Karnata Bharata Kathamanjari 1.37: ಸಟೀಕಾ (೪-ವಿರಾಟಪರ್ವ::ಸಂಧಿ-೬)
Karṇāṭa Bhārata Kathāmañjarī 1.37
- Language
- Kannada
ಸಟೀಕಾ (೪-ವಿರಾಟಪರ್ವ::ಸಂಧಿ-೬)
1.37.p1
<ಕುಮಾರವ್ಯಾಸ ಭಾರತ/ಸಟೀಕಾ
<ಕುಮಾರವ್ಯಾಸಭಾರತ-ಸಟೀಕಾ
1.37.p2
ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೬)
1.37.p3
ಸೂಚನೆ:
1.37.p4
ಸೂಚನೆ:
ಚಂಡ ರಿಪುಬಲ ವಿಲಯ ಹರನು
ದ್ದಂಡ ಬಲ ಶಸ್ತ್ರಾಸ್ತ್ರವನು ಕೈ
ಕೊಂಡು ಸುರಪನ ಸೂನು ನಡೆದನು ವೈರಿ ಮೋಹರವ ||ಸೂಚನೆ||
1.37.p5
ಚಂಡ ರಿಪುಬಲ ವಿಲಯ ಹರನು= ಉಗ್ರ ಶತ್ರು ಸೈನ್ಯವನ್ನು ನಾಶಮಾಡುವವನು (ಪ್ರಲಯ ಕಾಲದ ಹರನಂತೆ ಇರುವವನು)+ ಉದ್ದಂಡ ಬಲ= ಪ್ರಬಲ ಬಲಯುತವಾದ, ಶಸ್ತ್ರಾಸ್ತ್ರವನು ಕೈಕೊಂಡು= ಪಡೆದು, ಸುರಪನ ಸೂನು= ಇಂದ್ರನ ಮಗ ಅರ್ಜುನನು, ನಡೆದನು ವೈರಿ ಮೋಹರವ= ಶತ್ರುಗಳ ಸೈನ್ಯವನ್ನು ಎದುರಿಸಲು ನೆಡೆದನು -ಹೋದನು.
~~ಓಂ~~
1.37.p6
ಕೌರವನ ಸೇನಾ ಸಾಗರ, ಉತ್ತರಕುಮಾರನ ದಿಗ್ಭ್ರಮೆ
1.37.1
ಎಲೆ ಪರೀಕ್ಷಿತ ತನಯ ಕೇಳ್ ನೃಪ
ತಿಲಕನತಿ ವೇಗದಲಿ ರಥವನು
ಕೊಳುಗುಳಕೆ ತರೆ ಕಂಡನುತ್ತರ ಮುಂದೆ ದೂರದಲಿ |
ತಳಿತ ಕುಂತದ ಬಾಯಿ ಧಾರೆಯ
ಹೊಳವುಗಳ ಹೊದರೆದ್ದ ಸಿಂಧದ
ಸೆಳೆಯ ಸೀಗುರಿಗಳ ಸುರಂಭದ ಸಕಲ ಮೋಹರವ || ೧ ||
1.37.1_7
ಎಲೆ ಪರೀಕ್ಷಿತ ತನಯ- ಜನಮೇಜಯನೇ, ಕೇಳ್ ನೃಪತಿಲಕನು- (ಅರ್ಜುನನು)+ ಅತಿ ವೇಗದಲಿ ರಥವನು ಕೊಳುಗುಳಕೆ- ರಣರಂಗದ ಹತ್ತಿರ, ತರೆ- ತರಲು, ಕಂಡನು+ ಉತ್ತರ ಮುಂದೆ ದೂರದಲಿ ತಳಿತ= (ಚಿಗುರಿದ) ಎತ್ತಿ ಹಿಡಿದ ಕುಂತದ- ಕತ್ತಿ, ಈಟಿಗಳ, ಬಾಯಿ ಧಾರೆಯ ಹೊಳವುಗಳ- ಹೊಳಪುಗಳನ್ನು, ಹೊದರೆದ್ದ- ಗುಚ್ಛವಾಗಿ ಎತ್ತಿ ಹಿಡಿದಿರುವ,ಸಿಂಧದ ಸೆಳೆಯ= ವಿಧವಿಧವಾದ ಬಣ್ಣಗಳಿಂದ ಕೂಡಿದ ವಸ್ತು, ಚಿತ್ರದ ಪತಾಕೆಗಳನ್ನೂ, ಸೀಗುರಿಗಳ- ಚಾಮರಗಳನ್ನೂ, ಬಾವುಟಗಳನ್ನೂ, ಸುರಂಭದ ಸಕಲ ಮೋಹರವ= ಸಿದ್ಧವಾದ ಸಕಲ ಸೈನ್ಯವನ್ನೂ, ಉತ್ತರ ಮುಂದೆ ದೂರದಲ್ಲಿ ಕಂಡನು.
ಹೊದರು= ಗುಚ್ಛ; ಪೊದೆ; ಕುಂತ= ಒಂದು ಬಗೆಯ ಆಯುಧ.; ಸಿಂಧ= ವಿಧವಿಧವಾದ ಬಣ್ಣಗಳಿಂದ ಕೂಡಿದ ವಸ್ತು, ಚಿತ್ರದ ಪತಾಕೆ
1.37.2
ಕರಿಘಟಾವಳಿಯೊಡ್ಡುಗಲ್ಲಿನ
ತುರಗ ನಿಕರದ ತೆರೆಯ ತೇರಿನ
ಹೊರಳಿಗಳ ಸುಳಿಯಾತಪತ್ರದ ಬಹಳ ಬುದ್ಬುದದ |
ನರನಿಕಾಯದ ಜಲಚರೌಘದ
ತರದ ವಾದ್ಯಧ್ವನಿಯ ರವದು
ಬ್ಬರದೊಳಿದ್ದುದು ಬಹಳ ಜಲನಿಧಿಯಂತೆ ಕುರುಸೇನೆ || ೨ ||
1.37.2_8
ಕರಿಘಟೆ+ ಆವಳಿಯ+ ಒಡ್ಡುಗಲ್ಲಿನ= ಆನೆಗಳ ಗುಂಪುಗಳ ಸೈನ್ಯ- ಸಮುದ್ರದಂಡೆಯ ಒಡ್ಡು ಕಲ್ಲುಗಳಂತೆ, ತುರಗ ನಿಕರದ ತೆರೆಯ= ಕುದುರೆಸವಾರರ ಸೈನ್ಯ ಸಮುದ್ರದ ತರೆಗಳಂತೆ, ತೇರಿನ ಹೊರಳಿಗಳ= ರಥಗಳ ಸಾಲು ಸಾಲು, ಸುಳಿಯ+- ಸಮುದ್ರದ ಸುಳಿಯಂತೆ, ಆತಪತ್ರದ- ಕೊಡೆ, ಛತ್ರಿ, ಬಹಳ ಬುದ್ಬುದದ- ಛತ್ರಿ, ಚಾಮರ ಬಾವುಟಗಳು ಸಮುದ್ರದ ನೊರೆಯಂತೆ, ಬಹಳ ನರನಿಕಾಯದ ಜಲಚರ+= ಅಲ್ಲಿದ್ದ ನರರು- ಸೈನಿಕರ ನಿಕಾಯ-ಸಮೂಹವು ಸಮುದ್ರದ ಜಲಚರಗಳಂತೆ, ಔಘದ(ಗುಂಪಿನ) ತರದ- ನಾನಾ ವಿಧದ, ವಾದ್ಯಧ್ವನಿಯ ರವದ+-ಸದ್ದಿನ,// ಉಬ್ಬರದೊಳು+ ಇದ್ದುದು ಬಹಳ ಜಲನಿಧಿಯಂತೆ- ದೊಡ್ಡ ಸಮುದ್ರದಂತೆ- ಕುರುಸೇನೆ- ಇದ್ದುದು.
1.37.3
ಜಡಿವ ಖಡ್ಗದ ಕಿಡಿಯ ಸೇನೆಯ
ಕಡುಹುಗಳ ಕೇಸುರಿಯ ಬಲದು
ಗ್ಗಡದ ರಭಸದ ರೌದ್ರರವ ಛಟಛಟಿತ ನಿಸ್ವನದ |
ಇಡಿದ ಧೂಳಿಯ ಧೂಮ ರಾಶಿಯ
ಪಡೆ ವಿರಾಟನ ಮಗನ ಕಂಗಳಿ
ಗೊಡನೊಡನೆ ದಾವಾಗ್ನಿಯಂತಿರೆ ತೋರಿತಿದಿರಿನಲಿ || ೩ ||
1.37.3_9
ಜಡಿವ-ಝಳುಪಿಸುವ ಖಡ್ಗದ ಕಿಡಿಯ, ಸೇನೆಯ ಕಡುಹುಗಳ ಕೇಸುರಿಯ ಬಲದ+= ಉಗ್ರಸಿಂಹದ ಶಕ್ತಿಯ ಉಗ್ಗಡದ= ಪರಾಕ್ರಮದ, ರಭಸದ ರೌದ್ರರವ ಛಟಛಟಿತ ನಿಸ್ವನದ= ಛಟಛಟ ಎಂಬ ಸದ್ದಿನ, ಇಡಿದ= ತುಂಬಿದ, ಧೂಳಿಯ ಧೂಮ ರಾಶಿಯ ಪಡೆ- ಸೈನ್ಯ, ವಿರಾಟನ ಮಗನ ಕಂಗಳಿಗೆ+ ಒಡನೊಡನೆ- ಮತ್ತೆಮತ್ತೆ ದಾವಾಗ್ನಿಯಂತಿರೆ= ಪ್ರಳಯಕಾಲದ ಅಗ್ನಿಯಂತೆ, ತೋರಿತು+ ಇದಿರಿನಲಿ.
ಉಗ್ಗಡ (ನಾ)= ಉತ್ಕಟತೆ. ಗಟ್ಟಿಯಾದ ಕೂಗು. ಅತಿಶಯವಾದ; ಕಡುಹು= ಪರಾಕ್ರಮವನ್ನು ತೋರು. ಉಗ್ರತೆ. ವೇಗ. ಶೌರ್ಯ
1.37.4
ಪ್ರಳಯ ಮೇಘದ ಮಾತೃಕೆಯೊ ಕರಿ
ಕುಲವೊ ಸಿಡಿಲಿನ ಗರುಡಿಯೊ ಕಳ
ಕಳವೊ ಕಲ್ಪಾನಲನ ಧೂಮಾವಳಿಯೊ ಕೈದುಗಳೊ |
ನೆಲನ ದಡ್ಡಿಯ ಬೆಟ್ಟದಡವಿಯೊ
ತಳಿತ ಟೆಕ್ಕೆಯವೋ ಜಗಂಗಳ
ನಳಿವ ಜಲಧಿಯೊ ಸೇನೆಯೋ ನಾವರಿಯೆವಿದನೆಂದ || ೪ ||
1.37.4_10
ಈ ಸೈನ್ಯ- ಪ್ರಳಯ ಮೇಘದ ಮಾತೃಕೆಯೊ= ಪ್ರಳಯಕಾಲದಲ್ಲಿ ಬರುವ ಮೇಘದ ಮಾತೃಕೆಯಾದ ಪರಾಶಕ್ತಿಯೋ! ಕರಿಕುಲವೊ= ಆನೆಗಳ ಹಿಂಡೋ! ಸಿಡಿಲಿನ ಗರುಡಿಯೊ= ಸಿಡಿಲಿನ ಆರ್ಭಟವೋ! ಕಳಕಳವೊ ಕಲ್ಪಾನಲನ= ಕಲ್ಪದ ಅಂತ್ಯದಲ್ಲಿ ಬರುವ ಪ್ರಳಯಕಾಲದ ಅಗ್ನಿಯ ಜ್ವಾಲೆಯ ಸದ್ದೋ!! ಧೂಮ+ ಆವಳಿಯೊ= ಅಥವಾ ಅದರ ಹೊಗೆಯ ಸಮೂಹವೋ! ಕೈದುಗಳೊ= ಆಯುಧಗಳ ವಡ್ಡು ಮತ್ತು ಸದ್ದೋ! ನೆಲನ ದಡ್ಡಿಯ ಬೆಟ್ಟದ+ ಅಡವಿಯೊ= ಇದು ಭೂಮಿಯ ಎತ್ತರದಮೇಲಿನ ಬೆಟ್ಟದ ಕಾಡೋ! ತಳಿತ ಟೆಕ್ಕೆಯವೋ= ಎತ್ತಿಹಿಡಿದ ಬಾವುಟಗಳೋ! ಜಗಂಗಳನು+ ಅಳಿವ ಜಲಧಿಯೊ= ಎಲ್ಲಾ ಜಗತ್ತನ್ನೂ ನಾಶಮಾಡುವ ಪ್ರಳಯ ಸಮುದ್ರವೋ! ಸೇನೆಯೋ ನಾವು+ ಅರಿಯೆವು+ ಇದನು+= ಇದೇನು ಸೇನೆಯೇ ಸರಿಯೋ! ನನಗೆ ತಿಳಿಯಲಾಗದು ಎಂದ.
1.37.5
ಕಾಲಕೂಟದ ತೊರೆಯೊ ಮಾರಿಯ
ಗೂಳೆಯವೊ ಮೃತ್ಯುವಿನ ಗಂಟಲ
ತಾಳಿಗೆಯೊ ಭೈರವನ ಥಟ್ಟೋ ಜವನ ಜಂಗುಳಿಯೊ |
ಕಾಲರುದ್ರನ ನೊಸಲ ವಹ್ನಿ
ಜ್ವಾಲೆಯೋ ಕೌರವನ ಸೇನಾ
ಜಾಲವೋ ಶಿವಯೆನುತ ಹೆದರಿದನಂದು ಸುಕುಮಾರ || ೫ ||
1.37.6
ಕಡೆಗೆ ಹಾಯವು ಕಂಗಳೀ ಬಲ
ಗಡಲ ಮನವೀಸಾಡಲಾರದು
ವೊಡಲುವಿಡಿದಿರಲೇನ ಕಾಣಲು ಬಾರದದ್ಭುತವ |
ಪೊಡವಿಯೀದುದೊ ಮೋಹರವನಿದ
ರೊಡನೆ ಕಾದುವನಾವನಾತನೆ
ಮೃಡನು ಶಿವ ಶಿವ ಕಾದಿ ಗೆಲಿದೆವು ಬಲಕೆ ನಮೊಯೆಂದ || ೬ ||
1.37.6_11
ಕಡೆಗೆ ಹಾಯವು ಕಂಗಳು+= ಈ ಸೈನ್ಯದ ಕಡೆ- ತುದಿಗೆ ಕಣ್ನುನೋಟ ಹೋಗದು; ಈ ಸೈನ್ಯದ ಅಂಚು-ತುದಿಯೇ ಕಣ್ಣಿಗೆ ಕಾಣುವುದಿಲ್ಲ! ಈ ಬಲ+ ಗ+ ಕಡಲ ಮನವು ಈಸಾಡಲಾರದು= ಈ ಸೈನ್ದದ ಸಮುದ್ರವನ್ನು ಮನಸ್ಸೇ ಈಜಲಾರದು - ಮನಷ್ಯ ಈಜುವುದುಂಟೇ?. ವೊ-ಒಡಲು+ವಿ+ ಇಡಿದಿರಲು+ ಏನ ಕಾಣಲುಬಾರದು+ ಅದ್ಭುತವ ಪೊಡವಿಯು+ ಈದುದೊ ಮೋಹರವನು+= ಭೂಮಿಯ ಹೊಟ್ಟೆ ಇಡಿದಿರಲು- ಬಿಡುವಿಲ್ಲದಂತೆ ತುಂಬಿಲು ಏನನ್ನೂ ಕಾಣದಂತಾಗಿದೆ.+ ಈ ಅದ್ಭುತವ ಪೊಡವಿಯು- ಭೂಮಿಯೇ + ಈದುದೊ ಮೋಹರವನು- ಈ ಸೈನ್ವನ್ನು ಜನಿಸಿತೇ (ಹಡೆಯಿತೇ))! ಇದರೊಡನೆ ಕಾದುವನು+ ಆವನು+ ಆತನೆ ಮೃಡನು= ಈಸೈನ್ಯದೊಡನೆ ಯಾರು ತಾನೇ ಯುದ್ಧ ಮಾಡುವರು? ಯುದ್ಧಮಾಡಿದರೆ ಅವನು ಶಿವನೇ ಸರಿ! ಶಿವ ಶಿವ ಕಾದಿ ಗೆಲಿದೆವು= ಯುದ್ಧಮಾಡಿ ಗೆದ್ದೆವು! ಬಲಕೆ- ಸೈನ್ಯಕ್ಕೆ, ನಮೊಯೆಂದ.ಇಗೋ ಸೈನ್ಯಕ್ಕೆ ನಮೋ ನಮಃ ಎಂದ. (ಈ ನಮಸ್ಕಾರದಿಂದ ಗೆದ್ದಂತಾಯಿತು - ಸಾಕು ಎಂದ.)
1.37.6_12
ಉತ್ತರಕುಮಾರನ - ಯುದ್ಧ ನಿರಾಕರಣೆ
1.37.7
ಹಸಿದ ಮಾರಿಯ ಮಂದೆಯಲಿ ಕುರಿ
ನುಸುಳಿದಂತಾದೆನು ಬೃಹನ್ನಳೆ
ಯೆಸಗದಿರು ತೇಜಿಗಳ ತಡೆ ಚಿಮ್ಮಟಿಗೆಯನು ಬಿಸುಡು |
ಮಿಸುಕಬಾರದು ಪ್ರಳಯ ಕಾಲನ
ಮುಸುಕನುಗಿವವನಾರು ಕೌರವ
ನಸಮ ಬಲನೈ ರಥವ ಮರಳಿಚು ಜಾಳಿಸುವೆನೆಂದ || ೭ ||
1.37.7_13
ಹಸಿದ ಮಾರಿಯ ಮಂದೆಯಲಿ ಕುರಿನುಸುಳಿದಂತೆ+ ಆದೆನು= ಹಸಿದಿರುವ ಮಾರಿ ಒಬ್ಬಳಲ್ಲ- ಅನೇಕ ಹಸಿದ ಮಾರಿಗಳ ಮದ್ಯೆ ನಾನು ಕುರಿಯಂತೆ ನುಗ್ಗಿದ ಹಾಗಾಯಿತು. ಬೃಹನ್ನಳೆ+ ಯೆಸಗದಿರು ತೇಜಿಗಳ ತಡೆ ಚಿಮ್ಮಟಿಗೆಯನು ಬಿಸುಡು, ಮಿಸುಕಬಾರದು= ಬೃಹನ್ನಳೆ ಕುದುರೆಗಳನ್ನು ಓಡಿಸಬೇಡ; ಕುದುರೆಗಳನ್ನು ತಡೆದು ನಿಲ್ಲಿಸು. ಚಿಮ್ಮಟಿಗೆಯನು ಬಿಸುಡು- ಎಸೆದುಬಿಡು! ಒಂದು ಹೆಜ್ಜೆಯನ್ನೂ ಮಿಸುಕಬಾರದು- ಇಡಬಾರದು. ಪ್ರಳಯ ಕಾಲನ ಮುಸುಕನು+ ಉಗಿವವನು+ ಆರು,= ಈ ಸೈನ್ಯ ಪ್ರಳಯಕಾಲದ ರುದ್ರನಂತಿದೆ- ಮಲಗಿದ ರುದ್ರನ ಮುಸಕನ್ನು ತೆಗೆಯುವವನು ಯಾರಿದ್ದಾರೆ? ಕೌರವನು+ ಅಸಮ ಬಲನೈ ರಥವ ಮರಳಿಚು ಜಾಳಿಸುವೆನು+ ಎಂದ= ಕೌರವನು ಅಸಮ- ಸರಿಸಾಟಿಯಿಲ್ಲದ ಬಲಶಾಲಿಯೇ ಸರಿ. ರಥವನ್ನು ಮರಳಿಚು- ಹಿಂದಕ್ಕೆ ಹೊಡಿ. ಹಿಂತಿರುಗುವೆನು- ನಡುಗುತ್ತಿದ್ದೇನೆ ಎಂದ.
1.37.8
ಎಲೆ ಕುಮಾರಕ ಮೊದಲ ಚುಂಬನ
ದೊಳಗೆ ಹಲು ಬಿದ್ದಂತೆ ಕಾಳಗ
ದೊಳಗೆ ಬೆರೆಯದ ಮುನ್ನ ಹಿಡಿದೈ ಸಮರ ಭೀತಿಯನು |
ಅಳುಕಲಾಗದು ನಿಮ್ಮ ತಂದೆಯ
ಕುಲಕೆ ಕುಂದನು ತಾರದಿರು ಮನ
ಗೆಲವಿನಲಿ ಕಾದೆನುತ ರಥವನು ಬೇಗ ಹರಿಸಿದನು || ೮ ||
1.37.8_14
ಅರ್ಜುನನು, 'ಎಲೆ ಕುಮಾರನೇ! ಪ್ರೇಮದ ಮೊದಲ ಹಂತದಲ್ಲಿ ಚುಂಬನ ಮಾಡಿದಾಗ ಹಲ್ಲು ಉದುರಿದ ಹಾಗೆ ಆಯಿತು,'ಎಂದನು. ("ಮೊದಲ ಚುಂಬನದೊಳಗೆ ಹಲು ಬಿದ್ದಂತೆ", ಗಾದೆಗಳಲ್ಲಿ ಈ ಮಾತು ಸೇರಿದೆ.) ಕಾಳಗದೊಳಗೆ ಬೆರೆಯದ ಮುನ್ನ ಹಿಡಿದೈ ಸಮರ ಭೀತಿಯನು= ಯುದ್ಧವನ್ನು ಆರಂಭಿದುವ ಮೊದಲೇ ಯುದ್ಧಭೀತಿಯನ್ನು ಹೊಂದಿದೆಯಲ್ಲಾ!, ಅಳುಕಲಾಗದು ನಿಮ್ಮ ತಂದೆಯ ಕುಲಕೆ ಕುಂದನು ತಾರದಿರು, ಮನಗೆಲವಿನಲಿ ಕಾದು+ ಎನುತ ರಥವನು ಬೇಗ ಹರಿಸಿದನು= ಯುದ್ಧಕ್ಕೆ ಹೆದರಬಾರದು, ನಿಮ್ಮ ತಂದೆಯ ಕುಲಕ್ಕೆ ಕುಂದನ್ನು ತರಬೇಡ, ಮನ ಗೆಲವಿನಲಿ ಕಾದು+= ಧೈರ್ಯ ಮತ್ತು ಗೆಲುವಿನಿಂದ ಯುದ್ಧಮಾಡು ಎಂದು ಹೇಳಿ, ಪಾರ್ಥನು ರಥವನ್ನು ಬೇಗ ಮುಂದಕ್ಕೆ ಹರಿಸಿದನು.
1.37.9
ಸಾರಿ ಬರ ಬರಲವನ ತನು ಮಿಗೆ
ಬಾರಿಸಿತು ಮೈ ಮುರಿದು ರೋಮ ವಿ
ಕಾರ ಘನ ಕಾಹೇರಿತವಯವ ನಡುಗಿ ಡೆಂಡಣಿಸಿ |
ಭೂರಿ ಭಯ ತಾಪದಲಿ ತಾಳಿಗೆ
ನೀರುದೆಗೆದುದು ತುಟಿಯೊಣಗಿ ಸುಕು
ಮಾರ ಕಣ್ಣೆವೆ ಸೀಯೆ ಕರದಲಿ ಮುಚ್ಚಿದನು ಮುಖವ || ೯ ||
1.37.9_15
ಸಾರಿ ಬರ ಬರಲು+ ಅವನ ತನು ಮಿಗೆ ಬಾರಿಸಿತು= ರಥವು ಮುಂದೆ ಸಾರಿ ಬರ ಬರುತ್ತಿಲು+,ಅವನ ತನು- ದೇಹ ಮಿಗೆ ಬಾರಿಸಿತು- ಕುಗ್ಗಿತು, ಮೈ ಮುರಿದು- ಹಿಂಡಿದಂತಾಗಿ, ರೋಮ ವಿಕಾರ ಘನ ಕಾಹೇರಿತು+= ರೋಮಗಳು ಎದ್ದುನಿಂತು ಮೈ ಬಿಸಿಯಾಯಿತು. ಅವಯವ ನಡುಗಿ ಡೆಂಡಣಿಸಿ= ದೇಹದ ಅಂಗಾಂಗಗಳು ನಡುಗಿ ದೇಹವು ಓಲಾಡಿ, ಭೂರಿ ಭಯ ತಾಪದಲಿ ತಾಳಿಗೆ ನೀರು+ ದ+ ತೆಗೆದುದು= ಅತಿಭಯದ ಸಂಕಟದಿಂದ ನಾಲಿಗೆ ಒಣಗಿತು. ತುಟಿಯೊಣಗಿ ಸುಕುಮಾರ ಕಣ್ಣೆವೆ ಸೀಯೆ= ತುಟಿಗಳು ಒಣಗಿದವು ಕಣ್ಣುಗಳು ಸೀದಂತೆ ಹೊರಚಾಚಿದವು. ಕರದಲಿ ಮುಚ್ಚಿದನು ಮುಖವ= ಆಗ ಅವನು ತನ್ನ ಕೇಗಳಿಂದ ಮುಖವನ್ನು ಮುಚ್ಚಕೊಂಡನು.
1.37.10
ಏಕೆ ಸಾರಥಿ ರಥವ ಮುಂದಕೆ
ನೂಕಿ ಗಂಟಲ ಕೊಯ್ವೆ ಸುಡು ಸುಡು
ಕಾಕಲಾ ಕಣ್ಣೊಡೆದವೇ ಕಾಣಾ ಮಹಾಬಲವ |
ನಾಕನಿಳಯರಿಗರಿದು ನಿನಗೆ ವಿ
ವೇಕವೆಳ್ಳನಿತಿಲ್ಲ ತೆಗೆ ತೆಗೆ
ಸಾಕು ವಾಘೆಯ ಮರಳಿ ಹಿಡಿ ತೇಜಿಗಳ ತಿರುಹೆಂದ || ೧೦ ||
1.37.10_16
ಏಕೆ ಸಾರಥಿ ರಥವ ಮುಂದಕೆ ನೂಕಿ ಗಂಟಲ ಕೊಯ್ವೆ= ಸಾರಥಿಯೇ ರಥವನ್ನು ಮುಂದಕ್ಕೆ ಓಡಿಸಿ ನನ್ನ ಗಂಟಲನ್ನು ಕೊಯ್ಯವ ಕೆಲಸ ಮಾಡುವೆ? ಸುಡು ಸುಡು ಕಾಕಲಾ(ಕಾಕು- ಕೆಟ್ಟ ಮನುಷ್ಯ) ಕಣ್ಣು+ ಒಡೆದವೇ= ಸುಡು ಸುಡು, ಕೇಡಿಗನಲಾ! ನೋಡುವ ಆ ನಿನ್ನ ಕಣ್ಣುಗಳು ಒಡೆದವೇ? ಕಾಣಾ ಮಹಾಬಲವ= ಎದುರಿಗೆ ಆ ಮಹಾ ಸೈನ್ಯವನ್ನು ಕಾಣೋ ನೋಡೋ!? ನಾಕ (ದೇವಲೋಕ) ನಿಳಯರಿಗೆ+ ಅರಿದು= ಅದನ್ನು ಎದುರಿಸಲು ದೇವಲೋಕದ ವಾಸಿಗಳಿಗೂ ಅರಿದು- ಅಸಾದ್ಯ. ನಿನಗೆ ವಿವೇಕವು+ ಎಳ್ಳನಿತಿಲ್ಲ - ಎಳ್ಳಿನಷ್ಟೂ ಇಲ್ಲ, ತೆಗೆ ತೆಗೆಸಾಕು ವಾಘೆಯ ಮರಳಿ ಹಿಡಿ ತೇಜಿಗಳ ತಿರುಹೆಂದ= ನಿಲ್ಲಿಸು ಸಾಕು, ಕುದುರೆಯ ವಾಘೆಗಳನ್ನು ಹಿಡಿದು ತಿರುಗಿಸಿ ಹೊಡೆ ಎಂದ ಉತ್ತರ.
1.37.11
ನುಡಿಯ ಕೇಳದೆ ಮುಂದೆ ಹತ್ತೆಂ
ಟಡಿಯನರ್ಜುನ ರಥವ ಹರಿಸಲು
ಹಿಡಿದ ಬಿಲ್ಲಂಬುಗಳು ಬಿದ್ದವು ಕೈಯನರೆ ತೆಗೆದು |
ಹಿಡಿ ಹಯವನಿರಿಗಾರ ಸಾರಥಿ
ನುಡಿವವರು ನಾವ್ ಹಗೆಗಳೇ ನಿ
ನ್ನೊಡೆಯರಲ್ಲಾ ಸ್ವಾಮಿ ದುರುಹಿಕೆ ಲೇಸು ಲೇಸೆಂದ || ೧೧ ||
1.37.11_17
ಉತ್ತರನ ನುಡಿಯ- ಮಾತನ್ನು ಕೇಳದೆ ಮುಂದೆ ಹತ್ತೆಂಟು+ ಅಡಿಯನು+ ಅರ್ಜುನ ರಥವ ಹರಿಸಲು, ಉತ್ತರನು ಕೈಯಲ್ಲಿ, ಹಿಡಿದ ಬಿಲ್ಲಂಬುಗಳು ಬಿದ್ದವು ಕೈಯನು ಅರೆ ತೆಗೆದು- ಹಿಡಿತ ಸಡಿಲವಾಗಿ,// ಹಿಡಿ ಹಯವನು+ ಇರಿಗಾರ ಸಾರಥಿ ನುಡಿವವರು ನಾವ್ ಹಗೆಗಳೇ ನಿನ್ನೊಡೆಯರಲ್ಲಾ ಸ್ವಾಮಿ ದುರುಹಿಕೆ ಲೇಸು ಲೇಸೆಂದ= ಹಿಡಿ ಹಯವನು+- ಸಾರಥಿ ಕುದುರೆಯನ್ನು ಹಿಡಿದು ನಿಲ್ಲಿಸು; ಇರಿಗಾರ ಸಾರಥಿ ನುಡಿವವರು ನಾವ್ ಹಗೆಗಳೇ- ಕೊಲೆಗಾರ ಸಾರಥಿಯೇ, ನಿನ್ನೊಡೆಯರಲ್ಲಾ- ನಾವು ನಿನ್ನೊಡೆಯರಲ್ಲವೇ? ಸ್ವಾಮಿ ದುರುಹಿಕೆ ಲೇಸು ಲೇಸೆಂದ- ನೀನು ಮಾಡುವ ಸ್ವಾಮಿ ದ್ರೋಹಕ್ಕೆ - ಲೇಸು ಲೇಸು (ಓಳ್ಳೆಯ ಕಲಸ.), ಎಂದ
1.37.12
ಎಂದೊಡರ್ಜುನ ನಗುತ ರಥವನು
ಮುಂದೆ ನಾಲ್ಕೆಂಟಡಿಯ ನೂಕಲು
ಕೊಂದನೀ ಸಾರಥಿಯೆನುತ ಸಂವರಿಸಿ ಮುಂಜೆರಗ |
ಬಂದು ಮೆಲ್ಲನೆ ರಥದ ಹಿಂದಕೆ
ನಿಂದು ಧುಮ್ಮಿಕ್ಕಿದನು ಬದುಕಿದೆ
ನೆಂದು ನಿಟ್ಟೋಟದಲಿ ಹಾಯ್ದನು ಬಿಟ್ಟ ಮಂಡೆಯಲಿ || ೧೨ ||
1.37.12_18
ಉತ್ತರನು,'ನೀನು ಸ್ವಾಮಿದ್ರೋಹ ಮಾಡುತ್ತಿರುವೆ ಎಂದಾಗ, ಎಂದೊಡೆ+ ಅರ್ಜುನ ನಗುತ- ನಗುತ್ತಾ, ರಥವನು ಮುಂದೆ ನಾಲ್ಕೆಂಟು+ ಅಡಿಯ ನೂಕಲು= ರಥವನ್ನು ನಾಲ್ಕು-ಎಂಟು ಅಡಿಯಷ್ಟು ಮುಂದೆ ಹೊಡೆಯಲು,, ಕೊಂದನು+ ಈ ಸಾರಥಿಯೆ+ ಎನುತ ಸಂವರಿಸಿ- = ಉತ್ತರನು ಈ ಸಾರಥಿ ಯುದ್ಧಕ್ಕೆ ನೂಕಿ, ತನ್ನನ್ನು ಕೊಂದುಹಾಕುತ್ತಾನೆ ಎಂದುಕೊಂಡು, ಮುಂಜೆರಗ ಬಂದು ಮೆಲ್ಲನೆ ರಥದ ಹಿಂದಕೆ ನಿಂದು,= ರಥದ ಹಿಂಭಾಗದಲ್ಲಿ ಮುಂದೆ ಮುಂದೆ ಜರುಗಿ, ಎದ್ದುನಿಂತು ಕೆಳಗೆ ಹಾರಿ,/ ಧುಮ್ಮಿಕ್ಕಿದನು= ಹಾರಿ ಓಡಿದನು; ಬದುಕಿದೆನು+ ಎಂದು= ಬದುಕಿದೆ ಎಂದು ಕೊಂಡನು. ನಿಟ್ಟೋಟದಲಿ ಹಾಯ್ದನು ಬಿಟ್ಟ ಮಂಡೆಯಲಿ= ತಲೆಯ ಕೂದಲು ಎತ್ತಿಕಟ್ಟಿದ್ದು ಬಿಚ್ಚಿ ಕೆದರಿಹೋಯಿತು, ಹಾಗೆಯೇ ನಿಟ್ಟೋಟದಿಂದ (ನೇರವಾದ ಓಟ) ಹಿಂದಕ್ಕೆ ಓಡಿದನು.
1.37.13
ನೋಡಿದನು ಕಲಿಪಾರ್ಥನೀ ಕೇ
ಡಾಡಿ ಕೆದರಿದ ಕೇಶದಲಿ ಕೆ
ಟ್ಟೋಡುತಿರಲೆಲೆ ಪಾಪಿ ಹಾಯ್ದನು ಹಿಡಿಯಬೇಕೆನುತ |
ಕೂಡೆ ಸೂಟಿಯೊಳಟ್ಟಲಿಳೆಯ
ಲ್ಲಾಡಲಹಿಪತಿ ಹೆದರಲಿತ್ತಲು
ನೋಡಿ ಕೌರವಸೇನೆ ಕೆಡೆದುದು ನಗೆಯ ಕಡಲೊಳಗೆ || ೧೩ ||
1.37.13_19
ನೋಡಿದನು ಕಲಿಪಾರ್ಥನು+ ಈ ಕೇಡಾಡಿ ಕೆದರಿದ ಕೇಶದಲಿ ಕೆಟ್ಟೋಡುತಿರಲು+= ಕಲಿಪಾರ್ಥನು ಈ ಕೇಡಾಡಿಯಾದ(ಕೆಡುಕನ್ನು ಮಾಡುವ) ಉತ್ತರನು ಕೆದರಿರುವ ಕೂದಲನ್ನು ಬಿಟ್ಟುಕೊಂಡು ಕೆಟ್ಟೋಡುತಿರಲು- ವೇಗವಾಗಿ ಓಡುತ್ತಿರುವುದನ್ನು ನೋಡಿದನು + // ಎಲೆ ಪಾಪಿ ಹಾಯ್ದನು ಹಿಡಿಯಬೇಕು ಎನುತ= ಎಲೆ ಪಾಪಿ- 'ಯುದ್ಧಬಿಟ್ಟೊಡುವ ಅಪರಾಧಿ', ಕೂಡೆ ಸೂಟಿಯೊಳು+ಅಟ್ಟಲು+ ಇಳೆಯು+ ಅಲ್ಲಾಡಲು+ ಅಹಿಪತಿ ಹೆದರಲು+= ತಕ್ಷಣ ಚುರುಕಾಗಿ ಬೆನ್ನಟ್ಟಿದನು, ಅವನ- ಅರ್ಜುನನ ಹೆಜ್ಜೆಯ ರಭಸಕ್ಕೆ ಭೂಮಿಯು ಅಲುಗಿ, ಅಹಿಪತಿ- ಭೂಮಿಯನ್ನು ಹೊತ್ತ ವಾಸುಕಿಯು ಹೆದರಿದನು- ಇದೇನು ಎಂದು! ಇತ್ತಲು ನೋಡಿ ಕೌರವಸೇನೆ ಕೆಡೆದುದು ನಗೆಯ ಕಡಲೊಳಗೆ= ಇತ್ತಲು= ಇತ್ತ ಕೌರವನ ಸೇನೆಯಲ್ಲಿ ಇದನ್ನು ನೋಡಿ ಇಡೀ ಕೌರವಸೇನೆ;/ ಕೆಡೆದುದು ನಗೆಯ ಕಡಲೊಳಗೆ= ನಗೆಯ ಸಮುದ್ರದಲ್ಲಿ ಬಿದ್ದಿತು- ಮುಳುಗಿತು.
1.37.14
ಎಲೆಲೆ ಕಾದಲು ಬಂದ ವೀರನ
ಬಲುಹ ನೋಡಾ ಶಿವ ಶಿವಾ ಬೆಂ
ಬಳಿಯಲಟ್ಟುವ ವೀರನಾವನೊ ಸುಭಟನಹನವನು |
ತಿಳಿಯಲರಿದಿವನಾವನೋ ವೆ
ಗ್ಗಳೆಯನಹನಾಕಾರದಲಿ ನೆರೆ
ಫಲುಗುಣನ ಹೋಲುವನೆನುತ ಗಜಬಜಿಸಿತರಿ ಸೇನೆ || ೧೪ ||
1.37.14_20
ಎಲೆಲೆ ಕಾದಲು- ಯುದ್ಧಕ್ಕೆ ಬಂದ ವೀರನ ಬಲುಹ-ಶೌರ್ಯ, ನೋಡಾ, ಶಿವ ಶಿವಾ ಬೆಂಬಳಿಯಲಿ- ಬೆನ್ನಹಿಂದೆ+ ಅಟ್ಟುವ ವೀರನು+ ಆವನೊ- ಯಾವನೋ ಸುಭಟು+ ಅಹನು- ಆಗಿರುವನು+ ಅವನು ತಿಳಿಯಲು+ ಅರಿದು- ಅರಿಯಲಾಗದು,+ ಇವನು+ ಆವನೋ ವೆಗ್ಗಳೆಯನು- ಉತ್ತಮನು+ ಅಹನು- ಇದ್ದಾನೆ+ ಆಕಾರದಲಿ ನೆರೆ- ಬಹಳ ಫಲುಗುಣನ ಹೋಲುವನು+ ಎನುತ ಗಜಬಜಿಸಿತು+ ಅರಿ- ಶತ್ರು, ಸೇನೆ.
1.37.15
ಈತ ಸಾರಥಿಯಳವಿನಲಿ ಮಿಗು
ವಾತನುತ್ತರನರ್ಜುನಂಗೀ
ಸೂತತನವೆತ್ತಲು ನಪುಂಸಕ ವೇಷ ವೀಕ್ಷಿಸಲು |
ಈತನರ್ಜುನನಾಗಲಾ ಪುರು
ಹೂತನಾಗಲಿ ರಾಮನಾಗಲಿ
ಆತಡಿರಿವೆನು ಬರಲಿಯೆಂದನು ಖಾತಿಯಲಿ ಕರ್ಣ || ೧೫ ||
1.37.15_21
ಈತ ಸಾರಥಿಯ+ ಅಳವಿನಲಿ-ಅಳವು- ಸಾಮರ್ಥ್ಯ- ಉದ್ಯೋದಲ್ಲಿ, ಮಿಗುವಾತನು (ಮತ್ತೊಬ್ಬನುನು)+ ಉತ್ತರನು+ ಅರ್ಜುನಂಗೆ+ ಈ ಸೂತತನವೆತ್ತಲು- ಸಾರಥಿತನ ಹೇಗೆ ಒಪ್ಪುವುದು?, ನಪುಂಸಕ ವೇಷ ವೀಕ್ಷಿಸಲು- ನೋಡಿದರೆ; ಈತನು+ ಅರ್ಜುನನು - ನೇ+ ಆಗಲಿ- ಆಗಿರಲಿ,+ ಆ ಪುರುಹೂತನಾಗಲಿ- ಇಂದ್ರನೇ ಆಗಿರಲಿ, ರಾಮನಾಗಲಿ ಆತಡೆ= ಎದುರಿಸಿ ನಿಂತರೆ+ ಇರಿವೆನು- ಕತ್ತರಿಸುವೆನು, ಬರಲಿಯೆಂದನು ಖಾತಿಯಲಿ- ಸಿಟ್ಇನಿಂದ, ಕರ್ಣ.
1.37.16
ಇತ್ತಲರ್ಜುನನುತ್ತರನ ಬೆಂ
ಬತ್ತಿ ಬಂದನು ಹೋದೆಯಾದರೆ
ಕಿತ್ತು ಬಿಸುಡುವೆ ನಿನ್ನ ತಲೆಯನು ನಿಲ್ಲು ನಿಲ್ಲೆನುತ |
ಮೃತ್ಯುವೋ ಸಾರಥಿಯೊ ಪಾಪಿಯ
ನೆತ್ತಣಿಂದವೆ ಮಾಡಿ ಕೊಂಡೆನೆ
ನುತ್ತ ಮರಳಿದು ನೋಡಿ ನಿಲ್ಲದೆ ಮತ್ತೆ ಸೈವರಿದ || ೧೬ ||
1.37.17
ಇಟ್ಟಣಿಸಿ ನರ ನೂರು ಹಜ್ಜೆಯೊ
ಳಟ್ಟಿ ಹಿಡಿದನಿದೇನ ಮಾಡಿದೆ
ಹುಟ್ಟಿದೆಯೊ ಹಾದರಕೆ ಕ್ಷತ್ರಿಯ ಬೀಜವೋ ನೀನು |
ದಿಟ್ಟತನ ಮಿಗೆ ಹೆಂಗಳಿದಿರಲಿ
ಹೊಟ್ಟುಗುಟ್ಟಿದೆ ಹಗೆಗಳಿದಿರಲಿ
ಬಿಟ್ಟುಕೊಂಡೆ ದುರಾತ್ಮ ಮುರಿದೆ ವಿರಾಟನನ್ವಯವ || ೧೭||
1.37.17_22
ಇಟ್ಟಣಿಸಿ(ಇಟ್ಟಣಿಸಿ= ಅತಿಶಯ, ಹೆಚ್ಚೆಂದರೆ), ನರ- ಅರ್ಜುನ, ನೂರು ಹಜ್ಜೆಯೊಳು+ ಅಟ್ಟಿ ಹಿಡಿದನು+, ಇದೇನ ಮಾಡಿದೆ= ಇದೇನು ಹೇಡಿತನದ ಕೆಲಸ ಮಾಡಿದೆ./ ಹುಟ್ಟಿದೆಯೊ ಹಾದರಕೆ ಕ್ಷತ್ರಿಯ ಬೀಜವೋ ನೀನು= ತಂದೆಗೆ ಹುಟ್ಟಿದವನಲ್ಲವೇ?/, ದಿಟ್ಟತನ= ಧೈರ್ಯ, ಮಿಗೆ= ಬಹಳ ಹೆಂಗಳ+ ಇದಿರಲಿ ಹೊಟ್ಟುಗುಟ್ಟಿದೆ (ಸಾರವಿಲ್ಲದ ಜಂಬ ಕೊಚ್ಚಿದೆ)= ಸಾರವಿಲ್ಲದ ಜಂಬ ಕೊಚ್ಚಿದೆ;/ ಹಗೆಗಳ+ ಇದಿರಲಿ ಬಿಟ್ಟುಕೊಂಡೆ= ಶತ್ರುಗಳ ಇದುರಿನಲ್ಲಿ ಎದುರಿಸದೆ ಬಿಟ್ಟು ಓಡಿದೆ./ ದುರಾತ್ಮ ಮುರಿದೆ ವಿರಾಟನ+ ಅನ್ವಯವ= ಕೆಡುಕಿಯೇ ಯುದ್ಧ ಭೂಮಿಯಿಂದ ಓಡಿ ವಿರಾಟನ ವಂಶವನ್ನು ಮುರಿಯುವ ಕೆಲಸ ಮಾಡಿದೆ, ಎಂದನು ಪಾರ್ಥ.
1.37.18
ಹಲುಗಿರಿದು ಬಾಯೊಳಗೆ ಬೆರಳಿ
ಟ್ಟಳುಕಿ ತಲೆವಾಗಿದನು ಸಾರಥಿ
ಕಳುಹಿ ಕಳೆಯೈ ನಿನ್ನ ಬಸುರಲಿ ಮರಳಿ ಬಂದವನು |
ಕೊಳುಗುಳದೊಳೀಯೊಡ್ಡ ಮುರಿವ
ಗ್ಗಳೆಯರುಂಟೇ ಲೋಗರಿಂದವೆ
ಕೊಲಿಸದಿರು ನೀ ಕುತ್ತಿ ಕೆಡಹು ಕಠಾರಿಯಿದೆಯೆಂದ || ೧೮ ||
1.37.18_23
ಹಲುಗಿರಿದು ಬಾಯೊಳಗೆ ಬೆರಳಿಟ್ಟು+ ಅಳುಕಿ ತಲೆವಾಗಿದನು= ನಾಚಿಕೆಯಿಂದ ಉತ್ತರಕೊಡಲಾಗದೆ, ಹಲ್ಲುಕಿರಿದು ಕೃತಕ ನಗುವನ್ನು ತೊರಿ, ನಾಚಿಕೆಯಿಂದ ತಲೆ ತಗ್ಗಿಸಿದನು. ಮತ್ತೆ ಹೇಳಿದನು, ಸಾರಥಿ ಕಳುಹಿ ಕಳೆಯೈ ನಿನ್ನ ಬಸುರಲಿ ಮರಳಿ ಬಂದವನು= ಸಾರಥಿಯೇ ನನ್ನನ್ನು ಬಿಟ್ಟು ಕಳಿಸಪ್ಪಾ! ನಿನ್ನ ಹೊಟ್ಟೆಯಲ್ಲಿ ಮತ್ತೆ ಹುಟ್ಟಿಬಂದವನು ಎಂದು ಕೊಳ್ಳುತ್ತೇನೆ./ ಕೊಳುಗುಳದೊಳು ಈ ಯೊಡ್ಡ ಮುರಿವ+ ಅಗ್ಗಳೆಯರು+ ಉಂಟೇ= ಯುದ್ಧದಲ್ಲಿ ಈ ದೊಡ್ಡ ಸೈನ್ಯವನ್ನು ಒಬ್ಬರೇ ಸೋಲಿಸುವ ಶ್ರೇಷ್ಠವೀರರು ಇದ್ದಾರೆಯೇ? ಲೋಗರಿಂದವೆ ಕೊಲಿಸದಿರು, ನೀ ಕುತ್ತಿ ಕೆಡಹು ಕಠಾರಿಯಿದೆ+ ಯೆ+ ಎಂದ= ನಿನಗೆ ನನ್ನನ್ನು ಸಾಯಿಸಬೇಕೆಂದಿದ್ದರೆ- ಅವರಿವರಿಂದ ಕೊಲ್ಲಿಸಬೇಡ, ನೀನೇ ಕೊಂದುಬಿಡು - ಇಗೋ ಕತ್ತಿಯನ್ನು ತೆಗೆದುಕೋ, ಎಂದ ಉತ್ತರ.
1.37.19
ಮನದಲೊಡಲೊಡೆವಂತೆ ನಗುತ
ರ್ಜುನನು ಗಜರಿದನೆಲವೊ ಸಭೆಯಲಿ
ವನಜಮುಖಿಯರ ಮುಂದೆ ಸೊರಹಿದೆ ಬಾಯ್ಗೆ ಬಂದಂತೆ ||
ಅನುವರದೊಳೇನಾಯ್ತು ರಿಪು ವಾ
ಹಿನಿಯನಿರಿಯದೆ ನಾಡ ನರಿಯವೊ
ಲೆನೆಗೆ ನೀ ಹಲುಗಿರಿಯೆ ಬಿಡುವೆನೆ ಕಾದು ನಡೆಯೆಂದ || ೧೯ ||
1.37.19_24
ಮನದಲಿ+ ಒಡಲು+ ಒಡೆವಂತೆ ನಗುತ+ ಅರ್ಜುನನು ಗಜರಿದನು= ಅರ್ಜುನನು ಮನಸ್ಸಿನಲ್ಲಿ ಹೊಟ್ಟೆ ಬಿರಿಯುವಂತೆ ನಗುತ್ತಾ, ಗದರಿಸಿದನು;/ 'ಎಲವೊ ಸಭೆಯಲಿ ವನಜಮುಖಿಯರ ಮುಂದೆ ಸೊರಹಿದೆ ಬಾಯ್ಗೆ ಬಂದಂತೆ ಅನುವರದೊಳು+ ಏನಾಯ್ತು= 'ಎಲವೊ! ಸಭೆಯಲ್ಲಿ ವನಿತೆಯರ ಮುಂದೆ (ಸೊರಹು= ಅತಿಯಾಗಿ ಮಾತನಾಡು)ಸುರಹಿದೆ, ಬಾಯ್ಗೆ ಬಂದಂತೆ ಅತಿಯಾಗಿ ಜಂಬಕೊಚ್ಚಿದೆ./ ಅನುವರದೊಳು+ ಏನಾಯ್ತು= ಆದರೆ ಆನಂತರದ ಯುದ್ಧಭೂಮಿಯಲ್ಲಿ ಏನು ಮಾಡಿದೆ?/ ರಿಪು ವಾಹಿನಿಯನು+ ಇರಿಯದೆ ನಾಡ ನರಿಯವೊಲ್+ ಎನೆಗೆ ನೀ ಹಲುಗಿರಿಯೆ ಬಿಡುವೆನೆ ಕಾದು= ಯುದ್ಧಮಾಡು ನಡೆಯೆಂದ= ರಿಪು ವಾಹಿನಿಯನು- ಶತ್ರುಸೈನ್ಯದವನ್ನು ಹೊಡೆದುಹಾಕದೆ, ನಾಡ ನರಿಯವೊಲ್ - ನಾಯಿಯಂತೆ ಎನೆಗೆ-ನನಗೆ, ನೀ ಹಲುಗಿರಿಯೆ ಬಿಡುವೆನೆ ಕಾದು- ಯುದ್ಧಮಾಡು/ ನೀನು ಹಲ್ಲುಕಿರಿದರೆ, ಬಿಡುವುದಿಲ್ಲ, ಯುದ್ಧಮಾಡು ನಡೆಯೆಂದ, ಅರ್ಜುನ.
1.37.20
ಹೇವ ಬೇಡಾ ವೀರರೀ ಪರಿ
ಜೀವಗಳ್ಳರ ಪಥವ ಹಿಡಿವರೆ
ಸಾವಿಗಂಜಿದೆವೇ ನಪುಂಸಕರೆಮ್ಮ ನೋಡೆನಲು |
ನೀವು ವೀರರು ನೆರೆ ನಪುಂಸಕ
ರಾವು ಸಾವವರಲ್ಲ ಲೋಕದ
ಜೀವಗಳ್ಳರಿಗಾವು ಗುರುಗಳು ಬಿಟ್ಟು ಕಳುಹೆಂದ ||೨೦ ||
1.37.20_25
ಹೇವ ಬೇಡಾ ವೀರರು+ ಈ ಪರಿಜೀವಗಳ್ಳರ ಪಥವ ಹಿಡಿವರೆ= ಅರ್ಜುನ ಎಂದ -ಹಿಂಜರಿಕೆ ಬೇಡ, ಹೆದರಬೇಡ', ಅದಕ್ಕೆ ಉತ್ತರನು, ಸಾವಿಗೆ+ ಅಂಜಿದೆವು- ಸಾವಿಗೆ ಹೆದರುತ್ತೇನೆ ಎಂದ; +, ಈ ನಪುಂಸಕರು+ ಎಮ್ಮ ನೋಡು+ ಎನಲು= 'ನಾವು ನಪುಂಸಕರು, ನಮ್ಮನ್ನು ನೋಡು - ಹೆದರುವುದಿಲ್ಲ', ಎಂದ ಅರ್ಜುನ. ಹಾಗೆನ್ನಲು, ನೀವು ವೀರರು ನೆರೆ ನಪುಂಸಕರು+ ಆವು- ನಾವು, ಸಾವವರು- ಸಾಯುವವರಲ್ಲ+ ಅಲ್ಲ, ಲೋಕದ ಜೀವಗಳ್ಳರಿಗೆ+ ಅವು- ನಾವು, ಗುರುಗಳು ಬಿಟ್ಟು ಕಳುಹು- ಕಳುಹಿಸು+ ಎಂದ.
1.37.21
ಹರುಕನೇ ನೀನೆಲವೊ ರಾಯರೊ
ಳುರುವ ನೃಪ ನಿಮ್ಮಯ್ಯ ನೀನಿಂ
ದಿರಿದು ಮೆರೆವವಸರವಲಾ ಜವ್ವನದ ಧುರಭರವು |
ಸರಿಗಳೆಯದಪಕೀರ್ತಿ ರವಿ ಶಶಿ
ಮುರಿದು ಬೀಳ್ವನ್ನಬರವೆಲೆ ನರ
ಗುರಿಯೆ ನಡೆ ಕಾಳಗಕೆನುತ ಹಿಡಿದೆಳೆದನುತ್ತರನ || ೨೧ ||
1.37.21_26
ಹರುಕನೇ ನೀನು+, ಎಲವೊ ರಾಯರೊಳು+ ಉರುವ ನೃಪ ನಿಮ್ಮಯ್ಯ= ಹರುಕನೇ- ಕೈಲಾಗದವನೇ, ಅಲ್ಪನೇ ನೀನು+, ಎಲವೊ! ರಾಯರೊಳು+ ಉರುವ ನೃಪ ನಿಮ್ಮಯ್ಯ- ರಾಜರಲ್ಲಿ ಉತ್ತಮ ರಾಜನು ನಿನ್ನ ತಂದೆ.//ನೀನಿಂದು+ ಇರಿದು ಮೆರೆವ+ ಅವಸರವಲಾ ಜವ್ವನದ ಧುರಭರವು= ಯೌವನದಲ್ಲಿ ನೀನು ಇಂದು ಹೋರಾಡಿ ಮೆರೆಯುವ ಯದ್ಧಸಂಭ್ರಮವು ಅವಸರವಲಾ- ಬಂದಿದೆಯಲ್ಲಾ. ಸರಿ+ಗ+ ಕಳೆಯದ+ ಅಪಕೀರ್ತಿ ರವಿ ಶಶಿ ಮುರಿದು ಬೀಳ್ವನ್ನ ಬರವು+= ತೆಗೆದು ಹಾಕಲಾಗದ- ಕಳೆಯಲಾಗದ ಅಪಕೀರ್ತಿಸೂರ್ಯ ಚಂದ್ರರು (ಬೀಳುವವರಗೂ)ಇರುವವರೆಗೂ ಬರುವುದು. ಎಲೆ ನರ+ಗು+ ಕುರಿಯೆ ನಡೆ ಕಾಳಗಕೆ+ ಎನುತ ಹಿಡಿದೆಳೆದನು+ ಉತ್ತರನ= ಎಲೆ ಮಾನವ ಕುರಿಯೇ ಯುದ್ಧಮಾಡು ನೆಡೆ ಎಂದು ಉತ್ತರನನ್ನು ಹಿಡಿದು ಎಳೆದನು.
1.37.22
ಕೊಳುಗುಳದೊಳೋಡಿದೊಡೆ ಹಜ್ಜೆಗೆ
ಫಲ ಮಹಾಪಾತಕವು ಮುಂದಣಿ
ಗೊಲಿದು ಹಜ್ಜೆಯನಿಡಲು ಹಜ್ಜೆಯೊಳಶ್ವಮೇಧ ಫಲ |
ಅಳಿದನಾದೊಡೆ ದೇವಲೋಕದ
ಲಲನೆಯರು ತೊತ್ತಿರು ಸುರೇಂದ್ರನು
ನೆಲವನುಗ್ಗಡಿಸುವನು ವೀರ ಸ್ವರ್ಗವಹುದೆಂದ || ೨೨ ||
1.37.22_27
ಕೊಳುಗುಳದೊಳು+ ಓಡಿದೊಡೆ ಹಜ್ಜೆಗೆ ಫಲ- ಮಹಾಪಾತಕವು= ಯುದ್ಧದಲ್ಲಿ ಓಡಿಹೋದರೆ ಪ್ರತಿ ಹೆಜ್ಜೆಗೆ ಮಹಾ ಪಾಪಬರುವುದು. ; ಮುಂದಣಿಗೆ+ ಒಲಿದು ಹಜ್ಜೆಯನು+ ಇಡಲು ಹಜ್ಜೆಯೊಳು+ ಅಶ್ವಮೇಧ ಫಲ= ಅದೇ ಮುಂದಕ್ಕೆ ಹೆಜ್ಜೆಯನ್ನಿಟ್ಟರೆ ಅಶ್ವಮೇಧ ಮಾಡಿದ ಫಲ ಸಿಗುವುದು. ಅಳಿದನು+ ಆದೊಡೆ ದೇವಲೋಕದ ಲಲನೆಯರು ತೊತ್ತಿರು= ಸತ್ತರೆ ದೇವಕನ್ಯೆಯರು ಸೇವೆಮಾಡುವರು; ಸುರೇಂದ್ರನು ನೆಲವನು+ ಉಗ್ಗಡಿಸುವನು-ಹೊಗಳುವನು, ವೀರ ಸ್ವರ್ಗವು+ ಅಹುದು+ ಎಂದ= ದೇವೇಂದ್ರನು ಭೂಮಿಗೆ ಬಂದು ಹೊಗಳಿ ಕರೆದುಕೊಂಡು ಹೋಗುವನು. ವೀರಸ್ವರ್ಗ ಸಿಗುವುದು ಎಂದ, ಅರ್ಜುನ.
1.37.23
ಧುರದಲೋಡಿದ ಪಾತಕವ ಭೂ
ಸುರರು ಕಳೆದಪರಶ್ವಮೇಧವ
ಧರಣಿಯಲಿ ಪ್ರತ್ಯಕ್ಷವಾಗಿಯೆ ಮಾಡಬಹುದೆಮಗೆ |
ಸುರರ ಸತಿಯರನೊಲ್ಲೆವೆಮಗೆ
ಮ್ಮರಮನೆಯ ನಾರಿಯರೆ ಸಾಕೆ
ಮ್ಮರಸುತನವೆಮಗಿಂದ್ರಪದವಿಯು ಬಿಟ್ಟು ಕಳುಹೆಂದ || ೨೩ ||
1.37.23_28
ಧುರದಲಿ+ ಓಡಿದ ಪಾತಕವ ಭೂಸುರರು ಕಳೆದಪರು+= ಯುದ್ಧದಲ್ಲಿ ಓಡಿದ ಪಾಪವನ್ನು ಬ್ರಾಹ್ಮಣರು ಪ್ರಾಯಶ್ಚಿತಮಾಡಿ ಕಳೆಯುವರು.//ಅಶ್ವಮೇಧವ ಧರಣಿಯಲಿ ಪ್ರತ್ಯಕ್ಷವಾಗಿಯೆ ಮಾಡಬಹುದು= ಇಲ್ಲಿ ಯುದ್ಧದಲ್ಲಿ ಸತ್ತು ಅಶ್ವಮೇಧದ ಪುಣ್ಯಗಳಿಸುವ ಬದಲು ಪ್ರತ್ಯಕ್ಷವಾಗಿಯೆ ಮಾಡಬಹುದು.// ಎಮಗೆ ಸುರರ ಸತಿಯರನು+ ಒಲ್ಲೆವು+= ಸತ್ತಮೇಲೆ ಸಿಗುವ ದೇವಲೋಕದ ಕನ್ಯೆಯರು ನಮಗೆ ಬೇಡ; - ಎಮಗೆ+ ಎಮ್ಮ+ ಅರಮನೆಯ ನಾರಿಯರೆ ಸಾಕು+= -ನನಗೆ- ನಮಗೆ+ ನಮ್ಮ+ ಅರಮನೆಯ ವನಿತೆಯರೇ ಸಾಕು.// ಎಮ್ಮ+ ಅರಸುತನವು+ ಎಮಗೆ+ ಇಂದ್ರಪದವಿಯು,=- ನಮಗೆ ಸತ್ತಮೇಲೆ ಸಿಗುವ ಇಂದ್ರಪದವಿ ಬೇಡ; ನಮ್ಮ+ ಅರಸುತನವೇ+ ನಮಗೆ+ ಇಂದ್ರಪದವಿಯು; ನನ್ನನ್ನು ಬಿಟ್ಟು ಕಳುಹು+ ಎಂದ,; ಬೃಹನ್ನಳೇ, ನನ್ನನ್ನು ಬಿಟ್ಟು ಕಳುಹಿಸಪ್ಪಾ ಎಂದ ಉತ್ತರ.
1.37.24
ಆಳೊಳೊಡ್ಡುಳ್ಳವನು ಭಾರಿಯ
ತೋಳುಗಳ ಹೊತ್ತವನು ಮನೆಯಲಿ
ಸೂಳೆಯರ ಮುಂದೊದರಿ ಭಾಷ್ಕಳಗೆಡೆದು ಬಂದೀಗ |
ಕೋಲನಿಕ್ಕದೆ ಗಾಯವಡೆಯದೆ
ಕಾಲು ವೇಗವ ತೋರಿದೊಡೆ ನಿ
ನ್ನೋಲಗದೊಳೆಂತಕಟ ನಾಚದೆ ಕುಳ್ಳಿತಿಹೆಯೆಂದ || ೨೪ ||
1.37.24_29
ಅರ್ಜುನನು, ಆಳೊಳು+ ಒಡ್ಡುಳ್ಳವನು ಭಾರಿಯ ತೋಳುಗಳ ಹೊತ್ತವನು= ಜನರಲ್ಲಿ ಗೌರವವುಳ್ಳ ಯುವರಾಜನಾದ ನೀನು,ಬಲಿಷ್ಠ ತೋಳುಗಳನ್ನು ಹೊಂದಿ/ ಮನೆಯಲಿ ಸೂಳೆಯರ ಮುಂದೆ+ ಒದರಿ ಭಾಷ್ಕಳ+ಗ+ ಕೆಡೆದು ಬಂದು+= ಅರಮನೆಯಲ್ಲಿ ರಾಣೀವಾಸದ ದಾಸಿವನಿತೆಯರ ಮುಂದೆ ದೊಡ್ದದಾಗಿ ಘರ್ಜಿಸಿ ಶೌರ್ಯದ ಭಾಷೆಗಳನ್ನು ಕೆಡೆದು- ನಾಲಿಗೆಯಿಂದ ಉದುರಿಸಿ, ಯುದ್ಧಮಾಡದೆ, ಅದರಲ್ಲಿ ವೀರರಂತೆ ಗಾಯಪಡದೆ,/ ಕಾಲುವೇಗವ ತೋರಿದೊಡೆ= ಕಾಲಿಗೆ ವೇಗವನ್ನು ತೋರಿಸಿ ಯುದ್ಧದಿಂದ ಓಡಿಹೋದರೆ// ನಿನ್ನ+ ಓಲಗದೊಳು+ ಎಂತು+ ಅಕಟ ನಾಚದೆ ಕುಳ್ಳಿತಿಹೆ+ಯ+ ಎಂದ= ನಿನ್ನ ಆ ವನಿತೆಯರ ಸಭೆಯಲ್ಲಿ, ದೇವರೇ, ಅಕ್ಕಟಾ, ನಾಚಿಕೆ ಪಡದೆ ಹೇಗೆ ಕುಳಿತುಕೊಳ್ಳುವೆ, ಎಂದ.
1.37.24_30
ಕೆತ್ತುಕೊಂಡಾ ನಾಚಿಕೆಗೆ ನೆರೆ
ಕುತ್ತಿಕೊಳಬೇಕೆಂಬ ಗಾದೆಯ
ನಿತ್ತ ಹೊದ್ದಿಸಬೇಡ ನಾವಂಜುವೆವು ಕಾಳಗಕೆ
ತೆತ್ತಿಗನು ನೀನಹಿತನಂತಿರೆ
ಮಿತ್ತುವಹರೇ ನಿನಗೆ ಬೇಡಿದ
ನಿತ್ತು ಸಲಹುವೆನೆನ್ನ ಕೊಲ್ಲದೆ ಬಿಟ್ಟು ಕಳುಹೆಂದ ೨೫
ಕೆತ್ತುಕೊಂಡ (ಎತ್ತಿಹಿಡಿದ- ಹೆಚ್ಚಾಗು- ಕೆತ್ತಿದ ಶಾಸನ- ಅಂಟಿದ.)+ ಆ ನಾಚಿಕೆಗೆ ನೆರೆ ಕುತ್ತಿಕೊಳಬೇಕು+ ಎಂಬ ಗಾದೆಯನು+ ಇತ್ತ ಹೊದ್ದಿಸಬೇಡ= 'ಮನಸ್ಸಿಗೆ ಹತ್ತಿದ ಹೆಚ್ಚಾದ ಆ ನಾಚಿಕೆಗೆ ಕುತ್ತಿಗೆ ಕೊಡಬೇಕು'; 'ಹತ್ತಿದ ನಾಚಿಕೆಗೆ ಕುತ್ತಿಗೆ ಕೊಡಬೇಕು' ಎಂಬ ಗಾದೆಯನು+ ಇತ್ತ ಹೊದ್ದಿಸಬೇಡ- ಇಲ್ಲಿ ಹೊಂದಿಸಿ ತರಬೇಡ.// ನಾವು+ ಅಂಜುವೆವು ಕಾಳಗಕೆ, (ತೆತ್ತಿಗ= ಬಂಧು.ಸೇವಕ.ಹೊಣೆಗಾರ.) ತೆತ್ತಿಗನು ನೀನು+ ಅಹಿತನಂತೆ+ ಇರೆ ಮಿತ್ತುವು+ ಅಹರೇ= ಸೇವಕನಾಗಿದ್ದು ವಿರೋಧಿಯಂತೆ ಇದ್ದು, ಮಿತ್ತು- ಮೃತ್ಯುವಿನಂತೆ ಆಗುವರೇ- ವರ್ತಿಸಬಹುದೇ?, ನಿನಗೆ ಬೇಡಿದನು+ ಇತ್ತು ಸಲಹುವೆನು+ ಎನ್ನ ಕೊಲ್ಲದೆ ಬಿಟ್ಟು ಕಳುಹು+= ನಿನಗೆ ಕೇಳಿದ್ದನ್ನು ಕೊಟ್ಟು ಸಾಕುತ್ತೇನೆ, ನನ್ನನ್ನು ಬಿಟ್ಟು ಕಳುಹಿಸು' ಎಂದ ಉತ್ತರ.
1.37.26
ವಳಿತವನು ವಾರುವನು ಮುಕ್ತಾ
ವಳಿಯಲಂಕಾರವನು ರಥವನು
ಲಲನೆಯರ ನಾನೀಸಿ ಕೊಡುವೆನು ರಾಜಭವನದಲಿ |
ಎಲೆ ಬೃಹನ್ನಳೆ ನಮ್ಮ ಬೊಪ್ಪನು
ಸಲಹಿದಕೆ ಕೈಯೊಡನೆ ತೋರಿದೆ
ಕಲುಮನವಲಾ ನಿನ್ನದೆಂದಡೆ ಪಾರ್ಥನಿಂತೆಂದ || ೨೬ ||
1.37.26_31
ವಳಿತವನು (ಸಂಪತ್ತನ್ನು), ವಾರುವನು ( ಜಾನುವಾರುಗಳನ್ನು) ಮುಕ್ತಾವಳಿಯ+ ಅಲಂಕಾರವನು ರಥವನು ಲಲನೆಯರ ನಾನು+ ಈಸಿ- ಪಡೆದು, ಕೊಡುವೆನು ರಾಜಭವನದಲಿ, ಎಲೆ ಬೃಹನ್ನಳೆ ನಮ್ಮ ಬೊಪ್ಪನು ಸಲಹಿದಕೆ ಕೈಯ+ ಒಡನೆ ತೋರಿದೆ (ಕೈಕೊಟ್ಟೆ- ಈಗ ಮೋಸ ಮಾಡಿದೆ, ನಿನ್ನ ಗುಣವನ್ನು ತೋರಿಸಿದೆ) ಕಲುಮನವಲಾ ನಿನ್ನದು+ ಎಂದಡೆ- ಎಂದಾಗ, ಪಾರ್ಥನು+ ಇಂತು+ ಎಂದ
1.37.26_32
ಅರ್ಜುನನ ಭರವಸೆ - ತನ್ನ ಆಯುಧಗಳ ಸಂಗ್ರಹ
1.37.27
ಪೊಡವಿಪತಿಗಳ ಬಸುರ ಬಂದೀ
ಯೊಡಲ ಕಕ್ಕುಲಿತೆಯನು ಕಾಳಗ
ದೆಡೆಗೆ ಮಾಡಿದರಿಲ್ಲ ಭೂತ ಭವಿಷ್ಯಮಾನದಲಿ |
ನುಡಿಯಬಹುದೇ ಬಂಜೆವಾತನು
ಸುಡು ಸುಡೆಲವೋ ರಾಜಬಾಹಿರ
ನಡೆ ವರೂಥದ ಹೊರೆಗೆ ಕಾದಲು ಬೇಡ ಬಾಯೆಂದ || ೨೭ ||
1.37.28
ಕಾದುವೆನು ಮಾರೊಡ್ಡಿನಲಿ ನೀ
ನೈದಿಸೆನ್ನಯ ರಥವ ಮನದಲಿ
ಭೇದತನವನು ಬಿಟ್ಟು ಸಾರಥಿಯಾಗು ಸಾಕೆನಲು |
ಆದಿಯಲಿ ನೀನಾವ ರಾಯರ
ಕಾದಿ ಗೆಲಿದೈ ಹುಲು ಬೃಹನ್ನಳೆ
ಯಾದ ನಿನಗೀ ಕದನ ನಾಟಕ ವಿದ್ಯವಲ್ಲೆಂದ || ೨೮ ||
1.37.29
ಎನ್ನವಂದಿಗ ರಾಜಪುತ್ರರಿ
ಗಿನ್ನು ಮೊಗಸಲು ಬಾರದಿದೆ ನೀ
ನೆನ್ನ ಸಾರಥಿ ಮಾಡಿಕೊಂಡೀ ಬಲವ ಜಯಿಸುವೆಯ |
ಅನ್ಯರನು ಮನಗಾಂಬರಲ್ಲದೆ
ತನ್ನ ತಾ ಮನಗಾಂಬರೇಯೀ
ಗನ್ನಗತಕವ ನಾವು ಬಲ್ಲೆವು ಬಿಟ್ಟು ಕಳುಹೆಂದ || ೨೯ ||
1.37.29_33
ಎನ್ನವಂದಿಗ ರಾಜಪುತ್ರರಿಗೆ+ ಇನ್ನು ಮೊಗಸಲು(ಬಯಕೆ - ಯುದ್ಧದ ಅಪೇಕ್ಷೆ) ಬಾರದಿದೆ= ನನ್ನಂತಹ ಕ್ಷತ್ರಿಯ ರಾಜಪುತ್ರರಿಗೆ ಇನ್ನು ಇಲ್ಲಿ ಯುದ್ಧ ಮಾಡುವ ಮನಸ್ಸು ಬಾರದೆಹೋಗಿದೆ; ನೀನು+ ಎನ್ನ ಸಾರಥಿ ಮಾಡಿಕೊಂಡು+ ಈ ಬಲವ ಜಯಿಸುವೆಯ= ಇನ್ನು ನೀನು ನನ್ನನ್ನು ಸಾರಥಿ ಮಾಡಿಕೊಂಡು ಈ ದೊಡ್ಡಸೈನ್ಯವನ್ನು ಜಯಿಸುವೆಯ? ಅನ್ಯರನು ಮನಗಾಂಬು- ಅಲ್ಲದೆ ತನ್ನ ತಾ ಮನಗಾಂಬರೇ = ಮನುಷ್ಯ ಇನ್ನೊಬ್ಬರ ಶಕ್ತಿ ಗುಣವನ್ನು ತಿಳಿಯಬಹುದು, ಆದರೆ ತನ್ನ ಗುಣ ಮತ್ತು ಶಕ್ತಿಯನ್ನು ಕಾಣಲಾರ ಅಲ್ಲವೇ?// ಈ ಗನ್ನಗತಕವ ನಾವು ಬಲ್ಲೆವು ಬಿಟ್ಟು ಕಳುಹು+ ಎಂದ= ನಿನ್ನ ತಂತ್ರವನ್ನು ನಾವು ತಿಳಿದಿದ್ದೇವೆ- ನಮ್ಮನ್ನು ಏನೋ ನೆವದಿಂದ ಶತ್ರುಗಳ ಬಲೆಗೆ ಕೆಡಗುವುದು, ಅಲ್ಲವೇ? ಅದೆಲ್ಲಾ ನಅಟಕ ಬೇಡ - ನನ್ನನ್ನು ಬಿಟ್ಟು ಕಳುಹಿಸು ಸಾಕು ಎಂದ.
1.37.30
ಎಲವೊ ಸಾರಥಿಯಾಗು ನಡೆ ನೀ
ಗಳಹಿದೊಡೆ ಕಟವಾಯ ಕೊಯ್ವೆನು
ಕೊಲುವೆನೀ ಪ್ರತಿಭಟ ನಿಕಾಯವ ನಿನ್ನ ಸಾಕ್ಷಿಯಲಿ |
ಬಳಿಕ ನೀ ನಗು ನಡೆಯೆನುತ ರಿಪು
ಬಲ ಭಯಂಕರನುತ್ತರನ ಹೆಡ
ತಲೆಯ ಹದರಿನೊಳೌಂಕಿ ತಂದನು ರಥವನೇರಿಸಿದ || ೩೦ ||
1.37.30_34
ಎಲವೊ ಸಾರಥಿಯಾಗು ನಡೆ, ನೀ ಗಳಹಿದೊಡೆ- ಹರಟಿದರೆ, ಕಟವಾಯ- ಕಟಬಾಯಿ, ಕೊಯ್ವೆನು, ಕೊಲುವೆನು+ ಈ ಪ್ರತಿಭಟ ನಿಕಾಯವ- ಸೈನ್ಯವನ್ನು, ನಿನ್ನ ಸಾಕ್ಷಿಯಲಿ- ನಿನ್ನೆದುರಿಗೆ - ನಿನ್ನಾಣೆ, ಬಳಿಕ ನೀ ನಗು ನಡೆ+ ಯ+ ಎನುತ ರಿಪುಬಲ ಭಯಂಕರನು+ ಉತ್ತರನ ಹೆಡತಲೆಯ (ಹದರ=ಹೆದರಿಸು) ಹದರಿನೊಳು+ ಔಂಕಿ ತಂದನು ರಥವನು ಏರಿಸಿದ.
1.37.31
ಖೇಡತನ ಬೇಡೆಲವೊ ರಣದೊಳ
ಗೋಡಿಸುವೆನಹಿತರನು ಹರಣವ
ಹೂಡಿಸುವೆನಂತಕನ ನಗರಿಗೆ ಥಟ್ಟನಡೆಹೊಯ್ದು |
ಕೋಡದಿರು ಕೊಂಕದಿರು ಧೈರ್ಯವ
ಮಾಡಿ ಸಾರಥಿಯಾಗೆನುತ ಕಲಿ
ಮಾಡಿ ಕೊಂಡೊಯ್ದನು ಸಮೀಪದ ಶಮಿಯ ಹೊರೆಗಾಗಿ || ೩೧ ||
1.37.31_35
ಖೇಡತನ= ಹೆದರಿಕೆ, ಬೇಡ+ ಎಲವೊ ರಣದೊಳಗೆ+ ಓಡಿಸುವೆನು+ ಅಹಿತರುನು= ಶತ್ರುಗಳನ್ನು, ಹರಣವ= ಜೀವವನ್ನು ಹೂಡಿಸುವೆನು- ನೆಲೆಗೊಳಿಸುವೆನು+ ಅಂತಕನ- ಯಮನ, ನಗರಿಗೆ ಥಟ್ಟನ+ ಅಡೆಹೊಯ್ದು ಕೋಡದಿರು-ಹಟ ಮಾಡಬೇಡ, ಕೊಂಕದಿರು= ಕೊಂಕುಮಾತನಾಡಬೇಡ, ಧೈರ್ಯವಮಾಡಿ ಸಾರಥಿಯಾಗು+ ಎನುತ ಕಲಿಮಾಡಿ= ಶೂರನನ್ನು ಮಾಡಿ, ಧೈರ್ಯತುಂಬಿ, ಕೊಂಡೊಯ್ದನು ಸಮೀಪದ ಶಮಿಯ ಹೊರೆಗಾಗಿ= ಶಮೀವೃಕ್ಷದ ಬಳಿಗೆ ಅವನನ್ನು ರಥದಲ್ಲಿ ಕರೆದುಕೊಂಡು ಹೋದನು.
1.37.32
ಮರನನೇರಿದರೊಳಗೆ ಪಾಂಡವ
ರಿರಿಸಿ ಹೋದರು ಕೈದುಗಳ ಮಿಗೆ
ಹರಣ ಭರಣ ಕ್ಷಮೆಗಳಲಿ ನೀನೆನಗೆ ನೀಡೆನಲು
ಅರಸು ಮಕ್ಕಳು ಮುಟ್ಟಲನುಚಿತ
ಮರದ ಮೇಲಣ ಹೆಣನಿದೇನೈ
ವರ ಬೃಹನ್ನಳೆ ಮತ್ತೆ ಕೆಲಸವ ಹೇಳು ತನಗೆಂದ || ೩೨ ||
1.37.32_36
ಎಲೈ ಉತ್ತರ, (ಆ) ಮರನನು+ ಎರು+ ಇದರೊಳಗೆ ಪಾಂಡವರು+ ಇರಿಸಿ ಹೋದರು ಕೈದುಗಳ= ಎಲೈ ಉತ್ತರನೇ, ಆ ಈ ಶಮೀ ಮರವನ್ನು+ ಎರು- ಹತ್ತು+ ಇದರೊಳಗೆ ಪಾಂಡವರು+ ಇರಿಸಿ ಹೋದರು- ಹೋಗಿದ್ದಾರೆ ಕೈದುಗಳ- ಆಯುಧಗಳನ್ನು.// ಮಿಗೆ ಹರಣ ಭರಣ ಕ್ಷಮೆಗಳಲಿ ನೀನು+ ಎನಗೆ ನೀಡು+ ಎನಲು= ಮಿಗೆ ಮತ್ತೆ, ತೆಗೆದು ಹಿಡಿದುಕೊಂಡು ಎಚ್ಚರಿಕೆಯಿಂದ ನನಗೆ ಕೊಡು,' ಎಂದನು ಅರ್ಜುನ.// ಅರಸು ಮಕ್ಕಳು ಮುಟ್ಟಲು+ ಅನುಚಿತ ಮರದ ಮೇಲಣ ಹೆಣನು+ ಇದೇನೈ, ವರ ಬೃಹನ್ನಳೆ ಮತ್ತೆ ಕೆಲಸವ ಹೇಳು ತನಗೆಂದ= ಅದಕ್ಕೆ ಉತ್ತರನು,'ಅರಸು ಮಕ್ಕಳು ಮುಟ್ಟಲು ಅನುಚಿತವಾದದ್ದು, ಮರದ ಮೇಲಿರುವ ಹೆಣವು; ಇದೇನಯ್ಯಾ ಗುಣವಂತ ಬೃಹನ್ನಳೆ, ಮತ್ತೆ- ಬೇರೆ ಕೆಲಸವನ್ನು ಹೇಳು ತನಗೆ,' ಎಂದ.
1.37.33
ಹೊರಗೆ ತೊಗಲಲಿ ಬಿಗಿದು ಕೆಲ ಬಲ
ನರಿಯದಂದದಿ ಪಾಂಡು ನಂದನ
ರುರುವ ಕೈದುವ ಕಟ್ಟಿದರು ಹೆಣನಲ್ಲ ತೆಗೆಯೆನಲು |
ಸೆರಗನಳವಡಿಸಿಕ್ಕಿ ಭೀತಿಯ
ತೊರೆದು ತುದಿಗೇರಿದನು ನೇಣ್ಗಳ
ಹರಿದು ಕೈದುವ ಬಿಟ್ಟು ಕಂಡಂಜಿದನು ಭಯ ಹೊಡೆದು || ೩೩ ||
1.37.33_37
ಹೊರಗೆ ತೊಗಲಲಿ ಬಿಗಿದು ಕೆಲಬಲನು+ ಅರಿಯದಂದದಿ + ಉರುವ- ಉಗ್ರವಾದ, ಕೈದುವ ಕಟ್ಟಿದರು, ಹೆಣನಲ್ಲ= ಉತ್ತರಾ,'ಅದು ಹೆಣವಲ್ಲ ಪಾಂಡವರು ಹೊರಗೆ ತೊಗಲಿನಿಂದ ಬಿಗಿದು ಬೇರೆಯವರು ತಿಳಿಯಲಾರದಂತೆ ಉಗ್ರವಾದ ಆಯುಧಗಳನ್ನು ಅದರಲ್ಲಿ ಕಟ್ಟಿದರು. ನೀನು ಅದನ್ನು ತೆಗೆ,' ಎನ್ನಲು ಉತ್ತರನು ಸೆರಗನ್ನು ಅಳವಡಿಸಿ- ಅಳವಡಿಸಿಕೊಂಡು ಬಿಗಿದು ಇಕ್ಕಿ- ಕಟ್ಟಿ, ಭೀತಿಯ ತೊರೆದು- ಹೆದರದೆ (ಮರದ) ತುದಿಗೆ+ ಏರಿದನು; ನೇಣ್ಗಳ-ಹಗ್ಗಗಳನ್ನು ಹರಿದು, ಕೈದುವ ಬಿಟ್ಟು- - ಆಯುಧಗಳ+- ಆಯುಧಗಳನ್ನು ಕಂಡು ಮುಟ್ಟದೆ ಬಿಟ್ಟು+, ಅಂಜಿದನು = ಅದರ ಕಾಂತಿಗೆ ಭಯ ಹೊಡೆದು ಹೆದರಿದನು.
1.37.34
ಕಾಲ ಭುಜಗನ ನಾಲಿಗೆಯೊ ಶರ
ಜಾಲವೋ ಕಲ್ಪಾಂತ ವಹ್ನಿ
ಜ್ವಾಲೆಯೋ ಕೈದುಗಳೊ ಕಾಲಾಂತಕನ ದಾಡೆಗಳೊ |
ತೋಳು ಧರಿಸುವವೆಂತು ನೋಡಿದ
ಡಾಲಿಯುರೆ ಬೆಂದವು ಬೃಹನ್ನಳೆ
ಕಾಳು ಮಾಡಿದೆ ಕೊಂದೆಯೆನುತೋರಂತೆ ಹಲುಬಿದನು || ೩೪ ||
1.37.34_38
ಕಾಲ ಭುಜಗನ ನಾಲಿಗೆಯೊ, ಶರಜಾಲವೋ ಕಲ್ಪಾಂತ ವಹ್ನಿಜ್ವಾಲೆಯೋ, ಕೈದುಗಳೊ= ಇದೇನು? ಮೃತ್ಯುವಿನ ಕೊರಳ ಸರ್ಪದ ನಾಲಿಗೆಯಂತಿದೆ!, ಬಾಣಗಳ ರಾಶಿಯೋ ಅಥವಾ ಪ್ರಳಯಕಾಲದ ಯಮನ ಕೋರೆ ದಾಡೆಗಳೊ,// ತೋಳು ಧರಿಸುವವೆಂತು?= ಕೈಯಲ್ಲಿ ಹಿಡಿಯುವುದು ಹೇಗೆ!// ನೋಡಿದಡೆ+ ಆಲಿಯು+ ಉರೆ ಬೆಂದವು= ನೋಡಿದರೆ ಕಣ್ಣುಗುಡ್ಡೆಗಳು ಸುಡುತ್ತವೆ!// ಬೃಹನ್ನಳೆ ಕಾಳು ಮಾಡಿದೆ ಕೊಂದೆಯೆನುತ+ ಓರಂತೆ ಹಲುಬಿದನು= ಎಲೆ ಬೃಹನ್ನಳೆ ನನಗೆ ಕೇಡು ಮಾಡಿದೆ, ಕೊಂದೆ, ಯೆನ್ನತ್ತಾ ಒಂದೇಸಮನೆ ಹಲುಬಿದನು- ಗೋಳಿಟ್ಟನು.
1.37.35
ಹೊಗರ ಹೊರಳಿಯ ಹೊಳೆವ ಬಾಯ್ಧಾ
ರೆಗಳ ತಳಪದ ಕಾಂತಿ ಹೊನ್ನಾ
ಯುಗದ ಬಹಳ ಪ್ರಭೆ ಶರೌಘಾನಲನ ಗಹಗಹಿಸಿ |
ಝಗಝಗಿಸೆ ಕಣ್ಮುಚ್ಚಿ ಕೈಗಳ
ಮುಗಿದು ಸಾರಥಿಗೆಂದನೆನ್ನನು
ತೆಗೆದುಕೊಳ್ಳೈ ತಂದೆ ಸಿಲುಕಿದೆನಸ್ತ್ರ ಸೀಮೆಯಲಿ || ೩೫ ||
1.37.35_39
ಹೊಗರ ಹೊರಳಿಯ ಹೊಳೆವ ಬಾಯ್ಧಾರೆಗಳ= ಪ್ರಕಾಶಿಸುವ (ಮಗ್ಗುಲುಗಳು)ಹೊರಳುಗಳುಳ್ಲ, ತಳಪದ ಕಾಂತಿ ಹೊನ್ನಾಯುಗದ- ಚಿನ್ನದಂತೆ ಆಯುಗಳುಳ್ಲ, ಬಹಳ ಪ್ರಭೆ ಶರೌಘ- ಬಾಣಗಳ ಸಮೂಹಗಳು,+ ಅನಲನ- ಅಗ್ನಿಯೇ ಗಹಗಹಿಸಿ ಝಗಝಗಿಸೆ- ಹೊಳೆಯಲು, ಕಣ್ಮುಚ್ಚಿ ಕೈಗಳ ಮುಗಿದು ಸಾರಥಿಗೆ+ ಎಂದನು+ ಎನ್ನನು ತೆಗೆದುಕೊಳ್ಳೈ ತಂದೆ ಸಿಲುಕಿದೆನು+ ಅಸ್ತ್ರ ಸೀಮೆಯಲಿ- ಅಸ್ತ್ರ ಪ್ರಭೆಯಲ್ಲಿ ಸಿಕ್ಕಿಬಿದ್ದೆನು,' ಎಂದನು ಉತ್ತರ.
1.37.36
ತುಡುಕಬಹುದೇ ದೋಷಿ ಹಾವಿನ
ಕೊಡನ ನಿನಗಿವು ಕೈದುಗಳೆ ಬರ
ಸಿಡಿಲ ದಾವಣಿಯಾಗುತಿವೆ ಕೈಯಿಕ್ಕಲಂಜುವೆನು |
ಬಿಡಿಸು ಸಾರಥಿಯೆನ್ನನೆನೆ ಫಡ
ನಡುಗದಿರು ಫಲುಗುಣನ ನೆನೆ ಕೈ
ದುಡುಕು ಕೈವಶವಹವು ತೆಗೆ ಸಾಕೆಂದನಾ ಪಾರ್ಥ || ೩೬||
1.37.36_40
ತುಡುಕಬಹುದೇ ದೋಷಿ ಹಾವಿನ ಕೊಡನ= ದೋಷಿಯಾದವನು ಹಾವಿರುವ ಕೊಡಕ್ಕೆ ಕೈ ಹಾಕಬುದೇ? (ಹಿಂದೆ ಸತ್ಯವನ್ನು ಪರೀಕ್ಷಿಸಲು ಕೊಡದಲ್ಲಿ ಸರ್ಪವನ್ನು ಪರೀಕ್ಷೆಗಾಗಿ ಇಡುತ್ತಿದ್ದರು, - ಆಪಾದಿತನು ಅದರಲ್ಲಿ ಕೈ ಇಡಬೇಕಿತ್ತು, ಕಚ್ಚಿದರೆ ದೋಷಿ, ಕಚ್ಚದಿದ್ದರೆ ವಿರ್ದೋಷಿ) ನಿನಗೆ+ ಇವು ಕೈದುಗಳೆ- ಆಯುಧಗಳೇ, ಬರಸಿಡಿಲ ದಾವಣಿಯಾಗುತಿವೆ- ಆಕ್ರಮಣವಗತ್ತಿದೆ, ಕೈಯಿಕ್ಕಲು+ ಅಂಜುವೆನು, ಬಿಡಿಸು ಸಾರಥಿಯೆ,+ ಎನ್ನನು+ ಎನೆ, ಫಡ ನಡುಗದಿರು ಫಲುಗುಣನ ನೆನೆ, ಕೈದುಡುಕು- ನಂತರ ಕೈಹಾಕು, ಕೈವಶವು+ ಅಹವು (ಆಗುವುವು), ತೆಗೆ- ಭಯವನ್ನು ಬಿಡು, ಸಾಕು,+ ಎಂದನು+ ಆ ಪಾರ್ಥ
1.37.37
ಉಲಿದು ಸತ್ವದೊಳೌಕಿ ಕಾಯವ
ಬಲಿದು ತೆಕ್ಕೆಯೊಳೊತ್ತಿ ಬೆವರಿದು
ಬಳಲಿ ನೀಡಿದನರ್ಜುನನ ಕರತಳಕೆ ಗಾಂಡಿವವ |
ಬಲುಹಿನಿಂದವಡೊತ್ತಿ ತೆಗೆ ತೆಗೆ
ದುಳಿದ ಬಿಲುಗಳ ನೀಡಿ ಮರನನು
ಮಲಗಿ ಢಗೆಯಿಂದಳ್ಳೆವೊಯ್ದು ಕುಮಾರನಿಂತೆಂದ || ೩೭ ||
1.37.37_41
ಉಲಿದು- ಹೇಳಿ ಸತ್ವದೊಳು+ ಔಕಿ ಕಾಯವ ಬಲಿದು ತೆಕ್ಕೆಯೊಳು+ ಒತ್ತಿ= ಅರ್ಜುನನ ಹೆಸರು ಹೇಳಿ, ದೇಹವನ್ನು ಗಟ್ಟಿಮಾಡಿಕೊಂಡು, ತೋಳಿನಿಂದ ಒತ್ತಿ,// ಬೆವರಿದು ಬಳಲಿ ನೀಡಿದನು- ಕೊಟ್ಟನು+ ಅರ್ಜುನನ ಕರತಳಕೆ- ಕೈಗೆ, ಗಾಂಡಿವವ ಬಲುಹಿನಿಂದ+ ಅವಡೊತ್ತಿ- ಹಲ್ಲು ಕಚ್ಚಿ ತೆಗೆ ತೆಗೆದು+ ಉಳಿದ ಬಿಲುಗಳ ನೀಡಿ ಮರನನು ಮಲಗಿ ಢಗೆಯಿಂ- ಏದುಸಿರು ಬಿಡುತ್ತಾ + ಅಳ್ಳೆವೆ+ ಒಯ್ದು ಕುಮಾರನು+ ಇಂತೆಂದ.
1.37.38
ಗಿರಿಯನೆತ್ತಲು ಬಹುದು ಬಿಲುಗಳ
ಕೆರಳಿಚುವಡಾರೆನು ಬೃಹನ್ನಳೆ
ಧರಿಸಲಾಪೈ ನೀ ಸಮರ್ಥನು ನಿನಗೆ ಶರಣೆನುತ |
ಸರಳ ಹೊದೆಗಳ ದೇವದತ್ತವ
ಪರಶು ತೋಮರ ಕುಂತವಸಿ ಮು
ದ್ಗರ ಗದಾ ದಂಡಾದಿ ಶಸ್ತ್ರವ ತೆಗೆದು ನೀಡಿದನು || ೩೮ ||
1.37.38_42
ಗಿರಿಯನು+ ಎತ್ತಲು ಬಹುದು ಬಿಲುಗಳ ಕೆರಳಿಚುವಡೆ+ ಆರೆನು= ಬೆಟ್ಟವನನು ಎತ್ತಬಹುದು ಆದರೆ ಇವುಗಳನ್ನು ಎತ್ತುವುದು ಕಷ್ಟ. ಉಗ್ರ ಬಿಲ್ಲುಗಳನ್ನು ತೆಗೆಯಲಾರೆನು.// ಬೃಹನ್ನಳೆ ಧರಿಸಲಾಪೈ ನೀ ಸಮರ್ಥನು ನಿನಗೆ ಶರಣು+ ಎನುತ= ಬೃಹನ್ನಳೆ ಈ ಬಿಲ್ಲನ್ನು ಧರಿಸಲುಬಲ್ಲೆಯಾ? ಹಾಗಿದ್ದರೆ ನೀನು ನಿಜವಾಗಿ ಸಮರ್ಥನೇ ಸರಿ. ನಿನಗೆ ಶರಣು- ನಮಸ್ಕಾರ,' ಎನ್ನುತ್ತಾ,// ಸರಳ ಹೊದೆಗಳ= ಬಾಣಗಳ ಕಟ್ಟುಗಳನ್ನು, ದೇವದತ್ತವ, ಪರಶು, ತೋಮರ, ಕುಂತವ, ಅಸಿ-ಕತ್ತಿ, ಮುದ್ಗರ, ಗದಾದಂಡ,+ ಆದಿ-ಮೊದಲಾದ ಶಸ್ತ್ರವ ತೆಗೆದು ನೀಡಿದನು.
1.37.39
ಹೇಳು ಸಾರಥಿ ಬಿಲ್ಲಿದಾವನ
ತೋಳಿಗಳವಡುವುದು ಮಹಾ ಶರ
ಜಾಲ ಬೆಸೆಗೈದಪವಿದಾರಿಗೆ ಮಿಕ್ಕ ಬಿಲ್ಲುಗಳು |
ಕಾಳಗದೊಳಿವನಾರು ತೆಗೆವರು
ಮೇಲುಗೈದುಗಳಾರಿಗಿವು ಕೈ
ಮೇಳವಿಸುವವು ಮನದ ಸಂಶಯ ಹಿಂಗೆ ಹೇಳೆಂದ || ೩೯ ||
1.37.39_43
ಹೇಳು ಸಾರಥಿ ಬಿಲ್ಲು +ಇದು+ ಆವನ ತೋಳಿಗೆ+ ಅಳವಡುವುದು= ಉತ್ತರನು ಕೇಳಿದನು, ಸಾರಥಿಯೇ ಹೇಳು, ಈ ಬಿಲ್ಲು, ಇದು ಯಾವನ ತೋಳಿಗೆ ಅಳವಡುವುದು- ಹೊಂದುವುದು. ಮಹಾ ಶರಜಾಲ ಬೆಸೆಗೈದಪವು- ಹೇಳು+ ಇದು+ ಆರಿಗೆ= ಈ ಮಹಾ ಬಾಣಗಳ ಸಮೂಹ, ಮಂತ್ರಾಸ್ತ್ರಗಳು ಯಾರ ಜೊತೆ ಮಾತನಾಡುವುವು? ಮಿಕ್ಕ ಬಿಲ್ಲುಗಳು ಕಾಳಗದೊಳು+ ಇವನು+ ಆರು ತೆಗೆವರು= ಉಳಿದ ಬಿಲ್ಲುಗಳನ್ನು ಯುದ್ಧದಲ್ಲಿ ಯಾರು ತೆಗೆದು ಉಪಯೋಗಿಸುವರು? ಮೇಲುಗೈದುಗಳು+ ಅರಿಗೆ+ ಇವು ಕೈಮೇಳವಿಸುವವು ಮತ್ತೆ ಇನ್ನುಳಿದ ದೊಡ್ಡ ಆಯುಧಗಳು ಯಾರಕೈಗೆ ಹೊಂದುವುವು?,// ಮನದ ಸಂಶಯ ಹಿಂಗೆ, ಹೇಳೆಂದ= ನನ್ನ ಮನಸಸ್ಸಿನ ಸಂಶಯವನ್ನು ಕಳೆಯಲು ಹೇಳು,' ಎಂದು ಉತ್ತರನು ಅರ್ಜುನನಿಗೆ ಹೇಳಿದನು.
1.37.40
ಇದು ಕಣಾ ಗಾಂಡೀವವೆಂದೆಂ
ಬುದು ಮಹಾಧನು ಪಾರ್ಥನದು ಬಳಿ
ಕಿದು ಯುಧಿಷ್ಠಿರ ಚಾಪವೀ ಧನು ಭೀಮಸೇನನದು |
ಇದು ನಕುಲ ಕೋದಂಡ ಬಿಲು ತಾ
ನಿದುವೆ ಸಹದೇವನದು ಭಾರಿಯ
ಗದೆಯಿದನಿಲಜನದು ಕಿರೀಟಿಯ ಬಾಣವಿವುಯೆಂದ || ೪೦ ||
1.37.41
ಅವರವರ ಬತ್ತಳಿಕೆ ಚಾಪವ
ನವರ ಶರವನು ಕಂಬು ಖಡುಗವ
ಕವಚ ಸೀಸಕ ಜೋಡುಗಳ ಬಿರುದುಗಳ ಟೆಕ್ಕೆಯವ |
ವಿವಿಧ ಶಸ್ತ್ರಾಸ್ತ್ರವನು ಫಲುಗುಣ
ವಿವರಿಸಲು ಬೆರಗಾಗಿ ಸಾರಥಿ
ಯಿವನು ತಾನಾರೆಂದು ಮತ್ಸ್ಯನ ಸೂನು ಬೆಸಗೊಂಡ || ೪೧ ||
1.37.41_44
ಅವರವರ= ಪ್ರತಿಯೊಬ್ಬ ಪಾಂಡವರ ಬತ್ತಳಿಕೆ ಚಾಪವನು-ಬಿಲ್ಲನ್ನು+ ಅವರ ಶರವನು=ಬಾಣಗಳನ್ನು, ಕಂಬು= ಶಂಖವನ್ನು, ಖಡುಗವ= ಖಡ್ಗವನ್ನು, ಕವಚ ಸೀಸಕ ಜೋಡುಗಳ, ಬಿರುದುಗಳ ಟೆಕ್ಕೆಯವ- ಬಾವುಟವ, ವಿವಿಧ ಶಸ್ತ್ರಾಸ್ತ್ರವನು ಫಲುಗುಣ ವಿವರಿಸಲು ಬೆರಗಾಗಿ ಸಾರಥಿ+ಯ+ ಇವನು ತಾನು+ ಆರೆಂದು ಮತ್ಸ್ಯನ ಸೂನು ಬೆಸಗೊಂಡ= ಕೇಳಿದ.
1.37.42
ಆರು ನೀನರ್ಜುನನೊ ನಕುಲನೊ
ಮಾರುತನ ಸುತನೋ ಯುಧಿಷ್ಠಿರ
ವೀರನೋ ಸಹದೇವನೋ ಮೇಣವರ ಬಾಂಧವನೊ |
ಧೀರ ಹೇಳೈ ಬೇಡಿಕೊಂಬೆನು
ಕಾರಣವ ವಿಸ್ತರಿಸು ಪಾಂಡು ಕು
ಮಾರರಾಯುಧ ತತಿಯ ನೀನೆಂತರಿವೆ ಹೇಳೆಂದ || ೪೨ ||
1.37.42_45
ಆರು- ಯಾರು, ನೀನು+ ಅರ್ಜುನನೊ ನಕುಲನೊ ಮಾರುತನ ಸುತನೋ- ಭೀಮನೋ, ಯುಧಿಷ್ಠಿರ ವೀರನೋ ಸಹದೇವನೋ; ಮೇಣ್- ಮತ್ತೆ+ ಅವರ ಬಾಂಧವನೊ ಧೀರ ಹೇಳೈ ಬೇಡಿಕೊಂಬೆನು ಕಾರಣವ ವಿಸ್ತರಿಸು ಪಾಂಡು ಕುಮಾರರ+ ಆಯುಧ ತತಿಯ- ರಾಶಿಯ ನೀನು+ ಎಂತು+ ಅರಿವೆ-ನೀನು ಹೇಗೆ ತಿಳಿದಿರುವೆ? ಹೇಳೆಂದ- ಹೇಳು ಎಂದ ಉತ್ತರ.
1.37.43
ಆದೊಡಾನರ್ಜುನನು ಬಾಣಸಿ
ಯಾದ ವಲಲನು ಭೀಮ ವರ ಯತಿ
ಯಾದ ಕಂಕನು ಧರ್ಮಪುತ್ರನು ನಿಮ್ಮ ಗೋಕುಲವ |
ಕಾದವನು ಸಹದೇವ ರಾವುತ
ನಾದವನು ನಕುಲನು ವಿಳಾಸಿನಿ
ಯಾದವಳು ಸೈರಂಧ್ರಿ ರಾಣೀವಾಸವೆಮಗೆಂದ || ೪೩ ||
1.37.43_46
ಆದೊಡೆ- ಹಾಗಿದ್ದರೆ ಕೇಳು, ಆನು- ನಾನು+ ಅರ್ಜುನನು, ಬಾಣಸಿಯಾದ- ಅಡುಗೆಮಾಡುವವ, ವಲಲನು ಭೀಮ, ವರ ಯತಿಯಾದ ಕಂಕನು ಧರ್ಮಪುತ್ರನು, ನಿಮ್ಮ ಗೋಕುಲವ- ಹಸುಗಳನ್ನು, ಕಾದವನು ಸಹದೇವ,; ಕುದರೆಗಳ ಕ್ಷೇಮ ನೋಡುವ ರಾವುತನಾದವನು ನಕುಲನು, ವಿಳಾಸಿನಿಯಾದವಳು- ರಾಣಿ ಸುದೀಷ್ಷ್ಣೆಗೆ ಅಲಂಕಾರ ಮಾಡುವವಳು, ಸೈರಂಧ್ರಿಯು (ದ್ರೌಪದಿ), ರಾಣೀವಾಸವು- ಅಂತಃಪರದ ಹೆಂಗಸರ ಜೊತೆಗಿದ್ದು ನ್ಋತ್ಯ ಗೀತ ಕಲಿಸುವ ಕೆಲಸ+ ಎಮಗೆ- ನಮ್ಮದು+ ಎಂದ (ಅರ್ಜುನ)
1.37.44
ಅಹುದು ಬಳಿಕೇನುಳಿದವರಿಗೀ
ಮಹಿಮೆ ತಾನೆಲ್ಲಿಯದು ಕಾಣಲು
ಬಹುದಲಾ ಜೀವಿಸಿದರತಿಶಯವನು ಮಹಾದೇವ |
ಗಹನ ಮಾಡದೆ ನುಡಿದ ತಪ್ಪಿನ
ಬಹಳತೆಯ ಭಾವಿಸದೆ ತನ್ನನು
ಕುಹಕಿಯೆನ್ನದೆ ಕಾಯಬೇಕೆಂದೆರಗಿದನು ಪದಕೆ || ೪೪ ||
1.37.44_47
ಅಹುದು- ಇದು ಸತ್ಯವೇ! ಬಳಿಕ+ ಏನು+ ಉಳಿದವರಿಗೆ- ಬೇರೆಯವರಿಗೆ + ಈ ಮಹಿಮೆ ತಾನೆಲ್ಲಿಯದು- ಹೇಗೆ ಬರಲು ಸಾದ್ಯ?, ಕಾಣಲು ಬಹುದಲಾ ಜೀವಿಸಿದರೆ+ ಅತಿಶಯವನು ಮಹಾದೇವ= ಬದುಕಿದ್ದರೆ ನಿಮ್ಮ ಸಾಹಸವನ್ನು ನೊಡಬಹುದಲ್ಲವೇ? ಗಹನ ಮಾಡದೆ ನುಡಿದ ತಪ್ಪಿನ ಬಹಳತೆಯ ಭಾವಿಸದೆ,= ತಾನು ಕುಹಕದಿಂದ ಬಹಳ ತಪ್ಪಾಗಿ ಬಹಳ ಮಾತನಾಡಿದುದನ್ನು ಮನಸ್ಸಿಗೆ ತೀವ್ರವಾಗಿ ತೆಗೆದುಕೊಳ್ಳದೆ,/ ತನ್ನನು ಕುಹಕಿಯೆನ್ನದೆ ಕಾಯಬೇಕೆಂದು+ ಎರಗಿದನು ಪದಕೆ= ತನ್ನನ್ನು ಕುಹಕಿ ಎಂದು ಹೇಳದೆ ಕ್ಷಮಿಸಿ ಕಾಪಾಡಬೇಕು ಎಂದು ಉತ್ತರನು ಅರ್ಜುನನ ಪಾದಕ್ಕೆ ನಮಸ್ಕಾರ ಮಾಡಿದನು.
1.37.45
ಮೌಳಿಯನು ನೆಗಹಿದನು ನಿನ್ನಯ
ಮೇಲೆ ತಪ್ಪಿಲ್ಲೆನುತ ಫಲುಗುಣ
ಬೋಳವಿಸೆ ನಿಂದಿರ್ದು ಕೈಮುಗಿದುತ್ತರನು ನಗುತ |
ಬಾಲಕನ ಬಿನ್ನಪವನೊಂದನು
ಕೇಳಬೇಹುದು ನಿಮ್ಮ ದಶನಾ
ಮಾಳಿಯನು ಪೇಳ್ದಲ್ಪಮತಿಯನು ತಿಳುಹಬೇಕೆಂದ || ೪೫ ||
1.37.46
ಎನಲು ನಸುನಗುತರ್ಜುನನು ಫಲು
ಗುಣ ಧನಂಜಯ ಜಿಷ್ಣು ಸಿತ ವಾ
ಹನ ವಿಜಯ ಬೀಭತ್ಸು ಪಾರ್ಥ ಕಿರೀಟಿ ಮೊದಲಾದ |
ವಿನುತ ಕೃಷ್ಣನು ಸವ್ಯಸಾಚಿಗ
ಳೆನಿಪ ಪೆಸರನು ತಿಳುಹಿ ಪುನರಪಿ
ತನಗೆ ಬಂದಂದವನು ವಿಸ್ತರವಾಗಿ ವಿರಚಿಸಿದ || ೪೬ ||
1.37.46_48
ಎನಲು= ಉತ್ತರನು ನಿನ್ನ ಹತ್ತು ಹೆಸರುಗಳನ್ನು ಹೇಳು ಎನ್ನಲು, (ತಾನು ಅರ್ಜುನನು ನಿಜವೇ, ಅಲ್ಲವೇ ಎಂದು ಪರೀಕ್ಷಿಸಲು ಕೇಳುತ್ತಿದ್ದಾನೆ ಎಂದು ಭಾವಿಸಿ) ನಸುನಗುತ+ ಅರ್ಜುನನು, 'ಫಲುಗುಣ, ಧನಂಜಯ, ಜಿಷ್ಣು, ಸಿತವಾಹನ, ವಿಜಯ, ಬೀಭತ್ಸು, ಪಾರ್ಥ, ಕಿರೀಟಿ, ಮೊದಲಾದ ವಿನುತ ಕೃಷ್ಣನು, ಸವ್ಯಸಾಚಿಗಳು, ಎನಿಪ- ಎಂಬ ಪೆಸರನು- ಹೆಸರುಗಳನ್ನು, ತಿಳುಹಿ ಪುನರಪಿ- ಪುನಃ, ತನಗೆ ಬಂದ+ ಅಂದವನು ವಿಸ್ತರವಾಗಿ ವಿರಚಿಸಿದ- ಹೇಳಿದ.
1.37.47
ನಂಬಿದೆನು ಲೇಸಾಗಿ ನಿಶ್ಚಯ
ವಿಂಬುಗೊಂಡುದು ಪಾರ್ಥ ನಿನಗೀ
ಡೊಂಬಿದೇಕೈ ಹುಲು ಬೃಹನ್ನಳೆತನದ ಬಹು ರೂಪು |
ಅಂಬುಜಾಕ್ಷನ ಸಾಹಸ ಪ್ರತಿ
ಬಿಂಬವಲ್ಲಾ ನೀನು ನಿನ್ನ ವಿ
ಡಂಬಿಸಿದ ರೂಹಿಂಗೆ ಕಾರಣವೇನು ಹೇಳೆಂದ || ೪೭ ||
1.37.47_49
ನಂಬಿದೆನು ಲೇಸಾಗಿ ನಿಶ್ಚಯವು+ ಇಂಬುಗೊಂಡುದು= ಈಗ ನೀನು ನಿಜವಾಗಿ ಅರ್ಜುನನೆಂದು ನಂಬಿದೆ, ಮನಸ್ಸಿಗೆ ಚೆನ್ನಾಗಿ ನಿಶ್ಚಯವಾಯಿತು. ಪಾರ್ಥ ನಿನಗೆ+ ಈ ಡೊಂಬಿದು+ ಏಕೈ ಹುಲು ಬೃಹನ್ನಳೆತನದ ಬಹು ರೂಪು,= ಎಲೈ ಪಾರ್ಥನೇ ನಿನಗೆ ಈ ಡೊಂಬು- ಮೋಸದ ಹೀನ ಸೋಗು ಏಕೆ? ಹುಲು ಬೃಹನ್ನಳೆತನದ ಬಹು ರೂಪು- ಕೀಳುತನದ ಅಲ್ಪತನದ ಶಿಖಂಡಿಯ ರೂಪು ಬಂದಿದ್ದು ಏಕೆ?;// ಅಂಬುಜಾಕ್ಷನ ಸಾಹಸ ಪ್ರತಿಬಿಂಬವಲ್ಲಾ ನೀನು= - ಸಾಹಸಿಯಾದ ಕೃಷ್ಣನ ಪ್ರತಿಬಿಂಬವಲ್ಲವೇ ನೀನು? ನಿನ್ನ ವಿಡಂಬಿಸಿದ ರೂಹಿಂಗೆ ಕಾರಣವೇನು ಹೇಳೆಂದ= ನಿನ್ನನ್ನು ಹೀಗೆ ಅಪಹಾಸ್ಯಕ್ಕೆ ಒಳಗಾಗುವ ರೂಪು ಬರಲು ಕಾರಣವೇನು, ಹೇಳು ಎಂದ ಉತ್ತರ.
1.37.48
ಇದು ಕಣಾ ಧರ್ಮಜನ ಸತ್ಯಾ
ಭ್ಯುದಯಕೋಸುಗ ಊರ್ವಶಿಯ ಶಾ
ಪದಲಿ ಬಂದುದು ಹೊತ್ತು ನೂಕಿದೆನೊಂದು ವತ್ಸರವ |
ಇದಕೆ ನಿಜ್ಜೋಡಾಯ್ತು ನಿರ್ವಿ
ಘ್ನದಲಿ ನೂಕಿದೆವವಧಿಯನು ತ
ನ್ನದಟುತನವನು ಭೀತಿಗೊಳ್ಳದೆ ನೋಡು ನೀನೆಂದ || ೪೮ ||
1.37.48_50
ಇದು ಕಣಾ ಧರ್ಮಜನ ಸತ್ಯಾಭ್ಯುದಯಕೋಸುಗ ಊರ್ವಶಿಯ ಶಾಪದಲಿ ಬಂದುದು= ಉತ್ತರನೇ, ಇದು ಕಣಾ! ಧರ್ಮರಾಜನ ಸತ್ಯಾಭ್ಯುದಯಕ್ಕಾಗಿ ಎಂಬಂತೆ ಊರ್ವಶಿಯ ಶಾಪದಿಂದ ಬಂದಿತು. ಹೊತ್ತು ನೂಕಿದೆನೊಂದು ವತ್ಸರವ ಇದಕೆ ನಿಜ್ಜೋಡಾಯ್ತು ನಿರ್ವಿಘ್ನದಲಿ ನೂಕಿದೆವು+ ಅವಧಿಯನು= ಆ ಶಾಪವನ್ನು ಹೊತ್ತುಕೊಂಡು, ಊರ್ವಶಿಯು ಕೊಟ್ಟ ಪರಿಹಾರವಾಗಿ ಈ ಅಜ್ಞಾತಕಾಲಲ್ಲಿ ಒಂದು ವರ್ಷವರೆಗೆ ಈ ಅವಧಿಯಲ್ಲಿ ಶಾಪವನ್ನು ಬರಮಾಡಿಕೊಂಡು ಅನಭವಿಸಿ, ನೂಕಿದೆನೊಂದು ವತ್ಸರವ- ಒಂದು ವರ್ಷ ಕಳೆದೆನು. ಇದಕೆ ನಿಜ್ಜೋಡಾಯ್ತು ನಿರ್ವಿಘ್ನದಲಿ ನೂಕಿದೆವು+ ಅವಧಿಯನು= ಈ ಶಾಪವು ಅಜ್ಞಾತವಾಸಕ್ಕೆ ಸರಿಯಾಗಿ ಜೋಡಣೆಯಾಗಿ ನಿರ್ವಿಘ್ನದಲ್ಲಿ ಒಂದು ವರ್ಷ ಕಳೆದೆವು; ತನ್ನ+ ಅದಟುತನವನು ಭೀತಿಗೊಳ್ಳದೆ ನೋಡು ನೀನೆಂದ= ಉತ್ತರನಿಗೆ, ತನ್ನ ಶೌರ್ಯವನ್ನು 'ಹೆದರದೆ ನೋಡು ನೀನು', ಎಂದ ಅರ್ಜುನ.
1.37.49
ಬಳೆಯ ನೆಗ್ಗೊತ್ತಿದನು ಕೌರವ
ಬಲದ ಗಂಟಲ ಬಳೆಯ ಮುರಿವವೊ
ಲಲಘು ಸಾಹಸಿ ಘಳಿಯನುಟ್ಟನು ಮಲ್ಲಗಂಟಿನಲಿ |
ತಲೆ ನವಿರ ಹಿಣಿಲಿರಿದು ತಿಲಕವ
ಗೆಲಿದು ಕಿಗ್ಗಟ್ಟಿನ ಕಠಾರಿಯ
ಹೊಳೆವ ಗೊಂಡೆಯ ಮೆರೆಯೆ ಗಂಡಂದವನು ಕೈಕೊಂಡ || ೪೯ ||
1.37.50
ತೇರ ತೆಗೆದನು ತನ್ನ ಮುನ್ನಿನ
ವಾರುವಂಗಳ ಹೂಡಿದನು ಕಪಿ
ವೀರ ನೆನೆಯಲು ಬಂದು ಮಂಡಿಸಿದನು ಧ್ವಜಾಗ್ರದಲಿ |
ಚಾರು ಸೀಸಕ ಜೋಡು ಕುಲಿಶದ
ಸಾರ ಕವಚವ ಬಿಗಿದು ಬೊಬ್ಬೆಯ
ಭಾರವಣಿ ಮಿಗೆ ಧನುವ ಕೊಂಡನು ತಿರುವನೇರಿಸಿದ || ೫೦ ||
1.37.51
ರಾಯ ಧರ್ಮಜ ಬಾಳುಗೆನುತ ನಿ
ಜಾಯುಧದ ಗುರುವಿಂಗೆರಗಿ ಸುರ
ರಾಯ ನಂದನನೊಲವಿನಲಿ ಗಾಂಡಿವವ ಜೇವಡಿಸಿ |
ರಾಯ ಕುವರನ ಸೂತತನದ ವಿ
ಡಾಯಿಯರಿಯಲು ಬಹುದೆನುತ ಸಮ
ರಾಯತಾಸ್ತ್ರನು ಪಾರ್ಥ ಮೈದೋರಿದನು ಪರಬಲಕೆ || ೫೧ ||
1.37.51_51
ರಾಯ ಧರ್ಮಜ ಬಾಳುಗೆ+ ಎನುತ= ಧರ್ಮರಾಯನಿಗೆ ಶುಭವಾಗಲಿ ಎಂದು ಹಾರೈಸಿ, ನಿಜ+ ಆಯುಧದ ಗುರುವಿಂಗೆ+ ಎರಗಿ= ತನ್ನ ಗುರುವಿಗೆ ನಮಿಸಿ, ಸುರರಾಯ ನಂದನನು- ಇಂದ್ರನ ಮಗ ಅರ್ಜುನನು+ ಒಲವಿನಲಿ ಗಾಂಡಿವವ ಜೇವಡಿಸಿ= ಸಂತಸದಿಂದ ಗಾಂಡೀವವನ್ನು ಠೇಂಕಾರ ಮಾಡಿದನು.// ರಾಯ ಕುವರನ ಸೂತತನದ ವಿಡಾಯಿಯ(ಸಂಭ್ರಮ- ಜಾಣತನ)+ ಅರಿಯಲು ಬಹುದು+ ಎನುತ ಸಮರ+ ಆಯತ (ಅತಿಶಯ)+ ಅಸ್ತ್ರನು ಪಾರ್ಥ ಮೈದೋರಿದನು ಪರಬಲಕೆ= ರಾಜ ಕುಮಾರನ ಸೂತತನದ ಸಂಭ್ರಮವನ್ನು ಅರಿಯಬಹುದು ಎನ್ನುತ್ತಾ ಯುದ್ಧದ ಅತಿಶಯ ಅಸ್ತ್ರ ವಿಶಾರದ ಪಾರ್ಥನು ವೈರಿಸೈನ್ಯಕ್ಕೆ ಮೈದೋರಿದನು- ಪ್ರತ್ಯಕ್ಷನಾದನು, ತೋರಿಕೊಂಡನು, ಎದುರುನಿಂತನು.
1.37.52
ಸಡಿಲ ಬಿಡೆ ವಾಘೆಯನು ಚಿಮ್ಮಿದ
ವೊಡನೊಡನೆ ವೇಗಾಯ್ಲ ತೇಜಿಗ
ಳೊಡೆದುದಿಳೆಯನೆ ಗಜರು ಮಿಗೆ ಗರ್ಜಿಸಿದವಳ್ಳಿರಿದು |
ಕುಡಿ ನೊರೆಯ ಕಟವಾಯ ಲೋಳೆಯೊ
ಳೊಡಲ ಸಂಚದ ನುಡಿಯ ಘುಡು ಘುಡು
ಘುಡಿಪ ನಾಸಾಪುಟದ ಹುಂಕೃತಿ ಮಸಗೆ ಮುಂಚಿದವು || ೫೨ ||
1.37.52_52
ಕುದುರೆಯ ವಾಘೆಯ ಹಗ್ಗವನ್ನು, ಸಡಿಲ ಬಿಡೆ ವಾಘೆಯನು ಚಿಮ್ಮಿದವು+ ಒಡನೊಡನೆ- ಕೂಡಲೆ ವೇಗಾಯ್ಲ ತೇಜಿಗಳು+ ಒಡೆದುದು+ ಇಳೆಯನೆ= ಕುದುರೆಯ ವಾಘೆಯ ಹಗ್ಗವನ್ನು ಅಲುಗಿಸಿ ಸನ್ನೆಮಾಡಿ, ಸಡಿಲ ಬಿಡಲು ಕುದುರೆಗಳು ಚಿಮ್ಮಿ ಓಡಿದವು. ಕೂಡಲೆ ವೇಗವನ್ನು ಹೊಂದಿ ಕುದುರೆಗಳು, ಭೂಮಿಯು ಒಡೆಯಿತು ಎನ್ನುವಂತೆ,// ಗಜರು ಮಿಗೆ- ಸಾರಥಿಯ ಗದರುವಿಕೆ ಹೆಚ್ಚಲು, ಕುದುರೆಗಳು ಗರ್ಜಿಸಿದವು. ಅವು ಅಳ್ಳು+ ಇರಿದು ಕುಡಿ ನೊರೆಯ ಕಟವಾಯ ಲೋಳೆಯಳು+ ಒಡಲ ಸಂಚದ ನುಡಿಯ ಘುಡು ಘುಡುಘುಡಿಪ ನಾಸಾಪುಟದ ಹುಂಕೃತಿ ಮಸಗೆ- ಹೆಚ್ಚಲು ಮುಂಚಿದವು (ಎದುರು ಬಂದು ನಿಂತವು)= ಗಜರು ಮಿಗೆ- ಸಾರಥಿಯ ಗದರುವಿಕೆ ಹೆಚ್ಚಲು, ಕುದುರೆಗಳು ಗರ್ಜಿಸಿದವು. ಅವು ಹಗ್ಗವು ಅಳ್ಳು ಇರಿದು- ಕಟಬಾಯಿಯನ್ನು ಚುಚ್ಚಿ, ಕುಡಿ ನೊರೆಯ ಕಟವಾಯ ಲೋಳೆಸುರಿಯಲು, ದೇಹದ ಏರಿಳಿತದ ನುಡಿಯ- ಭಾಷೆಯ ಘುಡು ಘುಡುಘುಡಿಪ ಸದ್ದಿನೊಡನೆ ನಾಸಾಪುಟದ- ಮೂಗಿನ ಉಸಿರಾಟದ ಹುಂಕೃತಿಯು ಹೆಚ್ಚಲು ಕುದುರೆಗಳು ಕೌರವನ ಸೇನೆಯ ಎದುರು ಬಂದು ನಿಂತವು.
1.37.52_53
ಸಾರಥಿ ಉತ್ತರನಿಗೆ ಕೌರವ ಸೇನೆಯ ಪರಿಚಯ
1.37.53
ಆರು ಕೌರವನಲ್ಲಿ ಭೀಷ್ಮನ
ದಾರು ಕೃಪನಾವವನು ದ್ರೋಣನ
ದಾರು ಬಲದೊಳಗಾವನಶ್ವತ್ಥಾಮನೆಂಬವನು |
ವೀರ ತಿಳುಹೆನಗಿಲ್ಲಿ ಕರ್ಣನ
ದಾರು ನಾ ಕಂಡರಿಯೆನೆನಲಾ
ವೈರಿದಲ್ಲಣ ಪಾರ್ಥ ನಗುತುತ್ತರನೊಳಿಂತೆಂದ || ೫೩ ||
1.37.53_54
ಯಾರು ಕೌರವನು?+ ಅಲ್ಲಿ ಭೀಷ್ಮನು+ ಅದು+ ಆರು-ಯಾರು? ಕೃಪನು+ ಆವವನು? ದ್ರೋಣನು+ ಅದು+ ಆರು-ಯಾರು? ಬಲದೊಳಗೆ- ಸೈನ್ಯದಲ್ಲಿ+ ಅವನು- ಯಾವನು+ ಅಶ್ವತ್ಥಾಮನು+ ಎಂಬವನು?, ವೀರ ತಿಳುಹು- ಹೇಳು,+ ಎನಗೆ- ನನಗೆ,+ ಇಲ್ಲಿ ಕರ್ಣನು+ ಅದಾರು? ನಾ- ನಾನು ಕಂಡು+ ಅರಿಯೆನು- ನೋಡಿಲ್ಲ.+ ಎನಲು- ಎನ್ನಲು,+ ಆ ವೈರಿ+ದ+ ತಲ್ಲಣ= ಆ ವೈರಿ ಭಯಂಕರ ಪಾರ್ಥನು ನಗುತ- ನಗತ್ತಾ+ ಉತ್ತರನೊಳು - ಉತ್ತರನಿಗೆ- + ಇಂತೆಂದ- ಹೀಗೆ ಹೇಳಿದ.
1.37.54
ಉದಯದರುಣನ ಕರುವ ಹಿಡಿದಂ
ದದಲಿ ವರ್ಣಚ್ಛವಿಯಲೊಪ್ಪುವ
ಕುದುರೆಗಳ ತಳತಳಸಿ ಬೆಳಗುವ ಕೊಡನ ಹಳವಿಗೆಯ |
ಗದಗದಿಪ ಮಣಿಮಯದ ತೇರಿನ
ಕದನ ಕೋಳಾಹಳನು ಗರುಡಿಯ
ಸದನ ಸರ್ವಜ್ಞನನು ನೋಡೈ ದ್ರೋಣನವನೆಂದ || ೫೪ ||
1.37.54_55
ಉದಯದ+ ಅರುಣನ ಕರುವ ಹಿಡಿದ+ ಅಂದದಲಿ= ಸೂರ್ಯ ಉದಯದ ಕಾಲದಲ್ಲಿ ಸೂರ್ಯನ ಸಾರಥಿಯಾದ ಅರುಣನ-ಕರುವ- ಕುದುರೆಯನ್ನು ಹಿಡಿದ+ ಅಂದದಲಿ- ಹಿಡಿದ ರೀತಿಯಲ್ಲಿ//ವರ್ಣಚ್ಛವಿಯಲಿ+ ಒಪ್ಪುವ= ತಿಳಿಕೆಂಪು ಬಣ್ನದಲ್ಲಿ ಶೋಭಿಸುವ, ತಳತಳಸಿ ಬೆಳಗುವ ಕೊಡನ ಹಳವಿಗೆಯ- ಬಾವುಟದ, ಗದಗದಿಪ ಮಣಿಮಯದ ತೇರಿನ- ರಥದ, ಕದನ ಕೋಳಾಹಳನು-ಯುದ್ಧ ವಿಶಾರದನು, ಗರುಡಿಯ ಸದನ ಸರ್ವಜ್ಞನನು= ಯುದ್ಧವಿದ್ಯೆಯನ್ನು ಪೂರ್ಣ ಅರಿತವನು, ನೋಡೈ ದ್ರೋಣನು+ ಅವನು+ ಎಂದ.(ಸೂರ್ಯೋದಯದ ಕಾಲದಲ್ಲಿ ದಿಗಂತದಲ್ಲಿ ಏರುತ್ತಿರುವ ಸೂರ್ಯನು, ದಿಗಂತಕ್ಕೆ ಸ್ವಲ್ಪವೇ ತಾಗಿದಾಗ ಚಿನ್ನದ ಕೊಡದಂತೆ ಕಾಣುವನು- ಆಗುಂಬೆ ಸೂರ್ಯಾಸ್ತ ದೃಶ್ಯ)
1.37.55
ನವರತುನ ಕೇವಣದ ರಥವತಿ
ಜವದ ತೇಜಿಯ ತೆಕ್ಕೆಗಳ ರೌ
ರವದ ರೌದ್ರಾಯುಧದ ಗಡಣದ ಹರಿಯ ಹಳವಿಗೆಯ |
ಬವರ ಭೈರವನಾತನತಿಬಲ
ಶಿವನ ನೊಸಲಂದದಲಿ ಮೆರೆವವ
ನಿವನು ಜಿತಸಂಗ್ರಾಮನಶ್ವತ್ಥಾಮ ನೋಡೆಂದ || ೫೫ ||
1.37.55_56
ನವರತುನ ಕೇವಣದ- ಹಚ್ಚಿದ, ರಥವತಿ ಜವದ- ವೇಗದ, ತೇಜಿಯ ತೆಕ್ಕೆಗಳ- ಕಟ್ಟಿದ, ರೌರವದ ರೌದ್ರಾಯುಧದ- ಭಯಂಕರ ರೌದ್ರ ಆಯುಧವನ್ನು ಹಿಡಿದ; ಗಡಣದ- ಗುಂಪಿನ,// ಹರಿಯ ಹಳವಿಗೆಯ= ಕುದುರೆಯ ಬಾವುಟದ, ಬವರ ಭೈರವನು+= ಯುದ್ಧದಭಯರವ ಸ್ವರೂಪನು, ಆತನು+ ಅತಿಬಲ- ಬಹಳ ಬಲಶಾಲಿ, ಶಿವನ ನೊಸಲಂದದಲಿ ಮೆರೆವವನು+= ಶಿವನಂತೆ ಹಣೆಯಲ್ಲಿ ಕಣ್ಣನ್ನು ಹoಂದಿದ್ದಾನೆ. ಇವನು ಜಿತಸಂಗ್ರಾಮನು = ಯುದ್ದದಲ್ಲಿ ಸದಾ ಜಯಶಾಲಿ, ಅವನು+ ಅಶ್ವತ್ಥಾಮ ನೋಡು+ ಎಂದ
1.37.56
ಖುರದಲವನಿಯ ಹೊಯ್ದು ಲಹರಿಯ
ಲುರಿ ಮಸಗಲುಬ್ಬೆದ್ದ ತೇಜಿಯ
ಮೆರೆವ ಮುಕ್ತಾವಳಿಯ ತೇರಿನ ನವ ವಿಳಾಸದಲಿ ||
ಸರಳ ತಿರುಹುತ ನಿಂದು ಧನುವನು
ನಿರುತವನು ನೆರೆ ನೋಡಿ ತಾ ಝೇಂ
ಕರಿಸುವವನತಿಬಲ ಕೃಪಾಚಾರಿಯನು ನೋಡೆಂದ || ೫೬ ||
1.37.56_57
ಖುರದ ಲವನಿಯ ಹೊಯ್ದು ಲಹರಿಯಲಿ= ಕುದುರೆಯ ಖುರಪುಟ ಸದ್ದಿನ ಲಹರಿಯಲ್ಲಿ- ಆಲಿಸುವಿಕೆಯಿಂದ// + ಉರಿ ಮಸಗಲು- ಕೋಪ ಹೆಚ್ಚಲು+// ಉಬ್ಬೆದ್ದ ತೇಜಿಯ ಮೆರೆವ= ಉದ್ರೇಗೊಂಡ ಕುದುರೆಗಳೊಡನೆ ಶೋಭಿಸುವ,// ಮುಕ್ತಾವಳಿಯ ತೇರಿನ ನವ ವಿಳಾಸದಲಿ= ಮತ್ತಿನ ಸರಗಳಿಂದ ಹೊಸ ಬಗೆಯ ವಿಲಾಸದಲ್ಲಿ, ಸರಳ ತಿರುಹುತ ನಿಂದು= ಬಾಣವನ್ಉ ತಿರುಗಿಸುತ್ತಾ ನಿಂತು, ಧನುವನು ನಿರುತವನು ನೆರೆ ನೋಡಿ ತಾ ಝೇಂಕರಿಸುವವನು= ಬಿಲ್ಲನ್ನು ಬಿಡದೆ ನೊಡುತ್ತಾ ನಾಣನ್ನು ಮಿಡಿದು ಧನುಷ್ಠಂಕಾರ ಮಾಡುತ್ತಿರುವವನು, + ಅತಿಬಲ ಕೃಪಾಚಾರಿಯನು- ಕೃಪಾಚಾರ್ಯನು ನೋಡೆಉ+ ಎಂದ
1.37.57
ಲಲಿತ ರತ್ನಪ್ರಭೆಯ ತೇರಿನ
ಲುಲಿವ ಬಹುವಿಧ ವಾದ್ಯ ರಭಸದ
ಕಳಕಳದ ಕಡು ದರ್ಪದಿಂದಳ್ಳಿರಿವ ತೇಜಿಗಳ |
ಲಳಿಯ ಲಹರಿಯ ಲಗ್ಗೆಗಳ ಮೋ
ಹಳಿಸಿ ಬಿಲು ಝೇಂಕಾರ ರವದಿಂ
ದುಲಿವವನು ಕಲಿಕರ್ಣನತುಳ ಪರಾಕ್ರಮಾನಲನು || ೫೭ ||
1.37.57_58
ಲಲಿತ ರತ್ನಪ್ರಭೆಯ ತೇರಿನಲು+ ಉಲಿವ ಬಹುವಿಧ ವಾದ್ಯ ರಭಸದ= ಸುಂದರವಾದ ರತ್ನಪ್ರಭೆಯ ರಥದಲ್ಲಿ ಬಹುವಿಧವಾದ ವಾದ್ಯ ರಭಸದ ,// ಕಳಕಳದ ಕಡು ದರ್ಪದಿಂದ+ ಅಳ್ಳಿರಿವ ತೇಜಿಗಳ ಲಳಿಯ ಲಹರಿಯ ಲಗ್ಗೆಗಳ ಮೋಹಳಿಸಿ= ಕಳಕಳದ ಸದ್ದಿನೊಡನೆ, ಬಹಳ ದರ್ಪದಿಂದ+ ಅಳ್ಳಿರಿವ ತೇಜಿಗಳ- ಉಸಿರಾಟದಲ್ಲಿ ಮೂಗನ್ನು ಅರಳಿಸಿರುವ ಲಳಿಯ- ತಾಳಬದ್ಧ ಗೊರಸಿನ ಸದ್ದಿನ, ಲಹರಿಯ ಲಗ್ಗೆಗಳ ಮೋಹಳಿಸಿ= ಲಹರಿಯ ಹೊಡೆತದಲ್ಲಿ ಗುಂಪಾಗಿ ,// ಬಿಲು ಝೇಂಕಾರ ರವದಿಂದ+ ಉಲಿವವನು ಕಲಿಕರ್ಣನು+ ಅತುಳ ಪರಾಕ್ರಮ+ ಅನಲನು= ಬಿಲ್ನ್ನು ಝೇಂಕಾರದ ಸದ್ದಿನಮೂಲಕ ಕೂಗುವವನು ಶೂರನಾದ ಕಲಿಕರ್ಣನು+; ಅತುಳ- ಅಸಮಾನ ಪರಾಕ್ರಮ+ ಅನಲನು- ಅಗ್ನಿಯು.
1.37.58
ಅತ್ತಲೈದನೆ ಬಹಳ ಬಲದೊ
ತ್ತೊತ್ತೆಯಲಿ ನಮ್ಮುಭಯ ರಾಯರ
ಮುತ್ತಯನು ತಾನೆನಿಸಿ ಹೂಡಿದ ಬಿಳಿಯ ತೇಜಿಗಳ |
ತೆತ್ತಿಸಿದ ಹೊಂದಾಳ ಸಿಂಧದ
ಸತ್ತಿಗೆಯ ಸಾಲಿನಲಿ ರಿಪುಕುಲ
ಮೃತ್ಯುವಾತನು ವೀರ ಗಂಗಾಸುತನು ನೋಡೆಂದ || ೫೮ ||
1.37.58_59
ಅತ್ತಲು+ ಐದನೆ= ಆ ಕಡೆ ಬಂದರೆ, ಬಹಳ ಬಲದ+ ಒತ್ತೊತ್ತೆಯಲಿ= ಬಹಳಸೈನ್ಯದ ಇಕ್ಕಟ್ಟಾದ ಸ್ಥಳದಲ್ಲಿ, ನಮ್ಮ+ ಉಭಯ ರಾಯರ ಮುತ್ತಯನು ತಾನ+ ಎನಿಸಿ= ನಮ್ಮ ಕೌರವರು - ಪಾಂಡವರು ಈ ಇಬ್ಬರೂ ರಾಜಕುಮಾರರ ಅಜ್ಜ ಮತ್ತಯ್ಯ ತಾನು ಎನಿಸಿಕೊಂಡು,// ಹೂಡಿದ ಬಿಳಿಯ ತೇಜಿಗಳ ತೆತ್ತಿಸಿದ ಹೊಂದಾಳ ಸಿಂಧದ ಸತ್ತಿಗೆಯ ಸಾಲಿನಲಿ= ರಥಕ್ಕೆ ಹೂಡಿದ ಬಿಳಿಯ ಕುದುರೆಗಳ, ತೆತ್ತಿಸಿದ ಹೊಂದಾಳ ಸಿಂಧದ ಸತ್ತಿಗೆಯ= ಎದ್ದುಕಾಣುವ ಚಿನ್ನದ ವೈಭವದ ಬಾವುಟಗಳ ಸಾಲಿನಲ್ಲಿ- //ರಿಪುಕುಲ ಮೃತ್ಯುವು+ ಆತನು ವೀರ ಗಂಗಾಸುತನು ನೋಡೆಂದ= ಕಾನುವ ಅವನು ಶತ್ರುಕುಲಕ್ಕೆ ಉಮಸ್ವರೂಪನು,+ ಆತನು ವೀರ ಗಂಗಾಸುತ - ಭೀಷ್ಮನು ನೋಡು ಎಂದ.
1.37.59
ಅಗಿವ ಹಾವಿನ ಹಳವಿಗೆಯ ಮಿಗೆ
ನೆಗಹಿ ಮುಸುಕಿದ ಝಲ್ಲರಿಯ ಜೋ
ಡಿಗಳ ತುಡುಕುವ ತಂಬಟಂಗಳ ಮೊರೆವ ಚಂಬಕದ |
ನೆಗಹಿ ನಿಗುರುವ ಟೆಕ್ಕೆಯದ ಮದ
ವೊಗುವ ಕರಿಗಳ ಮಧ್ಯದಲಿ ತಾ
ನಗಡು ದುರಿಯೋಧನನು ಜೂಜಿನ ಜಾಣನವನೆಂದ || ೫೯ ||
1.37.59_60
ಅಗಿವ ಹಾವಿನ ಹಳವಿಗೆಯ= ಕಚ್ಚುವ ಹಾವಿನ ಬಾವುಟದ,/ ಮಿಗೆ ನೆಗಹಿ ಮುಸುಕಿದ ಝಲ್ಲರಿಯ ಜೋಡಿಗಳ= ಮತ್ತೆ ಆವರಿಸಿರುವ ಜೋಡಿ ಗೊಂಡೆಗಳ,/ ತುಡುಕುವ ತಂಬಟಂಗಳ ಮೊರೆವ ಚಂಬಕದ= ಹಿಡುದು ಬಡಿಯುವ ತಮಟೆಗಳ ದೊಡ್ಡ ಸದ್ದು ಮಾಡುವ ಜಾಗಟೆಗಳ,/ ನೆಗಹಿ ನಿಗುರುವ ಟೆಕ್ಕೆಯದ= ಎತ್ತಿ ಹಾರಿಸುತ್ತಿರುವ ಬಾವುಟಗಳ,/ ಮದವೊಗುವ ಕರಿಗಳ ಮಧ್ಯದಲಿ= ಮದದಿಂದ ಉಕ್ಕುತ್ತಿರುವ ಆನೆಗಳ ಮದ್ಯದಲ್ಲಿ,/ ತಾನು+ ಅಗಡು ದುರಿಯೋಧನನು ಜೂಜಿನ ಜಾಣನು+ ಅವನು+ ಎಂದ= ತಾನು ಪರಾಕ್ರಮಿ ಜೂಜಿನಲ್ಲಿ ಜಾಣನಾದ ದುರ್ಯೋಧನನು, ಅವನು ನೋಡು, ಎಂದ ಅರ್ಜುನ.
1.37.60
ಅವನ ಬಲವಂಕದಲಿ ನಿಂದವ
ನವನು ಭೂರಿಶ್ರವನು ಮತ್ತಾ
ಭುವನಪತಿಯೆಡವಂಕದಲಿ ನಿಂದವ ಜಯದ್ರಥನು |
ತವತವಗೆ ಬಲುಗೈಗಳೆನಿಸುವ
ಶಿವನ ನೊಸಲಂದದಲಿ ಮೆರೆವವ
ರವನಿಪಾಲಕನನುಜರನು ನೋಡೆಂದನಾ ಪಾರ್ಥ || ೬೦ ||
1.37.60_61
ಅವನ ಬಲವಂಕದಲಿ ನಿಂದವನು+ ಅವನು ಭೂರಿಶ್ರವನು= ಅವನ ಬಲಗಡೆ ಅಂಕದಲ್ಲಿ ನಿಂತವನು- ಅವನು ಭೂರಿಶ್ರವನು,/ ಆ ಭುವನಪತಿಯ+ ಎಡವಂಕದಲಿ ನಿಂದವ ಜಯದ್ರಥನು= ಮತ್ತೆ ಆ ಕೌರವನ+ ಎಡಗದೆಯ ರಣಭೂಮಿಯಲ್ಲಿ ನಿಂತವನು ಜಯದ್ರಥನು,/ ತವತವಗೆ ಬಲುಗೈಗಳು ಎನಿಸುವ ಶಿವನ ನೊಸಲಂದದಲಿ ಮೆರೆವವರು+ ಅವನಿಪಾಲಕನ+ ಅನುಜರನು ನೋಡೆಂದನು+= ತಮತವಗೆ ಬೆಂಬಲಿಗರಾಗಿ ಬಲುಗೈಗಳು ಎಂದುಕರೆದುಕೊಳ್ಳವ, ಶಿವನ ಹಣೆಗಣ್ಣಿನಂತೆ ಮೆರೆಯುವವರು ಆ ರಾಜನ ತಮ್ಮಂದಿರು, ಅವರನ್ನು ನೋಡು ಎಂದನು ಪಾರ್ಥ. (ಅಂಕ- ಯುದ್ಧಭೂಮಿ)
1.37.61
ಹೊಗಳಲನುಪಮ ಸೈನ್ಯವಿಂತೀ
ದ್ವಿಗುಣವಂಧಾಸುರನ ಸೇನೆಗೆ
ತ್ರಿಗುಣವಿದು ರಾವಣನ ಮೋಹರಕೆನುತ ಫಲುಗುಣನು |
ಹಗೆಯ ಭುಜದಗ್ಗಳಿಕೆಯನು ನಾ
ಲಗೆ ದಣಿಯೆ ಕೈವಾರಿಸುತ ಮಿಗೆ
ನಿಗುಚಿದನು ಫಲುಗುಣನು ಗಾಂಡಿವವ ಝೇವಡೆದು || ೬೧ ||
1.37.61_62
ನಿಗುಚು=1. ನೀಡು. 2. ನೆಟ್ಟಗೆ ಮಾಡು. 3. ನೆಟ್ಟಗಾಗು. 4. ಅಗಲಮಾಡು. 5. ಹೊಡೆ ಬಡಿ. 6. ಪ್ರಯೋಜನಕ್ಕೆ ಬರು.
ಹೊಗಳಲು->+ ಅನುಪಮ-ಹೋಲಿಕೆ ಇಲ್ಲದ, ಸೈನ್ಯವು+ ಇಂತು- ಹೀಗೆ+ ಈ ದ್ವಿಗುಣವು+ ಅಂಧಧಾಸುರನ ಸೇನೆಗೆ,= ಹೀಗೆ ಹೋಲಿಕೆ ಇಲ್ಲದ ಈ ಸೈನ್ಯವು ಈ ಅಂಧಧಾಸುರನ ಸೇನೆಗೆ ಎರಡರಷ್ಟು ಗುಣವುಳ್ಳದ್ದು; // ತ್ರಿಗುಣವಿದು ಇಂತು- + ರಾವಣನ ಮೋಹರಕೆ- ಸೈನ್ಯಕ್ಕೆ+= ಇಂತು- ರಾವಣನ ಸೈನ್ಯಕ್ಕೆ ಮೂರರಷ್ಟು, ಎನುತ ಫಲುಗುಣನು ಹಗೆಯ ಭುಜದ+ ಅಗ್ಗಳಿಕೆಯನು- ಹೆಚ್ಚುಗಾರಿಕೆಯನ್ನು ಪರಾಕ್ರಮವನ್ನು, ನಾಲಗೆ ದಣಿಯೆ ಕೈವಾರಿಸುತ- ಸೂಲುವಷ್ಟು ಹೊಗಳಿ ತೋರಿಸುತ್ತಾ, ಮಿಗೆ-ನಂತರ ನಿಗುಚಿದನು- ನೆಟ್ಟಗೆಮಾಡಿ ಎತ್ತಿಹಿಡಿದನು, ಫಲುಗುಣನು ಗಾಂಡಿವವ ಝೇವಡೆದು- ಥೇಂಕಾರ ಮಾಡಿ= ಎನ್ನುತ್ತಾ ಫಲುಗುಣನು ಹಗೆಯ-ಶತ್ರುವಿನ, ಭುಜದ+ ಅಗ್ಗಳಿಕೆಯನು- ಹೆಚ್ಚುಗಾರಿಕೆಯನ್ನು ಪರಾಕ್ರಮವನ್ನು, ನಾಲಗೆ ದಣಿಯೆ ಕೈವಾರಿಸುತ- ಸೂಲುವಷ್ಟು ಹೊಗಳಿ ತೋರಿಸುತ್ತಾ, ಮಿಗೆ-ನಂತರ ನಿಗುಚಿದನು- ನೆಟ್ಟಗೆ ಎತ್ತಿಹಿಡಿದನು, ಫಲುಗುಣನು ಗಾಂಡಿವವ ಝೇವಡೆದು- ಥೇಂಕಾರ ಮಾಡಿ
1.37.62
ಖುರಪುಟದಲಾಕಾಶ ಭಿತ್ತಿಯ
ಬರೆವವೋಲ್ ಸೂರಿಯನ ತುರಗವ
ಕರೆವವೋಲ್ ಕೈಗಟ್ಟಿ ದುವ್ವಾಳಿಸುವಡಾಹವಕೆ |
ಅರೆರೆ ಪೂತುರೆ ಹಯವೆನುತೆ ಚ
ಪ್ಪರಿಸಲೊಡೆ ನಿಗುರಿದವು ಕೆಂದೂ
ಳಿರದೆ ನಭಕುಪ್ಪರಿಸಿ ರವಿ ಮಂಡಲವನಂಡಲೆಯೆ || ೬೨ ||
1.37.62_63
ಖುರಪುಟದಲಿ+ ಆಕಾಶ ಭಿತ್ತಿಯ ಬರೆವವೋಲ್= ಕುದುರೆಗಳ ಖುರಪುಟದಲಲ್ಲಿ (ಗೊರಸಿನ ಹೆಜ್ಜೆಯಲ್ಲಿ)+ ಆಕಾಶ ಭಿತ್ತಿಯ ಬರೆವವೋಲ್= ಆಕಾಶದಲ್ಲಿ ಬರಹದಪಟ್ಟಿ ಬರೆಯುವಂತೆ ; //ಸೂರಿಯನ ತುರಗವ ಕರೆವವೋಲ್= ಸೂರ್ಯನ ತುರಗವ- ಕುದುರೆಯನ್ನು ಕರೆಯುವಂತೆ; ಕೈಗಟ್ಟಿ- ಕೈಸನ್ನೆಮಾಡಿ ದುವ್ವಾಳಿಸುವಡೆ- ವೇಗವಾಗಿ ಓಡಿಸುವಮತೆ;+ ಆಹವಕೆ ಅರೆರೆ ಪೂತುರೆ ಹಯವು+ ಎನುತೆ ಚಪ್ಪರಿಸಲು+= ಯುದ್ಧಕ್ಕೆ ಅರೆರೆ ಪೂತುರೆ (ಭೇಷ್)! ಹಯವು- ಕುದುರೆಯನ್ನು+ ಎನುತೆ ಚಪ್ಪರಿಸಲು+// ಒಡೆ ನಿಗುರಿದವು= ಕೂಡಲೆ ನೆಗೆದವು; ಕೆಂದೂಳು+ ಇರದೆ ನಭಕೆ+ ಉಪ್ಪರಿಸಿ ರವಿ ಮಂಡಲವನು+ ಅಂಡಲೆಯೆ= ಕೆಂದೂಳು+ ಇರದೆ- ನೆಲದಿಂದ ಆಕಾಶಕ್ಕೆ+ ಉಪ್ಪರಿಸಿ- ಹಾರಿ, ರವಿ ಮಂಡಲವನು+ ಅಂಡಲೆಯೆ- ಸುತ್ತುವರಿಯಲು.
1.37.63
ತುರಗ ಗರ್ಜನೆ ರಥದ ಚೀತ್ಕೃತಿ
ವರ ಧನುಷ್ಟಂಕಾರ ಕಪಿಯ
ಬ್ಬರಣೆ ಪಾರ್ಥನ ಬೊಬ್ಬೆ ನಿಷ್ಠುರ ದೇವದತ್ತ ರವ |
ಅರರೆ ಹೊದರೆದ್ದವು ಗಿರಿವ್ರಜ
ಬಿರಿಯೆ ಜಲನಿಧಿ ಜರಿಯೆ ತಾರಕಿ
ಸುರಿಯೆ ಸುರಕುಲ ಪರಿಯೆ ಭೀತಿಯ ಲಹಿತ ಬಲ ಹರಿಯೆ || ೬೩ ||
1.37.64
ಶಿರವ ಸಿಡಿಲೆರಗಿದವೊಲುತ್ತರ
ತಿರುಗಿ ಬಿದ್ದನು ಮೂರ್ಛೆಯಲಿ ಹೊಡೆ
ಮರಳಿದವು ಕಣ್ಣಾಲಿ ಕಾರಿದವರುಣ ವಾರಿಗಳ |
ಹೊರಳುತಿರಲೆಲೆ ಪಾಪಿ ಸೈರಿಸ
ಲರಿಯ ನಿನ್ನೇನೆನುತ ಫಲುಗುಣ
ಸೆರಗಿನಲಿ ಬೀಸಿದನು ಕುಳ್ಳಿರಿಸಿದನು ರಥದೊಳಗೆ || ೬೪ ||
1.37.64_64
ಏನು ಮತ್ಸ್ಯಕುಮಾರ ಭವಣೆಯಿ
ದೇನು ನಿನಗೆಂದೆನಲು ಜಗದವ
ಸಾನದಂದದಿ ಸಿಡಿಲು ಸುಳಿದುದು ಬಿರಿದುದೆನ್ನೊಡಲು
ಆನಲಾಪೆನೆ ನಿನ್ನ ಬಹಳ
ಧ್ವಾನವನು ಸಾಕೆನ್ನ ಕಳುಹು ಮ
ಹಾ ನಿಧಾನವ ಮಾಣು ಮಾಣೆನೆ ಪಾರ್ಥನಿಂತೆಂದ ೬೫
ಏನು ಮತ್ಸ್ಯಕುಮಾರ! ಭವಣೆಯಿದೇನು ನಿನಗೆ+ ಎಂದೆನಲು= ಅರ್ಜುನನು, ಇದೇನಪ್ಪ ನಿನ್ನ ಬವಣೆ- ಕಠಿಣ ಸ್ಥಿತಿ? ಎಂದು ಕೇಳಲು, ಅವನು, ಜಗದ+ ಅವಸಾನದಂದದಿ ಸಿಡಿಲು ಸುಳಿದುದು= ಪ್ರಳಯಕಾಲದಲ್ಲಿ ಬರುವಂತೆ ಸಿಇಲು ಹೊಡೆಯಿತು; ಬಿರಿದುದು+ ಎನ್ನೊಡಲು= ನನ್ನ ಎದೆ ಒಡೆದಂತಾಯಿತು ಎಂದನು, ಆನಲು+ ಆಪೆನೆ ನಿನ್ನ ಬಹಳ+ ಅಧ್ವಾನವನು= ನಿನ್ನ ಈ ಆರ್ಭಟವನ್ನು ನಾನು ಸಹಿಸಬಲ್ಲೆನೇ? ಸಾಕು+ ಎನ್ನ ಕಳುಹು= ಸಾಕು ನನ್ನನ್ನು ಕಳಿಸಿಬಿಡು,, ಮಹಾ ನಿಧಾನವ ಮಾಣು ಮಾಣು,+= ದೊಡ್ಡ ಎಚ್ಚರಿಕೆಯ ಆರ್ಭಟ ಮಾಡಲೇ ಬೇಡ, ಎನೆ- ಎನ್ನಲು, ಪಾರ್ಥನು+ ಇಂತೆಂದ= ಅರ್ಜುನನು ಹೀಗೆ ಹೇಳಿದನು. (ಅರ್ಜುನನ ಗಾಂಡೀವದ ಠೇಂಕಾರ ಹಾಗೆ ಬರಸಿಡಿಲಿನಂತೆ ಇತ್ತು,ಎಂದು ಭಾವ.)
1.37.66
ಖೇಡನಾಗದಿರದುಭುತ ಧ್ವನಿ
ಮಾಡೆನಂಜದಿರಂಜದಿರು ಧೃತಿ
ಮಾಡಿಕೊಂಡೀ ರಥವ ಜೋಡಿಸೆನುತ್ತ ಸಂತೈಸಿ
ಮೂಡಿಗೆಯ ಅಂಬುಗಿದು ತಿರುವಿಗೆ
ಹೂಡಿದನು ಫಲುಗುಣನ ಕದನವ
ನೋಡಲಮರಶ್ರೇಣಿ ಮೇಳೈಸಿತ್ತು ಗಗನದಲಿ || ೬೬ ||
1.37.66_65
ಖೇಡನಾಗದಿರು+ ಅದುಭುತ ಧ್ವನಿಮಾಡೆನು+ ಅಂಜದಿರು+ ಅಂಜದಿರು= ಅಂಜುಬುರುಕನಾಗಬೇಡ, ಅದ್ಭುತವಾದ ಠೇಂಕಾರವನ್ನು ಇನ್ನು ಮಾಡುವುದಿಲ್ಲ; ಭಯಪಡಬೇಡವೊ ಭಯಪಡಬೇಡವೊ! ಧೃತಿಮಾಡಿಕೊಂಡು+ ಈ ರಥವ ಜೋಡಿಸು+ ಎನುತ್ತ= ಧಯರ್ಯ ಮಾಡಿಕೊಂಡು ಈ ರಥವನ್ನು ಓಡಿಸು, ಎನ್ನುತ್ತಾ, ಅರ್ಜುನನು ಉತ್ತರನನ್ನು ಸಂತೈಸಿ,// ಮೂಡಿಗೆಯ- ಬತ್ತಳಿಕೆಯ, ಅಂಬು+ ಉಗಿದು ತಿರುವಿಗೆ ಹೂಡಿದನು ಫಲುಗುಣನ ಕದನವ ನೋಡಲು+ ಅಮರಶ್ರೇಣಿ ಮೇಳೈಸಿತ್ತು ಗಗನದಲಿ= ಮೂಡಿಗೆಯ- ಬತ್ತಳಿಕೆಯಿಂದ ಅಂಬು+ ಉಗಿದು- ಬಾಣವನ್ನು ತೆಗೆದು, ತಿರುವಿಗೆ ಹೂಡಿದನು- ಬಿಲ್ಲಿನ ನಾಣಿಗೆ- ಹಗ್ಗಕ್ಕೆ ಹೂಡಿದನು. ಫಲುಗುಣನ ಕದನವ ನೋಡಲು+ ಅಮರಶ್ರೇಣಿ- ದೇವತೆಗಳ ಸಮೂಹ ಮೇಳೈಸಿತ್ತು ಗಗನದಲಿ.
♦♦♦
♦♣♣♣♣♣♣♣♣♣♣♣♣♣♣♣♣♣♣♣♦
ॐ
1.37.66_66
ನೋಡಿ
1.37.66_67
ಕುಮಾರವ್ಯಾಸ ಭಾರತ
ಕುಮಾರವ್ಯಾಸಭಾರತ-ಸಟೀಕಾ
ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೧)
ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೨)
ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೩)
ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೪)
ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೫)
ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೬)
ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೭)
ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೮)
ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೯)
ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೧೦)
1.37.66_68
ಪರಿವಿಡಿ
1.37.66_69
ಉಲ್ಲೇಖ