ ಈತನ- ಉತ್ತರನ ತಿಳುವಳಿಕೆ ಇಲ್ಲದ ಬಾಲ ಭಾಷೆಗಳೆಲ್ಲವನ್ನೂ ಕೇಳಿದನು .// ಪಾಂಚಾಲೆಗೆ+ ಎಕ್ಕಟಿ ನುಡಿದ ನಾವು+ ಇನ್ನು+ ಇಹುದು ಮತವಲ್ಲ= ಪಾಂಚಾಲೆ ದ್ರೌಪದಿಗೆ+ ಎಕ್ಕಟಿ- ಪ್ರತ್ಯೇಕವಾಗಿ ಕರೆದು ನುಡಿದ- ಹೇಳಿದನು. ನಾವು+ ಇನ್ನು+ ಇಹುದು ಮತವಲ್ಲ- ಇನ್ನು ಸುಮ್ಮನಿರುವುದು, ತಟಸ್ಥವಾಗಿರುವುದು ಯೋಗ್ಯವಾದ ಕ್ರಮವಲ್ಲ, ಸರಿಯಲ್ಲ.// ಕಾಲ ಸವೆದುದು= ನಮ್ಮ ಹದಿಮೂರು ವರ್ಷದ ಅವಧಿ ಮುಗಿಯಿತು. ನಮ್ಮ ರಾಜ್ಯದ ಮೇಲೆ ನಿಲುಕಲು- ಕೈಹಾಕಬೇಕು, -ತಲುಪುವ ಪ್ರಯತ್ನ ಮಾಡಬೇಕು. ಕೌರವರ+ ಆಳು- ಸೈನ್ಯ, ನಮಗೋಸುಗವೆ- ನಮ್ಮನ್ನು ಹುಡುಕಲಾಗಿಯೇ ಬಂದಿದೆ- ಬಂದುದು, ಕಾಂತೆ ಕೇಳು+ ಎಂದ.
1.36.27
ನರನ ಸಾರಥಿಯೆಂದು ನೀನು
ತ್ತರೆಗೆ ಸೂಚಿಸಿ ತನ್ನನೀಗಳೆ
ಕರೆಸೆನಲು ಕೈಕೊಂಡು ದುರುಪದಿ ಬಂದಳೊಲವಿನಲಿ |
ತರುಣಿ ಕೇಳರ್ಜುನನ ಸಾರಥಿ
ವರ ಬೃಹನ್ನಳೆ ಖಾಂಡವಾಗ್ನಿಯ
ಹೊರೆದನಿವ ತಾನೆಂದು ಸತಿಯುತ್ತರೆಗೆ ಹೇಳಿದಳು || ೨೭ ||
1.36.27_31
ನರನ ಸಾರಥಿಯೆಂದು ನೀನು+ ಉತ್ತರೆಗೆ ಸೂಚಿಸಿ ತನ್ನನು+ ಈಗಳೆ ಕರೆಸು+ ಎನಲು= ಬೃಹನ್ನಳೆಯು ಹಿಂದೆ ನರನ- ಅರ್ಜುನನ, ಸಾರಥಿಯೆಂದು ನೀನು+ ಉತ್ತರೆಗೆ- ಉತ್ತರಕುಮಾರನ ತಂಗಿ ಉತ್ತರೆಗೆ ಸೂಚಿಸಿ- ಹೇಳಿ, ತನ್ನನು (ಅರ್ಜುನನ್ನು)+ ಈಗಳೆ ಕರೆಸು+ ಎನಲು- ಎಂದು ದ್ರೌಪದಿಗೆ ಹೇಳಲು,//ಕೈಕೊಂಡು- ಆ ಮಾತನ್ನು ಅನುಸರಿಸಿ, ದುರುಪದಿ ಬಂದಳು+ ಒಲವಿನಲಿ- ದ್ರೌಪದಿ ಸಂತಸದಿಂದ ಉತ್ತರೆಯ ಬಳಿಗೆ ಬಂದಳು;// ತರುಣಿ ಕೇಳು+ ಅರ್ಜುನನ ಸಾರಥಿ ವರ ಬೃಹನ್ನಳೆ ಖಾಂಡವಾಗ್ನಿಯ ಹೊರೆದನು+ ಇವ ತಾನು+ ಎಂದು ಸತಿಯು+ ಉತ್ತರೆಗೆ ಹೇಳಿದಳು= ತರುಣಿ- ಉತ್ತರೆಯೇ ಕೇಳು+ ವರ- ಶ್ರೇಷ್ಠನಾದ ಈ ಬೃಹನ್ನಳೆಯು ಅರ್ಜುನನ ಸಾರಥಿಯಾಗಿದ್ದನು, ಅವನು ಖಾಂಡವಾಗ್ನಿಯ- ಖಾಂಡವವನವನ್ನು ಅಗ್ನಿಯು ಸುಡುವಾಗ ಹೊರೆದನು- ಅರ್ಜುನನ ಸಾರಥ್ಯದ, ಇವ ತಾನು+- ಇವನು - ಬೃಹನ್ನಳೆಯು ಆ ಹೊರೆಯನ್ನು ವಹಸಿದ್ದನು+ ಎಂದು ಸತಿಯು- ದ್ರೌಪದಿಯು+ ಉತ್ತರೆಗೆ ಹೇಳಿದಳು.
1.36.28
ಕೇಳಿ ಹರುಷಿತೆಯಾದಳುತ್ತರೆ
ಯೋಲಗಕೆ ಬಂದಣ್ಣನಂಘ್ರಿಗೆ
ಲೋಲಲೋಚನೆಯೆರಗಿ ಕೈಮುಗಿದೆಂದಳೀ ಹದನ |
ಕೇಳಿದೆನು ಸಾರಥಿಯ ನೆಲೆಯನು
ಕಾಳಗಕೆ ನಡೆಯಣ್ಣ ದೇವ ನೃ
ಪಾಲಕರ ಜಯಿಸೆಂದಡುತ್ತರ ನಗುತ ಬೆಸಗೊಂಡ || ೨೮ ||
1.36.28_32
ಕೇಳಿ ಹರುಷಿತೆಯಾದಳು+ ಉತ್ತರೆಯು+= ಉತ್ತರೆಯ ಸಾರಥಿಯ ವಿಚಾರ ಕೇಳಿ ಹರ್ಷಗೊಂಡಳು.// ಓಲಗಕೆ ಬಂದು+ ಅಣ್ಣನ+ ಅಂಘ್ರಿಗೆ ಲೋಲಲೋಚನೆ+ಯೆ+ ಎರಗಿ ಕೈಮುಗಿದು+ ಎಂದಳು+= ಅವಳು ಓಲಗಕೆ- ಸಭೆಗೆ ಬಂದು+ ಅಣ್ಣನ+ ಅಂಘ್ರಿಗೆ- ಪಾದಕ್ಕೆ ಲೋಲಲೋಚನೆ+ಯೆ+ ಎರಗಿ- ಚಂಚಲಕಣ್ಣಿನ ಉತ್ತರೆ ನಮಸ್ಕರಿಸಿ ಕೈಮುಗಿದು+ ಎಂದಳು- ಹೇಳಿದಳು.+ ಈ ಹದನ= ಈ ಸಾರಥಿ ದೊರಕಿದ ವಿಚಾರವನ್ನು;// ಕೇಳಿದೆನು ಸಾರಥಿಯ ನೆಲೆಯನು, ಕಾಳಗಕೆ ನಡೆಯಣ್ಣ ದೇವ= ಸಾರಥಿಯು ಇರುವ ವಿಚಾರವನ್ನು ಕೇಳಿದೆನು; ಯುದ್ಧಕ್ಕೆ ನಡೆಯಣ್ಣ.//ನೃಪಾಲಕರ ಜಯಿಸು+ ಎಂದಡೆ+ ಉತ್ತರ ನಗುತ ಬೆಸಗೊಂಡ= ಅಣ್ಣದೇವ ನೃಪಾಲಕರನ್ನು- ರಾಜರನ್ನು ಜಯಿಸು+ ಎಂದಡೆ- ಎಂದಾಗ,+ ಉತ್ತರ ನಗುತ ಬೆಸಗೊಂಡ- ಕೇಳಿದ.
1.36.29
ತಂಗಿ ಹೇಳೌ ತಾಯೆ ನಿನಗೀ
ಸಂಗತಿಯನಾರೆಂದರಾವವ
ನಂಗವಣೆಯುಳ್ಳವನೆ ಸಾರಥಿತನದ ಕೈಮೆಯಲಿ |
ಮಂಗಳವಲೇ ಬಳಿಕ ರಣದೊಳ
ಭಂಗನಹೆ ನಿನ್ನಾಣೆ ತನ್ನಯ
ತುಂಗ ವಿಕ್ರಮತನವನುಳುಹಿದೆ ಹೇಳು ಹೇಳೆಂದ || ೨೯ ||
1.36.29_33
ತಂಗಿ ಹೇಳೌ ತಾಯೆ ನಿನಗೆ+ ಈ ಸಂಗತಿಯನು+ ಆರೆಂದರು+= ತಂಗೀ, ಹೇಳು ತಾಯೀ, ನಿನಗೆ ಈ ಸಂಗತಿಯನ್ನು ಆರೆಂದರು- ಯಾರು ಹೇಳಿದರು? ಆವವನು+ ಅಂಗವಣೆಯುಳ್ಳವನೆ?= ಯಾರ ಕಡೆಯವನು, ಸಾಮರ್ಥ್ಯ ಉಳ್ಳವನೇ, ಸಾರಥಿತನದ ಕೈಮೆಯಲಿ=ವಿದ್ಯೆಯಲ್ಲಿ? ಮಂಗಳವಲೇ,= ಬಹಳ ಒಳ್ಳೆಯದು, ಬಳಿಕ ರಣದೊಳ ಭಂಗನು+ ಅಹೆ ನಿನ್ನಾಣೆ= ಅವನು ಸಾಮರ್ಥ್ಯವಿಲ್ಲದವನಾದರೆ ಬಳಿಕ ಯುದ್ಧದಲ್ಲಿ ಭಂಗಪಟ್ಟವನು- ಸೋತವನು ಅಹೆನು- ಆಗುವೆನು; ತನ್ನಯ ತುಂಗ ವಿಕ್ರಮತನವನು+ ಉಳುಹಿದೆ ಹೇಳು ಹೇಳೆಂದ= ತನ್ನ ತುಂಗ- ಶ್ರೇಷ್ಠ ವಿಕ್ರಮತನವನು- ಪರಾಕ್ರಮವನ್ನು+ ಉಳುಹಿದೆ- ಉಳಿಸಿದೆ, ಹೇಳು ಹೇಳೆಂದ- ಅದು ಯಾರು ಹೇಳು ಹೇಳು- ಬೇಗ ಹೇಳು ಎಂದ.
1.36.30
ಎಂದಳೀ ಸೈರೇಂಧ್ರಿ ಸುರಪನ
ನಂದನವ ಸುಡುವಂದು ಪಾರ್ಥನ
ಮುಂದೆ ಸಾರಥಿಯಾದ ಗಡ ನಾವರಿಯೆವೀ ಹದನ |
ಹಿಂದುಗಳೆಯದೆ ಕರೆಸು ನಮ್ಮ ಬೃ
ಹನ್ನಳೆಯನೆನೆ ನಗುತ ಲೇಸಾ
ಯ್ತೆಂದು ಪರಮೋತ್ಸಾಹದಲಿ ಸೈರೇಂಧ್ರಿಗಿಂತೆಂದ || ೩೦ ||
1.36.30_34
ಎಂದಳು+ ಈ ಸೈರೇಂಧ್ರಿ ಸುರಪನ- ಇಂದ್ರನ ನಂದನವ ಸುಡುವಂದು ಪಾರ್ಥನ ಮುಂದೆ ಸಾರಥಿಯಾದ ಗಡ,= ಇಂದ್ರನ ನಂದನವನವನ್ನು ಸುಡುವಾಗ ಪಾರ್ಥನ ಮುಂದೆ ರಥದಲ್ಲಿ ಕುಳಿತು ಸಾರಥಿಯಾಗಿದ್ದನಂತೆ, ನಾವು+ ಅರಿಯೆವು -ತಿಳಿದಿಲ್ಲ,+ ಈ ಹದನ- ವಿಚಾರವನ್ನು, ಹಿಂದುಗಳೆಯದೆ- ತಡಮಾಡದೆ, ಕರೆಸು ನಮ್ಮ ಬೃಹನ್ನಳೆಯನು+ ಎನೆ- ಎಂದಾಗ, ನಗುತ- ನಗುತ್ತಾ, ಲೇಸಾಯ್ತು (ಒಳ್ಳೆಯದಾಯಿತು)+ ಎಂದು ಪರಮೋತ್ಸಾಹದಲಿ ಸೈರೇಂಧ್ರಿಗೆ+ ಇಂತೆಂದ- ಹೀಗೆ ಹೇಳಿದ.
1.36.31
ಸಾರಥಿಯ ಕೊಟ್ಟೆನ್ನನುಳುಹಿದೆ
ವಾರಿಜಾನನೆ ಲೇಸು ಮಾಡಿದೆ
ಕೌರವನ ತನಿಗರುಳ ಬಗೆವೆನು ತಡವ ಮಾಡಿಸದೆ |
ನಾರಿ ನೀನೇ ಹೋಗಿ ಪಾರ್ಥನ
ಸಾರಥಿಯ ತಾಯೆನಲು ನಮ್ಮನು
ವೀರ ಬಗೆಯನು ನಿಮ್ಮ ತಂಗಿಯ ಕಳುಹಿ ಕರೆಸುವದು || ೩೧ ||
1.36.31_35
ಉತ್ತರೆಯ ವರ್ಣನೆ
1.36.32
ತಾಯೆ ನೀನೇ ಹೋಗಿ ಸೂತನ
ತಾಯೆನಲು ಕೈಕೊಂಡು ಕಮಲದ
ಳಾಯತಾಕ್ಷಿ ಮನೋಭವನ ಮರಿಯಾನೆಯಂದದಲಿ |
ರಾಯಕುವರಿ ನವಾಯಿ ಗತಿ ಗರು
ವಾಯಿಯಲಿ ಬರೆ ವಿಟರ ಕರಣದ
ಲಾಯ ತೊಡಕಿತು ತೆಗೆದಳಂಗನೆ ಜನರ ಕಣ್ಮನವ || ೩೨ ||
1.36.33
ಐದು ಶರವೇಕೊಂದು ಬಾಣವಿ
ದೈದದೇಯಿನ್ನಮಮ ಕಾಮನ
ಕೈದುಗಾರತನಕ್ಕೆ ಕೋಡದೆ ಕೊಂಕದಿಹರಾರು |
ಒಯ್ದುಕೊಳ್ಳನೆ ಮುನಿಮನವನಡ
ಹಾಯ್ದು ಹಿಡಿಯನೆ ಹಿರಿಯರನು ವಿಧಿ
ಕೊಯ್ದನಕಟಾ ಕೊರಳನೆಂದುದು ನಗುತ ವಿಟನಿಕರ || ೩೩ ||
1.36.33_36
ಐದು ಶರವೇಕೆ (ಜನರಿಗೆ ಕಾಮ ಉದ್ದೀಪನಗೊಳಿಸಲು ಮನ್ಮಥನಿಗೆ ಐದು ಬಾಣವೇಕೆ?)+ ಒಂದು ಬಾಣವು+ ಇದು+ ಐದದೇ (ಹೋಗದೇ- ಗುರಿತಲುಪದೇ?- ಸಾಕಾಗದೇ)+ ಯ+ ಇನ್ನು+ ಅಮಮ- ಅಬ್ಬಾ! ಕಾಮನ ಕೈದುಗಾರತನಕ್ಕೆ= (ಉತ್ತರೆ ಎಂಬ ಈ) ಆಯುಧ ಪ್ರಯೋಗಕ್ಕೆ) ಕೋಡದೆ (ಕೋಡು - ಚಳಿಯಾಗು, ನಡುಗು, ನೀರು ತಣ್ಣಗೆ ಕೋಡುತ್ತಿದೆ. ಅದರಲ್ಲಿ ಕೈಯಿಟ್ಟರೆ ಕೈ ಕೋಡಿ ನಡುಗುತ್ತದೆ.) ಕೊಂಕದೆ (ಬಗ್ಗದೆ)+ ಇಹರು (ಇರುವರು)+ ಆರು (ಯಾರು?); ಒಯ್ದುಕೊಳ್ಳನೆ ಮುನಿ ಮನವನು+ ಅಡಹಾಯ್ದು ಹಿಡಿಯನೆ ಹಿರಿಯರನು= ಒಯ್ದುಕೊಳ್ಳನೆ- ಅಪಹರಿಸದೆ ಇರುವನೆ ಮುನಿ ಮನವನು+ ಅಡಹಾಯ್ದು ಹಿಡಿಯನೆ ಹಿರಿಯರನು- ಮುದುಕರನ್ನೂ ಅಡ್ಡಹಾಕಿ ಮನ್ಮಥನು ಹಿಡಿಯದಿರುವನೆ? ವಿಧಿ ಕೊಯ್ದನು+ ಅಕಟಾ ಕೊರಳನು+ ಎಂದುದು ನಗುತ ವಿಟನಿಕರ= ವಿಟರ ಗುಂಪು ಉತ್ತರೆಯನ್ನು ಕಂಡು, ವಿಧಿಯು ಉತ್ತರೆಯನ್ನು ಸೃಷ್ಟಿಮಾಡಿ ನಮ್ಮನ್ನು ಮೋಹಗೊಳಿಸಿ ಜೀವತೆಗೆಯತ್ತಿದ್ದಾನೆ, ಅಕಟಾ, ಅಯ್ಯೋ! ನಮ್ಮ ಕೊರಳನು ಕೊಯ್ದನು ಎಂದು ನಗುತ್ತಾ ಹೇಳಿದರು. (ವಿಟರು: ಸದಾ ಹೆಣ್ಣಿನ ಮೋಹದಲ್ಲಿ ಮುಳುಗಿರುವವರು- ಅವರ ಸಂಗದಲ್ಲಿ ಸುಖ ಕಾಣುವವರು, ಹೆಣ್ನಿನ ಮೋಹದ ಸಂಕಟದಲ್ಲೂ ಸುಖಪಡುವವರು ವಿಟರು.)
1.36.34
ಅರಳುಗಂಗಳ ಬೆಳಗು ಹೊಯ್ದ
ಬ್ಬರಿಸೆ ಚಿತ್ತದ ತಿಮಿರ ಹೆಚ್ಚಿತು
ಕುರುಳ ಕಾಳಿಕೆಯಿಂದ ಮುಖ ಬಿಳುಪೇರಿ ವಿಟಜನದ |
ಸರಸತರ ಲಾವಣ್ಯ ರಸದಿಂ
ದುರಿ ಮಸಗೆ ಜನ ಹೃದಯದಲಿ ಮೈ
ಪರಿಮಳದ ಪಸರದಲಿ ಪದ್ಮಿನಿ ಬಂದಳೊಲವಿನಲಿ || ೩೪ ||
1.36.34_37
ಅರಳಿದ ಕಣ್ಣುಗಳ ಬೆಳಗು- ಬೆಳಕು, ಎಲ್ಲರಿಗೆ ಹೊಯ್ದು- ಹೊಡೆದು + ಅಬ್ಬರಿಸೆ- ಆರ್ಭಟಿಸಲು, ಚಿತ್ತದ ತಿಮಿರ= ಆ ಬೆಳಕಿಗೆ ಮನಸ್ಸಿಗೆ ಕತ್ತಲೆ, ಹೆಚ್ಚಿತು,- ಜನ ಕಂಗೆಟ್ಟರು. ಕುರುಳ ಕಾಳಿಕೆಯಿಂದ- ಸಂಕಟದಿಂದ ಮುಖ ಬಿಳುಪೇರಿ ವಿಟಜನದ ಸರಸತರ= ಆನಂದದಪರಿಯ, ಲಾವಣ್ಯ ರಸದಿಂದ+ ಉರಿ ಮಸಗೆ= ತುಂಬಲು, ಜನ ಹೃದಯದಲಿ (ಅವಳ) ಮೈಪರಿಮಳದ ಪಸರದಲಿ- ಹರಡುವಿಕೆಯಲ್ಲಿ, ಹರಡುತ್ತಾ ಪದ್ಮಿನಿ ಬಂದಳು+ ಒಲವಿನಲಿ- ಸಂತಸದಿಂದ. (ಪದ್ಮಿನಿ ಸ್ತ್ರೀಯರಿಗೆ ಮೋಹಗೊಳಿಸುವ ಮೈಪರಿಮಳವಿರುತ್ತದೆ ಎಂದು ಹೇಳಿಕೆ ಇದೆ. ಶಂತನು ಅದಕ್ಕೆ ಮರುಳಾಗಿದ್ದ.)
1.36.35
ನಡೆ ನಡೆಯ ಬಂಧಿಸಿತು ನೋಟವ
ನುಡುಗಿಸಿತು ಕುಡಿನೋಟ ಸಖಿಯರ
ನುಡಿ ಸಮೇಳದ ಮಾತು ಮನುಜರ ಮಾತ ಮಾಣಿಸಿತು |
ಕೆಡಿಸಿತಧರದ ರಾಗ ರಾಗವ
ಬಡತನವ ಹೆಚ್ಚಿಸಿತು ನಡುವಿನ
ಬಡತನವು ವಿಟಜನಕೆನಲು ನಡೆತಂದಳಿಂದುಮುಖಿ || ೩೫ ||
1.36.35_38
ನಡೆ ನಡೆಯ ಬಂಧಿಸಿತು ನೋಟವ ನುಡುಗಿಸಿತು= ಅವಳು ನೆಡೆದು ಬರುವಾಗ ನೋಡುಗರ ನಡೆಯು ನಿಂತಿತು- ನಿಂತುನೊಡುತ್ತಿದ್ದರು. ಕುಡಿನೋಟ ಸಖಿಯರ ನುಡಿ ಸಮೇಳದ ಮಾತು ಮನುಜರ ಮಾತ ಮಾಣಿಸಿತು- ನಿಲ್ಲಿಸಿತು= ಅವಳ ಕುಡಿನೋಟ ಮತ್ತು ಸಖಿಯರ ನುಡಿ, ಸಮೇಳದ- ಜನರಗುಂಪಿನ ಮಾತು- ಮಾತುಗಳನ್ನೂ, ಮನುಜರ ಮಾತ ಮಾಣಿಸಿತು-ಉಳಿದ ಜನರ ಮಾತುಗಳನ್ನೂ ನಿಲ್ಲಿಸಿತು, ಜನ ಮಾತು ನಿಲ್ಲಿಸಿ ಅವಳನ್ನು ಅವಾಕ್ಕಾಗಿ ನೋಡುತ್ತಿದ್ದರು! ಕೆಡಿಸಿತು+ ಅಧರದ ರಾಗ ರಾಗವ= ಅವಳ ತುಟಿಯ ಕೆಂಪುಬಣ್ಣ, ರಾಗವ-ಮೋಹವನ್ನು ಕೆಡಿಸಿತು(?), ಬಡತನವ ಹೆಚ್ಚಿಸಿತು ನಡುವಿನ ಬಡತನವು= ಮತ್ತು (ಸಣ್ಣ) ನಡುವಿನ ಬಡತನವು ನೋಡುಗರ ದೌರ್ಬಲ್ಯವನ್ನು ಹೆಚ್ಚಿಸಿತು - ವಿಟಜನಕೆ+ ಎನಲು ವಿಟರಿಗೆ ಎನ್ನುವಂತೆ ನಡೆತಂದಳು+ ಇಂದುಮುಖಿ- ಚಂದ್ರನಂತೆ ಮುಖವುಳ್ಳ ಉತ್ತರೆ.
1.36.36
ಕುರುಳ ತಿದ್ದುತ ಮೊಲೆಗೆ ಮೇಲುದ
ಸರಿವುತೇಕಾವಳಿಯ ಮೆಲ್ಲನೆ
ತಿರುಪಿ ಹಾಯ್ಕುತ ಬಿಡುಮುಡಿಯನೆಡಗೈಯೊಳೊಂದಿಸುತ |
ವರ ನಿಖಾರಿಯ ನಿರಿಯ ರಭಸದ
ಚರಣದಂದುಗೆ ದನಿಯ ಗಮನದ
ಭರದಿ ಕಿರುಬೆಮರಿಡುತ ನಡೆತರುತಿರ್ದಳಿಂದುಮುಖಿ || ೩೬ ||
1.36.36_39
ಎಳೆಪ್ರಾಯದ ಸುಂದರಿ ಉತ್ತರೆ ನೆಡೆದು ಬರುತ್ತಿರುವ ವೈಕರಿಯನ್ನು ಕವಿ ಹೇಳುತ್ತಿದ್ದಾನೆ. ಕುರುಳ ತಿದ್ದುತ= ಮುಂಗುರುಳನ್ನು ಕೈಯಿಂದ ತಿದ್ದಿಕೊಳ್ಳುತ್ತಾ, ಮೊಲೆಗೆ ಮೇಲುದ ಸರಿವುತ+= ನೆಡೆಯವಾಗ ಸರಿದ ಸೆರಗನ್ನು ಸರಿಪಡಿಸಿಕೊಳ್ಲುತ್ತಾ, ಏಕಾವಳಿಯ ಮೆಲ್ಲನೆ ತಿರುಪಿ ಹಾಯ್ಕುತ= ತನ್ನೇಕಾವಳಿ ಸರದ ತುದಿಯನ್ನು ಕೈಯ್ಯಲ್ಲಿ ತಿರುಪಿ ಹಾಕುತ್ತಾ, ಬಿಡುಮುಡಿಯನು (ಬಿಟ್ಟ ಮುಡಿ -ಜಡೆ?)+ ಎಡಗೈಯೊಳೊಂದಿಸುತ= ಎಡದಕೈಯಿಂದ ಹಿಂದಲೆಯ ಜಡೆಯನ್ನು (ಇಳಿಬಿಟ್ಟ ಕೂದಲನ್ನು? - ಹಿಂದೆ ಹಾಗೆಯೇ ಕೂದಲನ್ನು ಇಳಿಬಿಡುವ ಪದ್ದತಿ ಇರಲಿಲ್ಲ. 'ಬಿಟ್ಟ ಮಂಡೆಯ' ಎನ್ನುವುದು ದುಃಖದ ಸೂಚಕ) ಹೊಂದಿಸಿಕೊಳ್ಳ್ಲುತ್ತಾ, ವರ ನಿಖಾರಿಯ ನಿರಿಯ ರಭಸದ ಚರಣದಂದುಗೆ ದನಿಯ ಗಮನದ (ನೆಡಿಗೆ) ಭರದಿ= ನಿಖಾರಿ(ಜರಿ?) ಸೀರೆಯ ನಿರಿಗೆಯ ರಭಸದೊಂದಿಗೆ ಕಾಲಿನ ಅಂದುಗೆಯ (ಕಡಗದ) ಸದ್ದು ಮಾಡತ್ತಾ, ವೇಗದ ನಡಿಗೆಯಲ್ಲಿ// ಕಿರುಬೆಮರಿಡುತ ನಡೆತರುತಿರ್ದಳು+ ಇಂದುಮುಖಿ= ಇಂದುಮುಖಿ ಉತ್ತರೆ ಸಣ್ಣಗೆ ಬೆವರುತ್ತಾ ನೆಡೆದುಬರುತ್ತಿದ್ದಳು. (ಪ್ರಾಯದ ಹೆಣ್ಣಿನ ಅವಸರದ ನಡಿಗೆಯ ಪರಿಯನ್ನು ಕವಿಯು ಸೂಕ್ಷ್ಮವಾಗಿ ಗಮನಿಸಿದ ಬಗೆ ಹೀಗಿದೆ.)
1.36.37
ಬರವ ಕಂಡನು ಪಾರ್ಥನೇನು
ತ್ತರೆ ಕುಮಾರಿ ಕಠೋರ ಗತಿಯಲಿ
ಬರವು ಭಾರಿಯ ಕಾರಿಯವ ಸೂಚಿಸುವುದೆನೆ ನಗುತ |
ಬರವು ಬೇರಿಲ್ಲೆನ್ನ ಮಾತನು
ಹುರುಳುಗೆಡಿಸದೆ ಸಲಿಸುವೊಡೆ ನಿಮ
ಗರುಹಿದಪೆನೆನೆ ಮೀರಬಲ್ಲೆನೆ ಮಗಳೆ ಹೇಳೆಂದ || ೩೭ ||
1.36.37_40
ಬರವ ಕಂಡನು ಪಾರ್ಥನು+= ಅರ್ಜುನನು ಉತ್ತರೆಯು ಬರುತ್ತಿರುವುದನ್ನು ನೋಡಿದನು. / ಏನು+ ಉತ್ತರೆ ಕುಮಾರಿ ಕಠೋರ ಗತಿಯಲಿ ಬರವು ಭಾರಿಯ ಕಾರಿಯವ ಸೂಚಿಸುವುದು+ ಎನೆ,= ಅರ್ಜುನನು,'ಏನು ಉತ್ತರೆ ಕುಮಾರಿ ಕಠೋರ- ಅವಸರದ- ಗತಿಯಲಿ-ನೆಡಿಗೆಯಲ್ಲಿ ಬರವು- ಬರುತ್ತಿರುವೆ! ಭಾರಿಯ ಕಾರಿಯವ ಸೂಚಿಸುವುದು+ = ಏನೋ ದೊಡ್ಡ ಕಾರ್ಯವಿದ್ದಂತೆ ತೊರುವುದು.; ಎನೆ= ಎನ್ನಲು,// ನಗುತ ಬರವು ಬೇರಿಲ್ಲ+ ಎನ್ನ ಮಾತನು ಹುರುಳುಗೆಡಿಸದೆ ಸಲಿಸುವೊಡೆ ನಿಮಗೆ ಅರುಹಿದಪೆನು+ ಎನೆ= ಅವಳು ನಗುತ್ತಾ ತನ್ನ ಬರವು ಬೇರೇನೂ ಇಲ್ಲ! ಆದರೆ ಎನ್ನ-ನನ್ನ ಮಾತನ್ನು ಹುರುಳುಗೆಡಿಸದೆ- ಪ್ರಯೋಜನವಿಲ್ಲ, ಹುರುಳಿಲ್ಲ, ಅರ್ಥವಿಲ್ಲ - ಎನ್ನದೆ ಸಲಿಸುವೊಡೆ- ಒಪ್ಪಿ ನೆಡೆಸಿಕೊಡುವುದಾದರೆ, ನಿಮಗೆ ಅರುಹಿದಪೆನು+= ನಿಮಗೆ ಹೇಳುತ್ತೇನೆ,' ಎನೆ=ಎನ್ನಲು; ಮೀರಬಲ್ಲೆನೆ ಮಗಳೆ ಹೇಳೆಂದ= 'ಮಗಳೇ ನೀನು ಕೇಳಿದರೆ ನಾನು ಇಲ್ಲ ಎನ್ನುತ್ತೇನೆಯೇ?' ಎಂದನು ಪಾರ್ಥ.(ಪಾರ್ಥನು ಉತ್ತರೆಗೆ ನೃತ್ಯವನ್ನು ಹೇಳಿಕೊಡುವ ಗುರುವಾಗಿದ್ದನು.)
1.36.38
ಪುರಕೆ ಹಾಯ್ದರು ಹಸ್ತಿನಾಪುರ
ದರಸುಗಳು ಹೊಲನೊಳಗೆ ಶತ ಸಾ
ವಿರದ ತುರುಗಳ ಹಿಡಿದರಳಿದುದು ಗೋಪ ಪಡೆ ಕಾದಿ |
ಮರಳಿಚುವೊಡೆಮ್ಮಣ್ಣ ದೇವನ
ಧುರಕೆ ಸಾರಥಿಯಿಲ್ಲ ನೀವಾ
ನರನ ಸಾರಥಿಯೆಂದು ಕೇಳಿದೆವೆಂದಳಿಂದುಮುಖಿ || ೩೮ ||
1.36.39
ಇನ್ನು ನೀವೇ ಬಲ್ಲಿರೆನೆ ನಡೆ
ನಿನ್ನ ಮಾತನು ಮೀರಬಲ್ಲೆನೆ
ಮುನ್ನ ಸಾರಥಿಯಹೆನು ನೋಡುವೆನೆನುತ ವಹಿಲದಲಿ |
ಬೆನ್ನಲಬಲೆಯನೈದಲಾ ಸಂ
ಪನ್ನ ಬಲನೋಲಗಕೆ ಬರೆ ಹರು
ಷೋನ್ನತಿಯಲುತ್ತರ ಕುಮಾರನು ಕರೆದು ಮನ್ನಿಸಿದ || ೩೯ ||
1.36.39_41
ಇನ್ನು ನೀವೇ ಬಲ್ಲಿರಿ+ ಎನೆ= ಹಿರಿಯನೂ ಗುರುವೂ ಆದ ಬರಹನ್ನಳೆಗೆ ಅವಳು ಅಣ್ಣನಿಗೆ (ಸೇವಕ)) ಸಾರಥಿಯಾಗು ಎಂದು ಹೇಳದೆ, ವಿನಯವಾಗಿ ಮುಂದೆ ಏನು ಮಾಡಬೇಕೆಂಬುದನ್ನು ನೀವೇ ನಿರ್ಧರಿಸಿ ಎಂದಳು.; ನಡೆ ನಿನ್ನ ಮಾತನು ಮೀರಬಲ್ಲೆನೆ ಮುನ್ನ ಸಾರಥಿಯು+ ಅಹೆನು ನೋಡುವೆನು+ ಎನುತ= ಆಗ ಅರ್ಜುನನು ಪ್ರೀತಿಯಿಂದ,'ನಡೆ ನಿನ್ನ ಮಾತನು ಮೀರಬಲ್ಲೆನೆ ಮುನ್ನ- ನಿನ್ನ ಅಣ್ನನ ಮುಂದೆ ಕುಳಿತು ಸಾರಥಿಯು+ ಅಹೆನು- ಆಗುವೆನು, ನೋಡುವೆನು- ನಿನ್ನ ಅಣ್ಣನನ್ನು ಕಾಣುವೆನು+ ಎನುತ- ಎನ್ನುತ್ತಾ, ವಹಿಲದಲಿ- ವೇಗವಾಗಿ, ಬೆನ್ನಲಿ+ ಅಬಲೆಯನು+ ಐದಲು+ = ಆ ಅಬಲೆ- ಉತ್ತರೆಯ ಬೆನ್ನಲ್ಲೇ ಹಿಂಬಾಲಿಸಿ ಐದಲು- ಬರಲು,ಆ ಸಂಪನ್ನ ಬಲನ+ ಓಲಗಕೆ ಬರೆ - ಉತ್ತರನ ಸಭೆಗೆ ಬರಲು, ಹರುಷೋನ್ನತಿಯಲಿ+ ಉತ್ತರ ಕುಮಾರನು ಕರೆದು ಮನ್ನಿಸಿದ= ಉತ್ತರ ಕುಮಾರನು ಅತಿ ಹರ್ಷದಿಂದ ಕರೆದು ಗೌರವಿಸಿದನು.
1.36.39_42
ಉತ್ತರನಿಗೆ ಅರ್ಜುನನ ಸಾರಥ್ಯ
1.36.40
ಎಲೆ ಬೃಹನ್ನಳೆ ತೆತ್ತುದೆನಗ
ಗ್ಗಳೆಯರೊಳು ವಿಗ್ರಹವು ಸಾರಥಿ
ಯಳಿದನೆನ್ನವ ನೀನು ಸಾರಥಿಯಾಗಿ ಸಮರದಲಿ |
ಉಳುಹ ಬೇಹುದು ನೀ ಸಮರ್ಥನು
ಫಲುಗುಣನ ಸಾರಥಿಯಲೈ ನೀ
ನೊಲಿದು ಮೆಚ್ಚಲು ಕಾದಿ ತೋರುವೆನಹಿತ ಸೇನೆಯಲಿ || ೪೦ ||
1.36.40_43
ಎಲೆ ಬೃಹನ್ನಳೆ ತೆತ್ತುದು+ - ಕೊಟ್ಟಿದೆ- ಉಂಟಾಗಿದೆ,+ ಎನಗೆ- ತನಗೆ,+ ಅಗ್ಗಳೆಯರೊಳು- ಬಲಿಷ್ಠರಲ್ಲಿ, ವಿಗ್ರಹವು-ವಿರೋಧ, ಯುದ್ಧವು= ಎಲೆ ಬೃಹನ್ನಳೆ ನನಗೆ ಬಲಿಷ್ಠರಲ್ಲಿ ಯುದ್ಧವು ಕೈಗೂಡಿದೆ,/ ಸಾರಥಿಯು+ ಅಳಿದನು+ ಎನ್ನವ ನೀನು ಸಾರಥಿಯಾಗಿ ಸಮರದಲಿ ಉಳುಹ ಬೇಹುದು= ಎನ್ನವ- ನನ್ನ ಸಾರಥಿಯು (ಯುದ್ಧದಲ್ಲಿ) ಮಡಿದನು. ನೀನು ಸಾರಥಿಯಾಗಿ ಯುದ್ಧದಲ್ಲಿ ನನ್ನನ್ನು ಉಳಿಸಬೇಕು. // ನೀ ಸಮರ್ಥನು ಫಲುಗುಣನ ಸಾರಥಿಯಲೈ ನೀನು+ ಒಲಿದು ಮೆಚ್ಚಲು ಕಾದಿ ತೋರುವೆನು+ ಅಹಿತ ಸೇನೆಯಲಿ= ನೀನು ಸಮರ್ಥನು. ಫಲ್ಗುಣನ ಸಾರಥಿಯಾಗಿದ್ದೆ! ನೀನು ಒಲಿದು ಮೆಚ್ಚುವಂತೆ ಕಾದಿ- ಯುದ್ಧಮಾಡಿ ತೋರಿಸುವೆನು ಅಹಿತ- ಶತ್ರು ಸೇನೆಯಲಿ- ಸೇನೆಯೊಡನೆ. ಎಂದನು ಉತ್ತರ.
1.36.41
ಭರತ ವಿದ್ಯಾ ವಿಷಯದಲಿ ಪರಿ
ಚರಿಯತನ ನಮಗಲ್ಲದೀ ಸಂ
ಗರದ ಸಾರಥಿತನವ ಮರೆದೆವು ಹಲವು ಕಾಲದಲಿ |
ಅರಿಭಟರು ಭೀಷ್ಮಾದಿಗಳು ನಿಲ
ಲರಿದು ಸಾರಥಿತನದ ಕೈ ಮನ
ಬರಡರಿಗೆ ದೊರಕೊಂಬುದೇ ರಣ ಸೂರೆಯಲ್ಲೆಂದ || ೪೧ ||
1.36.41_44
ಭರತ ವಿದ್ಯಾ- ನೃತ್ಯ, ವಿಷಯದಲಿ ಪರಿಚರಿಯತನ- ಅನುಭವ, ನಮಗೆ;+ ಅಲ್ಲದೆ+ ಈ ಸಂಗರದ- ಯುದ್ಧದ, ಸಾರಥಿತನವ ಮರೆದೆವು ಹಲವು ಕಾಲದಲಿ- ಅನೇಕ ವರ್ಷಗಳ ಕಾಲದಲ್ಲಿ; ಅರಿಭಟರು- ಶತ್ರುಗಳು, ಭೀಷ್ಮಾದಿಗಳು ನಿಲಲು+ ಅರಿದು- ಎದುರಿಸಿ ನಿಲ್ಲಲು ತಿಳಿಯದು, ಸಾರಥಿತನದ ಕೈ- ವಿದ್ಯೆ, ಮನಬರಡರಿಗೆ- ಮನಸ್ಸು ಗಟ್ಟಿ ಇಲ್ಲದವರಿಗೆ- ಹೇಡಿಗಳಿಗೆ, ದೊರಕೊಂಬುದೇ- ಸಾದ್ಯವೇ? ರಣ- ಯುದ್ಧವು, ಸೂರೆಯಲ್ಲ- ಲೂಟಿಯಲ್ಲವೇ+ ಎಂದ
1.36.42
ಆನಿರಲು ಭೀಷ್ಮಾದಿಗಳು ನಿನ
ಗೇನು ಮಾಡಲು ಬಲ್ಲರಳುಕದೆ
ನೀನು ನಿಲು ಸಾಕೊಂದು ನಿಮಿಷಕೆ ಗೆಲುವೆನವರುಗಳ |
ತಾನದಾರೆಂದರಿಯಲಾ ಗುರು
ಸೂನು ಕರ್ಣ ದ್ರೋಣರೆಂಬವ
ರಾನರಿಯದವರಲ್ಲ ಸಾರಥಿಯಾಗು ಸಾಕೆಂದ || ೪೨ ||
1.36.43
ವೀರನಹೆ ಬಳಿಕೇನು ರಾಜ ಕು
ಮಾರನಿರಿವೊಡೆ ಹರೆಯವಲ್ಲಾ
ಸಾರಥಿತ್ವವ ಮಾಡಿ ನೋಡುವೆ ರಥವ ತರಿಸೆನಲು |
ವಾರುವದ ಮಂದಿರದಲಾಯಿದು
ಚಾರು ತುರಗಾವಳಿಯ ಬಿಗಿದನು
ತೇರ ಸಂವರಿಸಿದನು ರಥವೇರಿದನು ಕಲಿಪಾರ್ಥ || ೪೩ ||
1.36.43_45
ವೀರನು+ ಅಹೆ,= ನೀನು ವೀರನಿದ್ದೀಯೆ! ಬಳಿಕ+ ಏನು ರಾಜ ಕುಮಾರನು+ ಇರಿವೊಡೆ- ಯುದ್ಧಮಾಡಲು, ಹರೆಯವಲ್ಲಾ!= ಮುಂದೇನು ನೋಡಬೇಕು, ರಾಜಕುಮಾರನಿಗೆ ಯುದ್ಧಮಾಡಲು ಪ್ರಾಯದ ಹುಮ್ಮಸ್ಸು. ಸಾರಥಿತ್ವವ ಮಾಡಿ ನೋಡುವೆ ರಥವ ತರಿಸು+ ಎನಲು= ಆಯಿತು ನಾನು ಸಾರಥ್ಯವನ್ನು ಮಾಡಿ ನೋಡುತ್ತೇನೆ ರಥವನ್ನು ತರಿಸು ಎಂದನು ಪಾರ್ಥ ಹಾಗೆ ತರಿಸಿದಾಗ,// ವಾರುವದ ಮಂದಿರದಲಿ ಆಯಿದು ಚಾರು ತುರಗ+ ಆವಳಿಯ(ಗುಂಪು -೨ ಜೋಡಿ) ಬಿಗಿದನು= ಕುದುರೆ ಲಾಯದಿಂದ ನಾಲ್ಕು ಕುದುರೆಗಳನ್ನು ಆರಿಸಿತಂದು ರಥಕ್ಕೆ ಬಿಗಿದು ಸಂವರಿಸಿದನು-ಸಿದ್ಧಗೊಳಿಸಿದನು. ರಥವ+ ಏರಿದನು ಕಲಿಪಾರ್ಥ= ನಂತರ ರಥವನ್ನು ಏರಿ ಸಾರಥಿಯ ಸ್ಥಳದಲ್ಲಿ ಕುಳಿತನು.
1.36.44
ಮಂಗಳಾರತಿಯೆತ್ತಿದರು ನಿಖಿ
ಳಾಂಗನೆಯರುತ್ತರಗೆ ನಿಜ ಸ
ರ್ವಾಂಗ ಶೃಂಗಾರದಲಿ ಹೊಳೆವುತ ಬಂದು ರಥವೇರಿ |
ಹೊಂಗೆಲಸಮಯ ಕವಚವನು ಪಾ
ರ್ಥಂಗೆ ಕೊಟ್ಟನು ಜೋಡು ಸೀಸಕ
ದಂಗಿಗಳನಳವಡಿಸಿ ರಾಜಕುಮಾರನನುವಾದ ||೪೪ ||
1.36.44_46
ಮಂಗಳಾರತಿ+ ಯೆ+ ಎತ್ತಿದರು ನಿಖಿಳಾಂಗನೆಯರು+ ಉತ್ತರಗೆ= ಉತ್ತರನಿಗೆ ಎಲ್ಲಾ ಹೆಂಗಳೆಯರು ಸೇರಿ ಮಂಗಳಾರತಿ ಎತ್ತಿ ಶುಭಕೋರಿದರು. ನಿಜ ಸರ್ವಾಂಗ ಶೃಂಗಾರದಲಿ ಹೊಳೆವುತ ಬಂದು ರಥವೇರಿ (ದನು)ಹೊಂಗೆಲಸ-ಮಯ ಕವಚವನು=ಉತ್ತರನು ತನ್ನ ಸರ್ವಾಂಗ ಶೃಂಗಾರದಿಂದ ಸಿಂಗರಿಸಿಕೊಂಡು ಶೋಭಿಸುತ್ತಾ ಚಿನ್ನದ ಕುಸುರಿ ಹಾಕಿದ ಕವಚವನ್ನು ಧರಿಸಿ ರಥವನ್ನು ಹತ್ತಿದನು. ಪಾರ್ಥಂಗೆ ಕೊಟ್ಟನು ಜೋಡು ಸೀಸಕದಂಗಿಗಳನು+ = ಪಾರ್ಥನಿಗೆ ಜೋಡು ಸೀಸಕದಂಗಿಗಳನ್ನು ಧರಿಸಲು ಕೊಟ್ಟನು. (<- ಹೊಂಗೆಲಸ-ಮಯ ಕವಚವನು) ಅಳವಡಿಸಿ ರಾಜಕುಮಾರನು+ ಅನುವಾದ= ತಾನು ಚಿನ್ನದ ಕುಸುರಿ ಹಾಕಿದ ಕವಚವನ್ನು ಧರಿಸಿ ಯುದ್ಧಕ್ಕೆ ಹೊರಡಲು ಸಿದ್ಧನಾದನು.
1.36.45
ನರನು ತಲೆ ಕೆಳಗಾಗಿ ಕವಚವ
ಸರಿವುತಿರೆ ಘೊಳ್ಳೆಂದು ಕೈ ಹೊ
ಯ್ದರಸಿಯರು ನಗೆ ನಾಚಿದಂತಿರೆ ಪಾರ್ಥ ತಲೆವಾಗಿ |
ತಿರುಗಿ ಮೇಲ್ಮುಖವಾಗಿ ತೊಡಲು
ತ್ತರೆ ಬಳಿಕ ನಸುನಗಲು ಸಾರಥಿ
ಯರಿಯ ತಪ್ಪೇನೆನುತಲುತ್ತರ ತಾನೆ ತೊಡಿಸಿದನು || ೪೫ ||
1.36.45_47
ನರನು ತಲೆ ಕೆಳಗಾಗಿ ಕವಚವ ಸರಿವುತಿರೆ- ತೊಡಲು ಪ್ರಯತ್ನಿಸುತ್ತಿರಲು, ಘೊಳ್ಳೆಂದು ಕೈ ಹೊಯ್ದು+ ಅರಸಿಯರು ನಗೆ- ನಗಲು, ನಾಚಿದಂತಿರೆ ಪಾರ್ಥ ತಲೆವಾಗಿ ತಿರುಗಿ ಮೇಲ್ಮುಖವಾಗಿ ತೊಡಲು+ = ನಾಚಿಕೊಂಡವನಂತೆ ಪಾರ್ಥನು ತಲೆವಾಗಿ- ತಲೆ ಬಗ್ಗಸಿಕೊಂಡು, ತಿರುಗಿ ಮೇಲ್ಮುಖವಾಗಿ ತೊಡಲು- ಪುನಃ ಕವಚವನ್ನು ಕಳಭಾಗವನ್ನು ಮೇಲೆ ಮಾಡಿ ತೊಡಲು,+- ಉತ್ತರೆ ಬಳಿಕ ನಸುನಗಲು, ಸಾರಥಿಯು+ ಅರಿಯ ತಪ್ಪೇನು+ ಎನುತಲಿ- ಎಂದು ಹೇಳುತ್ತಾ, + ಉತ್ತರ ತಾನೆ ತೊಡಿಸಿದನು.
1.36.46
ಕವಚವನು ತೊಡಲರಿಯದವನಾ
ಹವಕೆ ಸಾರಥಿತನವ ಮಾಡುವ
ಹವಣು ತಾನೆಂತೆನುತಲಿದ್ದರು ನಿಖಿಳ ನಾರಿಯರು |
ಬವರವನು ನಮ್ಮಣ್ಣ ಗೆಲಿದಪ
ನವರ ಮಣಿ ಪರಿಧಾನವಾಭರ
ಣವನು ಸಾರಥಿ ಕೊಂಡು ಬಾಯೆಂದಳು ಸರೋಜಮುಖಿ || ೪೬ ||
1.36.46_48
ಕವಚವನು ತೊಡಲು+ ಅರಿಯದವನು+ ಆಹವಕೆ-ಯುದ್ಧಕ್ಕೆ ಸಾರಥಿತನವ ಮಾಡುವ ಹವಣು- ಕಾರ್ಯ, ಉತ್ಸಾಹ, ತಾನೆಂತು(ಹೇಗಪ್ಪಾ)+ ಎನುತಲಿದ್ದರು ನಿಖಿಳ- ಎಲ್ಲಾ ನಾರಿಯರು, ಬವರವನು- ಯುದ್ಧವನ್ನು, ನಮ್ಮಣ್ಣ ಗೆಲಿದಪನು- ಗೆಲ್ಲುವನು,+ ಅವರ - ಸೋತು ಬಿದ್ದವರ, ಮಣಿ ಪರಿಧಾನವ- ಮೊದಲಾದವುಗಳನ್ನೂ (ಬಟ್ಟೆ) ಆಭರಣವನ್ನೂ ಸಾರಥಿಯೇ ತೆಗೆದುಕೊಂಡುಕೊಂಡು ಬಾ,' ಎಂದಳು ಸರೊಜಮುಖಿ- ಕಮಲಮುಖಿ ಉತ್ತರೆ.
1.36.47
ನಸುನಗುತ ಕೈಕೊಂಡನರ್ಜುನ
ನೆಸಗಿದನು ರಥವನು ಸಮೀರನ
ಮಿಸುಕಲೀಯದೆ ಮುಂದೆ ಮಿಕ್ಕವು ವಿಗಡ ವಾಜಿಗಳು |
ಹೊಸ ಪರಿಯ ಸಾರಥಿಯಲಾ ನಮ
ಗಸದಳವು ಸಂಗಾತ ಬರಲೆಂ
ದುಸುರದುಳಿದುದು ಹಿಂದೆ ಪುರದಲಿ ಚಾತುರಂಗ ಬಲ || ೪೭ ||
1.36.47_49
ನಸುನಗುತ ಕೈಕೊಂಡನು+ ಅರ್ಜುನನು+= ಅರ್ಜುನನು ನಸುನಗುತ ಸಾರಥ್ಯವನ್ನು ಕೈಕೊಂಡನು. ಎಸಗಿದನು- ಮಾಡಿನು- ಓಡಿಸಿದನು, ರಥವನು ಸಮೀರನ- ವಾಯುವನ್ನು - ಗಾಳಿಯನ್ನು ಮಿಸುಕಲು+ ಈಯದೆ- ಅಲುಗಲು ಮುಂದೆಸಾಗಲು ಕೊಡದೆ ವಅಯುವೇಗವನ್ನೂ ಮೀರಿ, ಮುಂದೆ ಮಿಕ್ಕವು- ದಾಟಿ ಹೋದವು ವಿಗಡ- ಶಕ್ತಿಶಾಲಿ ವಾಜಿಗಳು-ಕುದುರೆಗಳು, (ಇವನು) ಹೊಸ ಪರಿಯ ಸಾರಥಿಯಲಾ ನಮಗೆ+ ಅಸದಳವು ಸಂಗಾತ ಬರಲೆಂದು= ನಮಗೆ ಅನುಸರಿಸಿ -ಹಿಂಬಾಲಿಸಿ ಹೋಗಲು ಅಸದಳ- ಅಸಾದ್ಯವು ಎಂದು,+ ಉಸುರದೆ- ಬಾಯಿ ಮುಚ್ಚಿಕೊಂಡು+ ಉಳಿದುದು ಹಿಂದೆ ಪುರದಲಿ (ಉತ್ತರನ)ಚಾತುರಂಗ ಬಲ- ಹಿಂದೆ ಪುರದಲ್ಲಿಯೇ ಉತ್ತರನ ಚಾತುರಂಗ ಸೈನ್ಯ ಉಳಿದುಬಿಟ್ಟಿತು.
1.36.48
ಗತಿಗೆ ಕುಣಿದವು ನಾಸಿಕದ ಹುಂ
ಕೃತಿಯ ಪವನನ ಹಳಿವ ಲುಳಿಯಲಿ
ಗತಿಯ ಸಂಚಿತ ಪಂಚಧಾರಾ ಪ್ರೌಢ ವಾಜಿಗಳು |
ವಿತತ ರಥ ಪದದಳಿತ ವಸುಧೋ
ತ್ಪತಿತ ಧೂಳೀಪಟಲ ಪರಿ ಚುಂ
ಬಿತ ದಿಶಾಮುಖನೈದಿದನು ಕುರುರಾಯ ಮೋಹರವ || ೪೮ ||
1.36.48_50
♦♦♦
♦♣♣♣♣♣♣♣♣♣♣♣♣♣♣♣♣♣♣♣♦
ॐ
1.36.48_51
ನೋಡಿ
1.36.48_52
ಕುಮಾರವ್ಯಾಸ ಭಾರತ
ಕುಮಾರವ್ಯಾಸಭಾರತ-ಸಟೀಕಾ
ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೧)
ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೨)
ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೩)
ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೪)
ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೫)
ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೬)
ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೭)
ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೮)
ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೯)
ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೧೦)
1.36.48_53
ಪರಿವಿಡಿ
1.36.48_54
ಉಲ್ಲೇಖ